×
Ad

ಪುತ್ತೂರು; ಚರಣ್ ರಾಜ್ ಹತ್ಯೆ ಪ್ರಕರಣ: ಕಿಶೋರ್‌ ಪೂಜಾರಿ ತಂಡದ ವಿರುದ್ಧ ಪ್ರಕರಣ ದಾಖಲು

Update: 2022-06-05 18:31 IST
ಚರಣ್‍ ರಾಜ್

ಪುತ್ತೂರು: ಬೆಳ್ಳಾರೆ ಠಾಣೆ ವ್ಯಾಪ್ತಿಯ ಪೆರ್ಲಂಪಾಡಿಯಲ್ಲಿ ನಡೆದ ಚರಣ್‍ ರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಲಡ್ಕದ ಕಿಶೋರ್‌ ಪೂಜರಿ ಮತ್ತು ತಂಡದ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು ನಗರ ಹೊರವಲಯದ ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ನಿವಾಸಿ ನವೀನ್ ಕುಮಾರ್ ಮೂಲ್ಯ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

"ಕೊಲೆಯಾಗಿರುವ ಚರಣ್‍ ರಾಜ್ ಅವರ ಮಾವ ಕಿಟ್ಟಣ್ಣ ರೈ ಎಂಬವರು ಪೆರ್ಲಂಪಾಡಿಯಲ್ಲಿ ಮೆಡಿಕಲ್ ಶಾಪ್ ತೆರೆಯುವಲ್ಲಿ ಅಂಗಡಿ ಕೆಲಸಗಳು ನಡೆಯುತ್ತಿದ್ದು, ಆ ಸ್ಥಳದಲ್ಲಿ ನಾನು ಇದ್ದು ಚರಣ್ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ವೇಳೆ ಬೈಕಿನಲ್ಲಿ ಬಂದ ಯುವಕರ ತಂಡವೊಂದು ಹಲ್ಲೆ ನಡೆಸಿದ್ದಾರೆ. ಬೊಬ್ಬೆ ಕೇಳಿ ನಾನು ತಡೆಯಲು ಹೋದಾಗ ಕಲ್ಲಡ್ಕದ ಕಿಶೋರ್‌ ಪೂಜಾರಿ ʼʼಆಣಿದ ವಿಚಾರ ಗೊತ್ತುಂಡತ್ತಾ  ಬೊಕ್ಕ  ಎಂಕುಲು ಇಂಬೆನ್  ಬುಡ್ಪುನಾʼʼ ಎಂದು ತುಳುವಿನಲ್ಲಿ ಹೇಳಿ, ತಂಡದ ಕೈಯಲ್ಲಿದ್ದ ಮಾರಕಾಯುಧದಿಂದ ಚರಣ್‍ ರಾಜ್ ಕುತ್ತಿಗೆಗೆ ಹೊಡೆದ ಕಾರಣ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ನವೀನ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

2019 ಸೆ.4 ರಂದು ಆರ್ಯಾಪು ಗ್ರಾಮದ ಮೇರ್ಲ ನಿವಾಸಿ ಕಾರ್ತಿಕ್ ಸುವರ್ಣ ಮೇರ್ಲ ಎಂಬವರನ್ನು ಸಂಪ್ಯ ಠಾಣೆಯ ಮುಂದೆ ಗಣೇಶೋತ್ಸವ ಮೆರವಣಿಗೆಯ ವೇಳೆ ಕೊಲೆ ನಡೆದಿತ್ತು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚರಣ್‍ ರಾಜ್ ರೈ, ಪ್ರೀತೇಶ್ ಶೆಟ್ಟಿ ಎಂಬವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿತ್ತು.

ಮೂವರ ಪೈಕಿ ಚರಣ್‍ ರಾಜ್ ರೈ ಮತ್ತು ಕಿರಣ್ ರೈ ಜಾಮೀನಿನ ಮೇಲೆ ಹೊರ ಬಂದಿದ್ದರು. ಕಾರ್ತಿಕ್ ಮೇರ್ಲ ಕೊಲೆಗೆ ಪ್ರತೀಕಾರವಾಗಿ ಈ ಕೊಲೆ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News