ಗುಳಿಗನ ಕಟ್ಟೆ ನಿರ್ಮಾಣ ವಿವಾದ; ಪೊಲೀಸರ ಮಧ್ಯಸ್ಥಿಕೆಯಲ್ಲಿ ಪ್ರಕರಣ ಸುಖಾಂತ್ಯ

Update: 2022-06-13 06:53 GMT

ಪಡುಬಿದ್ರಿ: ಇಲ್ಲಿನ ಕಂಚಿನಡ್ಕ ಮಿಂಚಿನಬಾವಿ ಕೋಡ್ದಬ್ಬು ದೈವಸ್ಥಾನದಲ್ಲಿ ನಿರ್ಮಿಸಿದ ಗುಳಿಗನ ಕಟ್ಟೆ ವಿವಾದಕ್ಕೆ ಕಾರಣವಾಗಿ, ರವಿವಾರ ರಾತ್ರಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಬಳಿಕ ಪೊಲೀಸರ ಮಧ್ಯಸ್ಥಿಕೆಯಲ್ಲಿ ಪ್ರಕರಣ ಸುಖಾಂತ್ಯಗೊಂಡಿತು.

ಇಲ್ಲಿನ ಕಂಚಿನಡ್ಕದ ಮಿಂಚಿನಬಾವಿ ಶ್ರೀ ಕೋಡ್ದಬ್ಬು ದೇವಸ್ಥಾನದ ಎದುರಲ್ಲಿ ಪಂಚಾಯತ್ ರಸ್ತೆಗೆ ತಗಡು ಚಪ್ಪರ ನಿರ್ಮಿಸಿ ಗುಳಿಗನ ಕಟ್ಟೆ ಮಾಡಲಾಗಿತ್ತು. ಇದು ಸ್ಥಳೀಯರ ವಿರೋಧಕ್ಕೆ ಕಾರಣವಾಯಿತು. ಈ ವೇಳೆ ಅಲ್ಲಿ ಎರಡು ತಂಡಗಳು ಜಮಾಯಿಸಿದ್ದು, ಒಂದು ತಂಡ "ಕಟ್ಟೆಯನ್ನು ತೆರವುಗೊಳಿಸಬೇಕು, ಇದು ಮಳೆಗಾಲದಲ್ಲಿ ನೀರು ಹೋಗುವ ತೋಡು. ಅಲ್ಲದೆ ಇದುವರೆಗೂ ಇಲ್ಲದ ಕಟ್ಟೆಯನ್ನು ಏಕಾಏಕಿ ಸ್ಥಾಪಿಸಲಾಗಿದೆ. ಇದನ್ನು ತೆರವುಗೊಳಿಸಬೇಕು" ಎಂದು ಪಟ್ಟು ಹಿಡಿದರು.

ಯಾವುದೇ ಕಾರಣಕ್ಕೂ ಇದನ್ನು ತೆರವುಗೊಳಿಸುವುದಿಲ್ಲ ಎಂದು ಮಿಂಚಿನ ಬಾವಿ ಸಮಿತಿ ಹಾಗೂ ಹಿಂದುತ್ವ ಸಂಘಟನೆಗಳು ಪಟ್ಟು ಹಿಡಿಯಿತು. ಸುಮಾರು ಒಂದೂವರೆ ಗಂಟೆ ಪಡುಬಿದ್ರಿ ಪೊಲೀಸರು ಸ್ಥಳದಲ್ಲಿದ್ದು ಪರಿಸ್ಥಿತಿ ನಿಯಂತ್ರಿಸುತ್ತಿದ್ದರು. ಬಳಿಕ ಪೊಲೀಸರ ಮಧ್ಯಸ್ಥಿಕೆಯಲ್ಲಿ ವಿವಾದಿತ ಕಟ್ಟೆಯನ್ನು ತೆರವುಗೊಳಿಸಲಾಗಿದೆ.

ಕಂಚಿನಡ್ಕ ಮಿಂಚಿನಬಾವಿ ಕೋಡ್ದಬ್ಬು ದೈವಸ್ಥಾನದ ಎದುರಲ್ಲಿ ಪಂಚಾಯತ್ ರಸ್ತೆಗೆ ತಗಡು ಚಪ್ಪರ ನಿರ್ಮಾಣಕ್ಕೆ ಸಂಬಂಧಿಸಿ ಸಮೀಪದಲ್ಲಿರುವ ಎರಡು ಮನೆಯವರು ಪಡುಬಿದ್ರಿ ಗ್ರಾಮ ಪಂಚಾಯತ್‌ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಆ ಬಳಿಕ ಕಂಚಿನಡ್ಕದಲ್ಲಿ ಉಂಟಾಗುತ್ತಿರುವ ಬೆಳವಣಿಗೆ ಸಂಬಂಧಿಸಿ ಕಳೆದ ವಾರ ಮಿಂಚಿನ ಬಾವಿ ಕ್ಷೇತ್ರದ ಬಳಿಯ ನಿವಾಸಿಗಳು ತಗಡು ಚಪ್ಪರ ನಿರ್ಮಾಣದ ಕುರಿತಾಗಿ ನೀಡಿರುವ ಆಕ್ಷೇಪಣೆಗಳನ್ನು ವಾಪಾಸು ಪಡೆದಿದ್ದರು.

ಸಾರ್ವಜನಿಕ ರಸ್ತೆಯಾಗಿರುವುದರಿಂದ ಪಂಚಾಯತ್ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಪಂಚಾಯಿತಿ ಏನು ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಅದು ಅವರಿಗೆ ಬಿಟ್ಟ ವಿಚಾರ. ಮುಂದೆ ಏನಾದರೂ ಅನಾಹುತ ಆದಲ್ಲಿ ಪಂಚಾಯಿತ್ ಹೊಣೆ ಎಂದು ಆಕ್ಷೇಪ ಹಿಂಪಡೆದು ಮನೆಯವರು ಪಂಚಾಯಿತಿಗೆ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News