ರಾಜ್ಯಸಭೆ ಚುನಾವಣೆ; ಮತದಾನ ಆರಂಭ

Update: 2022-06-10 04:59 GMT

ಬೆಂಗಳೂರು, ಜೂ.10: ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಮತದಾನ ಆರಂಭಗೊಂಡಿದೆ. 

ವಿಧಾನಸೌಧದ ಕೊಠಡಿ ಸಮಖ್ಯೆ 106ರಲ್ಲಿ ಮತದಾನಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ.

ನಾಲ್ಕು ಸ್ಥಾನಗಳಿಗೆ ಚುನಾವಣೆಗೆ ಆರು ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಈ ಪೈಕಿ ಆಡಳಿತರೂಢ ಬಿಜೆಪಿ 2, ಕಾಂಗ್ರೆಸ್ ಪಕ್ಷ 1 ಸ್ಥಾನವನ್ನು ಅನಾಯಾಸವಾಗಿ ಗೆಲ್ಲಲಿದ್ದು, ನಾಲ್ಕನೆ ಸ್ಥಾನಕ್ಕಾಗಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಪೈಪೋಟಿ ಎದುರಾಗಿದೆ.

ಬಿಜೆಪಿಯಿಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್, ವಿಧಾನಪರಿಷತ್ ಮಾಜಿ ಸದಸ್ಯ ಲಹೆರ್ ಸಿಂಗ್ ಸಿರೋಯಾ, ಕಾಂಗ್ರೆಸ್ ಪಕ್ಷದಿಂದ ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್, ಮನ್ಸೂರ್ ಅಲಿ ಖಾನ್ ಹಾಗೂ ಜೆಡಿಎಸ್ ಪಕ್ಷದಿಂದ ವಿಧಾನಪರಿಷತ್ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ವಿಧಾನಸಭೆಯಲ್ಲಿ ಸಂಖ್ಯಾಬಲ: ವಿಧಾನಸಭೆಯಲ್ಲಿ ಒಟ್ಟು 225 ಸ್ಥಾನಗಳ ಪೈಕಿ ಬಿಜೆಪಿ-119, ಕಾಂಗ್ರೆಸ್-69, ಜೆಡಿಎಸ್-32, ಬಿಎಸ್ಪಿ-1, ಪಕ್ಷೇತರ-2, ಸ್ಪೀಕರ್-1 ಹಾಗೂ ನಾಮನಿರ್ದೇಶಿತ ಸದಸ್ಯ-1 ಸ್ಥಾನವಿದೆ. ಈ ಪೈಕಿ ನಾಮ ನಿರ್ದೇಶಿತ ಸದಸ್ಯರಿಗೆ ರಾಜ್ಯಸಭಾ ಚುನಾವಣೆಯಲ್ಲಿ ಮತದಾನದ ಹಕ್ಕು ಇಲ್ಲ.

ವಿಧಾನಸೌಧ ಪ್ರವೇಶ ನಿರ್ಬಂಧ

ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ(ಇಂದು) ಸಚಿವರು, ಶಾಸಕರೊಂದಿಗೆ ಆಗಮಿಸುವ ಗನ್ ಮ್ಯಾನ್(ಭದ್ರತಾ ಸಿಬ್ಬಂದಿ), ಅವರ ಆಪ್ತ ಸಹಯಕರನ್ನು ಆ ದಿನದ ಮಟ್ಟಿಗೆ ವಿಧಾನಸೌಧ ಒಳಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಅದೇ ರೀತಿ, ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News