ಪಠ್ಯಪರಿಷ್ಕರಣೆ ನೆಪದಲ್ಲಿ ಗಣ್ಯರಿಗೆ ಅವಮಾನ: ಚಕ್ರತೀರ್ಥ ಬಂಧಿಸುವಂತೆ ಜೂ.18ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

Update: 2022-06-16 12:58 GMT
ರೋಹಿತ್ ಚಕ್ರತೀರ್ಥ 

ಬೆಂಗಳೂರು, ಜೂ.16: ಪಠ್ಯಪರಿಷ್ಕರಣೆಯ ಹೆಸರಿನಲ್ಲಿ ಶಿಕ್ಷಣವನ್ನು ಕೇಸರಿಕರಣ ಮಾಡಲಾಗುತ್ತಿದೆ. ಅಲ್ಲದೆ, ಕುವೆಂಪು ಸೇರಿದಂತೆ ಗಣ್ಯರಿಗೆ ಅವಮಾನ ಮಾಡಲಾಗಿದೆ. ಇದಕ್ಕೆ ಕಾರಣರಾದ ಪಠ್ಯಪರಿಷ್ಕರಣಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರನ್ನು ಬಂಧಿಸುವಂತೆ ಹಾಗೂ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ರಾಜೀನಾಮೆಗೆ ಆಗ್ರಹಿಸಿ ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿಯು ಜೂ.18ರಂದು ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ.

ಗುರುವಾರ ಪ್ರೆಸ್‍ಕ್ಲಬ್‍ನಲ್ಲಿ ಸಮಿತಿಯ ಅಧ್ಯಕ್ಷ ಜಿ.ಬಿ. ಪಾಟೀಲ್ ಮಾತನಾಡಿ, ಕುವೆಂಪು, ಬುದ್ಧ, ಮಹಾವೀರ, ಬಸವಣ್ಣ, ವಾಲ್ಮೀಕಿ, ಸಾವಿತ್ರಿ ಬಾಯಿ ಫುಲೆ, ಪೆರಿಯಾರ್ ರಾಮಸ್ವಾಮಿ, ನಾರಾಯಣ ಗುರು, ಸಂಗೊಳ್ಳಿ ರಾಯಣ್ಣ, ಕನಕದಾಸ, ಸುರಪುರ ನಾಯಕರು, ಅಕ್ಕಮಹಾದೇವಿ, ಟಿಪ್ಪು ಸುಲ್ತಾನ್, ಅಂಬೇಡ್ಕರ್, ಸಿದ್ಧಗಂಗಾ ಸ್ವಾಮಿ, ಬಾಲಗಂಗಾಧರ ಸ್ವಾಮೀಜಿ ಹೀಗೆ ಅನೇಕ ದಾರ್ಶನಿಕರನ್ನು ಪಠ್ಯಪರಿಷ್ಕರಣೆಯ ಸಮಿತಿಯು ಅವಮಾನಿಸಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸಾಹಿತಿ ಎಲ್.ಎನ್.ಮುಕುಂದರಾಜ್ ಮಾತನಾಡಿ, ಪಠ್ಯಪರಿಷ್ಕರಣೆಯ ಹೆಸರಿನಲ್ಲಿ ಪ್ರಾದೇಶಿಕ ಅಸ್ಮಿತೆಯನ್ನು ಕೆಣಕಿದ್ದಾರೆ. ಶೋಷಿತ ಜನಾಂಗದವರು ಒಟ್ಟು ಸೇರಿ, ಸರಕಾರಕ್ಕೆ ನಮ್ಮ ಶಕ್ತಿ ಬಗ್ಗೆ ತೋರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಮಿತಿಯ ಸಂಘಟನಾ ಕಾರ್ಯದರ್ಶಿ ಪ್ರಭಾ ಎನ್. ಬೆಳಮಂಗಲ ಮಾತನಾಡಿ, ನಾಡಗೀತೆಯನ್ನು ತಿರುಚಿ, ನಾಡಿಗೆ ಮತ್ತು ಕುವೆಂಪು ಅವರಿಗೆ ಅವಮಾನ ಮಾಡಿದರೂ, ಸರಕಾರ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ನಾಡಿಗೆ ಮಾಡಿದ ದೊಡ್ಡ ದ್ರೋಹವಾಗಿದೆ. ಮಕ್ಕಳ ಮನಸ್ಸಿನಲ್ಲಿ ವಿಷಬೀಜವನ್ನು ಬಿತ್ತುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಆಡಿಟರ್ ನಾಗರಾಜ್, ಕುಮಾರ್, ಮಂಜುನಾಥ್ ಅದ್ದೆ ಮತ್ತಿತರರು ಉಪಸ್ಥಿತರಿದ್ದರು. 

ಜೂ.18ರ ಬೆಳಗ್ಗೆ 10ಕ್ಕೆ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‍ವರೆಗೆ ಮೆರವಣಿಗೆ ಆರಂಭವಾಗಿ, ಫ್ರೀಡಂ ಪಾರ್ಕ್‍ನಲ್ಲಿ ಶಾಂತಿಯುತ ಸಮಾವೇಶವನ್ನು ನಡೆಸಲಾಗುತ್ತದೆ. ಈ ಪ್ರತಿಭಟನೆಗೆ ರಾಜ್ಯದಲ್ಲಿನ ಸಂಘ-ಸಂಸ್ಥೆಗಳು, ಕಲಾವಿದರು, ಹೋರಾಟಗಾರರು, ಸಂಶೋಧಕರು, ಕೃಷಿಕರು, ಕಾರ್ಮಿಕರು, ವಿದ್ಯಾರ್ಥಿಗಳು, ಶಿಕ್ಷಣತಜ್ಞರು ಒಳಗೊಂಡಂತೆ ಎಲ್ಲಾ ಧರ್ಮಗಳ ಮುಖಂಡರು, ಮಠಾಧೀಶರು, ಎಎಪಿ, ಜೆಡಿಎಸ್ ಕಾಂಗ್ರೆಸ್, ಬಿಜೆಪಿಯಲ್ಲಿರುವ ವಿದ್ಯಾವಂತ ಹಿರಿಯ ನಾಗರಿಕರು ಸೇರಿದಂತೆ ರಾಜಕೀಯ ಮುಖಂಡರು ಬೆಂಬಲ ನೀಡಿದ್ದಾರೆ. 28 ಕ್ಷೇತ್ರಗಳ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಸಮಿತಿ ತಿಳಿಸಿದೆ. 

ದಂಗೆಗೆ ನಾಂದಿ

ಸೋಷಿಯಲ್ ಮೀಡಿಯಾಯಲ್ಲಿ ಟ್ವೀಟ್ ಮಾಡಿಕೊಂಡಿದ್ದ ವ್ಯಕ್ತಿಯನ್ನು ತಂದು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷನನ್ನಾಗಿ ಮಾಡಲಾಗಿದೆ. ಪರಿಣಾಮವಾಗಿ ಇಡೀ ರಾಜ್ಯಾದ್ಯಂತ ಪಠ್ಯಪುಸ್ತಕಗಳ ವಿಚಾರದಲ್ಲಿ ತುಂಬಾ ಗೊಂದಲ ಆಗುತ್ತಿದೆ. ಮಕ್ಕಳಲ್ಲಿ ವೈಚಾರಿಕತೆಯ ಬಗ್ಗೆ ತಿಳಿಸುವ ಬದಲು, ರಾಜಕೀಯ ಪಕ್ಷಗಳ ಬಗ್ಗೆ ತುಂಬುತ್ತಿದ್ದಾರೆ. ಇದಕ್ಕೆಲ್ಲಾ ಸರಕಾರವು ನೇರ ಹೊಣೆಯಾಗಿದ್ದು, ಶಿಕ್ಷಣ ಮಂತ್ರಿ ಸೇರಿ ಮುಖ್ಯಮಂತ್ರಿ ಅವರಿಗೆ ಕನಿಷ್ಠ ಜ್ಞಾನ ಇಲ್ಲದಂತೆ ವರ್ತಿಸುತ್ತಿದ್ದಾರೆ. ಕಾನೂನಾತ್ಮಕವಾಗಿ ಪರಿಷ್ಕರಣೆ ಮಾಡಬೇಕಾಗಿದ್ದನ್ನು, ಬೇಜವಾಬ್ದಾರಿಯಿಂದ ತುರುಕುತ್ತಿದ್ದಾರೆ. ಇದು ಭವಿಷ್ಯದ ಬೃಹತ್ ಮಟ್ಟದ ದಂಗೆಗೆ ನಾಂದಿಯಾಗುತ್ತದೆ 

-ಮಾವಳ್ಳಿ ಶಂಕರ್ ದಸಂಸ(ಭೀಮವಾದ)ದ ರಾಜ್ಯ ಸಂಚಾಲಕರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News