1978ರ ಚುನಾವಣೆ

Update: 2022-06-11 06:44 GMT

ಹಿರಿಯ ರಾಜಕಾರಣಿ ಶ್ರೀಮತಿ ಮೋಟಮ್ಮ ಅವರ ಆತ್ಮಕಥೆ ‘ಬಿದಿರು ನೀನ್ಯಾರಿಗಲ್ಲದವಳು’ ಇದೇ ಜೂನ್ 11ರಂದು ಲೋಕಾರ್ಪಣೆಗೊಳ್ಳಲಿದೆ. ವೀರಣ್ಣ ಕಮ್ಮಾರ ಅವರು ನಿರೂಪಿಸಿದ ಈ ಆತ್ಮಕಥನದ ಆಯ್ದ ಭಾಗವನ್ನು ಇಲ್ಲಿ ಕೊಡಲಾಗಿದೆ.

ನಾನು ಬೆಂಗಳೂರಿನಲ್ಲೇ ಇದ್ದುಕೊಂಡು ನನ್ನ ವಿದ್ಯಾಭ್ಯಾಸ ಮಾಡಿದ್ದೆನಾದರೂ, ವಿಧಾನಸೌಧಕ್ಕೆ ಹತ್ತಿರದಲ್ಲೇ ಮಹಾರಾಣಿ ಕಾಲೇಜು ಇದೆಯಾದರೂ, ಒಂದು ದಿನವೂ ನಾನು ವಿಧಾನಸೌಧದ ಕಡೆಗೆ ಹೋದವಳಲ್ಲ. ಹೀಗಾಗಿ ನನಗೆ ಕಾಲೇಜಿನಿಂದ ವಿಧಾನಸೌಧವು ಎಷ್ಟು ದೂರವಿದೆ ಎಂಬುದೇ ನಿಖರವಾಗಿ ಗೊತ್ತಿರಲಿಲ್ಲ. ವಿಧಾನಸೌಧವೇ ಗೊತ್ತಿಲ್ಲವೆಂದ ಮೇಲೆ ಶಾಸಕರ ಭವನ ಹೇಗೆ ಗೊತ್ತಿರುವುದಕ್ಕೆ ಸಾಧ್ಯ?

ನಾನು ರಾಜಕೀಯಕ್ಕೆ ಹೋಗುವುದೋ ಬೇಡವೋ ಎಂಬ ತೊಳಲಾಟದಲ್ಲಿದ್ದಾಗಲೇ, 1978ರಲ್ಲಿ ಕರ್ನಾಟಕ ವಿಧಾನಸಭೆಗೆ ಚುನಾವಣೆ ಬಂದೇ ಬಿಟ್ಟಿತು. ನನಗೋ ಚುನಾವಣೆಯ ಓನಾಮ ಗೊತ್ತಿಲ್ಲ. ಜನಗಳನ್ನು ಸೇರಿಸೋದು, ಕಂಡವರಿಗೆಲ್ಲ ಕೈ ಎತ್ತಿ ನಮಸ್ಕಾರ ಮಾಡೋದು, ಮತದಾರರ ಯೋಗಕ್ಷೇಮ ವಿಚಾರಿಸುವುದು- ಹೀಗೆ ಯಾವುದೂ ನನಗೆ ಗೊತ್ತಿರಲಿಲ್ಲ. ಆಗಲೇ ಚುನಾವಣೆಗಾಗಿ ಕರಪತ್ರಗಳು ಪ್ರಿಂಟ್ ಆಗಿ ಬಂದಿದ್ದವು. ಅವುಗಳನ್ನು ಜನರಿಗೆ ಹಂಚೋದು, ಮನೆಮನೆಗೆ ಹೋಗಿ ಜನರನ್ನು ಭೇಟಿ ಮಾಡೋದು, ಅವರ ಕುಶಲೋಪರಿ ವಿಚಾರಿಸೋದು ಶುರುವಾಯಿತು. ಎಲ್ಲದಕ್ಕೂ ಚಂದ್ರೇಗೌಡರೇ ನನಗೆ ಮಾರ್ಗದರ್ಶಿಯಾಗಿದ್ದರು ಹಾಗೂ ಅವರಿಂದ ನನ್ನ ರಾಜಕೀಯ ಜೀವನ ಶುರುವಾಯಿತು. ಚಂದ್ರೇಗೌಡ್ರು ಅಂದರೆ ನನಗೆ ಭಯ, ಭಕ್ತಿ ಹೆಚ್ಚಾಯಿತು.

ಆ ಸಂದರ್ಭದಲ್ಲಿ ಇಂದಿರಾ ಗಾಂಧಿಯವರ 20 ಅಂಶಗಳ ಕಾರ್ಯಕ್ರಮ ಜಾಸ್ತಿ ಪ್ರಚಲಿತದಲ್ಲಿತ್ತು. 1975ರ ಜುಲೈ 1ರಂದು ನಡೆದ ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿಯವರು ಈ 20 ಅಂಶದ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದರು. ಅದೂ ರೇಡಿಯೊದ ಮೂಲಕ. ಅವುಗಳನ್ನು 1978ರ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನರಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗಿತ್ತು. ಆ 20 ಅಂಶಗಳ ಕಾರ್ಯಕ್ರಮದ ಮುಖ್ಯಾಂಶಗಳೆಂದರೆ, ಜೀತ ವಿಮುಕ್ತಿ ಕಾಯ್ದೆ, ಗ್ರಾಮೀಣ ಪ್ರದೇಶದ ಬಡತನ ನಿರ್ಮೂಲನೆ, ಭೂ ಸುಧಾರಣಾ ಕಾಯ್ದೆಗಳನ್ನು ಜಾರಿಗೆ ತರುವುದು, ಮಳೆಯಾಧಾರಿತ ಕೃಷಿಗೆ ಹೆಚ್ಚಿನ ಒತ್ತು ನೀಡುವುದು, ಶುದ್ಧ ಕುಡಿಯುವ ನೀರು ಒದಗಿಸುವುದು, ಎಲ್ಲರಿಗೂ ಆರೋಗ್ಯ ಸೌಲಭ್ಯ ಒದಗಿಸುವುದು, ಎರಡು ಮಕ್ಕಳ ನೀತಿ, ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡಗಳವರಿಗೆ ನ್ಯಾಯ ಒದಗಿಸುವುದು, ಶಿಕ್ಷಣದ ವೃದ್ಧಿ, ಮಹಿಳಾ ಸಮಾನತೆ, ಸ್ಲಮ್‌ಗಳ ಸುಧಾರಣೆ, ಅರಣ್ಯಾಭಿವೃದ್ಧಿ, ಗ್ರಾಮೀಣ ಪ್ರದೇಶಗಳಿಗೆ ಇಂಧನ ಒದಗಿಸುವುದು. ಬ್ಯಾಂಕ್‌ಗಳ ರಾಷ್ಟ್ರೀಕರಣ, ಗೇಣಿ ಪದ್ಧತಿ ನಿರ್ಮೂಲನೆ- ಇವುಗಳ ಬಗ್ಗೆ ಓದಿ ತಿಳಿದುಕೊಂಡೆ. ಇದನ್ನೆಲ್ಲ ಓದಿಕೊಂಡಾದ ಮೇಲೆ, ಇವುಗಳ ಮೂಲಕ ಬಡವರಿಗೆ ನಾನು ತುಂಬಾ ಸಹಾಯ ಮಾಡಬಹುದಲ್ಲಾ? ಅಂತನ್ನಿಸಿ ಆತ್ಮವಿಶ್ವಾಸ ಮೂಡಿತು.

ಚುನಾವಣೆಯ ಭರಾಟೆ ಜೋರಾಗಿತ್ತು. ದಿನ ಬೆಳಗಾದರೆ ಚುನಾವಣಾ ಪ್ರಚಾರಕ್ಕೆ ಹೋಗುತ್ತಿದ್ದೆ. ನನಗೆ ಏನು ಎತ್ತ ಅಂತ ಗೊತ್ತಿರಲಿಲ್ಲ. ಎಲ್ಲಿ ಹೋಗಬೇಕು, ಏನು ಮಾಡಬೇಕು ಅಂತಲೂ ನನಗೆ ಸರಿಯಾಗಿ ಗೊತ್ತಾಗುತ್ತಿರಲಿಲ್ಲ. ಒಟ್ಟಿನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿಯವರು ಏನು ಹೇಳ್ತಾರೋ ಅದನ್ನು ಮಾಡುತ್ತಿದ್ದೆ. ದೇವರಾಜ ಅರಸು ಅವರು ಚುನಾವಣಾ ಖರ್ಚಿಗೆಂದು 50 ಸಾವಿರ ರೂ.ಯನ್ನು ಕೊಟ್ಟಿದ್ದರಂತೆ. ಅದಾದ ಮೇಲೆ ಸುಮಾರು 25 ಸಾವಿರ ರೂ.ಯಷ್ಟು ದೇಣಿಗೆ ಸಂಗ್ರಹವಾಗಿತ್ತು. ಅದೂ- ಇದು ಸೇರಿ ಆ ಚುನಾವಣೆಯಲ್ಲಿ ನಾವು ಮಾಡಿದ್ದು ಕೇವಲ ಒಂದು ಲಕ್ಷ ರೂ.ಗಳ ಖರ್ಚು. ನಾನು ದುಡ್ಡೂ ನೋಡಲಿಲ್ಲ. ಅದನ್ನು ಕೈಯಿಂದ ಮುಟ್ಟಲೂ ಇಲ್ಲ. ಒಟ್ಟಿನಲ್ಲಿ ಬೆಳಗ್ಗೆ ಒಬ್ಬ ಕಾಂಗ್ರೆಸ್ ಮುಖಂಡರ ಮನೆಯಲ್ಲಿ ತಿಂಡಿ, ಮಧ್ಯಾಹ್ನ ಇನ್ನೊಬ್ಬ ಮುಖಂಡರ ಮನೆಯಲ್ಲಿ ಊಟ ಮಾಡಿ ಪ್ರಚಾರಕ್ಕೆ ಹೋಗುವುದು ಅಷ್ಟೇ ನನ್ನ ಕರ್ತವ್ಯವಾಗಿತ್ತು. ಚುನಾವಣೆಯ ಎಲ್ಲ ಜವಾಬ್ದಾರಿಯನ್ನು ಚುನಾವಣಾ ಸಮಿತಿಯೇ ನಿರ್ವಹಿಸುತ್ತಿತ್ತು. ಪ್ರಚಾರದ ಜವಾಬ್ದಾರಿ, ಖರ್ಚುವೆಚ್ಚಗಳ ನಿರ್ವಹಣೆ ಎಲ್ಲವನ್ನೂ ಈ ಸಮಿತಿಯೇ ಮಾಡುತ್ತಿತ್ತು. ಈಗಲೂ ನಮ್ಮ ಕ್ಷೇತ್ರದಲ್ಲಿ ಇದೇ ರೀತಿಯ ಚುನಾವಣಾ ವ್ಯವಸ್ಥೆ ಇದೆ.

 ಚುನಾವಣಾ ಪ್ರಚಾರಕ್ಕೆ ಹೋದಲ್ಲೆಲ್ಲ ಸಾರ್ವಜನಿಕ ಸಭೆಗಳಾಗುತ್ತಿದ್ದವು. ಡಿ.ಬಿ. ಚಂದ್ರೇಗೌಡರು ಪ್ರಮುಖವಾಗಿ ಭಾಷಣ ಮಾಡುತ್ತಿದ್ದರು. ಅವರು ನನ್ನ ಬಗ್ಗೆ ಹೇಳುತ್ತಾ, ‘‘ಮೋಟಮ್ಮ ಅವರು ಮಲೆನಾಡಿನ ಹುಡುಗಿ. ನಮ್ಮ ಮನೆಯ ಮಗಳಿದ್ದಂತೆ. ಎಂ.ಎ.ವರೆಗೂ ಓದಿದ್ದಾಳೆ. ದಲಿತರಲ್ಲಿ ಇಷ್ಟೊಂದು ಓದಿದವರು ಇಲ್ಲವೇ ಇಲ್ಲ ಅಂತ ಹೇಳಬಹುದು. ಅವರನ್ನು ನಿಮ್ಮ ಮನೆಯ ಮಗಳಂತೆ ಕಾಣಿರಿ. ಅವರನ್ನು ಗೆಲ್ಲಿಸುವುದರಿಂದ ಇಡೀ ಕ್ಷೇತ್ರದ ಅಭಿವೃದ್ಧಿಯಾಗುತ್ತದೆ. ಇಲ್ಲಿಯವರೆಗೂ ಇಲ್ಲಿ ಚುನಾವಣೆಗೆ ನಿಂತು ಆಯ್ಕೆಯಾದವರೆಲ್ಲರೂ ಈ ಕ್ಷೇತ್ರದವರಲ್ಲ. ಅವರೆಲ್ಲರೂ ಹೊರಗಿನವರು. ಹೀಗಾಗಿ, ಈ ಕ್ಷೇತ್ರ ಅಭಿವೃದ್ಧಿಯಾಗಬೇಕು ಅಂದರೆ, ಮೋಟಮ್ಮ ಅವರನ್ನು ನೀವು ಅಧಿಕ ಬಹುಮತದಿಂದ ಆರಿಸಿ ತರಬೇಕು ಅಂತ ಹೇಳುತ್ತಿದ್ದರು. ಎಲ್ಲಿಯಾದರೂ ಸಣ್ಣ ಕೇರಿ/ಊರುಗಳಿಗೆ ಹೋದರೆ, ಅಲ್ಲಿಯೂ ಚಂದ್ರೇಗೌಡರು, ಮೋಟಮ್ಮ ಅವರನ್ನು ನಿಮ್ಮ ಅಕ್ಕ ತಂಗಿ ಅಂತ ತಿಳಿದುಕೊಳ್ಳಿ; ನಿಮ್ಮಂಥದ್ದೇ ಪರಿಸರದಲ್ಲಿ ಅವರು ಹುಟ್ಟಿ ಬೆಳೆದಿದ್ದಾರೆ. ತುಂಬಾ ಕಷ್ಟಪಟ್ಟು ಓದಿ ನೌಕರಿ ಮಾಡುತ್ತಿದ್ದರು. ಅವರನ್ನು ನಾವು ಕರೆತಂದಿದ್ದೇವೆ. ಅವರು ನಮ್ಮ ಊರಿನವರೇ. ನಮ್ಮ ಕ್ಷೇತ್ರದವರೇ ಆಗಿದ್ದಾರೆ. ಹೀಗಾಗಿ ಅವರನ್ನು ನೀವು ಆಯ್ಕೆ ಮಾಡುವುದರಿಂದ ಕ್ಷೇತ್ರಕ್ಕೆ ಅನುಕೂಲವಾಗುತ್ತದೆ.’’ಎಂದು ಹೇಳುತ್ತಿದ್ದರು. ಇದರಿಂದಾಗಿ ಜನರು ತುಂಬಾ ಅಭಿಮಾನದಿಂದ ನನ್ನನ್ನು ಕಾಣತೊಡಗಿದರು.

ಅವರ ಭಾಷಣವಾದ ನಂತರ, ಚುನಾವಣೆಗೆ ನಿಂತ ಅಭ್ಯರ್ಥಿಯಾದ ನಾನು ಮಾತನಾಡಬೇಕು ಎಂದು ಎಲ್ಲರೂ ಬಯಸುತ್ತಿದ್ದರು. ಆದರೆ, ನಾನಾಗ ಚಿಕ್ಕ ಮಗುವಿನಂತೆ, ‘‘ನಾನು ಮಾತಾಡಲ್ಲ ಸರ್. ನನಗೆ ಸಾಧ್ಯವಿಲ್ಲ’’ ಅಂತ ಹೇಳುತ್ತಿದ್ದೆ. ಆದರೆ, ಚಂದ್ರೇಗೌಡರು, ‘‘ಇಲ್ಲಮ್ಮ ನೀನು ಮಾತಾಡಬೇಕು. ನಮ್ಮ ತಾಲೂಕಿನ ಹಿರಿಯರಾದ ಚಂದ್ರೇಗೌಡರು ನನ್ನನ್ನು ರಾಜಕೀಯಕ್ಕೆ ಕರೆತಂದಿದ್ದಾರೆ. ನನಗೆ ನೀವು ಆಶೀರ್ವಾದ ಮಾಡಿ, ನಾನು ನಿಮ್ಮ ಕೆಲಸ ಮಾಡಿ ಕೊಡ್ತೀನಿ ಅಂತ ಹೇಳು’’ ಅಂದರು. ನಾನು ಅದನ್ನೇ ಕನಿಷ್ಠ ಹತ್ತು ಕಡೆ ಹೇಳಿದೆ. ಕೊನೆಗೆ ಕಾಂಗ್ರೆಸ್‌ನ ಇತರ ಮುಖಂಡರು, ಯೂತ್ ಕಾಂಗ್ರೆಸ್‌ನವರು, ‘‘ಏನ್ರಿ ಮೇಡಮ್, ಹಾಕಿದ್ದ ಹಳೇ ಪ್ಲೇಟೇ ಹಾಕ್ತೀರಲ್ಲ; ಏನಾದ್ರೂ ಸ್ವಲ್ಪಬದಲಾಯಿಸಿ. ಪ್ಲೇಟ್ ಚೇಂಜ್ ಮಾಡಿ. ಇಂದಿರಾ ಗಾಂಧಿ ತಂದಿರೋ 20 ಅಂಶದ ಕಾರ್ಯಕ್ರಮಗಳೆಲ್ಲ ನನಗೆ ತುಂಬಾ ಮೆಚ್ಚಿಗೆಯಾಗಿವೆ. ಬಡವರ ಉದ್ಧಾರ ಮಾಡೋ ಕಾರ್ಯಕ್ರಮ, ಜೀತ ವಿಮುಕ್ತಿ, ಬ್ಯಾಂಕು ರಾಷ್ಟ್ರೀಕರಣದಿಂದ ದೇಶಕ್ಕೆ ಆದ ಲಾಭ ಇತ್ಯಾದಿಗಳನ್ನು ಹೇಳಿ’’ ಅಂತ ಹೇಳಿದರು. ನನಗೆ ಭಾಷಣಕ್ಕೆ ನಿಲ್ಲೋದು ಅಂದ್ರೆ ಸಂಕಟ ಅಂದ್ರೆ ಸಂಕಟ. ಹೊಟ್ಟೆಯೆಲ್ಲಾ ತೊಳಸಿದಂತಾಗುತ್ತಿತ್ತು. ಬಾಯಿಂದ ಶಬ್ದಗಳೇ ಹೊರಡುತ್ತಿರಲಿಲ್ಲ. ಈ ಭಾಷಣ ಮಾಡುವುದು ಯಾಕಪ್ಪಾಬೇಕು? ಅನ್ನಿಸುತ್ತಿತ್ತು. ಆದರೆ, ಅನಿವಾರ್ಯ. ನೀರಿಗಿಳಿದಾಗಿದೆ; ಇನ್ನು ಚಳಿಯ ಹಂಗ್ಯಾಕೆ ಅಂತ ಗಟ್ಟಿ ಮನಸ್ಸು ಮಾಡಿಕೊಂಡು ಭಾಷಣ ಮಾಡತೊಡಗಿದೆ. ಕೆಲವೇ ದಿನಗಳಲ್ಲಿ ಮಾತುಗಳು ತಾನೇ ತಾನಾಗಿ ನಾಲಿಗೆಯ ಮೇಲೆ ನಲಿದಾಡತೊಡಗಿದವು.

ಆಮೇಲೆ ಪ್ರಚಾರಕ್ಕೆ ಹೋಗುವಾಗ ತೆರೆದ ಜೀಪಿನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಆ ಜೀಪುಗಳೋ ಲಡ-ಲಡ ಸದ್ದು ಮಾಡುತ್ತಿದ್ದವು. ಮುಂದೆ ವಾದ್ಯ ನುಡಿಸುವವರು. ಜೀಪ್‌ನಲ್ಲಿ ಸುತ್ತಮುತ್ತಲೂ ಕಾಂಗ್ರೆಸ್‌ನ ಹಿರಿಯ ನಾಯಕರು. ಯೂತ್ ಕಾಂಗ್ರೆಸ್‌ನ ಮುಖಂಡರುಗಳು. ಎಲ್ಲೆಲ್ಲೂ ಸಂಭ್ರಮದ ವಾತಾವರಣ. ಮೂಡಿಗೆರೆಯ ಹಳ್ಳಿ ಹಳ್ಳಿಗಳಲ್ಲೂ ರಸ್ತೆಯಲ್ಲಿ ಜನರು ನಿಂತಿರುತ್ತಿದ್ದರು. ಮೇಲಕ್ಕೆ ಕೈಯೆತ್ತಿ ನಮಸ್ಕಾರ ಮಾಡ್ರಿ! ಅಂತ ನಮ್ಮ ನಾಯಕರು ಹೇಳುತ್ತಿದ್ದರು. ಅಲ್ಲಿ ನೋಡಿ, ಜನ ನಿಮ್ಮನ್ನೇ ನೋಡ್ತಿದ್ದಾರೆ. ಇಲ್ಲಿ ನೋಡಿ, ಜನ ನಿಂತಿದ್ದಾರೆ. ಅವರಿಗೆ ನಮಸ್ಕಾರ ಮಾಡ್ರಿ ಅಂತ ಹೇಳುತ್ತಿದ್ದರು. ಅಗೋ ಈ ಕಡೆ ನೋಡಿ; ಆ ಕಡೆ ನೋಡಿ ಅಂತ ನನಗೆ ಹೇಳುತ್ತಿದ್ದರು. ಅದೂ ಬಿಸಿಲಲ್ಲಿ ಪ್ರಚಾರಕ್ಕೆ ಹೋಗುತ್ತಿದ್ದೆವು. ಸಂಜೆ ಮನೆಗೆ ಬರೋದ್ರೊಳಗೆ ನನಗೆ ಸುಸ್ತು ಅಂದರೆ ಸುಸ್ತಾಗಿರುತ್ತಿತ್ತು.

ಕಾಫಿ ತೋಟಗಳಲ್ಲೂ ಪ್ರಚಾರಕ್ಕೆ ಹೋದೆವು. ಅಲ್ಲಿ ಹೋದರೆ, ತುಳು ಮಾತನಾಡುವ ಮಂಗಳೂರು ಕಡೆ ಕೂಲಿ ಕಾರ್ಮಿಕರು ಅಲ್ಲೆಲ್ಲ ತುಂಬಾ ದೊಡ್ಡ ಸಂಖ್ಯೆಯಲ್ಲಿದ್ದರು. ಅವರಿಗೆ ನನ್ನನ್ನು ಕಂಡರೆ ಬಹಳ ಖುಷಿ. ಯಾಕೆಂದರೆ, ನಾನು ಬಡವರ ಮಗಳು. ಕೂಲಿ ಕಾರ್ಮಿಕನ ಮಗಳು. ನಮ್ಮ ಅಯ್ಯ ಇಂತಹ ತೋಟಗಳಲ್ಲಿ ಕೆಲಸ ಮಾಡುತ್ತಿದ್ದರು ಅನ್ನುವುದನ್ನು ತಿಳಿದು ಅವರು ಅಪಾರ ಸಂಖ್ಯೆಯಲ್ಲಿ ಸೇರುತ್ತಿದ್ದರು. ಚಂದ್ರೇಗೌಡರು, ಮೋಟಮ್ಮ ಅವರು ‘‘ನಿಮ್ಮ ಮನೆಯ ಮಗಳು, ಆಕೆಯೂ ಕೂಲಿ ಕಾರ್ಮಿಕನ ಮಗಳು’’ ಅಂತ ಹೇಳುತ್ತಿದ್ದುದರಿಂದ ಅವರಿಗೆ ಇನ್ನೂ ಕುತೂಹಲ ಹೆಚ್ಚಾಗುತ್ತಿತ್ತು. ಕೆಲವು ಹೆಣ್ಣು ಮಕ್ಕಳು ನನ್ನ ಬಳಿ ಬಂದು ತಲೆಗೆ ಎಣ್ಣೆ ಹಚ್ಚುತ್ತಿದ್ದರು. ಕೆಲವರು ಹೂವು ತಂದು ತಲೆಗೆ ಮುಡಿಸುತ್ತಿದ್ದರು. ಇನ್ನು ಕೆಲವರು ಸಿಹಿ ಮಾಡಿ ತಂದು ಬಾಯಿಗೆ ಹಾಕುತ್ತಿದ್ದರು. ನನ್ನ ಕೈ ಹಿಡಿದುಕೊಂಡು ಅಷ್ಟೊಂದು ವಿಶ್ವಾಸ ತೋರಿಸುತ್ತಿದ್ದರು. ಹೀಗೆ ನನ್ನ ಮೊದಲ ಚುನಾವಣಾ ಪ್ರಚಾರದಲ್ಲಿ ಕಂಡುಂಡ ಅನುಭವಗಳು ಒಂದಲ್ಲ, ಎರಡಲ್ಲ.

ಜೊತೆಗೆ ‘ಡಗ್ಗನಕ್ಕ ಡಕ್ಕನಕ್ಕ’ ಅಂತ ತಮಟೆ ನುಡಿಸುತ್ತಾ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಅಲ್ಲದೇ ಹುಡುಗರು ಜೋರಾಗಿ ಕುಣಿಯುವುದು, ಹಾಡೋದು, ಕಿರುಚೋದು, ಶಿಳ್ಳೆ ಹೊಡೆಯುವುದು- ಹೀಗೆ ಥರಾವರಿ ದೃಶ್ಯಗಳು. ಜೊತೆಗೆ,

‘‘ಗೆಂದಾಲೆಪ್ಪ ಗೆಂದಾಲೆ

ಇಂದಿರಾ ಗಾಂಧಿ ಗೆಂದಾಲೆ

ಗೆಂದಾಲೆಪ್ಪಗೆಂದಾಲೆೆ

ಯಂಕಲೆ ಮೋಟಮ್ಮ ಗೆಂದಾಲೆೆ’’

ಅಂತ ಕುಣಿಯುತ್ತಾ ಹಾಡುತ್ತಾ, ತಮಟೆ ಹೊಡೆಯುತ್ತಾ ಹೋಗುತ್ತಿದ್ದರು. ಹೀಗೆ ನನ್ನ ಚುನಾವಣೆ, ರಾಜಕೀಯ, ಚುನಾವಣಾ ಪ್ರಚಾರ ಅನ್ನೋದು ಒಂದು ಹೊಸ ಜಗತ್ತನ್ನೇ ನನಗೆ ಪರಿಚಯಿಸಿತು. ಒಂದು ಕಡೆ ಸಂಕಟವಾದರೆ, ಇನ್ನೊಂದು ಕಡೆ ನನಗೆ ಎಲ್ಲಿಲ್ಲದ ಸಂತೋಷವನ್ನುಂಟು ಮಾಡುತ್ತಿತ್ತು.

ಹೀಗೆ ನಡೆದ ಚುನಾವಣೆಯಲ್ಲಿ ನನಗೆ 34,449 ಮತಗಳು ಬಂದವು. ನನ್ನ ಸಮೀಪದ ಪ್ರತಿಸ್ಪರ್ಧಿ ಜನತಾ ಪಕ್ಷದ ಎನ್.ಯು. ಸಗುಣಯ್ಯ ಅವರಿಗೆ 16,217 ಮತಗಳು ಬಂದವು. ಅಂದರೆ, 18,232 ಮತಗಳ ಅಂತರದಿಂದ ನನ್ನನ್ನು ಮೂಡಿಗೆರೆಯ ಜನರು ಆಯ್ಕೆ ಮಾಡಿ ಆಶೀರ್ವದಿಸಿ ಕಳುಹಿಸಿದರು. ಈ ಎಲ್ಲದರ ಶ್ರೇಯಸ್ಸು ಡಿ.ಬಿ. ಚಂದ್ರೇಗೌಡರಿಗೆ ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕರಿಗೆ, ಆ ಸಂದರ್ಭದಲ್ಲಿ ಹಗಲಿರುಳು ಶ್ರಮಿಸಿದ ಯುವ ಕಾಂಗ್ರೆಸ್ ಮುಖಂಡರಿಗೆ ಹಾಗೂ ಸಮಸ್ತ ಮೂಡಿಗೆರೆ ಕ್ಷೇತ್ರದ ಮತದಾರರಿಗೆ ಸಲ್ಲಬೇಕು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಗ ಆರು ವಿಧಾನಸಭಾ ಕ್ಷೇತ್ರಗಳಿದ್ದವು. ಆರರಲ್ಲಿ ಐದು ಕ್ಷೇತ್ರಗಳನ್ನು ನಾವೇ ಗೆದ್ದುಕೊಂಡೆವು. ಚಿಕ್ಕಮಗಳೂರಿನಿಂದ ಸಿ.ಎ.ಚಂದ್ರೇಗೌಡ, ಮೂಡಿಗೆರೆಯಿಂದ ನಾನು, ಶೃಂಗೇರಿಯಿಂದ ಬೇಗಾನೆ ರಾಮಯ್ಯ, ಬೀರೂರಿನಿಂದ ಎಂ. ಮಲ್ಲಪ್ಪ, ಕಡೂರಿನಿಂದ ಕೆ.ಎಂ. ತಮ್ಮಯ್ಯ ಆಯ್ಕೆಯಾಗಿ ಬಂದೆವು. ಆ ಚುನಾವಣೆಯಲ್ಲಿ ಒಟ್ಟು 224 ಕ್ಷೇತ್ರಗಳಲ್ಲಿ ಇಂದಿರಾ ಕಾಂಗ್ರೆಸ್‌ನ 149 ಅಭ್ಯರ್ಥಿಗಳು ಆಯ್ಕೆಯಾಗಿ ಬಂದರು. ರೆಡ್ಡಿ ಕಾಂಗ್ರೆಸ್ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್)ನಿಂದ ಭಾಲ್ಕಿಯ ಭೀಮಣ್ಣ ಖಂಡ್ರೆ ಮತ್ತು ಬೀದರ್‌ನ ಎಂ. ಕಮಲ್ ಮಾತ್ರ ಆಯ್ಕೆಯಾಗಿ ಬಂದರು. ಉಳಿದಂತೆ 59 ಸ್ಥಾನಗಳನ್ನು ಜನತಾ ಪಾರ್ಟಿ ಗೆದ್ದುಕೊಂಡರೆ, ಆರ್‌ಪಿಐ ಒಂದು, ಸಿಪಿಐ 3 ಮತ್ತು 10 ಕ್ಷೇತ್ರಗಳಲ್ಲಿ ಪಕ್ಷೇತರರು ಗೆದ್ದುಬಂದರು. ಅಂದರೆ, ಇಂದಿರಾ ಕಾಂಗ್ರೆಸ್‌ಗೆ ಅಪಾರ ಪ್ರಮಾಣದಲ್ಲಿ ಜನಬೆಂಬಲ ವ್ಯಕ್ತವಾಯಿತು. ಆ ಸಂದರ್ಭದಲ್ಲಿ ಕರ್ನಾಟಕದಲ್ಲಷ್ಟೇ ಅಲ್ಲ ಆಂಧ್ರಪ್ರದೇಶದಲ್ಲಿಯೂ ವಿಧಾನಸಭಾ ಚುನಾವಣೆಗಳು ನಡೆದವು. ಅಲ್ಲೂ ಕೂಡ ಇಂದಿರಾ ಕಾಂಗ್ರೆಸ್ ಜಯಭೇರಿ ಬಾರಿಸಿತು. ಅಂದರೆ, ತುರ್ತು ಪರಿಸ್ಥಿತಿಯು ಕರ್ನಾಟಕ ಮತ್ತು ಆಂಧ್ರಪ್ರದೇಶದ ಜನರ ಮೇಲೆ ಯಾವುದೇ ಪರಿಣಾಮ ಬೀರಿರಲಿಲ್ಲ ಎಂಬುದು ಇದರಿಂದ ಸಾಬೀತಾಯಿತು. ಜನಸಾಮಾನ್ಯರು ಇಂದಿರಾ ಗಾಂಧಿ ಪರವಾಗಿದ್ದರು ಎಂಬುದು ಸ್ಪಷ್ಟವಾಯಿತು.

ಚುನಾವಣಾ ಫಲಿತಾಂಶಗಳು ಬಂದ ನಂತರ, ಚಿಕ್ಕಮಗಳೂರಿನಿಂದ ನಾನು ಮೂಡಿಗೆರೆಗೆ ಬರುವಾಗ, ದಾರಿಯಲ್ಲಿ ಗುಲ್ಲನ್‌ಪೇಟೆ ಅಂತ ಒಂದು ಊರು. ಅಲ್ಲಿ ಮುಸ್ಲಿಮರು ಬಹು ಸಂಖ್ಯೆಯಲ್ಲಿದ್ದರು. ಅಲ್ಲಿ ನನ್ನ ಗೆಲುವಿನ ಸಂಭ್ರಮವೋ ಸಂಭ್ರಮ. ಎಲ್ಲಿ ನೋಡಿದರೂ ಪಟಾಕಿ ಸದ್ದು, ಬ್ಯಾಂಡ್ ಬಾರಿಸುತ್ತಿದ್ದರು. ಸಂಜೆಯಾದ್ದರಿಂದ ಇಡೀ ಊರಿನ ಮುಖ್ಯ ಬೀದಿಗಳಲ್ಲೆಲ್ಲ ಲೈಟಿನ ಅಲಂಕಾರ ಮಾಡಿದ್ದರು. ಎಲ್ಲೆಲ್ಲೂ ಜನವೋ ಜನ. ನಮ್ಮ ಗಾಡಿ ಊರು ಪ್ರವೇಶಿಸುತ್ತಿದ್ದಂತೆಯೇ ಈ ಸಂಭ್ರಮ ಮುಗಿಲು ಮುಟ್ಟಿತು. ದೊಡ್ಡ ಜಾತ್ರೆಯಂಥ ವಾತಾವರಣ. ಅಲ್ಲಿಯ ಜನರನ್ನು ಸುಮ್ಮನಿರಿಸಲು ಕಾಂಗ್ರೆಸ್‌ನ ಅತ್ಯಂತ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಫಯಾಝ್ ಅಹ್ಮದ್ ಎಂಬವರು ‘‘ಖಾಮೋಶ್, ಖಾಮೋಶ್’’ ಎಂದು ಮೈಕಿನಲ್ಲಿ ಜೋರಾಗಿ ಹೇಳುತ್ತಿದ್ದರು. ಕೊನೆಗೆ, ಎಲ್ಲರನ್ನೂ ಸುಮ್ಮನಿರಿಸುವಲ್ಲಿ ಫಯಾಝ್‌ರವರು ಯಶಸ್ವಿಯಾದರು. ನಂತರ ಅಲ್ಲೇ ಒಂದು ಸಭೆ ಏರ್ಪಡಿಸಿದರು. ಸ್ಥಳದಲ್ಲೇ ಭಾಷಣಗಳಾದವು. ನನಗೆ ಸನ್ಮಾನ ಮಾಡಿದರು.

ಹೀಗೆ ಗುಲ್ಲನ್‌ಪೇಟೆಯಲ್ಲಿ ಗೆಲುವಿನ ಸಂಭ್ರಮ ನಡೆಯಬೇಕಾದರೆ ಯಾರೋ ಒಬ್ಬ ವ್ಯಕ್ತಿ ಬಂದು ನನ್ನ ಕೊರಳಿಗೆ ಹೂವಿನ ಹಾರ ಹಾಕಿಬಿಟ್ಟರು. ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ಯಾರೂ ಕೊರಳಿಗೆ ಹಾರ ಹಾಕುವುದಿಲ್ಲ. ಕೈಗೆ ಕೊಡ್ತಾರೆ. ಆದರೆ,

ಯಾರಪ್ಪಇವರು ನನ್ನ ಕೊರಳಿಗೆ ಹಾರ ಹಾಕಿದವರು ಎಂದು ನೋಡಿದರೆ, ನನ್ನ ಭಾವೀ ಪತಿಯವರಾದ ವೆಂಕಟರಾಮು ಅವರು. ‘‘ಕಂಗ್ರಾಜುಲೇಷನ್ಸ್’’ ಅಂತ ಹೇಳಿದರು. ಇಷ್ಟೊಂದು ಜನರ ನಡುವೆ ಬಂದು ಇವರು ನನಗೆ ಹಾರ ಹಾಕಿದರಲ್ಲ ಅಂತ ನನಗೆ ಸ್ವಲ್ಪ ಇರಿಸು ಮುರಿಸಾಯಿತು. ಆಶ್ಚರ್ಯವೂ ಆಯಿತು.

ಅದಾದ ಮೇಲೆ ಕೆಲವರು ಭಾಷಣ ಮಾಡಿದರು. ಇಂದಿರಾ ಗಾಂಧಿಯವರನ್ನು, ನಮ್ಮ ಪಕ್ಷದ ಹಿರಿಯ ನಾಯಕರನ್ನು, ಹೊಸದಾಗಿ ಆಯ್ಕೆಯಾಗಿ ಬಂದ ನನ್ನನ್ನು ಹೊಗಳಿದರು. ಇಂದಿರಾ ಅವರ ಬಡವರ ಪರವಾದ ಕಾರ್ಯಕ್ರಮಗಳನ್ನು ಹೊಗಳಿದರು.

ಚುನಾವಣಾ ಫಲಿತಾಂಶಗಳು ಬಂದ ಮರುದಿನವೇ ಬೆಂಗಳೂರಿಗೆ ಬರಬೇಕು ಎಂದು ಪಕ್ಷದಿಂದ ಕರೆಬಂದಿತು. ನಾನು ಬೆಂಗಳೂರಿನಲ್ಲೇ ಇದ್ದುಕೊಂಡು ನನ್ನ ವಿದ್ಯಾಭ್ಯಾಸ ಮಾಡಿದ್ದೆನಾದರೂ, ವಿಧಾನಸೌಧಕ್ಕೆ ಹತ್ತಿರದಲ್ಲೇ ಮಹಾರಾಣಿ ಕಾಲೇಜು ಇದೆಯಾದರೂ, ಒಂದು ದಿನವೂ ನಾನು ವಿಧಾನಸೌಧದ ಕಡೆಗೆ ಹೋದವಳಲ್ಲ. ಹೀಗಾಗಿ ನನಗೆ ಕಾಲೇಜಿನಿಂದ ವಿಧಾನಸೌಧವು ಎಷ್ಟು ದೂರವಿದೆ ಎಂಬುದೇ ನಿಖರವಾಗಿ ಗೊತ್ತಿರಲಿಲ್ಲ. ವಿಧಾನಸೌಧವೇ ಗೊತ್ತಿಲ್ಲವೆಂದ ಮೇಲೆ ಶಾಸಕರ ಭವನ ಹೇಗೆ ಗೊತ್ತಿರುವುದಕ್ಕೆ ಸಾಧ್ಯ? ನಾನು ಬೆಂಗಳೂರಿಗೆ ಬಂದರೆ ನನ್ನ ಆಪ್ತ ಸ್ನೇಹಿತೆಯರಾಗಿದ್ದ ನಾಗರತ್ನಾ ಅಥವಾ ಸರೋಜಿನಿ ಅವರ ಮನೆಯಲ್ಲಿರುತ್ತಿದ್ದೆ.

ಕೊನೆಗೆ ಮೂಡಿಗೆರೆಯಿಂದ ಬೆಂಗಳೂರಿಗೆ ಬಂದೆ. ಯಾರಯಾರದೋ ಸಹಾಯದಿಂದ ವಿಧಾನಸೌಧಕ್ಕೆ ಹೋದೆ. ನಂತರ ವಿಧಾನಸೌಧದಲ್ಲಿ ವಿಧಾನಸಭೆಯ ಕಲಾಪ ನಡೆಯುವ ಸ್ಥಳಕ್ಕೆ ಯಾವ ಬಾಗಿಲಿನಿಂದ ಒಳಗೆ ಹೋಗಬೇಕು ಎಂಬುದು ಕೂಡ ನನಗೆ ಗೊತ್ತಿರಲಿಲ್ಲ. ನಾನು ವಿಧಾನಸಭೆಯ ಸಭಾಗೃಹದಲ್ಲಿ ಮೊದಲ ದಿನ ವಿರೋಧ ಪಕ್ಷದ ಸದಸ್ಯರು ಹೋಗುವ ಬಾಗಿಲಿನಿಂದ ಒಳಗೆ ಹೋದೆ. ಆಮೇಲೆ ಗೊತ್ತಾಯಿತು ಅದು ವಿರೋಧ ಪಕ್ಷದವರು ಹಾದು ಹೋಗುವ ಬಾಗಿಲು ಮತ್ತು ಅದು ವಿರೋಧ ಪಕ್ಷದವರ ಮೊಗಸಾಲೆ ಎಂದು. ಆಡಳಿತ ಪಕ್ಷದವರ ಮೊಗಸಾಲೆ ಅದರ ಇನ್ನೊಂದು ಬದಿಯಲ್ಲಿತ್ತು ಎಂಬುದು ನಂತರ ಗೊತ್ತಾಯಿತು. ನನಗಾಗ ಕೇವಲ 26 ವರ್ಷ ವಯಸ್ಸು. ಆಯ್ಕೆಯಾಗಿ ಬಂದಿದ್ದವರಲ್ಲೆಲ್ಲ ನಾನೇ ಅತ್ಯಂತ ಚಿಕ್ಕವಳು. ವಿಧಾನಸಭೆಯ ಮೊಗಸಾಲೆಯಲ್ಲಿ ಹೋದರೆ ಎಲ್ಲವೂ ಹೊಸ ಮುಖಗಳು. ಯಾರೊಬ್ಬರದ್ದೂ ಪರಿಚಯವಿಲ್ಲ, ಬೇಗಾನೆ ರಾಮಯ್ಯ, ಸಿ.ಎ. ಚಂದ್ರೇಗೌಡ ಅವರಂತಹ ಐದಾರು ಜನರಷ್ಟೇ ಗೊತ್ತಿದ್ದವರು. ಎಲ್ಲಿಯೂ ಒಂದು ಗುರುತಿನ ಮುಖ ಕಾಣಿಸುತ್ತಿರಲಿಲ್ಲ. ಹೀಗಾಗಿ ಎಲ್ಲೋ ಕರೆದುಕೊಂಡುಹೋಗಿ ಬಿಟ್ಟಂತೆ ಭಾಸವಾಯಿತು.

ನಾವೆಲ್ಲ ಚುನಾವಣೆ ಎದುರಿಸಿ, ಗೆದ್ದು ಬಂದ ಕೂಡಲೇ ಮೊದಲು ನಮ್ಮ ನಾಯಕನನ್ನು ಆಯ್ಕೆ ಮಾಡಬೇಕಿತ್ತು. ದೇವರಾಜ ಅರಸು ಅವರು ನಮ್ಮ ನಾಯಕರು. ಆಡಳಿತ ಪಕ್ಷದ ನಾಯಕರನ್ನಾಗಿ ಅವರ ಹೆಸರನ್ನು ಪ್ರಪೋಸ್ ಮಾಡಿದ ಹಿರಿಯ ನಾಯಕರೊಬ್ಬರು ಒಂದು ಸಾಲಿನ ನಿರ್ಣಯವನ್ನು ಓದಿದರು. ಇನ್ನೊಬ್ಬರು ಅದನ್ನು ಅನುಮೋದಿಸಿದರು. ಅಷ್ಟೆ, ನಾಯಕನ ಆಯ್ಕೆಯಾಗಿ ಹೋಯಿತು. ಎಲ್ಲರೂ ಎದ್ದು ಬಂದೆವು. ಅದಾದ ಮೇಲೆ ಮುಂದೇನು ಮಾಡಬೇಕು ಎಂಬುದು ಗೊತ್ತಿರಲಿಲ್ಲ. ಅದಕ್ಕೆ ಬೇಗಾನೆ ರಾಮಯ್ಯ ಮತ್ತು ಸಿ.ಎ. ಚಂದ್ರೇಗೌಡ ಅವರನ್ನು ಹುಡುಕಿಕೊಂಡು ಹೊರಟೆ. ಮತ್ತೇನಾದರೂ ಫಾರ್ಮಾಲಿಟೀಸ್ ಇದ್ದರೆ ಅಂತ ಧಾವಂತ ಆಯಿತು. ಆದರೆ, ಅಂದು ಮತ್ತೆ ಯಾವುದೇ ಕಾರ್ಯಕ್ರಮವಿರಲಿಲ್ಲ. ಅದರ ಮರುದಿನವೇ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಂದರೆ, 1978ರ ಫೆಬ್ರವರಿ 28ರಂದು ಅವರು ಎರಡನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

 ಹೀಗೆ ನಾನು ಬಹಳ ಯಶಸ್ವಿಯಾಗಿ ರಾಜಕೀಯ ಪ್ರವೇಶಿಸಿದೆ. ಅದಕ್ಕೆ ಡಿ.ಎಂ. ಪುಟ್ಟೇಗೌಡರು, ಡಿ.ಬಿ. ಚಂದ್ರೇಗೌಡರು, ಡಿ.ಕೆ. ತಾರಾದೇವಿ, ಕೆ.ಟಿ. ಕೇಶವಮೂರ್ತಿ, ನಝೀರ್ ಅಹ್ಮದ್, ಅಲ್ದೂರಿನ ಎಚ್.ಟಿ. ಭೈರೇಗೌಡರು, ಸಿ.ಎ. ಚಂದ್ರೇಗೌಡ್ರು, ಮಾಕೋನಹಳ್ಳಿಯ ಎಂ.ಯು. ಚಂದ್ರೇಗೌಡರು, ಎಂ.ಬಿ. ಪ್ರಭಾಕರ್, ಕಳಸದ ಶ್ರೀನಿವಾಸ ಪ್ರಭುಗಳು, ರಹಮತುಲ್ಲಾ ಸಾಹೇಬ್, ಸನಾವುಲ್ಲಾ, ಗುಲ್ಲನ್‌ಪೇಟೆ ಫಯಾಝ್, ಅಲ್ದೂರಿನ ಬಿ.ಆರ್. ಪರಮೇಶ ಗೌಡರು, ಅಲ್ದೂರು ಕಲ್ಲೇಗೌಡರು, ಸಿ.ಎ. ಮುದ್ದಣ್ಣ, ಎಂ.ಬಿ. ಗಣಿ, ಇಳೆಹೊಳೆ ಉದ್ದಯ್ಯ, ಬೆಳಗೂಡು ಶ್ರೀನಿವಾಸಗೌಡ, ಬಾಳೂರು ಬಿ.ಎನ್. ಗೋಪಾಲಗೌಡ, ಗೋಣಿಬೀಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕೆ.ಟಿ. ಜಗದೀಶ್, ಯಲ್ಲಪ್ಪಶೆಟ್ರು, ಎಂ.ಎ. ರಝಾಕ್, ರಾಮೇಗೌಡ, ಉದ್ಸೆ ಚಂದ್ರೇಗೌಡ, ಸಿ.ಟಿ. ಪೂವಯ್ಯ, ನಾಗೇಶಗೌಡ, ಕಳಸದ ಮಾರ್ಟಿನ್ ಡಿಸೋಜ, ಸರೋಜಮ್ಮ, ಮೀನಾಕ್ಷಮ್ಮ, ಕುನ್ನಹಳ್ಳಿ ಸೀತಮ್ಮ, ಮಾಣಿಮಕ್ಕಿ ಸೀತಮ್ಮ, ಕಠಾರದಹಳ್ಳಿ ನಂಜರಾಜು ಹಾಗೂ ಅವರ ಕುಟುಂಬ, ಕುಂದೂರು ನಾರಬರ್ಟ್ ಸಾಲ್ಯಾನ್, ಡಿ.ಬಿ. ಸುಬ್ಬೇಗೌಡ್ರು ದುಂಡುಗ, ಹಳೇಬೈರೇಗೌಡ್ರು, ದಾರದಹಳ್ಳಿ ಈರಯ್ಯ, ಜಕ್ಕಳ್ಳಿ ರಾಮೇಗೌಡ್ರು, ಕಳಸದ ಶ್ರೀನಿವಾಸ ಪ್ರಭುಗಳು, ನಮ್ಮ ಕ್ಷೇತ್ರದ ಎಲ್ಲಾ ಮತದಾರರು, ಪಕ್ಷದ ಕಾರ್ಯಕರ್ತರು- ಹೀಗೆ ನೂರಾರು ಜನರು ಸೇರಿ ನನ್ನನ್ನು ರಾಜಕಾರಣದ ದೋಣಿ ಹತ್ತಿಸಿದರು. ಇವರಲ್ಲದೆ ಹಲವಾರು ಕಾಂಗ್ರೆಸ್ ಮುಖಂಡರು ನನಗಾಗಿ ದುಡಿದು, ಗೆಲುವಿಗೆ ಸಹಾಯ ಮಾಡಿದರು. ಅವರನ್ನೆಲ್ಲಾ ಕೃತಜ್ಞತೆಯಿಂದ ಸ್ಮರಿಸು�

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News