×
Ad

ಎಸೆಸೆಲ್ಸಿಯಲ್ಲಿ ಪೂರ್ಣ ಅಂಕ ಪಡೆದ ಅಲೆಮಾರಿ ಕಾರ್ಮಿಕ ವಿದ್ಯಾರ್ಥಿಗೆ ಸನ್ಮಾನ

Update: 2022-06-07 21:40 IST

ಮಂಗಳೂರು, ಜೂ.೭: ಕಳೆದ ೨೦೨೧-೨೨ನೆ ಶೈಕ್ಷಣಿಕ ವರ್ಷದಲ್ಲಿ ಒಂದು ರಜೆಯನ್ನೂ ಮಾಡದೆ ನಸುಕಿನ ಜಾವದಿಂದ ಬೆಳಗ್ಗಿನವರೆಗೆ ಸಮುದ್ರ ತೀರದಲ್ಲಿ ಬುಟ್ಟಿಯಲ್ಲಿ ಮೀನು ಹೊತ್ತುಕೊಂಡು ದುಡಿಯುತ್ತಾ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೫ ಪೂರ್ಣ ಅಂಕ ಪಡೆದ ಅಲೆಮಾರಿ ಕಾರ್ಮಿಕ ವಿದ್ಯಾರ್ಥಿ, ಮಲ್ಪೆನಿವಾಸಿ ಪುನೀತ್ ನಾಯ್ಕಗೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ನವೋದಯ ಸ್ವಸಹಾಯ ಸಂಘದಿಂದ ಸನ್ಮಾನಿಸಿ ಶೈಕ್ಷಣಿಕ ನೆರವು ನೀಡಲಾಯಿತು.

ಮಂಗಳೂರಿನ ಬ್ಯಾಂಕ್‌ನ ಪ್ರಧಾನ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು, ಪುನೀತ್ ನಾಯ್ಕನ ಮುಂದಿನ ವಿದ್ಯಾಭ್ಯಾಸಕ್ಕೆ ೭೫ ಸಾವಿರ ರೂ.ನಗದು ನೀಡಿ ಸನ್ಮಾನಿಸಿ ಗೌರವಿಸಿದರು.

ಬಳಿಕ ಮಾತನಾಡಿದ ಅವರು, ಈತನ ಸಾಧನೆ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದಿರುವುದನ್ನು ಗಮನಿಸಿದೆ. ನಸುಕಿನ ಜಾವ ೪ಕ್ಕೆ  ಮಲ್ಪೆಬಂದರಿಗೆ ತೆರಳಿ ೯ರವರೆಗೆ ಬುಟ್ಟಿಯಲ್ಲಿ ಮೀನು ತುಂಬಿಸಿ ಹೊತ್ತುಕೊಂಡು ಕೆಲಸ ಮಾಡುತ್ತಾರೆ. ಬಳಿಕ ಶಾಲೆಗೆ ತೆರಳುತ್ತಾನೆ. ಶೈಕ್ಷಣಿಕ ವರ್ಷದಲ್ಲಿ ಒಂದು ದಿನವೂ ಶಾಲೆಗೆ ರಜೆ ಮಾಡದೆ ವಿದ್ಯಾಭ್ಯಾಸದ ಕುರಿತು ಈತನ ಕಾಳಜಿ ನಿಜಕ್ಕೂ ಸೋಜಿಗ ತಂದಿದೆ. ಈತ ರಾಜ್ಯಕ್ಕೆ ಮಾದರಿಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಈತನ ಮುಂದಿನ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡುತ್ತಿರುವುದಾಗಿ ಹೇಳಿದರು.

ಅವಿಭಜಿತ ದ.ಕ. ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ೬೨೫ರಲ್ಲಿ ೬೨೫ ಹಾಗೂ ಪಿಯುಸಿಯಲ್ಲಿ ಟಾಪರ್ ಆದವರಿಗೆ ಈ ಬ್ಯಾಂಕ್‌ನಿಂದ ಸನ್ಮಾನಿಸಿ ಗೌರವಿಸಲಾಗುವುದು. ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ನೆರವು ನೀಡಲಾಗುವುದು ಎಂದರು.

ಬ್ಯಾಂಕ್‌ನ ಉಪಾಧ್ಯಕ್ಷ ನವೀನ್ ಕುಮಾರ್ ಸೂರಿಂಜೆ, ನಿರ್ದೇಶಕರಾದ ಟಿ.ಜಿ.ರಾಜಾರಾಮ ಭಟ್, ಎಸ್.ಬಿ.ಜಯರಾಮ ರೈ, ನಿರಂಜನ್, ಸದಾಶಿವ ಉಳ್ಳಾಲ್, ರಾಜು ಎಸ್.ಪೂಜಾರಿ, ಮಹೇಶ್ ಹೆಗ್ಡೆ, ಅಶೋಕ್ ಕುಮಾರ್ ಶೆಟ್ಟಿ, ಹರಿಶ್ಚಂದ್ರ, ರಾಜೇಶ್ ರಾವ್, ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ನಾಯಕ್, ಸಿಇಒ ರವೀಂದ್ರ, ಉಪ ಮಹಾಪ್ರಬಂಧಕ ಗೋಪಿನಾಥ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News