ತಿರುವನಂತಪುರಂ: ಕಸ್ಟಡಿ ಹಿಂಸೆ ವಿರುದ್ಧ ಶಿಷ್ಟಾಚಾರ ಪಾಲನೆಗೆ ಬದ್ಧರಾದ ವೈದ್ಯೆ

Update: 2022-06-09 04:38 GMT
ಡಾ.ಕೆ.ಪ್ರತಿಭಾ

ತಿರುವನಂತಪುರಂ: ಪೊಲೀಸ್ ಕಸ್ಟಡಿಯಿಂದ ಕರೆ ತಂದ ವ್ಯಕ್ತಿಗಳ ವೈದ್ಯಕೀಯ ತಪಾಸಣೆ ಸಂಬಂಧ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಹೊಸ ವೈದ್ಯಕೀಯ-ಕಾನೂನು ಶಿಷ್ಟಾಚಾರ ನಿಯಮಾವಳಿ, ಕಸ್ಟಡಿ ಹಿಂಸೆಯ ಪಿಡುಗಿನ ವಿರುದ್ಧದ ಹೋರಾಟಕ್ಕೆ ಬೆಳ್ಳಿರೇಖೆ ಎನಿಸಿದೆ ಎಂದು indianexpress.com ವರದಿ ಮಾಡಿದೆ.

ನೆಡುಂಕಂಡಮ್ ಲಾಕಪ್ ಸಾವಿನ ಬಗ್ಗೆ ತನಿಖೆ ನಡೆಸಿದ ನ್ಯಾಯಮೂರ್ತಿ ನಾರಾಯಣ ಕುರುಪ್ ಶಿಫಾರಸ್ಸಿನ ಆಧಾರದಲ್ಲಿ ಈ ಶಿಷ್ಟಾಚಾರವನ್ನು ರಾಜ್ಯ ಸರ್ಕಾರ ರೂಪಿಸಿದ್ದರೂ, ಕಸ್ಟಡಿ ಹಿಂಸೆ ಸಂದರ್ಭ ಸಂತ್ರಸ್ತನಿಗೆ ಆದ ಗಾಯವನ್ನು ವೈದ್ಯಕೀಯ ತಪಾಸಣೆ ವರದಿಯಲ್ಲಿ ಉಲ್ಲೇಖಿಸಿದಂತೆ ಪೊಲೀಸರು ತಂದ ಒತ್ತಡವನ್ನು ಮೆಟ್ಟಿನಿಲ್ಲುವ ಧೈರ್ಯ ತೋರಿದ ಸರ್ಕಾರಿ ವೈದ್ಯೆಯ ಕಾರ್ಯ ಕೂಡಾ ಶ್ಲಾಘನೀಯ ಎನಿಸಿದೆ.

ಕಣ್ಣೂರು ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಿದ ಅವಧಿಯಲ್ಲಿ ಅಂದರೆ 2018ರಲ್ಲಿ ಪೊಲೀಸರ ನಿರ್ದೇಶನವನ್ನು ಡಾ.ಕೆ.ಪ್ರತಿಭಾ ಮೆಟ್ಟಿ ನಿಂತಿದ್ದರು. ವ್ಯಕ್ತಿಯ ವೈದ್ಯಕೀಯ ತಪಾಸಣೆ ನಡೆಸುವ ವೇಳೆ, ವ್ಯಕ್ತಿಯ ದೇಹದ ಮೇಲಿದ್ದ ಗಾಯದ ಗುರುತನ್ನು ಮರೆ ಮಾಚುವಂತೆ ಪೊಲೀಸರು ವೈದ್ಯೆಯ ಮೇಲೆ ಒತ್ತಡ ತಂದಿದ್ದರು. ಇದನ್ನು ಎದುರಿಸಿದ್ದಕ್ಕೆ ಪೊಲೀಸರಿಂದ ಕೆಲ ಕಿರುಕುಳಕ್ಕೂ ವೈದ್ಯೆ ಒಳಗಾಗಬೇಕಾಯಿತು. ಆದರೆ ಇವೆಲ್ಲವನ್ನೂ ಸಮರ್ಥವಾಗಿ ಎದುರಿಸಿ ಸಂತ್ರಸ್ತ ವ್ಯಕ್ತಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಇವರು ಮಹತ್ವದ ಪಾತ್ರ ವಹಿಸಿದರು.

ಕಣ್ಣೂರು ಘಟನೆಯು ವೈದ್ಯಕೀಯ-ಕಾನೂನು ತಪಾಸಣೆಗೆ ಮಾರ್ಗಸೂಚಿಯನ್ನು ಪರಿಷ್ಕರಿಸಲು ಸರ್ಕಾರದ ಕಣ್ಣು ತೆರೆಸಿತು. ಇಷ್ಟು ಮಾತ್ರವಲ್ಲದೇ, ಸರ್ಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ ಬಳಿಕ ಅವರು ಸರ್ಕಾರಕ್ಕೆ ಮೂರು ಸಲಹೆಗಳನ್ನು ನೀಡಿದರು.

ವೈದ್ಯರು ಪೊಲೀಸರ ಅನುಪಸ್ಥಿತಿಯಲ್ಲಿ ವ್ಯಕ್ತಿಗಳ ತಪಾಸಣೆಗೆ ಅವಕಾಶ ಮಾಡಿಕೊಡಬೇಕು, ಕಸ್ಟಡಿಯಿಂದ ಕರೆತಂದ ವ್ಯಕ್ತಿಗಳ ವೈದ್ಯಕೀಯ ತಪಾಸಣೆಗೆ ಆದ್ಯತೆ ನೀಡಬೇಕು ಮತ್ತು ತಪಾಸಣೆ ಬಳಿಕ ವಿಶೇಷ ಪರಿಣತಿ ಹೊಂದಿದ ವೈದ್ಯರು ಪ್ರಮಾಣಪತ್ರ ಸಿದ್ಧಪಡಿಸಬೇಕು ಎಂಬ ಶಿಫಾರಸ್ಸು ಮಾಡಿದರು. ಪ್ರಸ್ತುತ ಇವರು ಮಲಪ್ಪುರಂನ ತನಲೂರು ಕುಟುಂಬ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News