ಜಾವೆಲಿನ್ ಎಸೆತದಲ್ಲಿ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ ನೀರಜ್ ಚೋಪ್ರಾ

Update: 2022-06-15 06:02 GMT
Photo:PTI

ಹೊಸದಿಲ್ಲಿ: ಭಾರತದ ಪ್ರಮುಖ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಫಿನ್‌ಲ್ಯಾಂಡ್‌ನಲ್ಲಿ ನಡೆಯುತ್ತಿರುವ ಪಾವೊ ನೂರ್ಮಿ ಗೇಮ್ಸ್‌ನಲ್ಲಿ 89.30 ಮೀಟರ್‌ ದೂರ ಜಾವೆಲಿನ್ ಎಸೆದು ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.

ಚೋಪ್ರಾ ಅವರ ಹಿಂದಿನ ರಾಷ್ಟ್ರೀಯ ದಾಖಲೆ 88.07 ಮೀ. ಆಗಿತ್ತು. ಈ ದಾಖಲೆಯನ್ನು  ಅವರು ಕಳೆದ ವರ್ಷ ಮಾರ್ಚ್‌ನಲ್ಲಿ ಪಟಿಯಾಲಾದಲ್ಲಿ ನಿರ್ಮಿಸಿದ್ದರು. ಚೋಪ್ರಾ  ಆಗಸ್ಟ್ 7, 2021 ರಂದು 87.58 ಮೀ.ದೂರಕ್ಕೆ ಜಾವೆಲಿನ್  ಎಸೆಯುವ ಮೂಲಕ ಟೋಕಿಯೊ ಒಲಿಂಪಿಕ್ಸ್ ನಲ್ಲಿ  ಚಿನ್ನವನ್ನು ಗೆದ್ದಿದ್ದರು.

 ನೀರಜ್ ಚೋಪ್ರಾ ಅವರು  ಒಲಿಂಪಿಕ್ಸ್ ನಲ್ಲಿ ಅಥ್ಲೆಟಿಕ್ಸ್‌ ವಿಭಾಗದಲ್ಲಿ ಭಾರತಕ್ಕೆ ಮೊದಲ ಬಾರಿ ಚಿನ್ನದ ಪದಕ ಗೆದ್ದುಕೊಟ್ಟಿದ್ದರು. ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ವಿಜೇತ ಎರಡನೇ ಅಥ್ಲೀಟ್ ಆಗಿದ್ದಾರೆ.

ಪಾವೊ ನೂರ್ಮಿ ಗೇಮ್ಸ್‌ನಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದರು. ಟೋಕಿಯೊ ಕ್ರೀಡಾಕೂಟದಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ನಂತರ ನೀರಜ್ ಅವರ ಮೊದಲ ಸ್ಪರ್ಧಾತ್ಮಕ ಕ್ರೀಡಾಕೂಟ ಇದಾಗಿದೆ. ಫಿನ್‌ಲ್ಯಾಂಡ್‌ನ ಒಲಿವರ್ ಹೆಲಾಂಡರ್ 89.83 ಮೀಟರ್‌ ದೂರ ಎಸೆದು ಚಿನ್ನದ ಪದಕ ಗೆದ್ದರು.

ಕ್ರೀಡಾ ಸಚಿವ ಠಾಕೂರ್ ಶ್ಲಾಘನೆ

ಟೋಕಿಯೊ ಒಲಿಂಪಿಕ್ಸ್ ನಲ್ಲಿ  ಚಿನ್ನದ ಪದಕ ವಿಜೇತ ನೀರಜ್  ಚೋಪ್ರಾ ಜಾವೆಲಿನ್ ಎಸೆತದಲ್ಲಿ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮುರಿದ ನಂತರ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್  ಅವರು ಚೋಪ್ರಾರನ್ನು ಶ್ಲಾಘಿಸಿದರು.

“ಗೋಲ್ಡನ್ ಗ್ರೇಟ್ ನೀರಜ್ ಚೋಪ್ರಾ ಮತ್ತೆ ಉತ್ತಮ ಸಾಧನೆ ಮಾಡಿದ್ದಾರೆ! ಪಾವೊ ನೂರ್ಮಿ ಗೇಮ್ಸ್‌ನಲ್ಲಿ ನೀರಜ್ ಚೋಪ್ರಾ 89.30 ಮೀಟರ್‌ ದೂರ ಜಾವೆಲಿನ್ ಎಸೆದು ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ! ನಾನು ಅದನ್ನು ನೋಡಿ ರೋಮಾಂಚನಗೊಂಡೆ, ನೀವು ಅವರ ಎಸೆತವನ್ನು ನೋಡಬೇಕು !" ಎಂದು ಠಾಕೂರ್  ಟ್ವೀಟಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News