×
Ad

ಆರೋಗ್ಯ ಕ್ಷೇತ್ರದ ಸವಾಲುಗಳನ್ನು ಎದುರಿಸಲು ಸರ್ಕಾರದೊಂದಿಗೆ ಖಾಸಗಿ ಸಹಭಾಗಿತ್ವದ ಅಗತ್ಯವಿದೆ: ಸಚಿವ ಸುನಿಲ್ ಕುಮಾರ್

Update: 2022-06-11 20:19 IST

ಮಂಗಳೂರು : ಆರೋಗ್ಯ ಕ್ಷೇತ್ರದ ಸವಾಲುಗಳನ್ನು ಎದುರಿಸಿ ಜನರಿಗೆ ನೆರವಾಗಲು ಸರಕಾರ ಮತ್ತು ಖಾಸಗಿ ಸಂಸ್ಥೆಗಳ ಜಂಟಿ ಸಹಭಾಗಿತ್ವದ ಅಗತ್ಯವಿದೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.

ನಗರದ ದೇರಳಕಟ್ಟೆ ಯೆನೆಪೊಯ ಆಸ್ಪತ್ರೆಯ ಆವರಣದಲ್ಲಿ  ಟಾಟಾ ಟ್ರಸ್ಟ್  ಸಹಕಾರ ದೊಂದಿಗೆ  ನಿರ್ಮಾಣ ಗೊಂಡ ಝುಲೆಖಾ ಯೆನೆಪೊಯ ಇನ್ಸಿಟ್ಯೂಟ್ ಆಫ್ ಆಂಕಾಲಜಿ ಕೇಂದ್ರವನ್ನು ಅವರು ಇಂದು ಉದ್ಘಾಟಿಸಿ ಮಾತನಾಡುತ್ತಿದ್ದರು.

ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆ ಮತ್ತು ಸೇವೆಯನ್ನು ಜಿಲ್ಲೆ ಹಾಗೂ ನೆರೆಯ ಜಿಲ್ಲೆ ಗಳ ಜನರಿಗೆ ನೀಡುತ್ತಾ ಬಂದಿದೆ. ಕ್ಯಾನ್ಸರ್ ಕಾಯಿಲೆ ಗುಣಪಡಿಸಲು ಬೆಂಗಳೂರು ಹೊರತು ಪಡಿಸಿದರೆ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಕೇಂದ್ರವಾಗಿ ಮಂಗಳೂರಿನ ಯೆನೆಪೊಯ ಆಸ್ಪತ್ರೆಯ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಆರಂಭಗೊಂಡಿರುವ ಬಗ್ಗೆ ಸಂತೋಷ ಪಡುತ್ತೇನೆ. ಈ ಯೋಜನೆ ಸಾಕಾರಗೊಳ್ಳಲು ನೆರವು ನೀಡಿದ ಮುಂಬೈಯ  ಟಾಟಾ ಟ್ರಸ್ಟ್‌ ಸಂಸ್ಥೆ ಮತ್ತು ಯೋಜನೆಯನ್ನು ಕಾರ್ಯಗತಗೊಳಿಸುತ್ತಿರುವ ಯೆ‌ನೆಪೊಯ ಸಂಸ್ಥೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಕೇಂದ್ರದ ಪ್ರಯೋಜನ ಎಲ್ಲಾ ಜನರಿಗೆ ದೊರೆಯುವಂತಾಗಲಿ ಎಂದು ಸುನಿಲ್ ಕುಮಾರ್  ಶುಭ ಹಾರೈಸಿದರು.

ಸಮಾರಂಭದಲ್ಲಿ ಮುಂಬೈನ ಟಾಟಾ ಟ್ರಸ್ಟ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಶ್ರೀನಾಥ್  ಭಾಗವಹಿಸಿ ಮಾತನಾಡುತ್ತಾ, ಟಾಟಾ ಟ್ರಸ್ಟ್ ಸಂಸ್ಥೆ ದೇಶದ ವಿವಿಧ ಕಡೆಗಳಲ್ಲಿ ಕ್ಯಾನ್ಸರ್ ಚಿಕಿತ್ಸೆ ನೀಡುವ ಕೇಂದ್ರಗಳನ್ನು ಆರಂಭಿಸಿದೆ ಮತ್ತು ಕೆಲವು ಕಡೆ ಆರಂಭಿಸಲು ನೆರವು ನೀಡಿದೆ. ಆದರೆ ದೇಶದಲ್ಲಿ ಕ್ಯಾನ್ಸರ್ ಬಗ್ಗೆ ಜನಸಾಮಾನ್ಯ ರಲ್ಲಿ ಸಾಕಷ್ಟು ಜಾಗೃತಿಯ ಕೊರತೆ, ಅಪನಂಬಿಕೆ ಇದೆ. ಇದರಿಂದಾಗಿ ಪ್ರಾಥಮಿಕ ಹಂತದಲ್ಲಿ ಕ್ಯಾನ್ಸರ್ ಪತ್ತೆ ವಿಳಂಬವಾಗುತ್ತಿದೆ. ಇದು ಕ್ಯಾನ್ಸರ್ ನಿಂದ ಹೆಚ್ಚಿನ ಸಾವು ಸಂಭವಿಸಲು ಕಾರಣವಾಗುತ್ತಿದೆ. ಎಲ್ಲಾ ಕಡೆ ಕ್ಯಾನ್ಸರ್ ತಪಾಸಣೆಗೆ ಸೂಕ್ತ ಮೂಲಭೂತ ಸೌಕರ್ಯಗಳು ಇಲ್ಲದೆ ಇರುವುದು, ಕ್ಯಾನ್ಸರ್ ಚಿಕಿತ್ಸೆಯೂ ವೆಚ್ಚದಾಯಕವಾಗಿರುವುದು, ಕ್ಯಾನ್ಸರ್ ರೋಗಿಗಳು ಕೊನೆಯ ಹಂತದಲ್ಲಿ ಚಿಕಿತ್ಸೆಗೆ ಬರುತ್ತಿರುವುದು ಕ್ಯಾನ್ಸರ್  ನಿವಾರಣೆಗೆ ಸಂಬಂಧಿಸಿದಂತೆ ಎದುರಿಸುತ್ತಿರುವ ಸವಾಲುಗಳಾಗಿವೆ.

ಈ ಹಿನ್ನೆಲೆಯಲ್ಲಿ ಟಾಟಾ ಸಂಸ್ಥೆ ದೇಶದ ಹಲವು ಕಡೆ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಗಳನ್ನು ಆರಂಭಿಸಲು ನೆರವು ನೀಡಿದೆ. ಕ್ಯಾನ್ಸರ್ ಚಿಕಿತ್ಸೆಗೆ ಪೂರಕವಾದ ಅಗತ್ಯ ಸಲಕರಣೆಗಳನ್ನು ಒದಗಿಸಲು ನೆರವು ನೀಡುತ್ತಾ ಬಂದಿದೆ. ಕ್ಯಾನ್ಸರ್ ತಡೆಗೆ ಮುಖ್ಯವಾಗಿ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಈ ಜಾಗೃತಿ ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಮಟ್ಟದಿಂದ ಆಗಬೇಕಾಗಿದೆ. ಕ್ಯಾನ್ಸರ್ ಬಗ್ಗೆ ಯಾವುದೇ ತಪ್ಪು ಕಲ್ಪನೆ ಗಳನ್ನು ಬಿಟ್ಟು ಹೆಚ್ಚು ಜನರು ತಪಾಸಣೆ ಮಾಡಿಸಿಕೊಳ್ಳುವಂತಾಗಬೇಕು. ಇದರಿಂದ ಆರಂಭದ ಹಂತದಲ್ಲಿರುವ ಕ್ಯಾನ್ಸರ್ ಪತ್ತೆ ಮತ್ತು ಪರಿಣಾಮಕಾರಿಯಾದ ಚಿಕಿತ್ಸೆ ನೀಡಲು ಮತ್ತು ಕಾಯಿಲೆ ಗುಣಪಡಿಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ಸೂಕ್ತ ಚಿಕಿತ್ಸಾ ಕೇಂದ್ರ, ಅಲ್ಲಿ ಚಿಕಿತ್ಸೆಗೆ ಬೇಕಾದ ಸೌಲಭ್ಯ ಇರಬೇಕಾಗುತ್ತದೆ. ಟಾಟಾ ಟ್ರಸ್ಟ್ ಕ್ಯಾನ್ಸರ್ ಮುಕ್ತ ಇಂಡಿಯಾದ ಮೂಲಕ ಸಾಕಷ್ಟು ಕೆಲಸಗಳನ್ನು ಮಾಡುವ ಜತೆಗೆ ಅಸ್ಸಾಂ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಒಡಿಸ್ಸಾದಲ್ಲೂ ಮುಂದಿನ ದಿನಗಳಲ್ಲಿ ಖಾಸಗಿ, ಸರಕಾರಿ ಸಹಭಾಗಿತ್ವದಲ್ಲಿ ದೊಡ್ಡ ಯೋಜನೆಗಳನ್ನು ಹಮ್ಮಿಕೊಳ್ಳಲು ನಿರ್ಧಾರ ಮಾಡಲಾಗಿದೆ.

ಯೆನೆಪೋಯ ಆಸ್ಪತ್ರೆ ಈ ನಿಟ್ಟಿನಲ್ಲಿ ಆಸಕ್ತಿ ವಹಿಸಿ ಟಾಟಾ ಸಂಸ್ಥೆಯನ್ನು ಸಂಪರ್ಕಿಸಿ ಮುತುವರ್ಜಿ ವಹಿಸಿರುವ ಕಾರಣ ಇಲ್ಲಿ ಈ ಕೇಂದ್ರಕ್ಕೆ ನೆರವು ನೀಡಲು ಕಾರಣವಾಯಿತು. ಈ ಕೇಂದ್ರದ ಪ್ರಯೋಜನವನ್ನು ಇಲ್ಲಿನ ಜನರು ಸಮರ್ಪಕವಾಗಿ ಬಳಸುವಂತಾಗಬೇಕು ಎಂದು ಶ್ರೀ ನಾಥ್ ತಿಳಿಸಿದ್ದಾರೆ.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯೆನೆಪೊಯ ಪರಿಗಣಿತ ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಯೆನೆಪೊಯ ಅಬ್ದುಲ್ಲಾ ಕುಂಞಿ ಮಾತನಾಡುತ್ತಾ, ಕ್ಯಾನ್ಸರ್ ನಿಂದ ನನ್ನ ತಾಯಿಯನ್ನು ಕಳೆದುಕೊಂಡ ಬಳಿಕ ಅವರ ಹೆಸರಿನಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಆಸ್ಪತ್ರೆಯನ್ನು ತೆರೆದು ಆ ಸೌಲಭ್ಯವನ್ನು ಅಗತ್ಯವಿರುವ ಜನರಿಗೆ ನೀಡಬೇಕೆಂಬ ಕನಸಿತ್ತು. ಆ ಕನಸು ಸಾಕಾರಗೊಳಿಸಲು ಟಾಟಾ ಟ್ರಸ್ಟ್ ಹಾಗೂ ಸಂಸ್ಥೆ ಸಹಕಾರ ನೀಡಿದೆ. 1994ರಲ್ಲಿ ಟಾಟಾ ಸಂಸ್ಥೆಯ ಆಸ್ಪತ್ರೆಯಲ್ಲಿ  ಅವರಿಗೆ ಚಿಕಿತ್ಸೆ ನೀಡಲಾಯಿತು. ಇದೇ ಕಾರಣದಿಂದ ಅವರ ಹೆಸರನ್ನು ಈ ಅಂಕಾಲಜಿ ಸಂಸ್ಥೆಗೆ ನೀಡಲಾಗಿದೆ. ಮಂಗಳೂರಿನ ಮಾತ್ರವಲ್ಲ ಹೊರ ಜಿಲ್ಲೆಯ ಕ್ಯಾನ್ಸರ್ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆದುಕೊಂಡು ಕಾಯಿಲೆ ಮುಕ್ತರಾಗಬೇಕು ಎನ್ನುವುದು ನಮ್ಮ ಆಶಯ ಎಂದರು.

ತಾಯಿಯ ಹೆಸರಿನಲ್ಲಿ ಝುಲೆಖಾ ಕ್ಯಾನ್ಸರ್ ಚಿಕಿತ್ಸೆಯ ಕೇಂದ್ರ ಆರಂಭಗೊಂಡಿದೆ. ಕೇಂದ್ರದ ಪ್ರಯೋಜನ  ಅಗತ್ಯವಿರುವ ಎಲ್ಲಾ ಜನರು ಪಡೆದುಕೊಳ್ಳುವಂತಾಗಬೇಕು. ಈ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವರು, ಮಾಜಿ ಸಚಿವರು, ಗಣ್ಯರಿಗೆ ಮತ್ತು ಸಂಸ್ಥೆಯ ಆಡಳಿತ ವರ್ಗ, ಸಿಬ್ಬಂದಿ ವರ್ಗದವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಯೆನೆಪೊಯ ಅಬ್ದುಲ್ಲಾ ಕುಂಞಿ ತಿಳಿಸಿದರು.

ಶಾಸಕ ಯು.ಟಿ.ಖಾದರ್ ಮಾತನಾಡುತ್ತಾ, ಕರಾವಳಿ ಮತ್ತು ಮಲೆನಾಡಿನ ಜನರಿಗೆ ಇದರಿಂದ ಹೆಚ್ಚು ಪ್ರಯೋಜನ ದೊರೆಯಬಹುದು. ಈ ಭಾಗದಲ್ಲಿ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯ ಮಾದರಿಯ ಮಿನಿ ಕಿದ್ವಾಯಿಯಾಗಿ ವೈದ್ಯಕೀಯ ಸೇವೆ ನೀಡುವಂತಾಗಲಿ. ಭವಿಷ್ಯದಲ್ಲಿ ಕ್ಯಾನ್ಸರ್ ಪ್ರಮಾಣ ನಿಯಂತ್ರಣ ಮಾಡಲು ನೆರವಾಗಲಿ ಎಂದು ಶುಭ ಹಾರೈಸಿದರು.

ಸಮಾರಂಭದಲ್ಲಿ ಶಾಸಕರಾದ ಪ್ರತಾಪ್ ಸಿಂಹ ನಾಯಕ್, ಡಾ.ಭರತ್ ಶೆಟ್ಟಿ, ರಾಜೇಶ್ ನಾಯ್ಕ್ ,ಮಾಜಿ ಸಚಿವ ರಮಾನಾಥ ರೈ, ಎಂ.ಸಿ.ನಾಣಯ್ಯ, ಮಾಜಿ ಸಂಸದ ಹಾಗೂ ಕೇಂದ್ರ ಹಜ್ ಸಮಿತಿಯ ಅಧ್ಯಕ್ಷ  ಅಬ್ದುಲ್ಲಾ ಕುಟ್ಟಿ, ಟಾಟಾ ಕ್ಯಾನ್ಸರ್ ಕೇರ್ ಕಾರ್ಯಕ್ರಮದ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ್ ಛೋಪ್ರಾ, ಇಸ್ಲಾಮಿಕ್ ಅಕಾಡಮಿ ಆಫ್ ಎಜುಕೇಷನ್ ಅಧ್ಯಕ್ಷ ವೈ. ಮುಹಮ್ಮದ್ ಕುಂಞಿ ಮೊದಲಾದವರು ಉಪಸ್ಥಿತರಿದ್ದರು.

ಯೆನೆಪೊಯ ವಿ.ವಿ.ಯ ಉಪಕುಲಪತಿ ಡಾ.ಎಂ.ವಿಜಯ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ವಿ.ರಿಜಿಸ್ಟ್ರಾರ್ ಕೆ.ಎಸ್. ಗಂಗಾಧರ ಸೋಮಯಾಜಿ ಸ್ವಾಗತಿಸಿದರು. ಡಾ.ಜಲಾಲುದ್ದೀನ್ ಅ‌ಕ್ಬರ್ ವಂದಿಸಿದರು. ಡಾ ರೋಶಲ್ ಟೆಲ್ಲೀಸ್ ಡಾ.ಮಮತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಈ ಆಸ್ಪತ್ರೆಯಲ್ಲಿ ಬಿಪಿಎಲ್‌ ಮತ್ತು ಆಯುಷ್ಮಾನ್‌ ಕಾರ್ಡ್‌ ಹೊಂದಿರುವವರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ಹಾಗು ಇತರರಿಗೆ ವಿಶೇಷ ರಿಯಾಯಿತಿಯಲ್ಲಿ ಚಿಕಿತ್ಸೆ ಸಿಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News