×
Ad

ಗೋಡ್ಸೆ ಬೋರ್ಡ್ ಮೋಸ್ಟ್‌ ಸೀರಿಯಸ್‌ ಅಫೆನ್ಸ್ : ವೀರಪ್ಪ ಮೊಯ್ಲಿ

Update: 2022-06-11 22:30 IST

ಕಾರ್ಕಳ: ಮಹಾತ್ಮ ಗಾಂಧಿಯ ಸಿದ್ಧಾಂತವಿರುವ ಕಾರ್ಕಳದಲ್ಲಿ ಗೋಡ್ಸೆ ಹೆಸರಿನ ನಾಮಫಲಕ ಅಳವಡಿಸಿರು ವುದು ವಿಷಾದನೀಯ. ಗೋಡ್ಸೆಯಂತಹ ಮನಸ್ಥಿತಿಯುಳ್ಳ ವ್ಯಕ್ತಿಗಳಿಂದ ಇಂತಹ ಕೃತ್ಯ ನಡೆದಿದೆ. ಇದರ ಮೂಲೋತ್ಕಟನೆ ಮಾಡಬೇಕಿದೆ. ಇದು ಸೀರಿಯಸ್‌ ಅಫೆನ್ಸ್ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಹೇಳಿದರು.

ಕಾರ್ಕಳ ಪ್ರವಾಸಿ ಮಂದಿರದಲ್ಲಿ ಶನಿವಾರ ಪತ್ರಿಕಾಗೋಷ್ಠಿ ಆಯೋಜಿಸಿ ಮಾತನಾಡಿ, ಗೋಡ್ಸೆ ನಾಮಫಲಕ ವಿಚಾರವಾಗಿ ಪೊಲೀಸರು ಐಪಿಸಿ ಸೆಕ್ಷನ್‌ 290ರಡಿ (ಕ್ಲುಲ್ಲಕ ಪ್ರಕರಣ) ಕೇಸ್ ದಾಖಲಿಸಿದ್ದಾರೆ. ಇಂತಹ ಗಂಭೀರ ಪ್ರಕರಣವನ್ನು ಸೆಕ್ಷನ್ 153 ಎ‌ʼಯಡಿ ದಾಖಲಿಸಬೇಕಿತ್ತು. ಪೊಲೀಸ್‌ನವರು ಸರಿಯಾದ ರೀತಿಯಲ್ಲಿ ಕೆಲಸ ಮಾಡಿಲ್ಲ ಎನ್ನುವುದಕ್ಕೆ ಇದೊಂದು ನಿದರ್ಶನ. ಹೀಗಾಗಿ ಪೊಲೀಸ್‌ ಅಧಿಕಾರಿಗಳಿಗೆ ಇನ್ನೊಮ್ಮೆ ತರಬೇತಿ ನೀಡುವ ಅವಶ್ಯಕತೆ ಇದೆ. ಅಧಿಕಾರಿಗಳ ನಿಷ್ಠೆ ವೃತ್ತಿಗಿರಬೇಕೆ ಹೊರತು ಪಕ್ಷಕ್ಕೆ ಅಲ್ಲ ಎಂದು ಮೊಯ್ಲಿ ಹೇಳಿದರು. 

ಹೆಬ್ರಿ ಆಡಳಿತ ಸೌಧ ಉದ್ಘಾಟನೆಗೆ ಆಹ್ವಾನವಿಲ್ಲ

ಸಚಿವ ಸುನೀಲ್‌ ಕುಮಾರ್‌ ಅವರು ಕಾರ್ಕಳ ಉತ್ಸವದ ಆಮಂತ್ರಣ ನೀಡಲು ಮನೆಗೆ ಬಂದಿದ್ದರು. ಬರುತ್ತೇನೆ ಹೇಳಿ, ನಾನು ಉತ್ಸವದಲ್ಲಿ ಭಾಗವಹಿಸಿದ್ದೇನೆ. ಆದರೆ, ಹೆಬ್ರಿ ಆಡಳಿತ ಸೌಧ ಉದ್ಘಾಟನೆ ನನ್ನನ್ನು ಆಹ್ವಾನಿಸಿಲ್ಲ. ಅದರಿಂದ ನನಗೆ ವೈಯಕ್ತಿಕವಾಗಿ ಏನು ನಷ್ಟವಿಲ್ಲ. ಇದು ಜನರ ಭಾವನೆ ಮೇಲೆ ಆಕ್ರಮಣ ಮಾಡಿದಂತಾಗಿದೆ ಎಂದು ಮೊಯ್ಲಿ ಹೇಳಿದರು.

ಭೂ ಪ್ರದೇಶ, ಕಡಿಮೆ ಜನಸಂಖ್ಯೆ ಇದ್ದಾಗ್ಯೂ ನಮ್ಮ ಪ್ರಯತ್ನದ ಫಲವಾಗಿ ಹೆಬ್ರಿ ತಾಲೂಕು ಘೋಷಣೆಯಾಗಿದೆ. ಹೆಬ್ರಿ ಕಾಲೇಜು ನಿರ್ಮಾಣಕ್ಕಾಗಿ 30 ಎಕ್ರೆ ಜಾಗದೊಂದಿಗೆ 10 ಕೋಟಿ ರೂ. ಅವತ್ತೆ ಅನುದಾನ ನಿಗದಿ ಮಾಡಲಾಗಿತ್ತು ಎಂದು ತಿಳಿಸಿದ ಮೊಯ್ಲಿ ಸುನೀಲ್‌ ಕುಮಾರ್‌ ಆ ಕಾರ್ಯವನ್ನೂ ಪೂರ್ಣಗೊಳಿಸಿದ್ದಾರೆ. ಹಾಗಾಗಿ ಅದರ ಕ್ರೆಡಿಟ್ ಇಂದಿನ ಎಂಎಲ್‌ಎ ಅವರಿಗೆ ಸಲ್ಲುವುದು ಸಹಜವೆಂದರು.

ಅಧ್ಯಯನ ನಡೆಸದೇ ಯೋಜನೆ 

ಸರಿಯಾದ ಅಧ್ಯಯನ ನಡೆಸದೇ ಎಣ್ಣೆಹೊಳೆಯಲ್ಲಿ ಡ್ಯಾಂ ನಿರ್ಮಾಣ ಮಾಡಲಾಗಿದೆ. 108 ಕೋಟಿ ರೂ.ವಿನೊಂದಿಗೆ ಇದೀಗ ಮತ್ತೆ 40 ಕೋಟಿ ರೂ. ವೆಚ್ಚದಲ್ಲಿ ಎಣ್ಣೆಹೊಳೆ ಹೊಳೆಗೆ ತಡೆಗೋಡೆ ನಿರ್ಮಾಣಕ್ಕಾಗಿ ಮಂಜೂರಾಗಲಿದೆ. ಎಣ್ಣೆಹೊಳೆ ಯೋಜನೆಯಿಂದ ಮುಂದಿನ ದಿನಗಳಲ್ಲಿ ಗ್ರಾಮಸ್ಥರಿಗೆ ನೆರೆಯುಂಟಾಗಿ, ತೊಂದರೆಯಾಗಲಿದೆ. ಈ ಯೋಜನೆಯನ್ನು ಪಟ್ಟಿಬಾವು ಎಂಬಲ್ಲಿ ನಿರ್ಮಾಣ ಮಾಡುತ್ತಿದ್ದಲ್ಲಿ ಯಾವುದೇ ಅನಾಹುತ ಸಂಭವಿಸುತ್ತಿರಲಿಲ್ಲ. ಯೋಜನೆಯ ಹೆಚ್ಚುವರಿ ಹಣವು ಯಾವ ರೀತಿಯಲ್ಲಿ ಬಳಕೆಯಾಗಿದೆ ಎನ್ನುವುದು ತಿಳಿಯಬೇಕಿದೆ. ಅದು ಜಿಲ್ಲಾ ನ್ಯಾಯಾಧೀಶರ ಮಟ್ಟದಲ್ಲಿ ತನಿಖೆಯಾಗಬೇಕೆಂದು ವೀರಪ್ಪ ಮೊಯ್ಲಿ ಹೇಳಿದರು. 

ನವ ಸಂಕಲ್ಪ ಶಿಬಿರ

ಕಾರ್ಕಳದಲ್ಲಿ ಮತ್ತೆ ಕಾಂಗ್ರೆಸ್‌ ಅನ್ನು ಬಲಪಡಿಸುವ ನಿಟ್ಟಿನಲ್ಲಿ ಬೂತ್‌ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತೇವೆ. ಕರಾವಳಿಯ ಎರಡು ಜಿಲ್ಲೆಯಲ್ಲಿ ನಾನೇ ಸಂಚಾರ ಮಾಡಿ ಪಕ್ಷ ಬಲಪಡಿಸುವ ಕಾರ್ಯ ಮಾಡಲಿದ್ದೇನೆ. ಕಾರ್ಕಳಕ್ಕೆ ವಿಶೇಷ ಒತ್ತು ನೀಡಲಾಗುವುದು. ರಾಜ್ಯ ಹಾಗೂ ರಾಷ್ಟ್ರದೆಲ್ಲೆಡೆ ನವಸಂಕಲ್ಪ ಶಿಬಿರ ನಡೆಯಲಿದೆ ಎಂದು ಮೊಯ್ಲಿ ಹೇಳಿದರು. 

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾರು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮೊಯ್ಲಿ, ಸಿಟ್ಟಿಂಗ್‌ ಎಂಎಲ್‌ಎ ಇರುತ್ತಿದ್ದಲ್ಲಿ ಈಗಾಗಲೇ ತಿಳಿಸಬಹುದಿತ್ತು. ಪ್ರಜಾಪ್ರಭುತ್ವದ ನಿಯಮದಂತೆ ಪ್ರಕ್ರಿಯೆಗಳು ನಡೆದು ಅಭ್ಯರ್ಥಿಯ ಘೋಷಣೆಯಾಗಲಿದೆ ಎಂದರು.

ಜಾತಿಯ ದ್ರುವೀಕರಣವಾಗಬಾರದು

ಮುಂದಿನ ಚುನಾವಣೆಯಲ್ಲಿ ಜಾತಿಯ ಧ್ರುವೀಕರಣ ಆಗಬಾರದು. ಈ ನಾಡು ಎಲ್ಲರಿಗೂ ಸೇರಿದ್ದು, ವಿದ್ಯಾರ್ಥಿ ಗಳಲ್ಲಿ ವಿಷಬೀಜ ಬಿತ್ತುವ ಕಾರ್ಯವಾಗಬಾರದು. ಕಾಂಗ್ರೆಸ್‌ ಪಕ್ಷ ಎಂದಿಂದಿಗೂ ವಿದ್ಯಾರ್ಥಿಗಳಲ್ಲಿ ವಿಷಬೀಜ ಬಿತ್ತುವ ಕಾರ್ಯ ಮಾಡದು ಎಂದು ಮೊಯ್ಲಿ ಹೇಳಿದರು.

ಕೃತಘ್ನ ಜೆಡಿಎಸ್‌ 

ರಾಜ್ಯ ಸಭಾ ಚುನಾವಣಾ ಫಲಿತಾಂಶದ ಕುರಿತು ಮಾತನಾಡಿದ ವೀರಪ್ಪ ಮೊಯ್ಲಿ ಅವರು ಅಂದು ನಮ್ಮ ಬೆಂಬಲದೊಂದಿಗೆ ದೇವೆ ಗೌಡರು ಪ್ರಧಾನಿಯಾದರು. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದರು. ಇಂದು ನಮ್ಮ ಅಭ್ಯರ್ಥಿಯನ್ನು ಜೆಡಿಎಸ್‌ ಬೆಂಬಲಿಸಿಲ್ಲ. ಇದು ಜೆಡಿಎಸ್‌ ಪಕ್ಷದ ಕೃತಘ್ನತೆಯ ಪರಮಾವಧಿ ಎಂದು ಮೊಯ್ಲಿ ಬಣ್ಣಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸದಾಶಿವ ದೇವಾಡಿಗ, ಹೆಬ್ರಿ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ರಂಜನಿ ಹೆಬ್ಬಾರ್‌, ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್‌ ಚಂದ್ರ ಪಾಲ್‌,‌ ನಗರ ಕಾಂಗ್ರೆಸ್‌ ಅಧ್ಯಕ್ಷ ಮಧುರಾಜ್‌ ಶೆಟ್ಟಿ,‌ ಕಾಂಗ್ರೆಸ್‌ ನ ಪ್ರಮುಖರಾದ ಸುಧಾಕರ್‌ ಕೋಟ್ಯಾನ್‌, ಸುರೇಂದ್ರ ಶೆಟ್ಟಿ, ನೀರೆ ಕೃಷ್ಣ ಶೆಟ್ಟಿ, ಶೇಖರ ಮಡಿವಾಳ, ಶುಭದ್‌ ರಾವ್‌, ಅಣ್ಣಯ್ಯ ಶೇರಿಗಾರ್‌, ಸುಬಿತ್‌ ಎನ್.‌ ಆರ್.‌, ಸುಧಾಕರ ಶೆಟ್ಟಿ, ನವೀನ್‌ ದೇವಾಡಿಗ, ಯುವ ಕಾಂಗ್ರೆಸ್‌ ಅಧ್ಯಕ್ಷ ಯೋಗಿಶ್‌ ನಯನ್‌ ಇನ್ನಾ, ಅಶ್ಫಾಕ್‌ ಅಹಮ್ಮದ್‌ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News