110 ಗಂಟೆಯ ಕಾರ್ಯಾಚರಣೆ; ಕೊಳವೆಬಾವಿಗೆ ಬಿದ್ದ ಬಾಲಕನ ರಕ್ಷಣೆ

Update: 2022-06-15 02:27 GMT
ಸಾಂದರ್ಭಿಕ ಚಿತ್ರ

ರಾಂಚಿ: ಛತ್ತೀಸ್‍ಗಢದ ಪಿಹ್ರಿದ್ ಎಂಬ ಗ್ರಾಮದಲ್ಲಿ 80 ಅಡಿ ಆಳದ ಕೊಳವೆಬಾವಿಗೆ ಬಿದ್ದ 11 ವರ್ಷದ ಬಾಲಕ ರಾಹುಲ್ ಸಾಹು ಎಂಬಾತನನ್ನು 110 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಿಸಲಾಗಿದೆ ಎಂದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಪ್ರಕಟಿಸಿದ್ದಾರೆ.

ಕಳೆದ ಶುಕ್ರವಾರ ಮಲ್ಕರೋದ ಅಭಿವೃದ್ಧಿ ಬ್ಲಾಕ್‍ನ ಪಿಹ್ರಿದ್ ಗ್ರಾಮದ ತನ್ನ ಮನೆಯ ಹಿಂದೆ ಆಟವಾಡುತ್ತಿದ್ದ ಸಂದರ್ಭ ಸಾಹು ಆಕಸ್ಮಿಕವಾಗಿ ಕೊಳವೆಬಾವಿಗೆ ಬಿದ್ದಿದ್ದ. ಬಾಲಕನ ಉಸಿರಾಟಕ್ಕೆ ತಕ್ಷಣ ಪೈಪ್‍ಲೈನ್ ಅಳವಡಿಸಿ ಆಮ್ಲಜನಕ ಪೂರೈಕೆಗೆ ವ್ಯವಸ್ಥೆ ಮಾಡಲಾಗಿತ್ತು.

"ಪ್ರತಿಯೊಬ್ಬರ ಪ್ರಾರ್ಥನೆ ಮತ್ತು ಅವಿರತ ಶ್ರಮ, ರಕ್ಷಣಾ ತಂಡದ ಸಮರ್ಪಣಾ ಮನೋಭಾವದ ಸೇವೆಯಿಂದಾಗಿ ರಾಹುಲ್ ಸಾಹು ಎಂಬ ಬಾಲಕನನ್ನು ಸುರಕ್ಷಿತವಾಗಿ ಹೊರಕ್ಕೆ ತರಲಾಗಿದೆ. ಶೀಘ್ರವೇ ಆತ ಸಂಪೂರ್ಣ ಚೇತರಿಸಿಕೊಳ್ಳಲಿ ಎನ್ನುವುದು ನಮ್ಮ ಬಯಕೆ" ಎಂದು ಸಿಎಂ ಭೂಪೇಶ್ ಬಘೇಲ್ ಟ್ವೀಟ್ ಮಾಡಿದ್ದಾರೆ.

ಬಾಲಕ ಉಸಿರಾಡುತ್ತಿದ್ದಾನೆ. ಆದರೆ ಯಾವುದೇ ಚಲನೆ ಕಂಡುಬರುತ್ತಿಲ್ಲ ಎಂದು ಛತ್ತೀಸ್‍ಗಢ ಸರ್ಕಾರ ಈ ಮೊದಲು ಹೇಳಿಕೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News