ಉಪ್ಪಿನಂಗಡಿ; ಚಿನ್ನಾಭರಣ ಕಳವು ಪ್ರಕರಣ: ಆರೋಪಿ ಸೆರೆ

Update: 2022-06-08 16:16 GMT

ಉಪ್ಪಿನಂಗಡಿ: ಮೇ 16ರಂದು ಮನೆಗೆ ಬೆಂಕಿ ಬಿದ್ದ ಸಂದರ್ಭ ಕಪಾಟಿನಲ್ಲಿದ್ದ 2.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಗುರುವಾಯನಕೆರೆ ನಿವಾಸಿ ಶಿವಪ್ರಸಾದ್ (38) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಮಲೆಂಗಲ್ ನಿವಾಸಿ ಆನಂದ ಮೂಲ್ಯ ಎಂಬವರ ಮನೆಗೆ ಮೇ 16 ರಂದು ಬೆಂಕಿ ತಗುಲಿದ್ದು, ಸ್ಥಳೀಯರು ಸಕಾಲಿಕ ಕಾರ್ಯಾಚರಣೆ ನಡೆಸಿ  ಬೆಂಕಿಯನ್ನು ನಂದಿಸಿದ್ದರು. ಆದರೆ ಆ ವೇಳೆಗಾಗಲೇ ಮನೆಯಲ್ಲಿದ್ದ ಬಟ್ಟೆ ಬರೆ, ಇತರ ಸೊತ್ತುಗಳು ಸುಟ್ಟು ಹೋಗಿದ್ದು, ಕಪಾಟಿನಲ್ಲಿದ್ದ ಚಿನ್ನ ಇಡುವ ಬಾಕ್ಸ್ ಮತ್ತು ದಾಖಲೆ ಪತ್ರಗಳು  ಯಥಾ ಸ್ಥಿತಿಯಲ್ಲಿದ್ದವು. ಈ ಬಗ್ಗೆ ಸಮಾಧಾನ ಹೊಂದಿದ್ದ ಅವರು, ಮೇ 30ರಂದು ಪರಿಶೀಲಿಸಿದಾಗ ಚಿನ್ನ ಇಡುವ ಬಾಕ್ಸ್ ನೊಳಗಿದ್ದ ಆಭರಣಗಳು ಸೇರಿದಂತೆ ಒಟ್ಟು 2.50 ಲಕ್ಷ ಮೌಲ್ಯದ ಚಿನ್ನಾಭರಣವು ಕಳವಾಗಿರುವುದು ಕಂಡು ಬಂದಿತ್ತು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ತನಿಖೆ ನಡೆಸಿದ ಉಪ್ಪಿನಂಗಡಿ ಪೊಲೀಸರು ಅಂದು ಬೆಂಕಿ ನಂದಿಸಿದ ಮಂದಿಯನ್ನೇ ವಿಚಾರಣೆಗೆ ಒಳಪಡಿಸಿದಾಗ ಸ್ಥಳೀಯ ಬಾರ್ ಉದ್ಯೋಗಿ, ಗುರುವಾಯನಕೆರೆ ನಿವಾಸಿ ಶಿವಪ್ರಸಾದ್ ತಾನು ಚಿನ್ನಾಭರಣ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಪೊಲೀಸರು ಎಲ್ಲಾ  ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಕಿ ನಂದಿಸುವ ಸಂದರ್ಭ ಮನೆಯೊಳಗೆ ಚಿನ್ನಾಭರಣದ ಪೆಟ್ಟಿಗೆ ನೋಡಿ ಅದನ್ನು ಎಗರಿಸಿರುವುದಾಗಿ ಆರೋಪಿಯು ಒಪ್ಪಿಕೊಂಡಿದ್ದು, ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News