×
Ad

ಕರಾವಳಿ ಜಿಲ್ಲೆಗಳಲ್ಲಿ ಸೇನಾ ಆಯ್ಕೆ ಪೂರ್ವ ತರಬೇತಿ ಸಂಸ್ಥೆ ಆರಂಭ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2022-06-07 18:26 IST

ಉಡುಪಿ : ಸೇನೆಗೆ ಸೇರಲಿಚ್ಛಿಸುವ ಆಸಕ್ತರಿಗೆ ಪೂರ್ವ ತರಬೇತಿ ನೀಡುವ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ ಇಲಾಖೆಯಿಂದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸೇನಾ ಆಯ್ಕೆ ಪೂರ್ವ ತರಬೇತಿ ಸಂಸ್ಥೆಗಳನ್ನು ಆರಂಭಿಸ ಲಾಗುವುದು ಎಂದು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಉಡುಪಿ ಬಿಜೆಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲೆಯ ಸೇನಾ ಆಯ್ಕೆ ಪೂರ್ವ ತರಬೇತಿ ಸಂಸ್ಥೆಗೆ ‘ಕೋಟಿ ಚೆನ್ನಯ್ಯ’, ದ.ಕ. ಜಿಲ್ಲೆಯ ಸಂಸ್ಥೆಗೆ ‘ರಾಣಿ ಅಬ್ಬಕ್ಕ’ ಮತ್ತು ಉತ್ತರ ಕನ್ನಡ ಜಿಲ್ಲೆಯ ಸಂಸ್ಥೆಗೆ ಸ್ವಾತಂತ್ರ್ಯ ಯೋಧ ‘ಹಿಂಜಾ ನಾಯ್ಕ್’ ಹೆಸರಿಡಲು ನಿರ್ಧರಿಸಲಾಗಿದೆ.  ಮೊದಲ ಹಂತದಲ್ಲಿ ಯುವಕರಿಗೆ ಮಾತ್ರ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಆರು ತಿಂಗಳ ಅವಧಿ ಕೋರ್ಸ್ ಆಗಿದ್ದು, ಒಂದು ವರ್ಷದಲ್ಲಿ ತಲಾ ೫೦ರಂತೆ ಒಟ್ಟು ೧೦೦ ಮಂದಿಗೆ ತರಬೇತಿ ನೀಡಲಾಗುವುದು ಎಂದರು.

ಕಾಶ್ಮೀರದಲ್ಲಿ ಹೇಡಿಗಳ ಕೃತ್ಯ: ಕಾಶ್ಮೀರದಲ್ಲಿ ೩೭೦ನೆ ವಿಧಿ ರದ್ಧತಿ ನಂತರವೂ ಕಾಶ್ಮೀರ ಪಂಡಿತರ ಹತ್ಯೆ ಸರಣಿ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ೩೭೦ನೆ ವಿಧಿ ರದ್ಧತಿಯ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಖಚಿತ ಆಗಿತ್ತು. ಆದರೆ ಇದೀಗ ಮತ್ತೊಮ್ಮೆ ಹಿಂಸೆ ಆರಂಭ ಗೊಂಡಿದೆ. ಇದನ್ನು ಸರಕಾರದ ವೈಫಲ್ಯ ಹೇಳುವುದಕ್ಕಿಂತ ಅನಾಗರಿಕತೆ ಹಾಗೂ ಅತ್ಯಂತ ಹೇಡಿ ಕೃತ್ಯ ಹೇಳಬಹುದು. ಈ ಪಾಕಿಸ್ತಾನಿ ಪ್ರೇರಿತ ಭಯೋತ್ಪಾದಕ ರನ್ನು ಮಟ್ಟ ಹಾಕಲು ಸರಕಾರ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.

ಬೆಲೆ ಏರಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವೊಂದು ಅನಿವಾರ್ಯ ಸಂದರ್ಭದಲ್ಲಿ ತೈಲ ಬೆಲೆ ಏರಿಕೆಯಾದರೆ, ಕೆಲವು ಬಾರಿ ಇಳಿಕೆ ಆಗಿದೆ. ಏರಿಕೆ ಯಾದಾಗ ಟೀಕೆ ಮಾಡುವವರು ಇಳಿಕೆಯಾದಾಗ ಸ್ವಾಗತ ಮಾಡುವುದಿಲ್ಲ ಎಂಬ ಆರೋಪ ಕೂಡ ಇದೆ. ಬೆಲೆ ಏರಿಕೆ ಸ್ವಾಭಾವಿಕ. ಬೆಲೆ ನಿಯಂತ್ರಣ ಮಾಡುವುದು ಸರಕಾರ ಜವಾಬ್ದಾರಿ. ಅದನ್ನು ಸರಕಾರ ಮಾಡುತ್ತದೆ ಎಂದರು.

ಉಡುಪಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳ ಕುರಿತು ಪ್ರತಿಕ್ರಿ ಯಿಸಿ, ಇದು ನೋವಿನ ವಿಚಾರವಾಗಿದೆ. ಆತ್ಮಹತ್ಯೆಗೆ ವೈಯಕ್ತಿಕ, ಆರ್ಥಿಕ ಸೇರಿ ದಂತೆ ಹಲವು ಕಾರಣಗಳಿರುತ್ತವೆ. ಈ ಕುರಿತು ಉಸ್ತುವಾರಿ ಸಚಿವರ ಜೊತೆ ಮಾತುಕತೆ ನಡೆಸಿ ಕಾರ್ಯಯೋಜನೆ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಹಾಸ್ಟೆಲ್‌ಗಳ ನಿರ್ಮಾಣ: ರಾಜ್ಯದಲ್ಲಿ ೨೪೦೦ ಹಾಸ್ಟೆಲ್‌ಗಳಿದ್ದು, ೧.೨೦ಲಕ್ಷ ಮಕ್ಕಳು ಹಾಸ್ಟೆಲ್ ಬೇಡಿಕೆ ಯಿಂದ ಹೊರಗೆ ಇದ್ದಾರೆ. ಅವರಿಗೆ ಪ್ರತಿವರ್ಷ ೧೫ಸಾವಿರ ವಿದ್ಯಾನಿಧಿ ನೀಡ ಲಾಗುತ್ತದೆ. ೫೦ ಕನಕದಾಸ ವಿದ್ಯಾರ್ಥಿ ನಿಲಯ, ಅಂಬೇಡ್ಕರ್ ಹೆಸರಿನಲ್ಲಿ ೧೦೦ ಹಾಸ್ಟೆಲ್ ಸ್ಥಾಪಿಸಲಾಗುವುದು. ಉಡುಪಿಯ ಜಿ.ಶಂಕರ್ ಪದವಿ ಕಾಲೇಜಿನಲ್ಲಿ ೬ಕೋಟಿ ರೂ. ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಿಸ ಲಾಗುವುದು. ರಾಜ್ಯದ ಐದು ಕಡೆಗಳಲ್ಲಿ ಒಂದು ಸಾವಿರ ವಿದ್ಯಾರ್ಥಿಗಳಿಗೆ ಆಶ್ರಯ ನೀಡುವ ದೀನ್‌ದಯಾಳ್ ಹಾಸ್ಟೆಲ್ ನಿರ್ಮಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಇತ್ತೀಚೆಗೆ ೨೦೦ ಹಾಸ್ಟೆಲ್ ವಾರ್ಡನ್‌ಗಳ ನೇಮಕ ಮಾಡಲಾಗಿದ್ದು, ಅದರಲ್ಲಿ ೧೯೫ ಬೇರೆ ಜಿಲ್ಲೆಯವರು. ಅವಿಭಜಿತ ದ.ಕ. ಜಿಲ್ಲೆಯವರು ಇದಕ್ಕೆಲ್ಲ ಅರ್ಜಿ ಹಾಕುವುದಿಲ್ಲ. ಜಿಲ್ಲೆಯಲ್ಲಿ ೩೮ ವಾರ್ಡನ್ ಹುದ್ದೆ ಖಾಲಿ ಇವೆ. ಅದಕ್ಕೆ ಈ ಜಿಲ್ಲೆಯವರಿಗೆ ಪ್ರಥಮ ಪ್ರಾಶಸ್ತ್ಯ ನೀಡಲಾಗಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮುಖಂಡರಾದ ನಯನ ಗಣೇಶ್, ಗುರುಪ್ರಸಾದ್ ಶೆಟ್ಟಿ, ದಿನಕರ ಬಾಬು, ಶಿಲ್ಪಾ ಸುವರ್ಣ, ವೀಣಾ ಶೆಟ್ಟಿ, ಶ್ರೀನಿಧಿ ಹೆಗ್ಡೆ, ಪ್ರತಾಪ್ ಶೆಟ್ಟಿ, ಶಿವಕುಮಾರ್ ಅಂಬಲಪಾಡಿ, ಉಮೇಶ್ ನಾಯ್ಕ್, ಸದಾನಂದ ಉಪ್ಪಿನಕುದ್ರು ಹಾಜರಿದ್ದರು.

ಜುಲೈಯಲ್ಲಿ ಅಸ್ಪೃಶ್ಯತಾ ನಿವಾರಣಾ ಯೋಜನೆಗೆ ಚಾಲನೆ

ಕೊಪ್ಪಳದಲ್ಲಿ ದೇವಸ್ಥಾನಕ್ಕೆ ಪ್ರವೇಶಿಸಿದ ಕಾರಣಕ್ಕೆ ಅಸ್ಪಶ್ಯತೆ ಅನುಭವಿಸಿದ ವಿನಯ ಎಂಬ ಮಗುವನ್ನು ವಿನ ಶಿಕ್ಷಣಕ್ಕೆ ಸಂಬಂಧಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ದತ್ತು ತೆಗೆದುಕೊಳ್ಳಲಾಗಿದೆ. ಅದೇ ರೀತಿ ಅಸ್ಪಶ್ಯ ನಿವಾರಣೆ ಗಾಗಿ ಆ ಮಗುವಿನ ಹೆಸರಿನಲ್ಲಿ ‘ವಿನಯ ಸಾಮರಸ್ಯ’ ಯೋಜನೆಯನ್ನು ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಈ ಯೋಜನೆಯಡಿ ಅಸ್ಪಶ್ಯತೆ ಮುಕ್ತ ಗ್ರಾಪಂಗಳಿಗೆ ಸಮಾಜ ಕಲ್ಯಾಣ  ಇಲಾಖೆಯಿಂದ ವಿಶೇಷ ಅನುದಾನ ನೀಡಲು ಚಿಂತನೆ ಮಾಡಲಾಗುತ್ತಿದೆ. ಸಾಧು ಸಂತರಲ್ಲಿಯೂ ಈ ಅಸ್ಪಸ್ಯತಾ ನಿವಾರಣಾ ಕಾರ್ಯಕ್ರಮದಲ್ಲಿ ಕೈಜೋಡಿಸಲು ವಿನಂತಿಸಿಕೊಳ್ಳಲಾಗುವುದು. ಈ ಯೋಜನೆಯ ಅಧಿಕೃತ ಉದ್ಘಾಟನೆಯನ್ನು ಜುಲೈ ತಿಂಗಳ ಮೊದಲ ವಾರದಲ್ಲಿ ಮುಖ್ಯಮಂತ್ರಿಗಳು ನೆರವೇರಿಸಲಿರುವರು ಎಂದರು.

‘ಬೋಳ ಗ್ರಾಪಂನಲ್ಲಿ ನಾಥೂರಾಮ್ ಗೋಡ್ಸೆ ನಾಮಫಲಕದ ಅಳವಡಿಸು ವಂತೆ ಸ್ಥಳೀಯ ಗ್ರಾಪಂ ಅನುಮೋದನೆ ಮಾಡಿಲ್ಲ. ಯಾರೋ ತಂದು ಹಾಕಿ ದ್ದಾರೆ. ಶಾಸಕರು ಹಾಗೂ ಗ್ರಾಪಂ ಸೂಚನೆಯಂತೆ ಅದನ್ನು ಅಲ್ಲಿಂದ ತೆರವು ಗೊಳಿಸಲಾಗಿದೆ. ಕಿಡಿಗೇಡಿಗಳು ರಾತ್ರೋರಾತ್ರಿ ಈ ಕೃತ್ಯ ಎಸಗಿದ್ದಾರೆ. ಇದರಲ್ಲಿ ಗ್ರಾಪಂ ಆಗಲಿ ಸರಕಾರ ಆಗಲಿ ಭಾಗಿ ಆಗಿಲ್ಲ’
-ಕೋಟ ಶ್ರೀನಿವಾಸ ಪೂಜಾರಿ, ಸಚಿವರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News