ನಾಯಕನಾಗಿ ತನ್ನ ಮೊದಲ ಟ್ವೆಂಟಿ-20 ಪಂದ್ಯದಲ್ಲೇ ಸೋಲಿನ ರುಚಿ ಕಂಡ ರಿಷಭ್ ಪಂತ್

Update: 2022-06-10 07:22 GMT
Photo:PTI

ಹೊಸದಿಲ್ಲಿ: ವಿಕೆಟ್ ಕೀಪರ್-ಬ್ಯಾಟರ್  ರಿಷಬ್ ಪಂತ್ ನಾಯಕನಾಗಿ ತನ್ನ ಮೊದಲ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಪಂದ್ಯದಲ್ಲೇ ಸೋಲಿನ ರುಚಿ ಕಂಡಿದ್ದಾರೆ. ತನ್ನ ನಾಯಕತ್ವದ ಚೊಚ್ಚಲ ಪಂದ್ಯದಲ್ಲೇ ಸೋತ ಭಾರತದ ಎರಡನೇ ನಾಯಕನಾಗಿದ್ದಾರೆ. 2017ರಲ್ಲಿ ಕಾನ್ಪುರದಲ್ಲಿ ಇಂಗ್ಲೆಂಡ್ ವಿರುದ್ಧ ವಿರಾಟ್ ಕೊಹ್ಲಿ ತನ್ನ ನಾಯಕತ್ವದ ಮೊದಲ ಪಂದ್ಯದಲ್ಲಿ ಸೋತಿದ್ದರು.

ಗುರುವಾರ ದಕ್ಷಿಣ ಆಫ್ರಿಕಾ ವಿರುದ್ಧದ ಟ್ವೆಂಟಿ-20 ಸರಣಿಯ ಆರಂಭಿಕ ಪಂದ್ಯದಲ್ಲಿ ಭಾರತವು  211 ರನ್ ಗಳಿಸಿದರೂ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ.  ದಕ್ಷಿಣ ಆಫ್ರಿಕಾ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಯಶಸ್ವಿಯಾಗಿ  ಅತ್ಯಧಿಕ ರನ್  ಚೇಸಿಂಗ್ ಮಾಡಿತು.  ಡೇವಿಡ್ ಮಿಲ್ಲರ್ ಅವರ 31 ಎಸೆತಗಳಲ್ಲಿ ಔಟಾಗದೆ 64  ರನ್  ಹಾಗೂ  ರಸ್ಸಿ ವಾನ್ ಡೆರ್ ಡಸ್ಸೆನ್ ಅವರ ಅಜೇಯ 75 ರನ್‌ಗಳ ನೆರವಿನಿಂದ  ದಕ್ಷಿಣ ಆಫ್ರಿಕಾ 19.1 ಓವರ್‌ಗಳಲ್ಲಿ ಗುರಿಯನ್ನು ಸಾಧಿಸಿತು.

ಕೆ.ಎಲ್. ರಾಹುಲ್ ಗಾಯದಿಂದ ಹೊರಗುಳಿದ ನಂತರ 5 ಪಂದ್ಯಗಳ ಟ್ವೆಂಟಿ-20  ಸರಣಿಯ ಮುನ್ನಾದಿನದಂದು ಪಂತ್ ನಾಯಕತ್ವ ವಹಿಸಿಕೊಂಡಿದ್ದರು. ದಿಲ್ಲಿಯ ವಿಕೆಟ್‌ಕೀಪರ್-ಬ್ಯಾಟರ್ ಟ್ವೆಂಟಿ-20  ಕ್ರಿಕೆಟ್‌ನಲ್ಲಿ ಭಾರತದ ಸಾರಥ್ಯವಹಿಸಿದ  8 ನೇ ನಾಯಕರಾದರು. ಸುರೇಶ್ ರೈನಾ ನಂತರ ಎರಡನೇ ಕಿರಿಯ ವಯಸ್ಸಿನ ನಾಯಕ  ಎನಿಸಿಕೊಂಡರು.

ಭಾರತದ ಟಿ-20 ನಾಯಕನಾಗಿ ತಮ್ಮ ಮೊದಲ ಪಂದ್ಯದಲ್ಲಿ ಪಂತ್  ಹಾಗೂ  ಕೊಹ್ಲಿ ಇಬ್ಬರೂ ಒಂದೇ ರೀತಿಯ (29 ರನ್)ಸ್ಕೋರ್  ಗಳಿಸಿದ್ದಾರೆ. ಕಳೆದ ವರ್ಷ ನಾಯಕನ ಸ್ಥಾನದಿಂದ  ಕೆಳಗಿಳಿಯುವ ಮೊದಲು ಕೊಹ್ಲಿ ಭಾರತದ ಅತ್ಯಂತ ಯಶಸ್ವಿ ಸೀಮಿತ ಓವರ್  ನಾಯಕರಲ್ಲಿ ಒಬ್ಬರೆನಿಸಿಕೊಂಡಿದ್ದರು.

ಭಾರತ ತನ್ನ ಇತಿಹಾಸದಲ್ಲಿ ಮೊದಲ ಇನಿಂಗ್ಸ್ ನಲ್ಲಿ 200 ಕ್ಕೂ ಹೆಚ್ಚು ರನ್ ಗಳಿಸಿದ ನಂತರ ಟಿ-20 ಪಂದ್ಯವನ್ನು ಮೊದಲ ಬಾರಿ ಸೋತಿದೆ.  ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಗುರುವಾರ ಪಂದ್ಯವನ್ನಾಡುವ ಮೊದಲು ಸತತ  12 ಪಂದ್ಯಗಳಲ್ಲಿ ಅಜೇಯ ದಾಖಲೆಯನ್ನು ಕಾಯ್ದುಕೊಂಡಿತ್ತು.

ಭಾರತವು ಟಿ-20ಕ್ರಿಕೆಟ್‌ನಲ್ಲಿ ಸತತ 13 ಪಂದ್ಯಗಳಲ್ಲಿ  ಜಯ ಗಳಿಸಿ  ವಿಶ್ವ ದಾಖಲೆಯನ್ನು ನಿರ್ಮಿಸಲು ಬಯಸಿತ್ತು.  ಆದರೆ ಭಾರತದ 12 ಪಂದ್ಯಗಳ ಗೆಲುವಿನ ಸರಪಳಿಯನ್ನು ದಕ್ಷಿಣ ಆಫ್ರಿಕಾ ತುಂಡರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News