×
Ad

ವಿದ್ಯಾರ್ಥಿ ಪೂರ್ವಜ್ ಸಾವು ಪ್ರಕರಣ; ಶೈಕ್ಷಣಿಕ ಹತ್ಯೆ ಎಂದು ಪರಿಗಣಿಸಿ ಪ್ರಕರಣ ದಾಖಲಿಸಲು ಡಿವೈಎಫ್‌ಐ ಒತ್ತಾಯ

Update: 2022-06-13 22:07 IST

ಮಂಗಳೂರು : ಒಂಬತ್ತನೇ ತರಗತಿ ವಿದ್ಯಾರ್ಥಿ ಪೂರ್ವಜ್ ಸಾವಿಗೆ ತಲಪಾಡಿಯ ಶಾರದಾ ನಿಕೇತನ ವಸತಿ ಶಾಲೆಯ ಆಡಳಿತ ಮಂಡಳಿಯೇ ನೇರಹೊಣೆ. ಪೂರ್ವಜ್ ದಾರುಣ ಸಾವು ಶೈಕ್ಷಣಿಕ ಹತ್ಯೆಯಾಗಿದೆ. ಹಾಗಾಗಿ ಶಾಲೆಯ ಅಧಿಕಾರಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಡಿವೈಎಫ್‌ಐ ದ. ಕ. ಜಿಲ್ಲಾ ಸಮಿತಿ ಒತ್ತಾಯಿಸಿದೆ.

ಖಾಸಗಿ ಶಿಕ್ಷಣ ವ್ಯಾಪಾರಿಗಳ ಕೇಂದ್ರ ದ.ಕ. ಜಿಲ್ಲೆಯಲ್ಲಿ ಇಂತಹ ಶೈಕ್ಷಣಿಕ ಹತ್ಯೆಗಳು ಹೊಸದಲ್ಲ. ಈ ಬಾರಿ ಪ್ರೌಢಶಾಲೆಯ ವಿದ್ಯಾರ್ಥಿ ಬಲಿಯಾಗಿರುವುದು ಆಘಾತಕಾರಿ. ಗುಣಮಟ್ಟದ ಶಿಕ್ಷಣ, ಅತ್ಯುತ್ತಮ ಫಲಿತಾಂಶದ ಭ್ರಮೆ ಹುಟ್ಟಿಸಿ ಹೊರ ಜಿಲ್ಲೆಗಳ ಮಧ್ಯಮ, ವರ್ಗದ ಪೋಷಕರನ್ನು ದ.ಕ. ಜಿಲ್ಲೆಯ ಪ್ರತಿಷ್ಟಿತ ಹಣಪಟ್ಟಿಯ ಖಾಸಗಿ ವಸತಿ ಶಾಲೆಗಳು ಆಕರ್ಷಿಸುತ್ತವೆ. ಯಾವುದೇ ಮಾನದಂಡಗಳಿಲ್ಲದೆ ಶುಲ್ಕ, ಡೊನೇಶನ್ ಹೆಸರಿನಲ್ಲಿ ಅಕ್ಷರಶಃ ಸುಲಿಗೆ ಮಾಡುತ್ತವೆ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ ತಮ್ಮ ಮಕ್ಕಳ ಉತ್ತಮ ಭವಿಷ್ಯದ ಕನಸಿನಲ್ಲಿ ಶಾಲಾಡಳಿತ ವಿಧಿಸುವ ಲಕ್ಷಗಟ್ಟಲೆ ಫೀಸುಗಳನ್ನು ಪೋಷಕರು ಕಣ್ಣು ಮುಚ್ಚಿ ಪಾವತಿಸಿ ಮೋಸ ಹೋಗುತ್ತಾರೆ. ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯಲಿಕ್ಕಾಗಿ ಈ ಖಾಸಗಿ ವಸತಿ ಶಾಲೆಗಳು ಮಕ್ಕಳನ್ನು ಖೈದಿಗಳಂತೆ ಕೂಡಿ ಹಾಕಿ ದಿನಕ್ಕೆ ೧೪ ರಿಂದ ೧೬ ತಾಸು ವಿವಿಧ ರೀತಿಯಲ್ಲಿ ವಿಶ್ರಾಂತಿ ಇಲ್ಲದೆ ಓದಿಸುತ್ತವೆ. ಯಂತ್ರಗಳ ರೀತಿ ಪರಿಗಣಿಸಿ ತಂದೆ ತಾಯಿಗಳ ಭೇಟಿ, ಫೋನ್ ಸಂಪರ್ಕಕ್ಕೂ ನಿಷೇಧ ಹೇರುತ್ತವೆ. ಇದರಿಂದ ಹೆಚ್ಚಿನ ವಿದ್ಯಾರ್ಥಿಗಳು ಮಾನಸಿಕ ಕ್ಷೋಭೆ, ಖಿನ್ನತೆಗೆ ಒಳಗಾಗುತ್ತಾರೆ. ಹಲವರು ಅರ್ಧದಲ್ಲೇ ಶಾಲೆ ತೊರೆಯುತ್ತಾರೆ. ಈ ಕುರಿತು ಪೋಷಕರ ದೂರು ಆಲಿಸಲು ಇಲ್ಲಿ ಯಾರೂ ಲಭ್ಯರಿಲ್ಲ. ಬಲಾಢ್ಯ ಆರ್ಥಿಕ, ರಾಜಕೀಯ ಬೆಂಬಲ ಹೊಂದಿರುವ ಇಂತಹ ಶಿಕ್ಷಣ ಸಂಸ್ಥೆಗಳ ಮಾಲಕತ್ವ ನಿಯಮಗಳನ್ನು ಮುರಿದರೂ ದಕ್ಕಿಸಿಕೊಳ್ಳುವ ಛಾತಿ ಹೊಂದಿವೆ. ಹಾಗಾಗಿ ಶಾರದಾ ನಿಕೇತನ ವಿದ್ಯಾಲಯ ಆಡಳಿತ ಸಮಿತಿಯ ಮೇಲೆ ಕೊಲೆ ಮೊಕದ್ದಮೆ ದಾಖಲಿಸಿ ಬಂಧಿಸಬೇಕು ಎಂದು ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News