ವ್ಯಭಿಚಾರವನ್ನು ‘ವೃತ್ತಿ’ ಎಂದು ಕರೆಯುವುದು ಅನ್ಯಾಯ

Update: 2022-06-13 08:12 GMT

ನ್ಯಾಯಾಲಯದ ಸಲಹೆಗಳು ವೇಶ್ಯಾವೃತ್ತಿಯಲ್ಲಿ ಇರುವವರನ್ನು ಮತ್ತಷ್ಟು ದುಃಸ್ಥಿತಿಗೆ ತಳ್ಳುತ್ತವೆಯೇ ಹೊರತು, ಇನ್ಯಾವುದಕ್ಕೂ ಉಪಯೋಗ ಆಗುವುದಿಲ್ಲ. ಸಾಂವಿಧಾನಿಕ ನೈತಿಕತೆ (ಕಾನ್‌ಸ್ಟಿಟ್ಯೂಷನಲ್ ಮೊರಾಲಿಟಿ) ಎಂದು ರಾಜಕೀಯ ಸುಧಾರಕರು ಹೇಳುತ್ತಾರಲ್ಲಾ, ಆ ನೈತಿಕತೆಯ ಚೌಕಟ್ಟಿನೊಳಕ್ಕೂ ಸಹ ಈ ಸಲಹೆಗಳು ಬರುವುದಿಲ್ಲ.

ಇತ್ತೀಚೆಗೆ ಭಾರತದ ಸರ್ವೋಚ್ಚ ನ್ಯಾಯಾಲಯವು ವ್ಯಭಿಚಾರದ ಕುರಿತು ಆದೇಶಗಳ ರೀತಿಯ ಕೆಲವು ಸಲಹೆಗಳನ್ನು ಕೊಟ್ಟಿದೆ. ಆ ಸಲಹೆಗಳು ಹೀಗಿವೆ: 1) ವ್ಯಭಿಚಾರವನ್ನು ಎಲ್ಲಾ ವೃತ್ತಿಗಳಂತೆಯೇ ಒಂದು ವೃತ್ತಿ ಎಂದು ಗುರುತಿಸಬೇಕು.

  

   2)ಸ್ವಇಚ್ಛೆಯಿಂದ ವ್ಯಭಿಚಾರವನ್ನು ಮಾಡುವವರಿಗೆ ಪೊಲೀಸರು ತೊಂದರೆ ಕೊಡಬಾರದು. ಯಾಕೆಂದರೆ, ವೇಶ್ಯಾಗೃಹ (ಬ್ರೊದೆಲ್) ವನ್ನು ನಡೆಸುವುದು ಕಾನೂನಿಗೆ ವಿರುದ್ಧವೇ ಹೊರತು, ಸ್ವಂತ ಇಚ್ಛೆಯಿಂದ ವ್ಯಭಿಚಾರದಲ್ಲಿ ತೊಡಗುವುದು ಕಾನೂನಿಗೆ ವಿರುದ್ಧವಲ್ಲ. 3)ವೇಶ್ಯಾಸ್ತ್ರೀಯರಿಗೂ ಮತ್ತು ಅವರ ಮಕ್ಕಳಿಗೂ ಸಹ ಕಾನೂನಿನ ರಕ್ಷಣೆ ಇರಬೇಕು. 4)ಪತ್ರಿಕೆಗಳು ಮತ್ತು ಟಿವಿಗಳು ವೇಶ್ಯೆಯರ ಹೆಸರುಗಳನ್ನು ಮತ್ತು ಫೋಟೊಗಳನ್ನು ಪ್ರಕಟಿಸಬಾರದು.

   5)ವೇಶ್ಯಾವೃತ್ತಿಯಲ್ಲಿರುವವರನ್ನು ವಿವಿಧ ರೀತಿಯ ಸುಧಾರಣೆಗಳ ಮೂಲಕ ಪರಿವರ್ತಿಸಬೇಕೆಂಬುದು ಪುರುಷಾಧಿಪತ್ಯದ (ಮೇಲ್ ಹೆಗೆಮನಿಯ) ತೀರ್ಮಾನಗಳೇ.

ನ್ಯಾಯಾಲಯವು ಮಾಡಿರುವ ಎಲ್ಲ ಸಲಹೆಗಳೂ ಇಂಥ ಸಲಹೆಗಳೇ. ಈ ಎಲ್ಲಾ ಸಲಹೆೆಗಳ ಬಗ್ಗೆಯೂ ಹಲವಾರು ಪ್ರಶ್ನೆಗಳು ಏಳುತ್ತವೆ ಮತ್ತು ಏಳಬೇಕು ಕೂಡ.

ನಮ್ಮ ಪ್ರಶ್ನೆಗಳು: ಮೂಲತಃ ವೇಶ್ಯಾವೃತ್ತಿಯೆಂಬುದು ಎಂಥ ನೀಚ ಸಂಬಂಧವೆಂಬು ದನ್ನು ಸರ್ವೋಚ್ಚ ನ್ಯಾಯಾಲಯವು ಗ್ರಹಿಸಲಿಲ್ಲವೆ? ಹಾಗೆಂದು ಗ್ರಹಿಸಿದ್ದರೂ, ಅದನ್ನು ಕಾನೂನುಬದ್ಧ ಮಾಡಬೇಕೆಂದಿದೆಯಾ? ಮೂಲತಃ ವೇಶ್ಯಾವೃತ್ತಿಯೇ ಒಂದು ಜೀವನಮಾರ್ಗವಾಗಿ ಏಕೆ ಹುಟ್ಟಿಕೊಳ್ಳುತ್ತದೆ? ಬದುಕುವುದಕ್ಕೆ ಗತಿ ಇಲ್ಲದ ಪರಿಸ್ಥಿತಿಯಿಂದಾಗಿ ಅಲ್ಲವೇ? ಈ ಕಾರಣವನ್ನು ಅರ್ಥಮಾಡಿಕೊಂಡರೆ, ಬದುಕುವು ದಕ್ಕಾಗಿ ಒಂದು ಒಳ್ಳೆಯ ದಾರಿಯನ್ನು ಸರ್ವೋಚ್ಚ ನ್ಯಾಯಾಲಯವು ತೋರಿಸಲಾಗುವುದಿಲ್ಲವೇ?

ನ್ಯಾಯಾಲಯವು ವೇಶ್ಯೆಯರ ಮೇಲೆ ಕೇಸು ಹಾಕಬಾರದೆಂದು ಪೊಲೀಸರಿಗೆ ನೀತಿ ಹೇಳಲು ಹೊರಟಿದೆ. ಕಾನೂನೇ ಇಲ್ಲದಿರುವಾಗ ಕೇಸುಗಳಿಲ್ಲದೆ ಪೊಲೀಸರು ತಾನೇ ಏನು ಮಾಡಬಲ್ಲರು? ಮೂಲತಃ ವೃತ್ತಿ ಎಂಬ ಮಾತು ಯಾವ ಸಂದರ್ಭದಲ್ಲಿ ಅನ್ವಯ ವಾಗುತ್ತದೆ? ಬಟ್ಟೆ ಒಗೆಯುವ ಕೆಲಸ ಮಾಡುವುದೇ ದೋಭಿಯ ವೃತ್ತಿ.ಕ್ಷೌರದ ಕೆಲಸ ಮಾಡುವುದೇ ಕ್ಷೌರಿಕ ವೃತ್ತಿ. ಕಮ್ಮಾರಿಕೆ, ಕುಂಬಾರಿಕೆ, ನೇಯ್ಗೆ, ಹೊಲಿಗೆ, ಮರಗೆಲಸ, ಮಾಸ್ತರಿಕೆ, ವೈದ್ಯೋಪಚಾರ ಹೀಗೆ ಒಂದೊಂದು ಶ್ರಮವೂ ಒಂದೊಂದು ವೃತ್ತಿ. ವೃತ್ತಿ ಎಂದಾಗಬೇಕೆಂದರೆ, ಒಬ್ಬ ಮನುಷ್ಯ ಮಾಡುವ ಕೆಲಸ ಶ್ರಮ ಆಗಿರಬೇಕು. ಸ್ತ್ರೀ ಪುರುಷರ ಶಾರೀರಿಕ ಸಂಬಂಧವನ್ನು ಶ್ರಮಕ್ಕೆ ಹೋಲಿಸುವುದನ್ನು ಮಾತ್ರ ನ್ಯಾಯಾಧೀಶರು ಕಂಡುಹಿಡಿದಿದ್ದು? ಕುಟುಂಬದಲ್ಲಿನ ಗಂಡ - ಹೆಂಡತಿ ಸಹ ತಮ್ಮ ದೈಹಿಕ ಸಂಬಂಧಗಳನ್ನು ಶ್ರಮಗಳೆಂದೇ ತಿಳಿದು ಅವುಗಳನ್ನು ವೃತ್ತಿಗಳೆಂದು ಪರಿಗಣಿಸಿ ನಿರ್ವಹಿಸುತ್ತಾರಾ? ದೈಹಿಕ ಸಂಬಂಧವನ್ನು ಕೆಲಸ ಎನ್ನಬಹುದಾ? ನೀರು ಕುಡಿಯುವುದು ಶ್ರಮ ಎಂದಾಗುತ್ತದೆಯಾ? ಎರಡು ಗಂಡು - ಹೆಣ್ಣು ಪ್ರಾಣಿಗಳ ಸಂಬಂಧವು ಕೆಲಸ ಎಂದಾಗುತ್ತದೆಯಾ?

ವ್ಯಭಿಚಾರದಲ್ಲಿ ವೇಶ್ಯೆಯು ಮಾತ್ರವಲ್ಲ ವಿಟರೂ ಸಹ ಇರುತ್ತಾರೆ. ಈ ವಿಟರು ವೇಶ್ಯೆಯರ ದೇಹಗಳನ್ನು ಹಾಳಾದ ದೇಹಗಳೆಂದು ಭಾವಿಸಿ ಅವನ್ನು ಬಳಸಿಕೊಳ್ಳುತ್ತಾರೆ. ಈ ವಿಟರ ವೈಭಿಚಾರದ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಏನು ಹೇಳುತ್ತದೆ? ಅದು ಅವನ ಸ್ವಂತ ಇಚ್ಛೆ ಎಂದೇ ಅಲ್ಲವೆ?

ವ್ಯಭಿಚಾರವನ್ನು ಮಾಡುವುದು ತಪ್ಪಲ್ಲ, ಆದರೆ ವೇಶ್ಯಾಗೃಹದ ನಿರ್ವಹಣೆ ಕಾನೂನಿಗೆ ವಿರುದ್ಧವಂತೆ! ಯಾಕೆ ಕಾನೂನಿಗೆ ವಿರುದ್ಧ ವಾಗಬೇಕು? ವೈದ್ಯ ವೃತ್ತಿಯಲ್ಲಿರುವ ವೈದ್ಯರು ಸ್ವಂತವಾಗಿ ಒಂದು ಕ್ಲಿನಿಕ್ ಇಟ್ಟುಕೊಳ್ಳಲಾಗದ ಸ್ಥಿತಿಯಲ್ಲಿ ಇದ್ದರೆ, ಅವರು ಒಂದು ಆಸ್ಪತ್ರೆಯಲ್ಲಿ ಕೆಲಸಮಾಡುತ್ತಾ ತಮ್ಮ ವೃತ್ತಿಯನ್ನು ಸ್ವಂತ ಇಚ್ಛೆಯಿಂದ ನಡೆಸುತ್ತಾ ರಲ್ಲವೇ? ಹಾಗೆಯೇ ವೇಶ್ಯೆಯರೂ ಸಹ ಒಂದು ವೇಶ್ಯಾವಾಟಿಕೆ ಯನ್ನು ನಡೆಸುವ ಮಾಲಕನೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡರೆ, ಆ ವೇಶ್ಯಾವಾಟಿಕೆಯನ್ನು ನಿರ್ವಹಿಸುವ ಕೆಲಸವು ಹೇಗೆ ಅಪರಾಧ ಆಗುತ್ತದೆ? ವ್ಯಭಿಚಾರವನ್ನು ನ್ಯಾಯಾಲಯವು ಒಂದು ವೃತ್ತಿ ಎಂದು ಗುರುತಿಸಿ ರುವುದು ಇತ್ತೀಚಿನ ವಿದ್ಯಮಾನವೇನೂ ಅಲ್ಲ. ಸಮಾಜ ಸುಧಾರಕ ಸಂಘಟನೆಗಳು, ವ್ಯಭಿಚಾರವನ್ನು ವೃತ್ತಿಯೆಂದು ಗುರುತಿಸಬೇಕೆಂದು ಎಷ್ಟೋ ದಿನಗಳಿಂದಲೂ ಕೇಳುತ್ತಾ ಬಂದಿವೆ. ಈ ಸಂಘಟನೆಗಳು ವ್ಯಭಿಚಾರದ ಮೂಲ ಕಾರಣವನ್ನು ಕುರಿತು ಮಾತನಾ ಡುವುದಿಲ್ಲ. ಮೂಲ ಕಾರಣಗಳು ತಿಳಿದರೆ, ತಿಳಿದುಕೊಳ್ಳುವುದಾದರೆ, ಅವಕ್ಕೆ ಪರಿಹಾರಗಳೂ ಕೂಡಲೇ ಸಿಕ್ಕಿಬಿಡುತ್ತವೆ. ದೇಶದ ತುಂಬಾ ಎಷ್ಟೋ ಸಾವಿರ, ಲಕ್ಷ, ದೇವಸ್ಥಾನಗಳು ಇವೆ ! ಅವುಗಳ ತುಂಬಾ ಹಣದ ರಾಶಿಗಳು, ಬೆಳ್ಳಿ - ಬಂಗಾರದ ಒಡವೆಗಳ ಮೂಟೆಗಳು, ಬಟ್ಟೆ, ಆಹಾರ ಪದಾರ್ಥಗಳು ಊಹೆಗೂ ನಿಲುಕದಷ್ಟು ಪ್ರಮಾಣದಲ್ಲಿ ಇವೆ! ಅವುಗಳಿಂದ ಒಂದಿಷ್ಟನ್ನು ಹೊರತೆಗೆದು, ವ್ಯಭಿಚಾರಕ್ಕೆ ಬದಲಾಗಿ ಸಹಜವಾದ ವೃತ್ತಿಗಳನ್ನು ವೇಶ್ಯಾಸ್ತ್ರೀಯರಿಗೆ ಕಲ್ಪಿಸಲಾರರೆ? ಕಲ್ಪಿಸಿರಿ ಎಂದು ಸರಕಾರಕ್ಕೆ ನ್ಯಾಯಾಲಯವು ಸಲಹೆ ಮಾಡಲಾಗದೆ? ಅದು ಅಸಾಧ್ಯವೇ? ಹಾಗೆ ಮಾಡದೆ, ಆ ಸ್ತ್ರೀಯರನ್ನು ನಿಮ್ಮ ವ್ಯಭಿಚಾರಗಳಿಂದ, ನಿಮ್ಮ ಕಾಯಿಲೆಗಳಿಂದ, ವ್ರಣಗಳಿಂದ ಕೃಶವಾಗುತ್ತಾ ಬದುಕು ಸಾಗಿಸಿರಿ ಎಂದು ಕೈತೊಳೆದುಕೊಂಡುಬಿಟ್ಟರೆ ಅಂಥ ಕ್ರಮವು ನಿಜವಾದ ನ್ಯಾಯ ಆಗುತ್ತದೆಯೇ?

ವ್ಯಭಿಚಾರವನ್ನು ಉಳಿಸಬೇಕೆಂದು, ಪೊಲೀಸರು ಮಾತ್ರ ಅಲ್ಲಿ ತಲೆ ಹಾಕಬಾರದೆಂದು ಸಮಾಜ ಸುಧಾರಕರು ಲಾಗಾಯ್ತಿನಿಂದ ಹೇಳುತ್ತಾ ಬಂದ ಮಾತುಗಳನ್ನೇ ಸರ್ವೋಚ್ಚ ನ್ಯಾಯಾಲಯವೂ ಹೇಳಿದೆ. ಪತ್ರಿಕೆಯವರು, ಟಿವಿಯವರು ವ್ಯಭಿಚಾರ ಮಾಡುವ ಸ್ತ್ರೀಯರ ಹೆಸರುಗಳನ್ನು, ಫೋಟೊಗಳನ್ನು ಪ್ರಕಟಿಸಬಾರದಂತೆ. ಆ ವ್ಯಭಿಚಾರಿಗಳು ಗೌರವದಿಂದ ತಮ್ಮ ವೃತ್ತಿಯನ್ನು ನಡೆಸಿಕೊಳ್ಳುತ್ತಾ ಇದ್ದರೆ, ಆ ವೃತ್ತಿಸಂಗತಿಯನ್ನು ಪತ್ರಿಕೆಗಳು ಯಾಕೆ ರಹಸ್ಯವಾಗಿ ಇಡಬೇಕು? ಬಹಿರಂಗವಾಗಿ ಹೇಳಿದರೇನೇ ಆ ವೇಶ್ಯೆಯರ ವಿವರಗಳು ಹೆಚ್ಚು ಮಂದಿ ವಿಟರಿಗೆ ತಿಳಿದು ಆ ವೃತ್ತಿಗೆ ಹೆಚ್ಚಿನ ಬೇಡಿಕೆ ಬರುತ್ತದಲ್ಲವಾ? ಅದು ಆ ಸ್ತ್ರೀಯರಿಗೆ ಒಳ್ಳೆಯದೇ ಅಲ್ಲವೇ? ಅಲ್ಲವಾದರೆ ಯಾಕಲ್ಲ? ದೊಡ್ಡ ದೊಡ್ಡ ಆಸ್ಪತ್ರೆಗಳು ತಮ್ಮ ಬಳಿ ವಿಶೇಷ ನೈಪುಣ್ಯವಿರುವ ವೈದ್ಯರು ಇದ್ದಾರೆಂದು, ತಮ್ಮ ಬಳಿಗೆ ಚಿಕಿತ್ಸೆಗಾಗಿ ಬನ್ನಿ ಎಂದು ಜಾಹಿರಾತುಗಳನ್ನು ಕೊಡುತ್ತಾ ಇಲ್ಲವೆ? ಎಲ್ಲಾ ವೃತ್ತಿಗಳಿಗೂ ಕೊಡುವ ಗೌರವವನ್ನೇ ವೇಶ್ಯೆಯರಿಗೂ ಸಹ ಕೊಡಬೇಕೆಂದು ಸಲಹೆ ಮಾಡಿರುವ ನ್ಯಾಯಾಲಯಕ್ಕೆ ಈ ವಿಷಯವು ಗೊತ್ತಿಲ್ಲವೆ? ಅದು ಒಳ್ಳೆಯ ವೃತ್ತಿಯೇ ಆಗಿದ್ದರೆ, ಅದನ್ನು ರಹಸ್ಯವಾಗಿ ಇಡುವುದೇಕೆ?

ವ್ಯಭಿಚಾರ ಎನ್ನುವುದು ಕಡು ಬಡತನದಿಂದಾಗಿ ಅಗತ್ಯವಾಗುತ್ತದೆ ಎಂಬುದು ಬರಿಗಣ್ಣಿಗೂ ಕಾಣಿಸುವ ಸತ್ಯ. ಈ ನೀಚತನಕ್ಕೆ ಮೂಲ ಕಾರಣ ನಿರುದ್ಯೋಗ. ಉತ್ಪಾದನಾ ಸಾಧನಗಳ ರೂಪದಲ್ಲಿ ಅಂಗೈಯಗಲ ಭೂಮಿ ಇತ್ಯಾದಿ ಯಾವುದೇ ಆಸ್ತಿ ಇಲ್ಲದೆ ಹೋಗಿರು ವುದನ್ನು ಮತ್ತು ಆಸ್ತಿ ಸಂಬಂಧಗಳ ಅಸಮಾನತೆಯ ಮಾತನ್ನು ಎತ್ತದೆಯೇ, ಆ ವೇಶ್ಯೆಯರ ಮೇಲಿನ ದಯೆಯಿಂದ ಹೊಮ್ಮುತ್ತಿರುವ ನಾನಾ ಬಗೆಯ ಕಲ್ಪನೆಗಳಿಂದ ಕೂಡಿದ ಮಾತುಗಳು ಇವು.

ಬಂಡವಾಳಶಾಹಿ ಸಮಾಜದಲ್ಲಿ ಇರುವ ಉಚ್ಚ ನ್ಯಾಯಾಲ ಯವಾಗಲಿ, ಇತರ ಸಮಾಜ ಸುಧಾರಕರಾಗಲಿ ಕೊಡುವ ಸಲಹೆಗಳು ಸಹೃದಯರಾದ ಮುಗ್ಧ ಜನರಿಗೆ ನೈತಿಕವಾಗಿ ಉದಾತ್ತವಾದವುಗಳಾಗಿ ಕಾಣಿಸುತ್ತವೆ. ಆದರೆ ಅವು ನಿಜವಲ್ಲ. ಆದ್ದರಿಂದಲೇ, ಲೆನಿನ್, ಕಾರ್ಮಿಕ ಸ್ತ್ರೀಯರ ಉದ್ಯಮಗಳನ್ನು ನಡೆಸುತ್ತಿದ್ದ ಕ್ಲಾರಾ ಜೆಟ್ಕಿನ್ ಎಂಬ ಮಹಿಳೆಯೊಂದಿಗೆ (1920 ರಲ್ಲಿ) ಹೀಗೆ ಹೇಳಿದ್ದಾನೆ. ವೇಶ್ಯೆಯರು ಬಂಡವಾಳಶಾಹಿ ಸಮಾಜದಿಂದ ಎರಡು ರೀತಿಯಲ್ಲಿ ಬಾಧಿತರಾಗಿದ್ದಾರೆ. ಒಂದು: ಅದರ ದುಷ್ಟ ಆಸ್ತಿ ವ್ಯವಸ್ಥೆಯಿಂದಾಗಿ! ಎರಡು: ಅದರ ದುಷ್ಟ ನೈತಿಕ ಕಪಟತನದಿಂದಾಗಿ! ‘ನಾನು ಅಂಧಕಾರ...’ ಎಂಬ ಕಾದಂಬರಿಯಲ್ಲಿ ವೇಶ್ಯೆಯರನ್ನು ಕುರಿತು ಬರೆಯುತ್ತಿದ್ದಾಗ (1969 ರಲ್ಲಿ) ನನಗೆ ಈ ವಿಷಯಗಳು ಸರಿಯಾಗಿ ಗೊತ್ತಿರಲಿಲ್ಲ. ಆ ಕಾದಂಬರಿಯನ್ನು ಬರೆಯುವ ಮೊದಲು ಒಂದಿಷ್ಟು ಮಾಹಿತಿಗಾಗಿ, ಇಬ್ಬರು ಮೂವರು ವೇಶ್ಯೆಯರೊಂದಿಗೆ ಅವರು ಆ ಸ್ಥಿತಿಯಲ್ಲಿ ಯಾಕಾಗಿ ಇದ್ದಾರೆ ಎಂದು ತಿಳಿದುಕೊಳ್ಳುವುದಕ್ಕಾಗಿ ತುಂಬಾ ಮಾತನಾಡಿದ್ದೇನೆ. ಪ್ರೀತಿಯ ಹೆಸರಿನಲ್ಲಿ ಮೋಸ ಹೋದವರು, ಯಾವ ಆಧಾರವೂ ಇಲ್ಲದವರು, ಕೆಲಸ ಕೊಡಿಸುತ್ತೇನೆಂದರೆ ನಂಬಿ ಮನೆಯಿಂದ ದೂರ ಬಂದು ಮೋಸ ಹೋದವರು, ಹೀಗೆ ನಾನಾ ಬಗೆಯ ಹಿನ್ನೆಲೆಯವರು ಇದ್ದರೂ, ಪ್ರಧಾನವಾದ ಕಾರಣ ಬಡತನವೇ ಎಂದು ಅವರು ಹೇಳಿದ್ದಾರೆ. ಆದರೆ, ಬಡತನಕ್ಕೆ ಮೂಲ, ಆಸ್ತಿ ಸಂಬಂಧವೇ ಎಂಬ ಸಂಗತಿಯು ನನಗೆ ಮಾರ್ಕ್ಸ್‌ವಾದದ ಪರಿಚಯವಾಗುವವರೆಗೂ ಗೊತ್ತಿರಲಿಲ್ಲ. ಆ ನಂತರ ನನಗೆ ಮತ್ತೊಂದು ಸಂಗತಿಯು ಅರ್ಥವಾಗಿದೆ. ವೇಶ್ಯಾವೃತ್ತಿಯನ್ನು ನಿರ್ಮೂಲ ಮಾಡಬೇಕೆಂದರೆ, ವೇಶ್ಯಾ ಸಮಸ್ಯೆಯನ್ನು ಮಾತ್ರ ಪರಿಹರಿಸಿದರೆ ಸಾಲದು; ವಿಟರ ಸಮಸ್ಯೆಯನ್ನೂ ಸಹ ಪರಿಹರಿಸಬೇಕು! ಎಂಬ ಸಂಗತಿ ಅದು.

ವೇಶ್ಯಾಸಮಸ್ಯೆಗೆ ಕಾರಣ ಸ್ತ್ರೀಯರ ಕೌಟುಂಬಿಕ ಬಡತನ. ಅವರ ಬಳಿಗೆ ಬರುವ ಪುರುಷರಿಗೆ ಸರಿಯಾದ ದಾಂಪತ್ಯ ಸಂಬಂಧಗಳು ಇಲ್ಲವೆಂದು ಅರ್ಥ. ಅನ್ಯೋನ್ಯತೆ, ಪ್ರೀತಿ, ಸಮಾನತೆಯ ಭಾವನೆಗಳೇಮದುವೆಗೆ ಬುನಾದಿ ಆಗಿದ್ದಾಗ, ಸ್ತ್ರೀ-ಪುರುಷರ ನಡುವೆ ಗುಪ್ತ ಸಂಬಂಧಗಳೂ ಇರುವುದಿಲ್ಲ; ವಿಟರೂ ಇರುವುದಿಲ್ಲ. ಈ ವಿಶ್ವದಲ್ಲಿ ಯಾವ ಸ್ತ್ರೀಯಾದರೂ ನಾನು ಈ ವ್ಯಭಿಚಾರವನ್ನು ಇಷ್ಟಪಟ್ಟೇ ಮಾಡುತ್ತಿದ್ದೇನೆ ಎಂದು ಹೇಳುತ್ತಾಳೆಯೇ? ನನ್ನೊಂದಿಗೆ ಮಾತನಾಡಿದವರು, ಬರುವವರು ಕಳ್ಳಮುಂಡೇಮಕ್ಕಳಮ್ಮಾ! ಹೆಂಡಂದಿರ ಬಳಿ ನಡೆಯದ ವೇಷಗಳನ್ನೆಲ್ಲಾ ನಮ್ಮ ಬಳಿ ಹಾಕುತ್ತಾರಮ್ಮಾ! ಹಿಂಸೆ ಕೊಟ್ಟು ಕೊಟ್ಟು ತಿಂದುಬಿಡುತ್ತಾರಮ್ಮಾ! ಗತಿ ಇಲ್ಲದೆ ಇದರಲ್ಲಿ ಬಿದ್ದಿದ್ದೇವಮ್ಮಾ! ಎಂದು ಮುಂತಾಗಿ ಹೀಗೆ ಹೇಳಿದ್ದಾರೆಯೇ ಹೊರತು, ಇದೇನೋ ಒಂದು ಪವಿತ್ರವಾದ ವೃತ್ತಿಯೆಂದು ಹೇಳಲಿಲ್ಲ.

ಪೊಲೀಸರು, ವೇಶ್ಯೆಯರೊಂದಿಗೆ ಕ್ರೂರವಾಗಿರಬಾರದೆಂಬುದು ನ್ಯಾಯಾಲಯದ ಹಿತವಚನ! ಪೊಲೀಸರು ಕ್ರೂರವಾಗಿರುವುದು ವೇಶ್ಯೆಯರೊಂದಿಗೆ ಮಾತ್ರವಾ? ಅಂಗನವಾಡಿ ಮಹಿಳೆಯರು ಆಂದೋಲನ ಮಾಡಿದಾಗ, ಶಿಕ್ಷಕರು ಮುಷ್ಕರ ಹೂಡಿದಾಗ, ಲಾಯರ್‌ಗಳು ಚಳವಳಿಗೆ ಧುಮುಕಿದಾಗ ಈ ಪೊಲೀಸರ ಲಾಠಿಗಳು ಬೀಸದ ಸಂದರ್ಭಗಳು ಇವೆಯೇ? ಅಂಥದರಲ್ಲಿ ವೇಶ್ಯಾವೃತ್ತಿಯಿಂದ ಹೊಟ್ಟೆ ತುಂಬಿಸಿಕೊಳ್ಳುವ ನಿಸ್ಸಹಾಯಕರು ಒಂದು ಲೆಕ್ಕವೇ ಪೊಲೀಸರಿಗೆ? ವೇಶ್ಯೆಯರನ್ನು ಪರಿವರ್ತನಾ ಕೇಂದ್ರಗಳಲ್ಲಿ ಇರಿಸಿದರೆ, ಅದು ಪುರುಷಾಧಿಪತ್ಯವಂತೆ! ಹಾಗಿದ್ದರೆ ವೇಶ್ಯಾವೃತ್ತಿಯನ್ನು ಒಂದು ವೃತ್ತಿಯಾಗಿ ಭಾವಿಸಿ ಅವರನ್ನು ಹಾಗೇ ಇರಲು ಬಿಟ್ಟುಬಿಡಿ, ರೋಗಗಳಿಂದ ಸಾಯಲು ಬಿಡಿ ಎಂಬ ಧೋರಣೆ ಯಾರ ಭಾವನೆಗಳು ಆಗುತ್ತವೆ? ವೇಶ್ಯಾತನವೆಂಬುದು ಮೂಲತಃ ಪುರುಷರಿಗಾಗಿಯೇ ಹುಟ್ಟಿಕೊಂಡಿದೆ.

ಒಟ್ಟಿನಲ್ಲಿ ನ್ಯಾಯಾಲಯದ ಸಲಹೆಗಳು ವೇಶ್ಯಾವೃತ್ತಿಯಲ್ಲಿ ಇರುವ ವರನ್ನು ಮತ್ತಷ್ಟು ದುಃಸ್ಥಿತಿಗೆ ತಳ್ಳುತ್ತವೆಯೇ ಹೊರತು, ಇನ್ಯಾವುದಕ್ಕೂ ಉಪಯೋಗವಾಗುವುದಿಲ್ಲ. ಸಾಂವಿಧಾನಿಕ ನೈತಿಕತೆ (ಕಾನ್‌ಸ್ಟಿಟ್ಯೂಷನಲ್ ಮೊರಾಲಿಟಿ) ಎಂದು ರಾಜಕೀಯ ಸುಧಾರಕರು ಹೇಳುತ್ತಾರಲ್ಲಾ, ಆ ನೈತಿಕತೆಯ ಚೌಕಟ್ಟಿನೊಳಕ್ಕೂ ಸಹ ಈ ಸಲಹೆೆಗಳು ಬರುವುದಿಲ್ಲ. ಇವಕ್ಕೆ ಮಾರುಹೋಗಿ ನಾಗಪುರದ ಗಂಗಾ-ಜಮುನಾ ರೆಡ್‌ಲೈಟ್ ಪ್ರದೇಶದಲ್ಲಿ ಕೆಲವು ಮಂದಿ ಸ್ತ್ರೀಯರು ಮತ್ತು ಪುರುಷರೂ ಸಹ ಬಣ್ಣಗಳನ್ನು ಎರಚಿಕೊಂಡು ಡೋಲು ಬಾರಿಸುತ್ತಾ, ನರ್ತನ ಮಾಡುತ್ತಾ ಸಂತೋಷವನ್ನು ಆಚರಿಸುತ್ತಿರುವ ವೀಡಿಯೊ ಯೂಟ್ಯೂಬ್‌ನಲ್ಲಿ ಹರಿದಾಡುತ್ತಿದೆ. ಅದು ವೇಶ್ಯೆಯರ ಮುಗ್ಧತೆೆಯ ಸಂತೋಷವಾ? ಅಥವಾ ವೇಶ್ಯಾತನವನ್ನು ಒಂದು ಚೌಕಾಸಿ ದಂಧೆಯಾಗಿ ಮಾಡಿ ವೇಶ್ಯಾಗೃಹಗಳನ್ನು ನಡೆಸುತ್ತಿರುವವರ ಗಟ್ಟಿ ಆನಂದವೇ?

(09/06/2022 ರಂದು ಆಂಧ್ರಜ್ಯೋತಿ ದಿನಪತ್ರಿಕೆಯ ಹೈದರಾಬಾದ್ ಆವೃತ್ತಿಯ ಸಂಪಾದಕೀಯ ಪುಟದಲ್ಲಿ ಪ್ರಕಟವಾದ ಲೇಖನ)

Writer - ರಂಗನಾಯಕಮ್ಮ

contributor

Editor - ರಂಗನಾಯಕಮ್ಮ

contributor

Similar News