ಚಾಮರಾಜಪೇಟೆ ಈದ್ಗಾ ಮೈದಾನ ವಕ್ಫ್ ಆಸ್ತಿ: ಮೌಲಾನ ಶಾಫಿ ಸಅದಿ

Update: 2022-06-07 13:17 GMT
ಫೈಲ್ ಚಿತ್ರ

ಬೆಂಗಳೂರು, ಜೂ.7: ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನ ವಕ್ಫ್(ಸುನ್ನಿ) ಆಸ್ತಿಯಾಗಿದೆ. ಈ ಸಂಬಂಧ ನಮ್ಮ ಬಳಿ ದಾಖಲೆಗಳು ಲಭ್ಯವಿದ್ದು, ಸುಪ್ರೀಂಕೋರ್ಟಿನ ಆದೇಶವೂ ಇದೆ ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ಸ್ಪಷ್ಟಪಡಿಸಿದ್ದಾರೆ.

‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, ಒಮ್ಮೆ ವಕ್ಫ್ ಆಸ್ತಿ ಎಂದು ಘೋಷಿಸಲ್ಪಟ್ಟರೆ ಅದು ಶಾಶ್ವತವಾಗಿ ವಕ್ಫ್ ಆಗಿರುತ್ತದೆ ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ಅದನ್ನು ಸರಕಾರವಾಗಲಿ ಅಥವಾ ಯಾರಾದರೂ ವೈಯಕ್ತಿಕವಾಗಿ ಆಗಲಿ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ಚಾಮರಾಜಪೇಟೆ ಈದ್ಗಾ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ದಾಖಲೆ ಸ್ಪಷ್ಟವಾಗಿವೆ. ಅಲ್ಲಿರುವ ಎರಡು ಎಕರೆಗಿಂತ ಹೆಚ್ಚಿನ ಜಾಗ ‘ಈದ್ಗಾ ವಕ್ಫ್ (ಸುನ್ನಿ) ಚಾಮರಾಜಪೇಟೆ’ ಎಂದು ಸ್ಪಷ್ಟವಾಗಿದೆ. ಅಲ್ಲಿ ಒಟ್ಟು 10 ಎಕರೆ ಜಾಗ ಇತ್ತು. 1871ರಲ್ಲಿ ಅಲ್ಲಿ ಖಬರಸ್ಥಾನವು ಇತ್ತು. 1938ರಿಂದ ಈದ್ಗಾ ಇದೆ ಎಂದು ಸುಪ್ರೀಂಕೋರ್ಟ್‍ನ ಆದೇಶದಲ್ಲೆ ತಿಳಿಸಲಾಗಿದೆ ಎಂದು ಶಾಫಿ ಸಅದಿ ತಿಳಿಸಿದರು.

ಬಿಬಿಎಂಪಿಯವರು ಹಲವು ದಾಖಲೆಗಳನ್ನು ನಮ್ಮ ಮುಂದಿಟ್ಟಿದ್ದಾರೆ. ಆದರೆ, ಅದು ನಮ್ಮ ಜಾಗಕ್ಕೆ ಸಂಬಂಧಿಸಿದಲ್ಲ. ಮೇಡಿ ಅಗ್ರಹಾರದಲ್ಲಿ ವಕ್ಫ್ ಬೋರ್ಡ್‍ಗೆ ಸೇರಿದ 348 ಎಕರೆ ಜಾಗವನ್ನು ಬಿಬಿಎಂಪಿಯವರು ಸ್ವಾಧೀನಪಡಿಸಿಕೊಂಡಿದ್ದಾರೆ. ಅದಕ್ಕೆ ನಮಗೆ ಪರಿಹಾರ ನೀಡಬೇಕು ಎಂದು ಸರಕಾರ ಆದೇಶವನ್ನು ಹೊರಡಿಸಿದೆ ಎಂದು ಅವರು ಹೇಳಿದರು.

ಹಲವಾರು ಕಡೆಗಳಲ್ಲಿ ಬಿಬಿಎಂಪಿ, ಪಾಲಿಕೆ, ಗ್ರಾಮಠಾಣಗಳಿಗೆ ಸೇರಿದ ಜಾಗಗಳು ಇರುತ್ತವೆ. ಆದರೆ, ಅವರು ಎಲ್ಲವನ್ನೂ ಸರ್ವೆ ಮಾಡಿಸಿರುವುದಿಲ್ಲ. ಬಿಬಿಎಂಪಿಯವರು ಅಲ್ಲಿದ್ದ ಸಂಪೂರ್ಣ 10 ಎಕರೆ ಜಾಗದ ಸರ್ವೆ ಮಾಡಿಸಿದರೆ ಆಟದ ಮೈದಾನ ಎಲ್ಲಿದೆ, ಈದ್ಗಾ ಮೈದಾನ ಎಲ್ಲಿದೆ ಅನ್ನೋದು ಗೊತ್ತಾಗುತ್ತದೆ ಎಂದು ಶಾಫಿ ಸಅದಿ ತಿಳಿಸಿದರು.

ಗಣೇಶೋತ್ಸವ, ಈದ್ ಯಾವುದೆ ಇರಲಿ ಅದು ಅವರವರ ಧಾರ್ಮಿಕ ವಿಚಾರ. ಈ ಹಿಂದೆ, ಹಿಂದೂ, ಮುಸ್ಲಿಮರು ಒಟ್ಟಾಗಿ ಕೂಡಿ ಬಾಳುವ ಕಾಲವೊಂದಿತ್ತು. ಬೇರೆ ಬೇರೆ ನೋಟದಲ್ಲಿ ನೋಡುವಂತಹ ಸಂದರ್ಭ ನಮ್ಮ ಕರ್ನಾಟಕದಲ್ಲಿ ಒದಗಿ ಬಂದಿದೆ. ಕೆಲವು ವ್ಯಕ್ತಿಗಳು ಮಾಡಿರುವಂತಹ ಈ ಆಪತ್ತಿನಿಂದ ಇಡೀ ಸಮಾಜ ವಿಭಜನೆಯಾಗುವ ಹಂತಕ್ಕೆ ಹೋಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನಮ್ಮ ರಾಜ್ಯದ ಎಷ್ಟೋ ಮಸೀದಿಗಳು, ಈದ್ಗಾ ಆವರಣಗಳಲ್ಲಿ ಗಣೇಶೋತ್ಸವ ಆಚರಣೆ ಮಾಡಿರುವ ಉದಾಹರಣೆಗಳನ್ನು ನಾವು ನೋಡಿದ್ದೇವೆ. ನಮ್ಮಲ್ಲಿ ಅನ್ನೋನ್ಯತೆ, ಸೌಹಾರ್ದತೆ ಇತ್ತು. ಈಗ ಅಂತಹ ಪರಿಸ್ಥಿತಿ ಇಲ್ಲ. ಆದುದರಿಂದ, ಬಿಬಿಎಂಪಿಯವರು ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಹೇಳಿಕೆ ಕೊಡುವ ಮುಂಚೆ ತುಂಬಾ ಆಲೋಚನೆ ಮಾಡಬೇಕು ಎಂದು ಶಾಫಿ ಸಅದಿ ಹೇಳಿದರು.

ಸೂಕ್ಷ್ಮ ವಿಚಾರಗಳಿಂದ ಕೋಮುಧೃವೀಕರಣ ಆಗುತ್ತಿರುವ ಇಂತಹ ಸನ್ನಿವೇಶದಲ್ಲಿ, ಇಂತಹ ಸಂಗತಿಗಳನ್ನು ಕೆದಕುವುದರಿಂದ ಕಾನೂನು, ಸುವ್ಯವಸ್ಥೆಗೆ ತೊಂದರೆಯಾಗುತ್ತದೆ. ಸ್ವಾಮೀಜಿಗಳು, ಉಲಮಾಗಳು ಜನರ ಮನಸ್ಸನ್ನು ಒಟ್ಟುಗೂಡಿಸುವ ಪ್ರಯತ್ನ ಎಷ್ಟೇ ಮಾಡಿದರೂ, ಕೆಲವು ವ್ಯಕ್ತಿಗಳು ಮನಸ್ಸುಗಳನ್ನು ಒಡೆದು ಆಗಿದೆ. ಈ ಒಡೆದು ಹೋಗಿರುವ ಮನಸ್ಸುಗಳು ಒಟ್ಟುಗೂಡುವ ತನಕ ಇಂತಹ ವಿಚಾರಗಳನ್ನು ಸೂಕ್ಷ್ಮವಾಗಿ ಇಡುವುದು ಒಳ್ಳೆಯದು ಎಂದು ಶಾಫಿ ಸಅದಿ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News