ಲೈಂಗಿಕ ಹಿಂಸಾಚಾರದ ದಲಿತ ಸಂತ್ರಸ್ತರಿಗೆ ನ್ಯಾಯ ಇನ್ನೂ ಯಾಕೆ ಮರೀಚಿಕೆಯಾಗಿದೆ?

Update: 2022-06-11 08:25 GMT

ಕಳೆದ ವರ್ಷದ ಫೆಬ್ರವರಿಯಲ್ಲಿ 35 ವರ್ಷದ ದಿವ್ಯಾ ಪವಾರ್ ಗಂಡನೊಂದಿಗೆ ಜಗಳವಾಡಿದ ಬಳಿಕ ತನ್ನ ತವರು ಮನೆಗೆ ಹೊರಟರು. ಪಶ್ಚಿಮ ಮಹಾರಾಷ್ಟ್ರದ ಸೋಲಾಪುರದಲ್ಲಿ ಅವರು ಬಸ್‌ಗಾಗಿ ಕಾಯುತ್ತಿದ್ದಾಗ, ಇಬ್ಬರು ಪ್ರಬಲ ಜಾತಿಯ ಪುರುಷರು ಅಲ್ಲಿಗೆ ಬಂದು (ಅವರಲ್ಲಿ ಒಬ್ಬ ಪೊಲೀಸ್ ಅಧಿಕಾರಿ) ತಮ್ಮ ಕಾರು ನಿಲ್ಲಿಸಿ ನಿಮ್ಮನ್ನು ತವರು ಮನೆಗೆ ಬಿಡುತ್ತೇವೆ ಎಂದು ಹೇಳಿದರು.

ಅವರನ್ನು ನಂಬಿದ ಮಹಿಳೆ ಕಾರು ಹತ್ತಿದರು. ಆದರೆ ಅವರು ಮಹಿಳೆಯನ್ನು ತವರು ಮನೆಗೆ ಒಯ್ಯುವ ಬದಲು ಅವರ ಪೈಕಿ ಒಬ್ಬನಿಗೆ ಸೇರಿದ ತೋಟದಲ್ಲಿರುವ ತಗಡಿನ ಹಟ್ಟಿಗೆ ಒಯ್ದು ಅಲ್ಲಿ ಕೂಡಿ ಹಾಕಿದರು. ಮುಂದಿನ ಐದು ಹಗಲು ಮತ್ತು ನಾಲ್ಕು ರಾತ್ರಿಗಳ ಕಾಲ ಅವರಿಬ್ಬರು ಮಹಿಳೆಯ ಮೇಲೆ ನಿರಂತರ ಅತ್ಯಾಚಾರಗೈದರು.
ಬಳಿಕ, ಅವರು ಮಹಿಳೆಯ ಗಂಡನನ್ನು ಕರೆದುಕೊಂಡು ಬಂದರು. ನಿಮ್ಮ ಮನೆಯಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಹೊಟೇಲೊಂದರಲ್ಲಿ ಮಹಿಳೆ ಪತ್ತೆಯಾಗಿದ್ದಾರೆ ಎಂದು ಅವರು ಗಂಡನಿಗೆ ಹೇಳಿದರು.
ಮನೆಗೆ ಬಂದ ಬಳಿಕ, ‘‘ಶುದ್ಧತೆಯ ಪರೀಕ್ಷೆ’’ಗೆ ಒಳಗಾಗುವಂತೆ ದಿವ್ಯಾರಿಗೆ ಗಂಡನು ಸೂಚಿಸಿದನು. ಕುದಿಯುತ್ತಿರುವ ಎಣ್ಣೆಯ ಪಾತ್ರೆಯ ಒಳಗಿನಿಂದ ಐದು ರೂಪಾಯಿ ನಾಣ್ಯವನ್ನು ಹೊರಗೆ ತೆಗೆಯುವುದು ಆ ಪರೀಕ್ಷೆಯಾಗಿತ್ತು. ‘‘ಪರಿಶುದ್ಧ’’ ಮಹಿಳೆಗೆ ಯಾವುದೇ ಸುಟ್ಟ ಗಾಯವಾಗದಂತೆ ನಾಣ್ಯವನ್ನು ಹೊರಗೆ ತೆಗೆಯಲು ಸಾಧ್ಯವಾಗುತ್ತದೆ ಎಂದು ಗಂಡನು ಹೆಂಡತಿಗೆ ಭರವಸೆ ನೀಡಿದನು.
ಕುದಿಯುತ್ತಿರುವ ಎಣ್ಣೆಯಿಂದ ನಾಣ್ಯವನ್ನು ಹೊರತೆಗೆಯಲು ದಿವ್ಯಾ ಮಾಡುವ ಪ್ರಯತ್ನವನ್ನು ಗಂಡನು ವೀಡಿಯೊ ಮಾಡಿದನು. ಕೆಲವೇ ದಿನಗಳಲ್ಲಿ ಆ ವೀಡಿಯೊ ವಾಟ್ಸ್‌ಆ್ಯಪ್ ಮೂಲಕ ಗ್ರಾಮದಲ್ಲಿ ವೈರಲ್ ಆಯಿತು. ಆಗ ಪೊಲೀಸರಿಗೆ ದೂರು ಸಲ್ಲಿಸಲು ದಿವ್ಯಾರಿಗೆ ನೆರವಾಗಲು ಸಾಮಾಜಿಕ ಕಾರ್ಯಕರ್ತರೊಬ್ಬರು ಮುಂದೆ ಬಂದರು.

ಹಿಂಸಾಚಾರದ ಗುರಿಗಳು
ಇಂತಹ ಸಂಕಷ್ಟಕ್ಕೆ ಗುರಿಯಾಗಿದ್ದು ದಿವ್ಯಾ ಮಾತ್ರ ಅಲ್ಲ. ಭಾರತದ ದುರ್ಬಲ ವರ್ಗಗಳ, ಅದರಲ್ಲೂ ಮುಖ್ಯವಾಗಿ ದಲಿತ ಮಹಿಳೆಯರು ಮತ್ತು ಬಾಲಕಿಯರು ಇಂತಹ ಲೈಂಗಿಕ ದೌರ್ಜನ್ಯಗಳಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಒಳಗಾಗುತ್ತಿದ್ದಾರೆ.
ಭಾರತದ ಶ್ರೇಣೀಕೃತ ಸಂಕೀರ್ಣ ಜಾತಿ ವ್ಯವಸ್ಥೆಯಲ್ಲಿ ದಲಿತರು (ಹಿಂದೆ ಅವರನ್ನು ಅಸ್ಪಶ್ಯರು ಎಂಬುದಾಗಿ ಕರೆಯುತ್ತಿದ್ದರು) ತಳದಲ್ಲಿದ್ದಾರೆ. ಅವರ ಮೇಲೆ ಮೇಲ್ಜಾತಿಯ ಜನರು ಶತಮಾನಗಳಿಂದಲೂ ದೌರ್ಜನ್ಯ ಮತ್ತು ತಾರತಮ್ಯ ನಡೆಸುತ್ತಾ ಬಂದಿದ್ದಾರೆ. ದಲಿತರ ರಕ್ಷಣೆಗೆ ಕಾನೂನುಗಳಿದ್ದರೂ ದೌರ್ಜನ್ಯಗಳು ಮುಂದುವರಿದಿವೆ.

ದಲಿತರ ವಿರುದ್ಧ ಲೈಂಗಿಕ ದೌರ್ಜನ್ಯ
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಇತ್ತೀಚಿನ ಅಂಕಿಅಂಶಗಳನ್ವಯ, 2015 ಮತ್ತು 2020ರ ನಡುವಿನ ಅವಧಿಯಲ್ಲಿ ದಲಿತ ಮಹಿಳೆಯರ ಮೇಲೆ ನಡೆದ ಅತ್ಯಾಚಾರಗಳ ಸಂಖ್ಯೆಯಲ್ಲಿ ಶೇ.45 ಹೆಚ್ಚಳವಾಗಿದೆ. ಭಾರತದಲ್ಲಿ ದಲಿತ ಮಹಿಳೆಯರು ಮತ್ತು ಬಾಲಕಿಯರ ಮೇಲೆ ಪ್ರತೀ ದಿನ ಸರಾಸರಿ 10 ಅತ್ಯಾಚಾರಗಳು ನಡೆಯುತ್ತವೆ ಎಂಬುದಾಗಿ ಅಂಕಿಅಂಶಗಳು ಹೇಳುತ್ತವೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2015-2016ರ ಪ್ರಕಾರ, ಪರಿಶಿಷ್ಟ ಪಂಗಡ (ಆದಿವಾಸಿ)ಕ್ಕೆ ಸೇರಿದ ಮಹಿಳೆಯರ ಮೇಲೆ ಗರಿಷ್ಠ ಪ್ರಮಾಣದಲ್ಲಿ ಲೈಂಗಿಕ ದೌರ್ಜನ್ಯಗಳು ನಡೆಯುತ್ತವೆ. ಪರಿಶಿಷ್ಟ ಪಂಗಡಗಳ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಮಾಣ ಶೇ. 7.8 ಆಗಿದ್ದರೆ, ಪರಿಶಿಷ್ಟ ಜಾತಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಮಾಣ ಶೇ. 7.3 ಆಗಿದೆ. ಇತರ ಹಿಂದುಳಿದ ಜಾತಿ (ಒಬಿಸಿ)ಗಳ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಮಾಣ ಶೇ. 5.4. ಇತರ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ ಪ್ರಮಾಣ ಶೇ. 4.5.
ಆದರೆ, ಈ ಅಂಕಿ-ಸಂಖ್ಯೆಗಳು ನೈಜ ಪ್ರಕರಣಗಳ ಒಂದು ಅತಿ ಸಣ್ಣ ಭಾಗವಷ್ಟೆ ಎಂಬುದಾಗಿ ದಲಿತ್ ಹ್ಯೂಮನ್ ರೈಟ್ಸ್ ಡಿಫೆಂಡರ್ಸ್ ನೆಟ್‌ವರ್ಕ್ (ಡಿಎಚ್‌ಆರ್‌ಡಿಎನ್), ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸಯನ್ಸಸ್ ಮತ್ತು ನ್ಯಾಶನಲ್ ಕೌನ್ಸಿಲ್ ಆಫ್ ವಿಮೆನ್ ಲೀಡರ್ಸ್ (ಎನ್‌ಸಿಡಬ್ಲುಎಲ್)ನ ಇತ್ತೀಚಿನ ವರದಿಯೊಂದು ಹೇಳುತ್ತದೆ.
ಈ ವರ್ಷದ ಮಾರ್ಚ್‌ನಲ್ಲಿ ಬಿಡುಗಡೆಯಾಗಿರುವ ವರದಿಯು ಸಂತ್ರಸ್ತ ಮಹಿಳೆಯರು ನ್ಯಾಯ ಪಡೆಯಲು ಇರುವ ಹಾದಿಯನ್ನು ವಿಶ್ಲೇಷಿಸುತ್ತದೆ. ವರದಿಯು ಬಿಹಾರ, ಛತ್ತೀಸ್‌ಗಡ, ಗುಜರಾತ್, ಹರ್ಯಾಣ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರಪ್ರದೇಶ ಮತ್ತು ಉತ್ತರಾಖಂಡವನ್ನೊಳಗೊಂಡ 13 ರಾಜ್ಯಗಳಲ್ಲಿ ಜಾತಿ ನೆಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯಗಳ ಸಂತ್ರಸ್ತರ ಅನುಭವಗಳನ್ನು ದಾಖಲಿಸಿದೆ.
‘‘ಜಾತಿ ಆಧಾರಿತ ದೌರ್ಜನ್ಯಗಳು ಕೇವಲ ಜಾತಿಯನ್ನು ಆಧರಿಸಿ ನಡೆಯುವುದಿಲ್ಲ; ಜಾತಿ ಮತ್ತು ಲಿಂಗದ ಆಧಾರದಲ್ಲಿಯೂ ನಡೆಯುತ್ತದೆ. ಹಾಗಾಗಿ, ದಲಿತ ಮಹಿಳೆಯರ ದೇಹಗಳು ಹಿಂಸೆಯ ಗುರಿಗಳಾಗುತ್ತವೆ. ಹೆಚ್ಚಿನ ದಲಿತ ಮಹಿಳೆಯರು ಎದುರಿಸುತ್ತಿರುವ ಅತ್ಯಂತ ತೀವ್ರ ಮಾದರಿಯ ಹಿಂಸೆಯೆಂದರೆ ಲೈಂಗಿಕ ಹಿಂಸೆ’’ ಎಂದು ವಕೀಲೆ ಹಾಗೂ ಮಾನವಹಕ್ಕುಗಳ ಕಾರ್ಯಕರ್ತೆ ಮಂಜುಳಾ ಪ್ರದೀಪ್ ‘ಅಲ್ ಜಝೀರ’ದೊಂದಿಗೆ ಮಾತನಾಡುತ್ತಾ ಹೇಳಿದರು. ಅವರು ಎನ್‌ಸಿಡಬ್ಲುಎಲ್ ಮತ್ತು ಡಿಎಚ್‌ಆರ್‌ಡಿಎನ್‌ಗಳ ಅಭಿಯಾನ ನಿರ್ದೇಶಕಿಯೂ ಹೌದು.
ದೌರ್ಜನ್ಯ ತಡೆ ಕಾಯ್ದೆಯು ಶೋಷಿತ ಜಾತಿ ಮತ್ತು ಪಂಗಡಗಳಿಗೆ ಸೇರಿದ ಜನರ ಮೇಲೆ ನಡೆಯುವ ಅಪರಾಧಗಳನ್ನು ವಿಶೇಷವಾಗಿ ಪರಿಗಣಿಸುತ್ತದೆ. ಇಂತಹ ಪ್ರಕರಣಗಳಲ್ಲಿ ಸಂತ್ರಸ್ತರು ಸರಕಾರದ ನೆರವನ್ನು ಪಡೆಯುತ್ತಾರೆ ಮತ್ತು ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗುತ್ತದೆ.
ಆದರೆ, ಈ ಕಾನೂನಿನಡಿ ವಿಚಾರಣೆ ನಡೆಯಬೇಕಾದರೆ ಸಂತ್ರಸ್ತರು ಮೊದಲು ಈ ಅಪರಾಧಗಳ ಬಗ್ಗೆ ಪೊಲೀಸರಿಗೆ ದೂರು ನೀಡಬೇಕಾಗುತ್ತದೆ. ಆ ಬಳಿಕ ತನಿಖೆ ನಡೆಯುತ್ತದೆ. ಅದರ ನಂತರವಷ್ಟೇ ಪ್ರಕರಣವು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹೋಗುತ್ತದೆ. ಇಲ್ಲಿನ ಪ್ರತೀ ಹಂತದಲ್ಲೂ, ಶೋಷಿತ ವರ್ಗಗಳಿಗೆ ಸೇರಿದ ಮಹಿಳೆಯರಿಗೆ, ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ ಇಂತಹ ಮಹಿಳೆಯರಿಗೆ ನ್ಯಾಯ ಸಿಗುವ ಸಾಧ್ಯತೆ ಸೀಮಿತವಾಗಿರುತ್ತದೆ ಎಂಬುದಾಗಿ ವರದಿ ಅಭಿಪ್ರಾಯಪಡುತ್ತದೆ.

ಸಂತ್ರಸ್ತರಿಗೆ ಅವಮಾನ, ಸಾಮಾಜಿಕ ಒತ್ತಡ
ಮೇಲಿನ ಪವಾರ್ ಪ್ರಕರಣದಲ್ಲಿ, ಆಕೆಯ ಗಂಡ ತಲೆಮರೆಸಿಕೊಂಡನು ಹಾಗೂ ಈಗಲೂ ತಲೆಮರೆಸಿಕೊಂಡೇ ಇದ್ದಾನೆ. ಆಕೆಯ ಮೇಲೆ ಅತ್ಯಾಚಾರಗೈದ ಆರೋಪಿಗಳನ್ನು ಆರು ದಿನಗಳಲ್ಲಿ ಬಂಧಿಸಲಾಯಿತು.
ದಲಿತ ಮಹಿಳೆಯರ ಮೇಲೆ ಬಲಾಢ್ಯ ಜಾತಿಗಳ ಪುರುಷರು ಅತ್ಯಾಚಾರ ಮಾಡುವ ಪ್ರಕರಣಗಳಲ್ಲಿ ಹೀಗೆ ನಡೆಯುವುದು ತುಂಬಾ ಅಪರೂಪ. ‘‘ವೀಡಿಯೊ ಇಲ್ಲದಿದ್ದರೆ ಈ ಪ್ರಕರಣವನ್ನು ಇಷ್ಟು ಯಶಸ್ವಿಯಾಗಿ ಪರಿಹರಿಸಲು ಸಾಧ್ಯವಾಗುತ್ತಿರಲಿಲ್ಲ’’ ಎಂದು ಸರಕಾರೇತರ ಸಂಘಟನೆ ‘ಮನುಸ್ಕಿ’ಯಲ್ಲಿ ಸಂಶೋಧನಾ ಕೇಂದ್ರ ಸಂಯೋಜಕಿಯಾಗಿರುವ ಪ್ರಾಚಿ ಸಾಳ್ವೆ ಹೇಳುತ್ತಾರೆ.
‘‘ಇಂತಹ ಪ್ರಕರಣಗಳಲ್ಲಿ ಸಂತ್ರಸ್ತರನ್ನು ಅವಮಾನಕ್ಕೆ ಗುರಿಪಡಿಸುವುದು ಸಾಮಾನ್ಯವಾಗಿದೆ. ಅವರ (ಸಂತ್ರಸ್ತರ) ಮೇಲೆ ಅಗಾಧ ಒತ್ತಡವಿರುತ್ತದೆ’’ ಎಂದು ಸಾಳ್ವೆ ಹೇಳುತ್ತಾರೆ. ಸಂತ್ರಸ್ತೆಯರನ್ನು ಪಕ್ಕದ ಗ್ರಾಮಗಳಲ್ಲಿಯೂ ಅವಮಾನಿಸಲಾಗುತ್ತದೆ. ಜೊತೆಗೆ, ಹಲವು ಸಂದರ್ಭಗಳಲ್ಲಿ ಅವರ ಕುಟುಂಬ ಸದಸ್ಯರನ್ನೂ ಅವಮಾನಕ್ಕೆ ಗುರಿಪಡಿಸಲಾಗುತ್ತದೆ ಎಂದು ಅವರು ಹೇಳಿದರು.
ಹಾಗಾಗಿ, ಹೆಚ್ಚಿನ ಪ್ರಕರಣಗಳಲ್ಲಿ ಸಂತ್ರಸ್ತೆಯರಿಗೆ ನ್ಯಾಯವೇ ಸಿಗುವುದಿಲ್ಲ. ಅವರ ಜಾತಿಗಳಿಂದಾಗಿ ಈ ಮಹಿಳೆಯರು ಬಹುತೇಕ ಕೃಷಿ ಕಾರ್ಮಿಕರು ಅಥವಾ ಕಾರ್ಮಿಕರಾಗಿರುತ್ತಾರೆ. ಅವರು ಕೆಲಸಕ್ಕಾಗಿ ಪ್ರಬಲ ಜಾತಿಗಳ ಜನರನ್ನೇ ಅವಲಂಬಿಸಿದ್ದಾರೆ.
ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಒತ್ತಡ ಮತ್ತು ಬೆದರಿಕೆಗಳನ್ನು ಸಹಿಸಲು ಅಸಾಧ್ಯವಾದಾಗ, ಸಂತ್ರಸ್ತೆಯರು ಮನೆ ಬಿಟ್ಟು ಹೋಗುತ್ತಾರೆ.
ಕಾನೂನು ಅನುಷ್ಠಾನ ವ್ಯವಸ್ಥೆಯಲ್ಲೂ ಸಂತ್ರಸ್ತೆಯರನ್ನೇ ದೂಷಿಸುವ ಪರಿಪಾಠವಿದೆ. ಅದು ಮಾತ್ರ ತುಂಬಾ ಅಪಾಯಕಾರಿ ಎಂದು ಸಾಳ್ವೆ ಹೇಳುತ್ತಾರೆ. ‘‘ನಾನು ಪೊಲೀಸರೊಂದಿಗೆ ಮಾತನಾಡುವಾಗ, ಅದು ಸಂತ್ರಸ್ತೆಯದೇ ತಪ್ಪು ಎಂಬುದಾಗಿ ಹೆಚ್ಚಿನ ಸಂದರ್ಭಗಳಲ್ಲಿ ಅವರು ಹೇಳುತ್ತಾರೆ’’ ಎಂದರು.
ಹೆಚ್ಚಿನ ಸಂದರ್ಭಗಳಲ್ಲಿ ಎನ್‌ಜಿಒಗಳು ಮತ್ತು ಸಾಮಾಜಿಕ ಕಾರ್ಯಕರ್ತರ ಮಧ್ಯಪ್ರವೇಶದ ಬಳಿಕವಷ್ಟೇ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಎಫ್‌ಐಆರ್ ದಾಖಲಾಗುವಾಗ ಮೂರು ತಿಂಗಳುಗಳೂ ಕಳೆಯಬಹುದಾಗಿದೆ. ಆಗ ವೈದ್ಯಕೀಯ ಪರೀಕ್ಷೆ ನಡೆದರೆ ಪರಿಪೂರ್ಣ ಪುರಾವೆ ದೊರೆಯುವುದು ಕಷ್ಟ. ಅದೂ ಅಲ್ಲದೆ ಎಫ್‌ಐಆರ್‌ನಲ್ಲಿ ನ್ಯಾಯ ಸಿಗುವ ಖಾತರಿಯೇನಿಲ್ಲ.

ಕೃಪೆ: www.aljazeera.com

Writer - ಆಕಾಂಕ್ಷಾ ಸಿಂಗ್

contributor

Editor - ಆಕಾಂಕ್ಷಾ ಸಿಂಗ್

contributor

Similar News