ಮಾನವ ತ್ಯಾಜ್ಯ ನಿರ್ವಹಣೆ ಇನ್ನು ಸುಗಮ : ಸಚಿವ ಸುನೀಲ್ ಕುಮಾರ್

Update: 2022-06-11 17:14 GMT

ಕಾರ್ಕಳ : ಪರಸಭಾ ವ್ಯಾಪ್ತಿಯಲ್ಲಿ ಮಾನವ ತ್ಯಾಜ್ಯ ನಿರ್ವಹಣೆ ಇನ್ನು ಸುಗಮವಾಗಲಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ. ಸುನೀಲ್ ಕುಮಾರ್ ತಿಳಿಸಿದರು.

ಪುಲ್ಕೇರಿ ಲಕ್ಷ್ಮೀದೇವಿ ಸಭಾಭವನದಲ್ಲಿ ಶನಿವಾರ ಸ್ಲಡ್ಜ್ ಹಾಗೂ ಸೆಪ್ಟೇಜ್ ಮ್ಯಾನೇಜ್ ಮೆಂಟ್ ಯೋಜನೆಯ ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಮೊದಲ ಬಾರಿ ಪುರಸಭಾ ವ್ಯಾಪ್ತಿಯಲ್ಲಿ ವಿನೂತನವಾದ ಮಾನವ ತ್ಯಾಜ್ಯ ನಿರ್ವಹಣೆಯ ಸ್ಲಡ್ಜ್ ಹಾಗೂ ಸೆಪ್ಟೇಜ್ ಮ್ಯಾನೇಜ್‌ಮೆಂಟ್ ಯೋಜನೆ ಕಾರ್ಯಗತವಾಗುತ್ತಿದೆ. ಕಾರ್ಕಳದಲ್ಲಿ ಹಳೆಯ ಯುಜಿಡಿ ಪದ್ಧತಿ ಕೇವಲ ಪ್ರಧಾನ ರಸ್ತೆ, ಕಾಬೆಟ್ಟು ಮೊದಲಾದ ಎರಡು ಮೂರು ಕಡೆ ಮಾತ್ರವಿದ್ದು ವಿಸ್ತಾರವಾಗಿ ಬಳೆದ ನಗರಕ್ಕೆ ಅದು ಸಾಕಾಗುತ್ತಿರಲಿಲ್ಲ. ಯುಜಿಡಿ ಪದ್ಧತಿಯನ್ನು ಮತ್ತೂ ವಿಸ್ತರಿಸಬೇಕಾಗಿತ್ತು. ಅದರ ಖರ್ಚೂ ಕೂಡಾ ರೂ.130 ಕೋಟಿಗೂ ಅಧಿಕವಾಗಿ ವಿನಿಯೋಗಿಸಬೇಕಾಗಿತ್ತು. ಅದೇ ಸಮಯದಲ್ಲಿ ಈ ಹೊಸ ಸ್ಲಡ್ಜ್ ಹಾಗೂ ಸೆಪ್ಟೇಜ್ ಮ್ಯಾನೇಜ್ ಮೆಂಟ್ ಯೋಜನೆಯ ಮಾಹಿತಿ ತಿಳಿಯಿತು.

ರಾಜ್ಯದ ದೇವನಹಳ್ಳಿಯಲ್ಲಿ ಈ ಯೋಜನೆ ಯಶಸ್ವಿಯಾಗಿ ನಿರ್ವಹಣೆಯಾಗುತ್ತಿದ್ದ ವಿಚಾರವನ್ನೂ ಅಲ್ಲಿಗೆ ತೆರಳಿ ಗಮನಿಸಿದ ನಂತರ ಈ ಯೋಜನೆಯನ್ನು ಕಾರ್ಕಳದಲ್ಲಿ ಜಾರಿಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಯಿತು. ಇದನ್ನು ಸರ್ಕಾರ ಮಂಜೂರು ಮಾಡಿದೆ. ಯುಜಿಡಿ ಎಲ್ಲ ಕಡೆ ಯಶಸ್ವಿಯಾಗಿಲ್ಲ. ಹಿಂದಿನ ಯುಜಿಡಿ ಇದ್ದಂತೆಯೇ ಬಳಸಿ ಅದಿಲ್ಲದ ಕಡೆ ಹಾಗೂ ಇತರೆಡೆ ನೂತನ ಮನೆ, ನಿವೇಶನಗಳಿಗೆ ಈಗಿನ ಸ್ಲಡ್ಜ್ ಹಾಗೂ ಸೆಪ್ಟೇಜ್ ಮ್ಯಾನೇಜ್‌ಮೆಂಟ್ ಯೋಜನೆ ಬಳಸಲಾಗುತ್ತಿದೆ. ಇದರಿಂದ ಮನಯ ಪಿಟ್‌ಗಳ ನಿರ್ವಹಣೆ ಸುಗಮವಾಗಲಿದ್ದು, ಗೊಬ್ಬರ ನಿರ್ಮಾಣದಿಂದ ಪುರಸಭೆಗೂ ಉತ್ತಮ ಆದಾಯ ದೊರೆಯಲಿದೆ. ಕಲ್ಮಶ ರಹಿತ ಪರಿಸರ ಸ್ನೇಹಿ ಯೋಜನೆ ಇದಾಗಿದ್ದು ಸ್ವಚ್ಛ ಕಾರ್ಕಳ ಸ್ವರ್ಣ ಕಾರ್ಕಳ ಪರಿಕಲ್ಪನೆಗೆ ಪೂರಕವಾಗಿದೆ ಎಂದರು.

ರಾಜ್ಯ ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಪುರಸಭಾಧ್ಯಕ್ಷೆ ಸುಮಾಕೇಶವ್, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್ ಇದ್ದರು. ಮುಖ್ಯಾಧಿಕಾರಿ ರೂಪಾ ಶೆಟ್ಟಿ ಸ್ವಾಗತಿಸಿದರು. ಸುಹಾಸ ಶೆಟ್ಟಿ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News