×
Ad

ಬಳ್ಕುಂಜೆ ಕೈಗಾರಿಕಾ ವಲಯ ಸ್ಥಾಪನೆಗೆ ಗ್ರಾಮಸ್ಥರ ವಿರೋಧವಿದೆ : ಹೋರಾಟ ಸಮಿತಿ

Update: 2022-06-17 21:51 IST

ಮಂಗಳೂರು: ಸರಕಾರ ಸ್ಥಾಪಿಸಲು ಉದ್ದೇಶಿಸಿರುವ ಬಳ್ಕುಂಜೆ ಕೈಗಾರಿಕಾ ವಲಯ ಸ್ಥಾಪನೆಗೆ ಬಳ್ಕುಂಜೆ, ಉಳೆಪಾಡಿ, ಕೊಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರ ವಿರೋಧವಿದ್ದು, ಕೆಲವು ಸ್ಥಾಪಿತ ಹಿತಾಸಕ್ತಿಗಳು ಮಾಧ್ಯಮಗಳ ಮೂಲಕ ಶೇ. 80 ರಷ್ಟು ಗ್ರಾಮಸ್ಥರು ಕೈಗಾರಿಕೆಗೆ ಭೂಮಿ ನೀಡಲು ಸಿದ್ಧರಿದ್ದಾರೆ ಎಂದು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಬಳಕುಂಜೆ ಹೋರಾಟ ಸಮಿತಿ ಸ್ಪಷ್ಟ ಪಡಿಸಿದೆ.

ಬಳ್ಕುಂಜೆ ಸಂತ ಜೂದರ ಚರ್ಚಿನ ಸಭಾಭವನದಲ್ಲಿ ಹೋರಾಟ ಸಮಿತಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಕೆಲವು ಸ್ಥಾಪಿತ ಹಿತಾಸಕ್ತಿಗಳು ಮಾಧ್ಯಮಗಳ ಮೂಲಕ ಶೇಕಡ ಎಂಬತ್ತರಷ್ಟು ಜನ ಭೂಮಿ ನೀಡಲು ಸಿದ್ಧ ಎಂದು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಅವರ ಪ್ರಕಾರ ನೂರು ಎಕರೆ ಮಾತ್ರ ಜಮೀನು ನೀಡುವವರಿದ್ದರೆ ಆದರೆ ಇದು 80 ಶೇಕಡ ಜನರ ಅಭಿಪ್ರಾಯ ಎಂದು ಹೇಳುವುದು ಜನರ ಮಧ್ಯೆ ಗೊಂದಲವನ್ನು ಸೃಷ್ಟಿಸುವ ತಂತ್ರಗಾರಿಕೆ ಎಂದು ಆರೋಪಿಸಿದ್ದಾರೆ.

ವಿರೋಧದ ನಡುವೆಯೂ ಸರಕಾರ ಕೆ ಎಡಿಬಿ ಮೂಲಕ ವಿಶೇಷ ಅಧಿಕಾರಿಯವರನ್ನು ನೇಮಿಸಿ ಉದ್ದೇಶಿತ ಪ್ರದೇಶದ ಜನರನ್ನು ಒಕ್ಕಲೆಬ್ಬಿಸುವ ಕಾರ್ಯಕ್ಕೆ ಮುಂದಾಗಿದ್ದು ಸದ್ಯ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ.
ಸರಕಾರ ಉದ್ದೇಶಿಸಿರುವ ಕೈಗಾರಿಕಾ ವಲಯ ಸ್ಥಾಪನೆಯಾದರೆ ಸ್ಥಳೀಯವಾಗಿ 8 ಗ್ರಾಮ ಪಂಚಾಯತಿಗಳಿಗೆ ಕುಡಿಯುವ ನೀರು ಒದಗಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಂಪೂರ್ಣ ವ್ಯರ್ಥವಾಗಲಿದೆ. ಇದರಿಂದಾಗಿ ಬಳ್ಕುಂಜೆ, ಐಕಳ, ಕಿನ್ನಿಗೋಳಿ, ಕಟೀಲು, ಮೆನ್ನಬೆಟ್ಟು, ಕಿಲ್ಪಾಡಿ, ಹಳೆಯಂಗಡಿ ಮತ್ತು ಪಡುಪಣಂಬೂರು ಗ್ರಾಮಪಂಚಾಯತ್ ವ್ಯಾಪ್ತಿಯ ಜನರಿಗೆ ಜೀವ ಜಲ ಒದಗಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನಾಶವಾಗಲಿದೆ ಇದರೊಂದಿಗೆ ಈ ಗ್ರಾಮಗಳ ಗ್ರಾಮಸ್ಥರು ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ಎದುರಾಗಲಿದೆ‌  ಎಂದು ಸಮಿತಿ ಆತಂಕ ವ್ಯಕ್ತಪಡಿಸಿತು.

ಈ ಭಾಗದಲ್ಲಿ ಯಾವ ಕೈಗಾರಿಕೆ ಬರಲಿದೆ ಎಂದು ಕೆಐಎಡಿಬಿ ಅಧಿಕಾರಿಗಳಲ್ಲಿ ವಿಚಾರಿಸಿದರೆ ಅದು ಜಿಲ್ಲಾಧಿಕಾರಿಯವರ ನಿರ್ಣಯಕ್ಕೆ ಬಿಟ್ಟದ್ದು ಎಂದಿದ್ದಾರೆ. ಆದರೆ, ಜಿಲ್ಲಾಧಿಕಾರಿ ಬಳಿ ವಿಚಾರಿಸಿದರೆ, ಆ ನಿರ್ಧಾರ ಕೆಐಎಡಿಬಿ ಅಧಿಕಾರಿಗಳಿಗೆ ಬಿಟ್ಟದ್ದು ಎಂದು ಹೇಳಿಕೊಂಡು ಅಧಿಕಾರಿಗಳು ನಮ್ಮನ್ನು ಕತ್ತಲಲ್ಲಿ ಇಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಭೂಮಿ ನೀಡಲು ಸಿದ್ಧರೆಂದು ಹೇಳಿಕೊಳ್ಳುವವರು ಊರಿನಲ್ಲಿ ನಿಂತು ಕೃಷಿ ಮಾಡುವವರಾ? ಅಥವಾ ಕೇವಲ ಉದ್ಯೋಗಕ್ಕಾಗಿ ತಮ್ಮ ಭೂಮಿಯನ್ನು ಮಾರಾಟ ಮಾಡುವವರಾ ? ಎಂದು ಸ್ಪಷ್ಟಪಡಿಸುವಂತೆ ಬಳ್ಕುಂಜೆ ಹೋರಾಟ ಸಮಿತಿ ಪ್ರಶ್ನೆ ಮಾಡಿದೆ.

ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ನಿವೇಶನಗಳನ್ನು ನೀಡುವುದಾಗಿ ಹೇಳಿಕೆ ನೀಡುವ ಭರದಲ್ಲಿ ಸರಕಾರ ಕೈಗಾರಿಕೆಗೆ ಉದ್ದೇಶಿಸಿರುವ ಗ್ರಾಮಗಳನ್ನು ಕುಗ್ರಾಮ ಎಂದು ಬಿಂಬಿಸಿದ್ದಾರೆ. ಆದರೆ ನಮ್ಮದು ಎಲ್ಲಾ ರೀತಿಯ ಆಧುನಿಕ ಸೌಕರ್ಯಗಳುಳ್ಳ ಅಭಿವೃದ್ಧಿ ಹೊಂದಿದ ಮಾದರಿ ಗ್ರಾಮ ಎಂದು ಹೋರಾಟ ಸಮಿತಿ ಸ್ಪಷ್ಟಪಡಿಸಿತು.
 
ಯಾವುದೇ ಕಾರಣಕ್ಕೂ ಸರಕಾರ ಸ್ಥಾಪಿಸಲು ಉದ್ದೇಶಿಸಿರುವ ಕೈಗಾರಿಕಾ ವಲಯ ಸ್ಥಾಪನೆಗೆ ಸಮೃದ್ಧವಾ ಗಿರುವ ನಮ್ಮ ಜಮೀನುಗಳನ್ನು ಬಿಟ್ಟುಕೊಡುವುದಿಲ್ಲ ಎಂದು ಬಳ್ಕುಂಜೆ ಹೋರಾಟ ಸಮಿತಿ ಪುನರುಚ್ಚರಿಸಿದ್ದು, ಮುಂದಿನ ದಿನಗಳಲ್ಲಿ  ಉಗ್ರ ಪ್ರತಿಭಟನೆಗೆ ಸಿದ್ಧತೆ ನಡೆಸುವುದಾಗಿ ಸರಕಾರಕ್ಕೆ ಎಚ್ಚರಿಕೆ ನೀಡಿತು. 

ಸ್ಥಳೀಯ ಕೃಷಿಕ ವಸಂತ ಸುವರ್ಣ, ನಿರ್ಮಲ ರೊಡ್ರಿಗಸ್  ಮಾತನಾಡಿ ವಿನಾಕಾರಣ ಕೆಐಎಡಿಬಿ ಅಧಿಕಾರಿಗಳು ನೀಡಿದ ನೋಟಿಸ್ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಹೋದಾಗ ಅಮಿಷ ಒಡ್ಡಿ , ಬೆದರಿಕೆ ಹಾಗೂಕಿರುಕುಳ ನೀಡುತ್ತಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

ಸುದ್ದಿಗೋಷ್ಟಿಯಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಡೇನ್ನಿಸ್ ಡಿಸೋಜ,ಐಕಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಜೇಶ್ ಶೆಟ್ಟಿ, ಮಾಜಿ ಅಧ್ಯಕ್ಷ ದಿವಾಕರ ಶೆಟ್ಟಿ, ಬಳ್ಕುಂಜೆ ಗ್ರಾಪಂ ಅಧ್ಯಕ್ಷೆ ಮಮತಾ ಪೂಂಜ, ಉಪಾಧ್ಯಕ್ಷ ಆನಂದ ಕೊಲ್ಲೂರು, ಸದಸ್ಯರಾದ ಮರಿನಾ ಡಿಸೋಜ, ಕಾಂತಾಬಾರೆ ಬೂದಾಬಾರೆ ಜನ್ಮಕ್ಷೇತ್ರದ ಗಂಗಾಧರ ಪೂಜಾರಿ, ಮಸೀದಿಯ ಸಂಶುದ್ಧಿನ್ ಸೇರಿದಂತೆ ಐವತ್ತಕ್ಕೂ ಹೆಚ್ಚು ಮಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News