ಬೆಂಗಳೂರು | ಮದುವೆಗೆ ನಿರಾಕರಿಸಿದ ಮಹಿಳೆ ಮೇಲೆ ಆ್ಯಸಿಡ್ ದಾಳಿ: ಆರೋಪಿಯ ಬಂಧನ

Update: 2022-06-10 13:34 GMT

ಬೆಂಗಳೂರು, ಜೂ.10: ವಿವಾಹಕ್ಕೆ ನಿರಾಕರಿಸಿದ ಬೆನ್ನಲ್ಲೇ ವ್ಯಕ್ತಿಯೋರ್ವ ಮಹಿಳೆ ಮೇಲೆ ಆ್ಯಸಿಡ್  ಎರಚಿರುವ ಘಟನೆ ನಡೆದಿದ್ದು, ಸದ್ಯ ಆರೋಪಿಯನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಗೋರಿಪಾಳ್ಯ ನಿವಾಸಿ ಅಹ್ಮದ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ದಾಳಿಗೆ ಒಳಗಾದ 34 ವರ್ಷದ ಮಹಿಳೆಯ ಬಲಗಣ್ಣಿಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಏನಿದು ಪ್ರಕರಣ?: ಅಗರಬತ್ತಿ ಕಾರ್ಖಾನೆಯಲ್ಲಿ ವಿಚ್ಛೇಧಿತ ಮಹಿಳೆ ಹಾಗೂ ಗೋರಿಪಾಳ್ಯದ ಆರೋಪಿ ಅಹ್ಮದ್ ಕೆಲಸ ಮಾಡುತ್ತಿದ್ದು, ಇವರಿಬ್ಬರ ನಡುವೆ ಸ್ನೇಹವಾಗಿ ಪ್ರೀತಿಯಾಗಿದೆ. ಮಹಿಳೆಗೆ ಮೂವರು ಮಕ್ಕಳಿದ್ದಾರೆ. ಆರೋಪಿ ಅಹ್ಮದ್‍ಗೂ ಮದುವೆಯಾಗಿದ್ದು ಕುಟುಂಬವಿದೆ ಎನ್ನಲಾಗಿದೆ.

ಆದರೂ ಅಹ್ಮದ್ ಆಕೆಯನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದನು. ತನ್ನ ಮಕ್ಕಳು ದೊಡ್ಡವರಿದ್ದಾರೆ. ನಿನಗೂ ಮದುವೆಯಾಗಿ ಕುಟುಂಬವಿದೆ. ನಾವು ಮದುವೆಯಾಗುವುದು ಸರಿಯಲ್ಲ ಎಂದು ಆತನಿಗೆ ಮನವರಿಕೆ ಮಾಡಿದ್ದರೂ ವಿವಾಹವಾಗುವಂತೆ ದುಂಬಾಲು ಬಿದ್ದಿದ್ದನು ಎಂದು ಹೇಳಲಾಗುತ್ತಿದೆ.

ನಿನ್ನೆ ಇದೇ ವಿಚಾರವಾಗಿ ಮಹಿಳೆಯೊಂದಿಗೆ ಆರೋಪಿ ಜಗಳವಾಡಿ ಹೋಗಿದ್ದು, ಶುಕ್ರವಾರ ಬೆಳಗ್ಗೆ ಬಾಟಲಿಯಲ್ಲಿ ಡೈಲ್ಯೂಟೆಡ್ ಆ್ಯಸಿಡ್ ತಂದಿದ್ದು, ಇಲ್ಲಿನ ಗಂಗಾನಗರದ ಸಾರಕ್ಕಿ ಸಿಗ್ನಲ್ ಸಮೀಪದ ಉಮಾಮಹೇಶ್ವರಿ ದೇವಸ್ಥಾನದ ಬಳಿ ಮಹಿಳೆ ಬರುತ್ತಿದ್ದಾಗ ಆರೋಪಿ ಆಕೆಯ ಮುಖಕ್ಕೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾನೆ.

ತಕ್ಷಣ ಮಹಿಳೆ ಕೂಗಿಕೊಂಡಾಗ ದಾರಿಹೋಕರು ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವಾಸನ್ ಐ ಕೇರ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಈ ಕುರಿತು ಪ್ರತಿಕ್ರಿಯಿಸಿದ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ, ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಈತ ಮತ್ತು ನೊಂದ ಮಹಿಳೆ ಇಬ್ಬರು ಅಗರಬತ್ತಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಸಂತ್ರಸ್ತ ಮಹಿಳೆಗೆ ಮದುವೆಯಾಗಿ ಮಗುವಿದೆ. ಹೀಗಿದ್ದರೂ ಆರೋಪಿ ಮಹಿಳೆಯನ್ನು ಪ್ರೀತಿಸುತ್ತಿದ್ದ. ಜೊತೆಗೆ ಮದುವೆ ಆಗುವಂತೆ ಪೀಡಿಸುತ್ತಿದ್ದ ಎಂದರು.

ಆ್ಯಸಿಡ್ ನಿಷೇಧಕ್ಕೆ ಚಿಂತನೆ

ಆ್ಯಸಿಡ್ ಎರಚಿದ ಪ್ರಕರಣ ಗಮನಿಸಿದ್ದು, ಅಧಿಕಾರಿಗಳ ಬಳಿ ವರದಿ ಕೇಳಿದ್ದೇನೆ. ಆರೋಪಿ ವಿರುದ್ಧ ಕ್ರಮ ಜರುಗಿಸಲಿದ್ದು, ಇದನ್ನು ನಿಷೇಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News