ಐಟಿಡಿಪಿಯಡಿ ವೈದ್ಯಕೀಯ ವೆಚ್ಚ ಪಾವತಿ ರದ್ದತಿಗೆ ವಿರೋಧ : ಕೊರಗರಿಂದ ದ.ಕ. ಡಿಸಿ ಕಚೇರಿಗೆ ಕಾಲ್ನಡಿಗೆ ಜಾಥಾ

Update: 2022-06-14 10:43 GMT

ಮಂಗಳೂರು, ಜೂ.14: ಸಮಗ್ರ ಗಿರಿಜನ ಅಭಿವೃದ್ಧಿ  ಯೋಜನೆ(ಐಟಿಡಿಪಿ) ಯಡಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದ ಕೊರಗ ಸಮುದಾಯದ ಜನರ ಪೂರ್ಣ ಪ್ರಮಾಣದ ವೈದ್ಯಕೀಯ ವೆಚ್ಚವನ್ನು ಪಾವತಿಸಲಾಗುತ್ತಿದ್ದು ಇತ್ತೀಚೆಗೆ ಅದನ್ನು ರದ್ದುಪಡಿಸಿರುವುದನ್ನು ಆಕ್ಷೇಪಿಸಿ ಕೊರಗ ಸಮುದಾಯದವರು ಮಂಗಳವಾರ ದ.ಕ. ಜಿಲ್ಲಾಧಿಕಾರಿ ಕಚೇರಿಗೆ ಕಾಲ್ನಡಿಗೆ ಜಾಥಾ ನಡೆಸಿದರು.

ನಗರದ ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಜಿಲ್ಲೆಯ ವಿವಿಧ ಕಡೆಗಳಿಂದ ಆಗಮಿಸಿದ ಸಮುದಾಯದ ನೂರಾರು ಮಂದಿ ಜಮಾಯಿಸಿದರು.

ಸಮುದಾಯದ ಮುಖಂಡರು, ಮಹಾತ್ಮ ಗಾಂಧಿ,  ಡಾ.ಬಿ.ಆರ್. ಅಂಬೇಡ್ಕರ್, ಕೊರಗ ಸಮುದಾಯದ ಹಿರಿಯ ಮುಖಂಡ ದಿ. ಗೋಕುಲದಾಸ್, ಕುದ್ಮುಲ್ ರಂಗರಾವ್ ಅವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಜಾಥಾಕ್ಕೆ ಚಾಲನೆ ನೀಡಲಾಯಿತು.

ದ.ಕ. ಜಿಲ್ಲಾ ಕೊರಗರ ಸಂಘದ ವತಿಯಿಂದ ಆಯೋಜಿಸಲಾದ ಜಾಥಾದಲ್ಲಿ ಸಮುದಾಯದ ಆರೋಗ್ಯಕ್ಕಾಗಿನ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಭಿತ್ತಿಪತ್ರಗಳನ್ನು ಹಿಡಿದು ಮೌನವಾಗಿ ಕಾಲ್ನಡಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಸುಂದರ ಮಾತನಾಡಿ, ಸರಕಾರದ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ದೊರೆಯದೆ ನಮ್ಮ ಜನರು ಸಾಯುತ್ತಿದ್ದಾರೆ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿ ಚರ್ಚಿಸಿ ಕೆಲವು ಖಾಸಗಿ ಆಸ್ಪತ್ರೆಗಳನ್ನು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯೊಂದಿಗೆ (ITDP) ಒಪ್ಪಂದ ಮಾಡಿಕೊಳ್ಳಲು ತೀರ್ಮಾನಿಸಲಾಗಿತ್ತು. ಅದರಂತೆ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದ ಸಮುದಾಯದ ಜನರ ಪೂರ್ಣ ಪ್ರಮಾಣದ ವೈದ್ಯಕೀಯ ವೆಚ್ಚವನ್ನು ಸರಕಾರ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಮೂಲಕ ಮರು ಪಾವತಿ ಮಾಡಿಕೊಂಡು ಬಂದಿರುತ್ತದೆ. ಆದರೆ ಇದೀಗ ಆರೋಗ್ಯಕ್ಕೆ ಸಂಬಂಧಪಟ್ಟ ಮಹತ್ವಾಕಾಂಕ್ಷಿಯ ಯೋಜನೆಯನ್ನು ರದ್ದುಗೊಳಿಸಿರುವುದರಿಂದ ನಶಿಸುತ್ತಿರುವ ಜನಾಂಗವನ್ನು ಮತ್ತಷ್ಟು ಕಡೆಗಣಿಸಿದಂತಾಗಿದೆ ಎಂದು ಆಕ್ಷೇಪಿಸಿದರು.

ಸರಕಾರ ಈ ರದ್ದತಿ  ಹಿಂಪಡೆದು, ಆರೋಗ್ಯಕ್ಕಾಗಿ ವಿಶೇಷ ಅನುದಾನ ಬಿಡುಗಡೆ ಮಾಡಿ ಮೊದಲಿನಂತೆ ಖಾಸಗಿ ಆಸ್ಪತ್ರೆಗಳಲ್ಕಿ ಚಿಕಿತ್ಸೆಗೆ ಅನುವು ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು.

ಜಾಥಾದಲ್ಲಿ ಮುಖಂಡರಾದ ರಮೇಶ್ ಕೊರಗ, ಸುಶೀಲಾ ಕಿನ್ನಿಗೋಳಿ, ಸುಮತಿ, ಬಾಬು ಕುಂಬ್ರ, ಚಂದ್ರಾವತಿ, ಕಿರಣ್, ಬಾಬು ಪಾಂಗಳ ಮೊದಲಾದವರು ಭಾಗವಹಿಸಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News