ಕಡಿಮೆ ಆಹಾರಕ್ಕೆ ಹೆಚ್ಚು ಪಾವತಿಸುತ್ತಿರುವ ದುರ್ಬಲ ದೇಶಗಳು: ವಿಶ್ವಸಂಸ್ಥೆ ವರದಿ

Update: 2022-06-10 18:19 GMT

ರೋಮ್, ಜೂ.10: ವಿಶ್ವದ ಹಲವು ದುರ್ಬಲ ದೇಶಗಳು ಆಹಾರ ವಸ್ತುಗಳಿಗೆ ಹೆಚ್ಚು ಪಾವತಿಸಿದರೂ ಕಡಿಮೆ ಪಡೆಯುವ ಪರಿಸ್ಥಿತಿಯಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಾಗತಿಕ ಆಹಾರ ಆಮದಿನ ಮೊತ್ತದಲ್ಲಿ 51 ಬಿಲಿಯನ್ ಡಾಲರ್‌ನಷ್ಟು ಏರಿಕೆಯಾಗುವುದಾಗಿ ಅಂದಾಜಿಸಲಾಗಿದೆ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ(ಎಫ್‌ಎಒ) ಬಿಡುಗಡೆಗೊಳಿಸಿದ ನೂತನ ವರದಿ ಹೇಳಿದೆ.

ಆಹಾರ ಭದ್ರತೆಯ ದೃಷ್ಟಿಕೋನದಿಂದ ಇವು ಎಚ್ಚರಿಕೆಯ ಸಂಕೇತವಾಗಿದ್ದು ಹೆಚ್ಚುತ್ತಿರುವ ಆರ್ಥಿಕ ವೆಚ್ಚಗಳಿಗೆ ಹಣಕಾಸು ಒದಗಿಸಲು ಆಮದುದಾರರಿಗೆ ಕಷ್ಟವಾಗಲಿದೆ ಮತ್ತು ವೆಚ್ಚದ ಹೊರೆಯ ಆಘಾತದಿಂದ ತ್ವರಿತವಾಗಿ ಚೇತರಿಸಿಕೊಳ್ಳುವ ಸಾಮರ್ಥ್ಯದ ಸಂಭಾವ್ಯ ಅಂತ್ಯವನ್ನು ಸೂಚಿಸುತ್ತದೆ ಎಂದು ಗುರುವಾರ ಬಿಡುಗಡೆಗೊಂಡಿರುವ ವರದಿ ಹೇಳಿದೆ.

ಹೆಚ್ಚುತ್ತಿರುವ ಆಮದು ದರ, ಹವಾಮಾನದ ಕುರಿತ ಕಳವಳ ಮತ್ತು ಉಕ್ರೇನ್‌ನಲ್ಲಿನ ಯುದ್ಧದ ಹಿನ್ನೆಲೆಯಲ್ಲಿ ಮಾರುಕಟ್ಟೆಯ ಅನಿಶ್ಚಿತತೆಯಲ್ಲಿನ ಹೆಚ್ಚಳದ ಹಿನ್ನೆಲೆಯಲ್ಲಿ, ಎಫ್‌ಎಒದ ಇತ್ತೀಚಿನ ಮುನ್ಸೂಚನೆಯು ಆಹಾರ ಮಾರುಕಟ್ಟೆ ಇನ್ನಷ್ಟು ಬಿಗಿಯಾಗುವ ಮತ್ತು ಆಹಾರ ಆಮದು ಮೊತ್ತ ದಾಖಲೆಯ ಮಟ್ಟಕ್ಕೇರುವ ಸಾಧ್ಯತೆಯನ್ನು ತೋರಿಸುತ್ತದೆ ಎಂದು `ಫುಡ್ ಔಟ್‌ಲುಕ್’ ವರದಿಯ ಮುಖ್ಯ ಸಂಪಾದಕ, ಎಫ್‌ಒಎ ಅರ್ಥಶಾಸ್ತçಜ್ಞ ಉಪಾಲಿ ಗಲ್ಕೇಟಿ ಅರಚಿಲಗೆ ಹೇಳಿದ್ದಾರೆ.

ಆಹಾರ ಆಮದಿನ ಮೇಲೆ ಹೆಚ್ಚು ಅವಲಂಬಿತವಾಗಿರುವ ಕಡಿಮೆ ಆದಾಯದ ದೇಶಗಳು ತಮ್ಮ ಆಹಾರ ಭದ್ರತೆಯನ್ನು ಸಂರಕ್ಷಿಸಿಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ಆಹಾರ ಆಮದು ಸಾಲ ವ್ಯವಸ್ಥೆ ರೂಪಿಸಲು ಎಫ್‌ಒಎ ಸಲಹೆ ಮಾಡಿದೆ. 2022ರಲ್ಲಿ ಆಮದು ಮೊತ್ತ ಹೆಚ್ಚಾಗಲು ಪ್ರಾಣಿಗಳ ಕೊಬ್ಬುಗಳು ಮತ್ತು ಸಸ್ಯಜನ್ಯ ಎಣ್ಣೆಗಳು ಪ್ರಮುಖ ಕಾರಣವಾಗಲಿದೆ. ಧಾನ್ಯಗಳು ನಂತರದ ಸ್ಥಾನದಲ್ಲಿ ಇರಲಿವೆ. ಅಭಿವೃದ್ಧಿಶೀಲ ದೇಶಗಳು ಒಟ್ಟಾರೆಯಾಗಿ ಧಾನ್ಯಗಳು, ಎಣ್ಣೆಕಾಳುಗಳು ಮತ್ತು ಮಾಂಸದ ಆಮದನ್ನು ಕಡಿಮೆ ಮಾಡಿಕೊಳ್ಳುತ್ತವೆ. ಇದು ಬೆಲೆ ಹೆಚ್ಚಳವನ್ನು ಸರಿದೂಗಿಸುವಲ್ಲಿನ ಅವರ ಅಸಮರ್ಥತೆಯನ್ನು ಪ್ರತಿಬಿಂಬಿಸುತ್ತದೆ. ಕಳೆದ 4 ವರ್ಷಗಳಲ್ಲೇ ಪ್ರಥಮ ಬಾರಿಗೆ 2022ರಲ್ಲಿ ಪ್ರಮುಖ ಧಾನ್ಯಗಳ ಜಾಗತಿಕ ಉತ್ಪಾದನೆ ಇಳಿಕೆಯಾಗುವ ನಿರೀಕ್ಷೆಯಿದೆ. ಅಲ್ಲದೆ ಜಾಗತಿಕ ಬಳಕೆಯೂ 20 ವರ್ಷದಲ್ಲೇ ಮೊದಲ ಬಾರಿಗೆ ಇಳಿಕೆಯಾಗಲಿದೆ. ಆದರೂ, ಮಾನವರ ನೇರ ಬಳಕೆಯ ಆಹಾರ ಧಾನ್ಯಗಳ ಬಳಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನಿರೀಕ್ಷಿಸಲಾಗಿದೆ. ಯಾಕೆಂದರೆ, ಒಟ್ಟು ಬಳಕೆಯಲ್ಲಿನ ಇಳಿಕೆಗೆ ಗೋಧಿ, ಒರಟು ಧಾನ್ಯಗಳು ಮತ್ತು ಅಕ್ಕಿಯ ಕಡಿಮೆ ಬಳಕೆ ಕಾರಣವಾಗಲಿದೆ ಎಂದು ವರದಿ ಹೇಳಿದೆ.

2 ವರ್ಷಕ್ಕೊಮ್ಮೆ ಬಿಡುಗಡೆಗೊಳ್ಳುವ ಎಫ್‌ಎಒದ ಆಹಾರ ಮೇಲ್ನೋಟವು ಆಹಾರ ಧಾನ್ಯಗಳು, ಎಣ್ಣೆಕಾಳುಗಳು, ಸಕ್ಕರೆ, ಮಾಂಸ, ಹೈನುಗಾರಿಕೆ ಉತ್ಪನ್ನ,ಮೀನು ಸೇರಿದಂತೆ ವಿಶ್ವದ ಪ್ರಮುಖ ಆಹಾರವಸ್ತುಗಳ ಮಾರುಕಟ್ಟೆ ಪೂರೈಕೆ ಮತ್ತು ಬೇಡಿಕೆ ಪ್ರವೃತ್ತಿಯ ಪರಿಶೀಲನೆಯಾಗಿದೆ. ಅಲ್ಲದೆ ಆಹಾರ ವಸ್ತುಗಳಿಗೆ ಭವಿಷ್ಯದ ಮಾರುಕಟ್ಟೆ ಟ್ರೆಂಡ್‌ಗಳು ಮತ್ತು ಪೂರೈಕೆ ವೆಚ್ಚಗಳನ್ನೂ ಇಲ್ಲಿ ಪರಿಶೀಲಿಸಲಾಗುತ್ತದೆ.

ಚೀನಾ, ರಶ್ಯ ಒಕ್ಕೂಟ ಮತ್ತು ಉಕ್ರೇನ್‌ನಲ್ಲಿ ದಾಸ್ತಾನುಗಳ ನಿರೀಕ್ಷಿತ ಹೆಚ್ಚಳದಿಂದ ಜಾಗತಿಕ ಗೋಧಿ ದಾಸ್ತಾನು ಈ ವರ್ಷ ಹೆಚ್ಚುವ ನಿರೀಕ್ಷೆಯಿದೆ. ಆದರೆ, ಬ್ರೆಝಿಲ್ ಮತ್ತು ಅಮೆರಿಕದಲ್ಲಿ ಎಥೆನಾಲ್ ಉತ್ಪಾದನೆ ಹೆಚ್ಚಿರುವ , ಚೀನಾದಲ್ಲಿ ಕೈಗಾರಿಕಾ ಕಿಣ್ವ ಉತ್ಪಾದನೆಯ ಹಿನ್ನೆಲೆಯಲ್ಲಿ ಜಾಗತಿಕ ಮೆಕ್ಕೆಜೋಳ ಉತ್ಪಾದನೆ ಮತ್ತು ಬಳಕೆ ಹೊಸ ದಾಖಲೆ ಸ್ಥಾಪಿಸುವ ನಿರೀಕ್ಷೆಯಿದೆ. ಬೇಡಿಕೆಯ ಮೇಲೆ ಮಿತಿ ವಿಧಿಸಿದ್ದರೂ ಜಾಗತಿಕ ಖಾದ್ಯತೈಲ ಬಳಕೆಯು ಉತ್ಪಾದನೆಯನ್ನು ಮೀರಿಸುವ ನಿರೀಕ್ಷೆಯಿದೆ. ಭಾರತ, ಥೈಲ್ಯಾಂಡ್ ಮತ್ತು ಯುರೋಪಿಯನ್ ಯೂನಿಯನ್‌ಗಳಲ್ಲಿ ಉತ್ಪಾದನೆ ಹೆಚ್ಚಿರುವುದರಿಂದ 3 ವರ್ಷದ ಇಳಿಕೆಯ ಬಳಿಕ ಇದೀಗ ಜಾಗತಿಕ ಸಕ್ಕರೆ ಉತ್ಪಾದನೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.

ಮಾಂಸದ ಉತ್ಪಾದನೆ ಹೆಚ್ಚಳ

ಅರ್ಜೆಂಟೀನಾ, ಯುರೋಪಿಯನ್ ಯೂನಿಯನ್ ಮತ್ತು ಅಮೆರಿಕಾದಲ್ಲಿ ಮಾಂಸದ ಉತ್ಪಾದನೆ ಇಳಿಕೆಯಾಗುವ ನಿರೀಕ್ಷೆಯಿದ್ದರೂ, ಚೀನಾದಲ್ಲಿ ಹಂದಿ ಮಾಂಸದ ಉತ್ಪಾದನೆಯಲ್ಲಿ 8% ಹೆಚ್ಚಳದ ಕಾರಣ ಜಾಗತಿಕ ಮಾಂಸದ ಉತ್ಪಾದನೆ 1.4% ಏರಿಕೆಯಾಗಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News