ಮಳಲಿ ಪೇಟೆ ಮಸೀದಿ ಪರ ಸಲ್ಲಿಸಿರುವ ದೂರು ನಿರಾಕರಣೆ ಅರ್ಜಿಗೆ ಸಂಬಂಧಿಸಿ ತೀರ್ಪು ನೀಡದಂತೆ ಹೈಕೋರ್ಟ್ ನಿರ್ದೇಶನ
ಮಂಗಳೂರು : ಮಳಲಿ ಪೇಟೆ ಜುಮಾ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಮಸೀದಿ ಪರ ವಕೀಲರು ಸಲ್ಲಿಸಿದ್ದ ದೂರು ನಿರಾಕರಣೆ ಅರ್ಜಿಯ ಕುರಿತಂತೆ ಯಾವುದೇ ತೀರ್ಪನ್ನು ನೀಡಬಾರದೆಂದು ರಾಜ್ಯ ಹೈಕೋರ್ಟ್ ಮಂಗಳೂರಿನ ಮೂರನೇ ಸಿವಿಲ್ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.
ಸ್ಥಳೀಯರಾದ ಧನಂಜಯ ಮತ್ತು ಮನೋಜ್ ಕುಮಾರ್ ಎಂಬವರು ಹೈಕೋರ್ಟ್ ಮೊರೆ ಹೋಗಿದ್ದು, ಮಸೀದಿ ಪರ ವಕೀಲರು ಸಲ್ಲಿಸಿರುವ ದೂರು ನಿರಾಕರಣೆ ಅರ್ಜಿಯ ಸಂಬಂಧ ಮೂರನೇ ಸಿವಿಲ್ ನ್ಯಾಯಾಲಯ ನೀಡಬಹುದಾದ ತೀರ್ಪುಗಳನ್ನು ತಡೆ ಹಿಡಿಯಬೇಕು. ಒಂದು ವೇಳೆ ಮೂರನೇ ಸಿವಿಲ್ ನ್ಯಾಯಾಲಯವು ಮಸೀದಿಯ ಪರವಾಗಿ ತೀರ್ಪು ಪ್ರಕಟಿಸಿದರೆ, ವಿವಾದಿತ ಸ್ಥಳದಲ್ಲಿರುವ ಹಳೆಯ ಕಟ್ಟಡವನ್ನು ಕೆಡಹುವ ಸಾಧ್ಯತೆಗಳಿವೆ. ಹೀಗಾದರೆ ನಮ್ಮ ಆರೋಪಗಳಿಗೆ ಆಧಾರ ಇಲ್ಲದಂತಾಗುತ್ತದೆ. ಆ ಹಿನ್ನೆಲೆಯಲ್ಲಿ ಅರ್ಜಿ ಸಂಬಂಧ ನ್ಯಾಯಾಲಯ ನೀಡಬಹುದಾದ ತೀರ್ಪನ್ನು ತಡೆ ಹಿಡಿಯಬೇಕೆಂದು ಮನವಿ ಮಾಡಿದ್ದರು.
ಅರ್ಜಿ ಸ್ವೀಕರಿಸಿದ ರಾಜ್ಯ ಹೈಕೋರ್ಟ್ ಅರ್ಜಿ ಸಂಬಂಧಿಸಿ ತಾನು ವಿಚಾರಣೆ ನಡೆಸಿ ತೀರ್ಪು ನೀಡುವವರೆಗೆ ಯಾವುದೇ ತೀರ್ಪುಗಳನ್ನು ನೀಡಬಾರದು ಎಂದು ಸೂಚನೆ ನೀಡಿದೆ. ಅದರೆ ಪ್ರಕರಣದ ವಾದ ವಿವಾದಗಳನ್ನು ನಡೆಸದಂತೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಮಳಲಿ ಮಸೀದಿ ವಿವಾದ ಸಂಬಂಧ ಮೂರನೇ ಸಿವಿಲ್ ನ್ಯಾಯಾಲಯವು ವಿಚಾರಣೆಯನ್ನು ಜೂನ್ 14ಕ್ಕೆ ಮುಂದೂಡಿ ಆದೇಶಿಸಿತ್ತು. ಅದರಂತೆ ಜೂ. 14ರಂದು ನ್ಯಾಯಾಲಯದಲ್ಲಿ ಪ್ರಕರಣದ ಸಂಬಂಧ ವಾದ-ವಿವಾದಗಳು ಮುಂದುವರಿಯಲಿದೆ.