ರಾಹುಲ್ ಗಾಂಧಿಯ ಈ.ಡಿ. ವಿಚಾರಣೆ ಬಗ್ಗೆ ಮಾಧ್ಯಮಗಳಿಗೆ ತಪ್ಪು ಮಾಹಿತಿ: ಕೇಂದ್ರ ಸರಕಾರಕ್ಕೆ ಕಾಂಗ್ರೆಸ್ ಕಾನೂನು ನೋಟಿಸ್

Update: 2022-06-15 16:37 GMT

ಹೊಸದಿಲ್ಲಿ, ಜೂ. 15: ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಪ್ರಶ್ನೆಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ  ಹೇಗೆ ನಿರ್ವಹಿಸಿದ್ದಾರೆ ಎಂಬ ಬಗ್ಗೆ ತಪ್ಪು ವರದಿ ಮಾಡಲು ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕೇಂದ್ರ ಸರಕಾರಕ್ಕೆ ಕಾನೂನು ನೋಟಿಸು ರವಾನಿಸಿದೆ.

ಜಾರಿ ನಿರ್ದೇಶನಾಲಯದಿಂದ ರಾಹುಲ್ ಗಾಂಧಿ ಅವರ ವಿಚಾರಣೆ ನಿರಂತರ ಮೂರನೇ ದಿನಕ್ಕೆ ಕಾಲಿಟ್ಟಿರುವ ಸಂದರ್ಭ ಕಾಂಗ್ರೆಸ್ ಕೇಂದ್ರ ಸರಕಾರಕ್ಕೆ ಈ ನೋಟಿಸು ಕಳುಹಿಸಿದೆ.

ಇಂದು ಕಳುಹಿಸಲಾದ ಕಾನೂನು ನೋಟಿಸ್‌ನಲ್ಲಿ ಕಾಂಗ್ರೆಸ್ ತನ್ನ ಪ್ರತಿಪಾದನೆಯನ್ನು ಸಮರ್ಥಿಸಲು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾದ ಮೂರು ವರದಿಗಳನ್ನು ಉಲ್ಲೇಖಿಸಿದೆ. ಅನಾಮಿಕ ಮೂಲಗಳಿಂದ ತಿಳಿದು ಬಂದಿದೆ ಎಂದು ಈ ಚಾನಲ್‌ಗಳು ಪ್ರತಿಪಾದಿಸಿವೆ ಎಂದು ನೋಟಿಸಿನಲ್ಲಿ ಹೇಳಲಾಗಿದೆ. ವಿಚಾರಣೆ ಸಂದರ್ಭ ಹಣ ಅಕ್ರಮ ವರ್ಗಾವಣೆಯ ಆರೋಪಿಯಾಗಿರುವ ರಾಹುಲ್ ಗಾಂಧಿ ನುಣುಚಿಕೊಂಡರು ಹಾಗೂ ಅವರಿಗೆ ನ್ಯಾಯವಾದಿಗಳು ಹೇಳಿಕೊಟ್ಟಿರುವಂತೆ ಕಾಣುತ್ತದೆ ಎಂದು ಸುದ್ದಿ ವಾಹಿನಿಗಳು ಪ್ರಸಾರ ಮಾಡಿವೆ. ಉದ್ದೇಶಪೂರ್ವಕವಾಗಿ ಮಾಹಿತಿ ಸೋರಿಕೆ ಮಾಡುವುದನ್ನು ಕೇಂದ್ರ ಸರಕಾರ ನಿಲ್ಲಿಸಬೇಕು ಎಂದು ನೋಟಿಸಿನಲ್ಲಿ ಹೇಳಲಾಗಿದೆ.
ರಾಜಕೀಯ ದ್ವೇಷ ಸಾಧನೆಗೆ ಕೇಂದ್ರ ಸರಕಾರ ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ನೋಟಿಸು ಕಳುಹಿಸಿದೆ.

‘‘ತನಿಖೆ ಬಾಕಿ ಇರುವ ಪ್ರಕರಣಗಳಲ್ಲಿ ಮಾಧ್ಯಮಗಳಿಗೆ ಮಾಹಿತಿಯನ್ನು ಅಕಾಲಿಕ ಸಂದರ್ಭದಲ್ಲಿ ಬಹಿರಂಗ ಅಥವಾ ಸೋರಿಕೆ ಮಾಡುವುದು ಕಾನೂನಿನ ಪ್ರಭುತ್ವಕ್ಕೆ ವಿರುದ್ಧವಾದುದು ಎಂದು ಸುಪ್ರೀಂ ಕೋರ್ಟ್ ಹಲವು ಸಂದರ್ಭಗಳಲ್ಲಿ ಮರು ಉಚ್ಚರಿಸಿತ್ತು’’ ಎಂದು ನೋಟಿಸು ಹೇಳಿದೆ. 

‘‘ನಾವು ಹಿಂಜರಿಯದೆ ಹೋರಾಡಲಿದ್ದೇವೆ. ನಾವು ಭಯವಿಲ್ಲದೆ ಹೋರಾಡಲಿದ್ದೇವೆ’’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News