ಹಳೆಯಂಗಡಿ ಸರಕಾರಿ ಪದವಿ ಕಾಲೇಜಿನಲ್ಲೂ ಹಿಜಾಬ್ ಗೆ ನಿರ್ಬಂಧ: ಶಿಕ್ಷಣ ವಂಚಿತ 19 ವಿದ್ಯಾರ್ಥಿನಿಯರು

Update: 2022-06-15 16:45 GMT

►ವಿದ್ಯಾರ್ಥಿನಿಯರು, ಪೋಷಕರ ಮನವೊಲಿಸಿದರೂ ಪ್ರಯೋಜನವಾಗಿಲ್ಲ: ಪ್ರಾಂಶುಪಾಲ ಸ್ಪಷ್ಟನೆ

ಮಂಗಳೂರು, ಜೂ.13: ತಾಲೂಕಿನ ಹಳೆಯಂಗಡಿಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲೂ ಹಿಜಾಬ್ ನಿರ್ಬಂಧ ಕಾರಣ 19 ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗಿರುವುದು ಬೆಳಕಿಗೆ ಬಂದಿದೆ.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿಚಾರವಾಗಿ ಗೊಂದಲ ಏರ್ಪಟ್ಟಿದ್ದರೂ ಹಳೆಯಂಗಡಿ ಪದವಿ ಕಾಲೇಜಿನಲ್ಲಿ ಯಾವುದೇ ಸಮಸ್ಯೆ ಉಂಟಾಗಿರಲಿಲ್ಲ. ಆದರೆ ಇತ್ತೀಚೆಗೆ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಎಂಬ ಕಾರಣ ಮುಂದಿಟ್ಟು ಹಿಜಾಬ್ ಧಾರಿ ವಿದ್ಯಾರ್ಥಿನಿಯರು ತರಗತಿಗೆ ಪ್ರವೇಶಿಸುವುದಕ್ಕೆ ಅವಕಾಶ ನಿರಾಕರಿಸಲಾಗಿದೆ. ಆ ಮೂಲಕ ಪ್ರಾಂಶುಪಾಲರು ಯಾರದೋ ಒತ್ತಡಕ್ಕೆ ಮಣಿದು ತಮ್ಮ ಶೈಕ್ಷಣಿಕ ಜೀವನಕ್ಕೆ ಕೊಳ್ಳಿ ಇಟ್ಟಿದ್ದಾರೆ ಎಂದು ಸಂತ್ರಸ್ತ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ನಮ್ಮ ಕಾಲೇಜಿನಲ್ಲಿ ಹಿಜಾಬ್ ವಿಚಾರವಾಗಿ ಯಾವುದೇ ಗೊಂದಲ ಉಂಟಾಗಿರಲಿಲ್ಲ. ಆದರೆ ಇತ್ತೀಚೆಗೆ ಪ್ರಾಂಶುಪಾಲರು ಹಿಜಾಬ್ ಧರಿಸಿ ಬರುವುದಾದರೆ ಕಾಲೇಜಿಗೆ ಬರಬೇಡಿ ಎಂದು ಹೇಳಿದ್ದಾರೆ. ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಪರೀಕ್ಷೆ ಬರೆಯಲೂ ಅವಕಾಶ ನಿರಾಕರಿಸಿದ್ದಾರೆ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ.

ಪ್ರಾಂಶುಪಾಲರು ಮತ್ತು ಕಾಲೇಜು ಆಡಳಿತ ಸಮಿತಿಯ ಕೆಲವರಿಂದಾಗಿ ಈ ಸಮಸ್ಯೆ ಸೃಷ್ಟಿಯಾಗಿದೆ. ಇದರಿಂದ 19 ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗುವಂತಾಗಿದೆ ಎಂದು ವಿದ್ಯಾರ್ಥಿನಿಯರ ಪೋಷಕರು ಆರೋಪಿಸಿದ್ದಾರೆ.

ಹಿಜಾಬ್ ಕಾರಣಕ್ಕೆ ತರಗತಿ ಪ್ರವೇಶ ನಿರಾಕರಿಸಲ್ಪಟ್ಟ 19 ವಿದ್ಯಾರ್ಥಿನಿಯರ ಪೈಕಿ ಕೆಲವರು ಬಳಿಕ ಕಾಲೇಜು ತೊರೆಯಲು ನಿರ್ಧರಿಸಿದ್ದಾರೆ. ಕೆಲವರು ವಿದ್ಯಾರ್ಥಿನಿಯರು ಟೈಲರಿಂಗ್, ಕಂಪ್ಯೂಟರ್ ಕಲಿಯಲು ತೆರಳುತ್ತಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ.

ಹಲವು ಬಾರಿ ಮನವೊಲಿಸಲು ಪ್ರಯತ್ನಿಸಲಾಗಿದೆ: ಪ್ರಾಂಶುಪಾಲ ಶ್ರೀಧರ್
ವಿದ್ಯಾರ್ಥಿಗಳ ಆರೋಪಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಶ್ರೀಧರ್, ಹಿಜಾಬ್ ವಿಚಾರವಾಗಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ಕರೆಸಿ ಹಲವು ಬಾರಿ ಮನವೊಲಿಸಲು ಪ್ರಯತ್ನಿಸಲಾಗಿದೆ. ವಿದ್ಯಾರ್ಥಿನಿಯರಿಗೆ ಕಾಲೇಜು ಆವರಣದಲ್ಲಿ ಬುರ್ಖಾ, ಹಿಜಾಬ್ ತೆಗೆದಿಟ್ಟು ತರಗತಿ ಪ್ರವೇಶಿಸಲು ಅನುಕೂಲವಾಗುವಂತೆ ಮೂರು ಕೊಠಡಿಗಳನ್ನು ಮೀಸಲಿಡಲಾಗಿದೆ. ಅಲ್ಲದೆ ಅವರ ಸುರಕ್ಷತೆಯ ದೃಷ್ಟಿಯಿಂದ ಓರ್ವ ಮಹಿಳಾ ಪ್ರಾಧ್ಯಾಪಕರನ್ನೂ ನೇಮಿಸಲಾಗಿದೆ ಎಂದು ಹೇಳಿದ್ದಾರೆ.

ಹಿಜಾಬ್ ಕಾರಣಕ್ಕೆ ತರಗತಿಗೆ ಗೈರು ಹಾಜರಾಗಿರುವ ಎಲ್ಲ ವಿದ್ಯಾರ್ಥಿಗಳಿಗೂ ಜೂನ್ 1ರಿಂದ ಕಾಲೇಜಿಗೆ ಬರುವಂತೆ ಸೂಚಿಸಲಾಗಿತ್ತು. ಹಾಜರಾತಿ ಕೊರತೆಯಿದ್ದರೂ ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೂ ಅವರು ಯಾರೂ ಬಂದಿಲ್ಲ ಎಂದು ತಿಳಿಸಿದ್ದಾರೆ.

'ಪರೀಕ್ಷೆ ಕಳೆದುಕೊಂಡ ವಿದ್ಯಾರ್ಥಿನಿಯರು'
ಹಿಜಾಬ್ ಕಾರಣಕ್ಕೆ ತರಗತಿ ಪ್ರವೇಶ ನಿರಾಕರಿಸಲ್ಪಟ್ಟ 19 ವಿದ್ಯಾರ್ಥಿನಿಯರು ಈಗಾಗಲೇ ಒಂದು ಪರೀಕ್ಷೆಯನ್ನು ಕಳೆದುಕೊಂಡಿದ್ದಾರೆ. ಪ್ರಥಮ ವರ್ಷದ ವಿದ್ಯಾರ್ಥಿಗಳು ಒಂದನೇ ಸೆಮಿಸ್ಟರ್, ಎರಡನೇ ವರ್ಷದ ವಿದ್ಯಾರ್ಥಿನಿಯರು 3ನೇ ಸೆಮಿಸ್ಟರ್ ಹಾಗೂ ಮೂರನೇ ವರ್ಷದ ವಿದ್ಯಾರ್ಥಿನಿಯರು 5ನೇ ಸೆಮಿಸ್ಟರ್ ಪರೀಕ್ಷೆಯನ್ನು ಕಳೆದುಕೊಂಡಿದ್ದಾರೆ. ಅಲ್ಲದೆ ಮುಂದಿನ ಪರೀಕ್ಷೆ ಈ ತಿಂಗಳ ಕೊನೆಯ ವಾರ ಅಥವಾ ಜುಲೈ ಪ್ರಥಮ ವಾರ ನಡೆಯುವ ಸಾಧ್ಯತೆಯಿದ್ದು, ಹಿಜಾಬ್ ಸಮಸ್ಯೆ ಬಗೆಹರಿಯದಿದ್ದಲ್ಲಿ ಅದನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.

ಅಭಿವೃದ್ಧಿ ಸಮಿತಿಗೆ ಕಾಲೇಜಿಗೆ ಸಂಬಂಧವೇ ಇಲ್ಲದ ವ್ಯಕ್ತಿ ಕಾರ್ಯಾಧ್ಯಕ್ಷ: ಆರೋಪ
ಸಾಮಾನ್ಯವಾಗಿ ಶಾಲಾ-ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಪೋಷಕರೇ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳಾಗಿರುವುದು ವಾಡಿಕೆ. ಇತ್ತೀಚಿನ ದಿನಗಳಲ್ಲಿ ಸರಕಾರಿ ಶಾಲೆ ಮತ್ತು ಕಾಲೇಜುಗಳಿಗೆ ಆಯಾ ಕ್ಷೇತ್ರದ ಶಾಸಕರು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಆದರೆ ಹಳೆಯಂಗಡಿ ಪದವಿ ಕಾಲೇಜಿನಲ್ಲಿ ಕಾಲೇಜಿಗೆ ಯಾವುದೇ ರೀತಿಯಲ್ಲೂ ಸಂಬಂಧವೇ ಇಲ್ಲದ ಬಿಜೆಪಿ ಮುಖಂಡನೋರ್ವರನ್ನು ಶಾಸಕನ ಉತ್ತರಾಧಿಕಾರಿಯಾಗಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ನೇಮಿಸಲಾಗಿದೆ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ಆರೋಪಿಸಿದ್ದು, ಈ ಕ್ರಮವನ್ನು ಖಂಡಿಸಿದ್ದಾರೆ.

ಹಿಜಾಬ್ ವಿಚಾರವಾಗಿ ಕಾಲೇಜಿನ ಪ್ರಾಂಶುಪಾಲರು ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದು ತಿಳಿದಿಲ್ಲ. ಆದರೂ ಸಂಬಂಧಪಟ್ಟ ವಿದ್ಯಾರ್ಥಿನಿಯರ ಪೋಷಕರು ಬಂದರೆ ಈ ಬಗ್ಗೆ ಚರ್ಚಿಸಲಾಗುವುದು. ಸಂಬಂಧಪಟ್ಟ ಸಮುದಾಯದೊಳಗಿನ ವಿದ್ಯಾವಂತರು ವಿದ್ಯಾರ್ಥಿನಿಯರಿಗೆ ಮತ್ತು ಪೋಷಕರು ತಿಳಿಹೇಳಬೇಕಿದೆ.
ಹಿಮಕರ, ಕಾರ್ಯಾಧ್ಯಕ್ಷ, ಹಳೆಯಂಗಡಿ ಪ್ರ.ದ. ಕಾಲೇಜು

ನಾವು ಹಲವು ಬಾರಿ ಕಾಲೇಜಿಗೆ ಭೇಟಿ ನೀಡಿ ಪ್ರಾಂಶುಪಾಲರೊಂದಿಗೆ ಮಾತುಕತೆ ನಡೆಸಿದ್ದೇವೆ. ಆದರೆ ಅವರು ಕೋರ್ಟ್ ಆದೇಶ ಎಂದು ನಮ್ಮ ಬೇಡಿಕೆಗಳನ್ನು ತಿರಸ್ಕರಿಸಿದ್ದಾರೆ. ಬರೀ ಹಿಜಾಬ್ ಕಾರಣ ಮುಂದಿಟ್ಟು ಮಕ್ಕಳನ್ನು ವಿದ್ಯಾಭ್ಯಾಸದಿಂದ ದೂರವಿಡುವುದು ಸರಿಯಾದ ಕ್ರಮವಲ್ಲ. ವಿದ್ಯಾರ್ಥಿನಿಯರ ಭವಿಷ್ಯದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ಕಾಲೇಜಿನ ಗಮನಕ್ಕೆ ತಂದು ಮತ್ತೊಂದು ಸುತ್ತಿನ ಮಾತುಕತೆಗೆ ಶ್ರಮಿಸಲಾಗುವುದು.  
ಶಾಹುಲ್ ಹಮೀದ್ ಕದಿಕೆ
ಅಧ್ಯಕ್ಷರು, ಹಳೆಯಂಗಡಿ ವಲಯ ಮುಸ್ಲಿಮ್ ಜಮಾಅತ್ ಗಳ ಒಕ್ಕೂಟ

ಶೈಕ್ಷಣಿಕ ವರ್ಷಾರಂಭದಲ್ಲೇ ಹಿಜಾಬ್ ಧರಿಸಿ ತರಗತಿಗೆ ಬರುವಂತಿಲ್ಲ ಎಂದು ಸೂಚಿಸಿದ್ದರೆ ಸರಿ. ಆದರೆ ಅರ್ಧದಲ್ಲಿ ಕಾಲೇಜು ಪ್ರವೇಶಕ್ಕೆ ನಿರ್ಬಂಧ ವಿಧಿಸುವುದು ಅಕ್ಷಮ್ಯ. ಈ ವಿಚಾರವಾಗಿ ಪ್ರಾಂಶುಪಾಲರು ಪೋಷಕರನ್ನು ಕರೆಸಿ ಚರ್ಚಿಸಿಯೇ ಇಲ್ಲ.  
ಅಹ್ಮದ್ ಬಾವಾ, ಸಂತ್ರಸ್ತ ವಿದ್ಯಾರ್ಥಿನಿಯ ತಂದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News