ಮೂರು ಪಕ್ಷಗಳಲ್ಲಿ ಪ್ರಾಮಾಣಿಕರೇ ಅಸ್ಪೃಶ್ಯರು: ಮುಖ್ಯಮಂತ್ರಿ ಚಂದ್ರು

Update: 2022-06-07 09:30 GMT

ಬೆಂಗಳೂರು: 'ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳಲ್ಲಿ ಪ್ರಾಮಾಣಿಕರು ಅಸ್ಪೃಶ್ಯರಾಗಿದ್ದಾರೆ' ಎಂದು ಖ್ಯಾತ ನಟ, ಮಾಜಿ ವಿಧಾನ ಪರಿಷತ್‌ ಸದಸ್ಯ ಮುಖ್ಯಮಂತ್ರಿ ಚಂದ್ರು  ಹೇಳಿದ್ದಾರೆ. 

ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಆಪ್ ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಮಾತನಾಡಿದ  ಚಂದ್ರು , ''ಮೂರು ಪಕ್ಷಗಳಿಂದ ರಾಜ್ಯದ ಜನತೆಗೆ ದ್ರೋಹವಾಗಿದೆ. ಮುಂದೆಯೂ ದ್ರೋಹ ಮಾಡಲು ಹವಣಿಕೆ ಮಾಡುತ್ತಿವೆ. ಎಲ್ಲ 224 ಸ್ಥಾನಗಳನ್ನು ಗೆಲ್ಲುವುದು ಆಮ್‌ ಆದ್ಮಿ ಪಾರ್ಟಿಯ ಗುರಿ. ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ಕೇವಲ ವಿಸರ್ಜನೆ ಮಾಡಿದರೆ ಸಾಲದು. ಈಗಿ ಪರಿಷ್ಕರಣೆಯನ್ನು ಹಿಂಪಡೆದು, ಚುನಾವಣೆವರೆಗೂ ಹಳೆಯ ಪಠ್ಯಕ್ರಮವನ್ನೇ ಮುಂದುವರಿಸಬೇಕು. ಬೇರೆ ಪಕ್ಷಗಳಲ್ಲಿ ಮೂಲೆಗುಂಪಾಗಿರುವ ಸಹೃದಯದಿ ಹಾಗೂ ಪ್ರಾಮಾಣಿಕರು ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಆಮ್‌ ಆದ್ಮಿ ಪಾರ್ಟಿ ಸೇರಬೇಕು” ಎಂದು ಕರೆ ನೀಡಿದರು.

ಇದನ್ನೂ ಓದಿ: ಆಪ್ ಸೇರ್ಪಡೆಯಾದ ಮುಖ್ಯಮಂತ್ರಿ ಚಂದ್ರು

“ಆಮ್‌ ಆದ್ಮಿ ಪಾರ್ಟಿಯು ದೇಶದ ರಾಜಕೀಯವನ್ನು ಸರಿದಾರಿಗೆ ತರುತ್ತಿದೆ. ಬೇರೆಲ್ಲ ಪಕ್ಷಗಳು ಶಿಕ್ಷಣ - ಆರೋಗ್ಯ ಕ್ಷೇತ್ರಗಳನ್ನು ನಿರ್ಲಕ್ಷ್ಯಿಸಿದರೆ, ಆಮ್‌ ಆದ್ಮಿ ಪಾರ್ಟಿ ಸರ್ಕಾರವು ಇವುಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಈ ಮೂಲಕ ಸಮಾಜದ ಭವಿಷ್ಯವನ್ನು ಬಲಪಡಿಸುತ್ತಿದೆ. ಕರ್ನಾಟಕದಲ್ಲಿ ಎಎಪಿ ಅಧಿಕಾರ ಬಂದು ಇಲ್ಲಿ ಕೂಡ ಪಾರದರ್ಶಕ ಹಾಗೂ ಜನಪರ ಆಡಳಿತ ನೀಡಿ ಜನ ನೆಮ್ಮದಿಯಿಂದ ಬದುಕುವಂತಹ ವಾತಾವರಣ ಮೂಡಬೇಕಿದೆ” ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.

ಸೇರ್ಪಡೆ ಸಮಾರಂಭದಲ್ಲಿ ಆಮ್‌ ಆದ್ಮಿ ಪಾರ್ಟಿ ಮುಖಂಡರಾದ ಕೆ.ಮಥಾಯಿ, ವಿಜಯ್ ಶರ್ಮಾ, ಶಾಂತಲಾ ದಾಮ್ಲೆ, ಮೋಹನ್ ದಾಸರಿ, ಜಗದೀಶ್ ವಿ. ಸದಂ, ಸುರೇಶ್ ರಾಥೋಡ್, ಬಿ. ಟಿ. ನಾಗಣ್ಣ, ಜಗದೀಶ್ ಚಂದ್ರ ಸೇರಿದಂತೆ ಅನೇಕ ನಾಯಕರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News