ಚಂದ್ರನಲ್ಲಿ ಕಾರು ಬಾಡಿಗೆ ಸೇವೆ ಆರಂಭಿಸಲು ಸಿದ್ಧತೆ

Update: 2022-06-14 18:55 GMT
PHOTO CORTESY: (GM)

ನ್ಯೂಯಾರ್ಕ್, ಜೂ.14: ಚಂದ್ರನ ಮೇಲ್ಮೈಗೆ ಗಗನಯಾತ್ರಿಗಳನ್ನು ಕರೆದೊಯ್ಯುವ ಲೂನಾರ್ ರೋವರ್ ವಾಹನಗಳನ್ನು ನಿರ್ಮಿಸುವುದಾಗಿ ಕಳೆದ ವರ್ಷ ಘೋಷಿಸಿದ್ದ ಜನರಲ್ ಮೋಟಾರ್ಸ್ ಹಾಗೂ ಲಾಖೀಡ್ ಮಾರ್ಟಿನ್ ಸಂಸ್ಥೆ, ಇದೀಗ ಚಂದ್ರನಲ್ಲಿ ಕಾರು ಬಾಡಿಗೆ ಸೇವೆ ಆರಂಭಿಸುವ ಯೋಜನೆ ರೂಪಿಸಿರುವುದಾಗಿ ಹೇಳಿದೆ.

ಚಂದ್ರನಲ್ಲಿ ಪ್ರಯಾಣಿಸಬಲ್ಲ ಕಾರುಗಳನ್ನು ತಯಾರಿಸಿ ಅವನ್ನು ಅಂತರಿಕ್ಷ ವಾಣಿಜ್ಯ ಸಂಸ್ಥೆಗಳಿಗೆ ಬಾಡಿಗೆಗೆ ನೀಡುವ ಯೋಜನೆಯನ್ನು ಎರಡೂ ಸಂಸ್ಥೆಗಳು ರೂಪಿಸಿವೆ. ಇವು ಸ್ಪೇಸ್‌ಎಕ್ಸ್ ಮತ್ತು ಬ್ಲೂ ಒರಿಜಿನ್ ಸಂಸ್ಥೆಗಳ ಯೋಜನೆಯ ರೀತಿಯಲ್ಲಿದೆ ಫಾಕ್ಸ್ ಬ್ಯುಸಿನೆಸ್ ವರದಿ ಮಾಡಿದೆ. 2025ರಲ್ಲಿ ನಿಗದಿಯಾಗಿರುವ 21ನೇ ಶತಮಾನದ ಪ್ರಥಮ ಮಾನವಸಹಿತ ಚಂದ್ರಯಾನ ಯೋಜನೆಗೂ ಮುನ್ನ ಚಂದ್ರನಲ್ಲಿ ಚಲಿಸಬಹುದಾದ ಕಾರುಗಳನ್ನು ಅಭಿವೃದ್ಧಿಪಡಿಸುವ ಆಶಯವಿದೆ. ವಾಹನಗಳನ್ನು ಸ್ವಾಯತ್ತ ಚಾಲನಾ ಸಾಮರ್ಥ್ಯ ಮತ್ತು ಪ್ಲ್ಯಾಟ್‌ಫಾರ್ಮ್ ಸಹಿತ ನಿರ್ಮಿಸಲಾಗುವುದು ಮತ್ತು ಇವು ಚಂದ್ರನ ಮೇಲ್ಮೈಯ ಸುತ್ತ ಮಾನವರನ್ನು ಸಾಗಿಸಲು ಸೂಕ್ತವಾಗಿರುತ್ತದೆ . ಚಂದ್ರನಲ್ಲಿಗೆ ಮಾನವಸಹಿತ ಯೋಜನೆಗೂ ಮುನ್ನ ಚಂದ್ರನಲ್ಲಿಗೆ ಈ ಕಾರುಗಳನ್ನು ರವಾನಿಸಲಾಗುವುದು. ಅಲ್ಲಿ ಯಾವುದೇ ಸರಕಾರದ ನೇತೃತ್ವದ ಚಂದ್ರಯಾನ ಯೋಜನೆಯ ತಂಡ ಇದನ್ನು ಬಾಡಿಗೆಗೆ ಪಡೆಯಬಹುದು ಎಂದು ವರದಿ ಹೇಳಿದೆ.

ಸೌರಶಕ್ತಿಯಿಂದ ಕಾರ್ಯನಿರ್ವಹಿಸುವುದರಿಂದ ಇದರ ಬಳಕೆ ಸುಲಭವಾಗಿದೆ ಮತ್ತು 10 ವರ್ಷ ಬಾಳಿಕೆ ಬರುತ್ತದೆ ಎಂದು ಜನರಲ್ ಮೋಟರ್ಸ್ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News