×
Ad

ಬೆಂಗಳೂರಿನಲ್ಲಿ ಡ್ರಗ್ಸ್ ಪಾರ್ಟಿ ಆರೋಪ; ಬಾಲಿವುಡ್‌ ನಟ ಸಿದ್ದಾಂತ್‌ ಕಪೂರ್‌ ಸೇರಿ ಐದು ಮಂದಿ ಸೆರೆ

Update: 2022-06-13 10:58 IST
ಸಿದ್ದಾಂತ್‌ ಕಪೂರ್‌ (Photo: instagram.com)

ಬೆಂಗಳೂರು, ಜೂ.13: ಮಾದಕ ವಸ್ತು ಸೇವನೆ, ಡ್ರಗ್ಸ್ ಪಾರ್ಟಿ ಆರೋಪದಲ್ಲಿ ಬಾಲಿವುಡ್‌ ನಟ ಸಿದ್ದಾಂತ್‌ ಕಪೂರ್‌ ನನ್ನು ಬೆಂಗಳೂರಿನ ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಲಸೂರು ಪೊಲೀಸರು ರವಿವಾರ ರಾತ್ರಿ ಎಂ.ಜಿ. ರಸ್ತೆ ಟ್ರಿನಿಟಿ ವೃತ್ತದ ಸಮೀಪ ಇರುವ ದಿ ಪಾರ್ಕ್‌ ಹೋಟೆಲ್‌ ಮೇಲೆ ದಾಳಿ ನಡೆಸಿ, ಡ್ರಗ್ಸ್‌ ಸೇವನೆ ಆರೋಪದ ಮೇಲೆ ಸಿದ್ದಾಂತ್‌ ಸೇರಿ ಐದು ಮಂದಿಯನ್ನು ಬಂಧಿಸಿದ್ದಾರೆ.

ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಸುಮಾರು 35 ಮಂದಿ ಮಹಿಳೆಯರು ಮತ್ತು ಪುರುಷರನ್ನು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪಂಚತಾರಾ ಹೋಟೆಲ್‌ನಲ್ಲಿ ನಡೆಯುತ್ತಿರುವ ಪಾರ್ಟಿಯಲ್ಲಿ ಭಾಗಿಯಾಗಿರುವವರಿಗೆ ಡ್ರಗ್ಸ್‌ ಪೂರೈಕೆಯಾಗುತ್ತಿರುವ ಬಗ್ಗೆ ದೊರೆತ ಮಾಹಿತಿಯನ್ನು ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಹಲಸೂರು ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಮಂಜುನಾಥ್‌ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ.

ಆರೋಪಿಗಳ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ ಕಾಯ್ದೆಯಡಿ, 1985 (ಎನ್‌ಡಿಪಿಎಸ್‌) ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News