ಯುದ್ಧದಿಂದ ಆಹಾರದ ಬಿಕ್ಕಟ್ಟು ಉಲ್ಬಣ, 100 ಮಿಲಿಯನ್ ಜನತೆ ಸ್ಥಳಾಂತರ: ವಿಶ್ವಸಂಸ್ಥೆ ವರದಿ

Update: 2022-06-16 17:22 GMT
PHOTO CREDIT: Shutterstock

ವಿಶ್ವಸಂಸ್ಥೆ, ಜೂ.16: ಉಕ್ರೇನ್ ಮೇಲಿನ ರಶ್ಯದ ಆಕ್ರಮಣವು ಇದೇ ಮೊದಲ ಬಾರಿಗೆ ಜಾಗತಿಕ ಸ್ಥಳಾಂತರ ಸಂಖ್ಯೆ 100 ಮಿಲಿಯದ ಗಡಿ ದಾಟಲು ಕಾರಣವಾಗಿದೆ. ಯುದ್ಧದಿಂದ ಉಂಟಾಗಿರುವ ಆಹಾರದ ಬಿಕ್ಕಟ್ಟು ಸ್ಥಳಾಂತರ ಪ್ರಕರಣ ಇನ್ನಷ್ಟು ಹೆಚ್ಚಲು ಪ್ರಚೋದನೆ ನೀಡಲಿದೆ ಎಂದು ವಿಶ್ವಸಂಸ್ಥೆ ಗುರುವಾರ ಎಚ್ಚರಿಸಿದೆ.

ವಿಶ್ವದಾದ್ಯಂತ ಯುದ್ಧ, ಕಿರುಕುಳ, ಹಿಂಸಾಚಾರ ಹಾಗೂ ಇತರ ಬಿಕ್ಕಟ್ಟಿನ ಪರಿಣಾಮ 2021ರ ಅಂತ್ಯದ ವೇಳೆ ಸುಮಾರು 89.3 ಮಿಲಿಯನ್ ಮಂದಿ ಸ್ಥಳಾಂತರಗೊಂಡಿದ್ದಾರೆ . ಈ ವರ್ಷದ ಫೆಬ್ರವರಿ 24ರಂದು ಉಕ್ರೇನ್ ಮೇಲಿನ ರಶ್ಯ ಆಕ್ರಮಣ ಆರಂಭವಾದ ಬಳಿಕ ಸ್ಥಳಾಂತರಗೊಂಡವರ ಸಂಖ್ಯೆಗೆ ಇನ್ನೂ ಸುಮಾರು 14 ಮಿಲಿಯನ್ ಜನ ಸೇರ್ಪಡೆಗೊಂಡಿದ್ದಾರೆ. ಯುದ್ಧದ ಹಿನ್ನೆಲೆಯಲ್ಲಿ ಆಹಾರ ವಸ್ತುಗಳ ರಫ್ತಿಗೆ ತಡೆ, ಕೃಷಿ ಚಟುವಟಿಕೆಗೆ ಆಗಿರುವ ತೊಂದರೆಯಿಂದ ಆಹಾರ ವಸ್ತುಗಳ ದರ ಗಗನಕ್ಕೇರಿದ್ದು ಇದರಿಂದ ಸ್ಥಳಾಂತರಗೊಳ್ಳುವವರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ. ಸಂಘರ್ಷದಿಂದಾಗಿ ಇನ್ನೂ ಕೆಲವು ಮಿಲಿಯನ್ ಜನರು ತಮ್ಮ ದೇಶದೊಳಗೇ ಸ್ಥಳಾಂತರಗೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂದು ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಹೈಕಮಿಷನ್ (ಯುಎನ್ಎಚ್ಸಿಆರ್)ನ ವಾರ್ಷಿಕ ವರದಿ ಹೇಳಿದೆ.

ಈ ಅಂಕಿಅಂಶ ಆಘಾತಕಾರಿಯಾಗಿದ್ದು , ಯುದ್ಧ, ಮಾನವ ಹಕ್ಕುಗಳು, ಹವಾಮಾನ ಸಮಸ್ಯೆಗೂ ಮಿಕ್ಕಿ ಆಹಾರದ ಬಿಕ್ಕಟ್ಟಿನ ಸಮಸ್ಯೆ ಎದುರಾಗಿದೆ. ಕಳೆದ ದಶಕದ ಪ್ರತೀ ವರ್ಷವೂ ಈ ಪ್ರಮಾಣ ಹೆಚ್ಚುತ್ತಲೇ ಇದೆ . ಈ ಸಮಸ್ಯೆಗೆ ಶೀಘ್ರ ಪರಿಹಾರ ರೂಪಿಸದಿದ್ದರೆ ವಿನಾಶಕಾರಿಯಾಗಲಿದೆ. ಈ ಮಾನವ ದುರಂತವನ್ನು, ಘರ್ಷಣೆಗಳನ್ನು ಪರಿಹರಿಸಲು ಮತ್ತು ಶಾಶ್ವತ ಪರಿಹಾರಗಳನ್ನು ಕಂಡುಹಿಡಿಯಲು ಅಂತರಾಷ್ಟ್ರೀಯ ಸಮುದಾಯ ಒಗ್ಗೂಡಬೇಕಿದೆ. ಇಲ್ಲದಿದ್ದರೆ ಈ ಭಯಾನಕ ಪ್ರವೃತ್ತಿ ಮುಂದುವರಿಯಲಿದೆ ಎಂದು ಯುಎನ್ಎಚ್ಸಿಆರ್ ಹೈಕವಿುಷನರ್ ಫಿಲಿಪೊ ಗ್ರಾಂಡಿ ಹೇಳಿದ್ದಾರೆ.
ಆಫ್ರಿಕಾದ ಸಹೇಲ್ ಪ್ರದೇಶದಲ್ಲಿ ಬೆಲೆಏರಿಕೆಯ ಬಿಸಿ ಹಾಗೂ ಹಿಂಸಾತ್ಮಕ ದಂಗೆಗಳ ಆಘಾತದಿಂದ ಈಗ ಇನ್ನಷ್ಟು ಜನತೆ ಪಲಾಯನ ಮಾಡುತ್ತಿದ್ದಾರೆ. ಜಾಗತಿಕವಾಗಿ ಸ್ಥಳಾಂತರಗೊಂಡವರ ಸಂಖ್ಯೆ, ಹಲವರು ತಮ್ಮ ದೇಶದೊಳಗೇ ಸ್ಥಳಾಂತರಗೊಂಡಿದ್ದಾರೆ, ಕಳೆದ 10 ವರ್ಷದಲ್ಲಿ ದುಪ್ಪಟ್ಟಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ. 2021ರ ಅಂತ್ಯದಲ್ಲಿ ಸುಮಾರು 27.1 ಮಿಲಿಯನ್ ಜನತೆ ನಿರಾಶ್ರಿತರಂತೆ ಬದುಕುತ್ತಿದ್ದು ಇದು ದಾಖಲೆಯಾಗಿದೆ. ಆಶ್ರಯ ಬಯಸುವವರ ಸಂಖ್ಯೆಯಲ್ಲಿ 11% ಏರಿಕೆಯಾಗಿದ್ದು 4.6 ಮಿಲಿಯನ್ಗೆ ತಲುಪಿದೆ. ಸಂಘರ್ಷದ ಕಾರಣ ದೇಶದೊಳಗೇ ಸ್ಥಳಾಂತರಗೊಂಡವರ ಪ್ರಮಾಣ ಸತತ 15ನೇ ವರ್ಷವೂ ಏರಿಕೆಯಾಗಿದ್ದು 53.2 ಮಿಲಿಯನ್‌ ಗೆ ತಲುಪಿದೆ ಎಂದು ವರದಿ ಹೇಳಿದೆ.

ಉಕ್ರೇನ್ ಸಮಸ್ಯೆಗೆ ಹೆಚ್ಚಿನ ಆದ್ಯತೆ ಸರಿಯಲ್ಲ: ಗ್ರಾಂಡಿ
ರಶ್ಯದ ಆಕ್ರಮಣದ ಬಳಿಕ ಉಕ್ರೇನ್ನಿಂದ ಪಲಾಯನ ಮಾಡುವವರಿಗೆ ಹರಿದು ಬರುತ್ತಿರುವ ನೆರವು ಸ್ವಾಗತಾರ್ಹ. ಆದರೆ ಇದೇ ಧೋರಣೆಯನ್ನು ಸಿರಿಯಾ, ಅಫ್ಘಾನ್ ಮುಂತಾದ ದೇಶಗಳಿಂದ ಪಲಾಯನ ಮಾಡುವ ಜನರ ಬಗ್ಗೆಯೂ ತಳೆಯಬೇಕಾಗಿದೆ ಎಂದು ಫಿಲಿಪೊ ಗ್ರಾಂಡಿ ಹೇಳಿದ್ದಾರೆ.
ಉಕ್ರೇನ್ನ ಸಮಸ್ಯೆಯ ಎದುರು ಬೇರೆಲ್ಲಾ ಸಮಸ್ಯೆಗಳು ನಗಣ್ಯವಾಗಬಾರದು. ಇಥಿಯೋಪಿಯಾದ ಸಂಘರ್ಷ, ಬರಗಾಲದ ಸಮಸ್ಯೆಯ ಬಗ್ಗೆಯೂ ಅಷ್ಟೇ ಗಮನ ನೀಡಬೇಕಾಗಿದೆ. ನೆರವಿನ ಸಿಂಹಪಾಲನ್ನು ಉಕ್ರೇನ್ಗೆ ನೀಡಲಾಗುತ್ತಿದ್ದು ಇತರ ದೇಶಗಳ ಸ್ಥಳಾಂತರಗೊಂಡ ಪ್ರಜೆಗಳ ೆರವಿನ ನಿಧಿಗೆ ಹಣದ ಕೊರತೆಯಿದೆ.
ವಲಸಿಗರ ಬಿಕ್ಕಟ್ಟಿನ ಬಗ್ಗೆ ಯುರೋಪಿಯನ್ ಯೂನಿಯನ್ನ ಪ್ರತಿಕ್ರಿಯೆ ಅಸಮಾನವಾಗಿದೆ. ಉಕ್ರೇನ್ ವಲಸಿಗರಿಗೆ ಸ್ವಾಗತ, ಮೆಡಿಟರೇನಿಯನ್ನ ಅಪಾಯಕಾರಿ ಮಾರ್ಗದಲ್ಲಿ ಸಣ್ಣ ದೋಣಿಗಳ ಮೂಲಕ ಬರುವ ವಲಸಿಗರ ವಿರುದ್ಧ ದಂಡ ಪ್ರಯೋಗದ ಧೋರಣೆ ಸರಿಯಲ್ಲ ಎಂದವರು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News