ವಿಧಾನಸಭೆಯಿಂದ ಪರಿಷತ್ತಿಗೆ ಆಯ್ಕೆಯಾದ ನೂತನ 7 ಮಂದಿ ಸದಸ್ಯರಿಂದ ಪ್ರಮಾಣ ವಚನ ಸ್ವೀಕಾರ
ಬೆಂಗಳೂರು, ಜೂ.16: ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಆಯ್ಕೆಯಾದ ಏಳು ಮಂದಿ ನೂತನ ಶಾಸಕರು ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಶಾಸಕರಾದ ಕೆ.ಅಬ್ದುಲ್ ಜಬ್ಬಾರ್ ಅವರು ಅಲ್ಲಾಹ್‍ನ ಹೆಸರಿನಲ್ಲಿ, ಕೇಶವ ಪ್ರಸಾದ್ ಎಸ್, ಎಂ.ನಾಗರಾಜು, ಲಕ್ಷ್ಮಣ ಸವದಿ ಅವರು ಭಗವಂತನ ಹೆಸರಿನಲ್ಲಿ, ಟಿ.ನಾರಾಯಣ ಸ್ವಾಮಿ ಅವರು ಬಾಬಾ ಸಾಹೇಬ್ ಅಂಬೇಡ್ಕ್ಕರ್ ಹೆಸರಿನಲ್ಲಿ, ಟಿ.ಎ.ಶರವಣ ಅವರು ಶಿರಡಿ ಸಾಯಿಬಾಬಾ ಹಾಗೂ ವೆಂಕಟೇಶ್ವರ ಸ್ವಾಮಿ ಹೆಸರಿನಲ್ಲಿ, ಹೇಮಲತಾ ನಾಯಕ್ ಅವರು ವಾಲ್ಮೀಕಿ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸಭಾಪತಿ ರಘುನಾಥ್‍ರಾವ್ ಮಲ್ಕಾಪುರೆ, ಉಪ ಸಭಾಧ್ಯಕ್ಷ ಚಂದ್ರಶೇಖರ ಮಾಮನಿ, ಕಂದಾಯ ಸಚಿವ ಆರ್.ಅಶೋಕ್, ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ತಿನ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮಿ, ಶಾಸಕರಾದ ಝಮೀರ್ ಅಹ್ಮದ್ ಖಾನ್, ಎನ್.ಎ.ಹಾರೀಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.