ಕ್ಷಿಪಣಿ ಮಾಹಿತಿಗಾಗಿ ಪಾಕ್ ಏಜೆಂಟ್‍ನಿಂದ ಹನಿಟ್ರ್ಯಾಪ್; ಎಂಜಿನಿಯರ್ ಮಲ್ಲಿಕಾರ್ಜುನ ರೆಡ್ಡಿ ಬಂಧನ

Update: 2022-06-18 03:18 GMT

ಹೈದರಾಬಾದ್: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ (ಡಿಆರ್‍ಡಿಎಲ್)ನ ಎಂಜಿನಿಯರ್ ಒಬ್ಬರನ್ನು ಶಂಕಿತ ಐಎಸ್‍ಐ ಕಾರ್ಯಕರ್ತೆ ಕ್ಷಿಪಣಿ ಮಾಹಿತಿಗಾಗಿ ಹನಿಟ್ರ್ಯಾಪ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಹನಿಟ್ರ್ಯಾಪ್‍ಗೆ ಒಳಗಾದ ಆರೋಪಿ ಮಲ್ಲಿಕಾರ್ಜುನ ರೆಡ್ಡಿ (29) ಎಂಬಾತನನ್ನು ಮೀರ್‍ಪೇಟೆಯ ನಿವಾಸದಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನತಾಶಾ ರಾವ್ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪಾಕಿಸ್ತಾನಿ ಗೂಢಚಾರಿಣಿ ಹಾಗೂ ಈತನ ನಡುವಿನ ಸಂಬಂಧ ದಿಢೀರನೇ ಮುರಿದು ಬಿದ್ದ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ಎಂಜಿನಿಯರ್ ಗೆ ವಿವಾಹದ ಆಮಿಷ ಒಡ್ಡಿ ಭಾರತದ ಕ್ಷಿಪಣಿ ಅಭಿವೃದ್ಧಿ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ನೀಡುವಂತೆ ಬಲವಂತಪಡಿಸಿದ್ದಾಳೆ ಎಂದು ತೆಲಂಗಾಣ ಪೊಲೀಸರು ಮಾಹಿತಿ ನೀಡಿದ್ದಾರೆ.

ಗುತ್ತಿಗೆ ಆಧಾರದಲ್ಲಿ ಗುಣಮಟ್ಟ ಖಾತರಿ ಎಂಜಿನಿಯರ್ ಆಗಿ ವರ್ಗೀಕೃತ ಅತ್ಯಾಧುನಿಕ ನೌಕಾ ಸಿಸ್ಟಂ ಯೋಜನೆ ಯಡಿ ರಕ್ಷನಾ ಪ್ರಯೋಗಾಲಯದ ಬಲಾಪುರ ಆರ್‍ಸಿಐ ಕಾಂಪ್ಲೆಕ್ಸ್ ನಲ್ಲಿ ರೆಡ್ಡಿ ಕಾರ್ಯ ನಿರ್ವಹಿಸುತ್ತಿದ್ದ. ಆತನ ಗುಪ್ತ ಚಟುವಟಿಕೆಗಳನ್ನು ರಚಕೊಂಡ ವಶೇಷ ಕಾರ್ಯಾಚರಣೆ ತಂಡ, ಬಲಾಪುರ ಪೊಲೀಸರ ಸಹಾಯದಿಂದ ಪತ್ತೆ ಮಾಡಿ ಆತನನ್ನು ವಶಕ್ಕೆ ಪಡೆದಿದೆ. ಗುಪ್ತಚರ ಏಜೆನ್ಸಿಗಳು ನೀಡಿದ ಮಾಹಿತಿ ಆಧರಿಸಿ ಆತನನ್ನು ಬಂಧಿಸಲಾಗಿದೆ. ಕಚೇರಿ ಗೌಪ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

2018ರ ಮಾರ್ಚ್‍ನಲ್ಲಿ ರೆಡ್ಡಿ ತನ್ನ ಫೇಸ್‍ಬುಕ್ ಸ್ಟೇಟಸ್‍ನಲ್ಲಿ ಡಿಆರ್‍ಡಿಎಲ್‍ನಲ್ಲಿ ಎಂಜಿನಿಯರ್ ಎಂದು ಸ್ಟೇಟಸ್ ಹಾಕಿದ್ದ. ಎರಡು ವರ್ಷ ಬಳಿಕ ನತಾಶಾ ರಾವ್‍ನಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿದ್ದು, ಅಮೆರಿಕದ ರಕ್ಷಣಾ ನಿಯತಕಾಲಿಕದ ಉದ್ಯೋಗಿ ಎಂದು ಆಕೆ ಪರಿಚಯಿಸಿಕೊಂಡಿದ್ದಳು.

"ರೆಡ್ಡಿ ಆಕೆಯ ಜತೆ ಸ್ನೇಹ ಸಂಬಂಧ ಆರಂಭಿಸಿದ್ದಾನೆ. ತಾನು ಬೆಂಗಳೂರಿನಲ್ಲಿರುವ ಐಎಎಫ್ ಅಧಿಕಾರಿಯೊಬ್ಬರ ಮಗಳು ಎಂದು ಹೇಳಿಕೊಂಡ ನತಾಶಾ ರಾವ್, ಮದುವೆ ಪ್ರಸ್ತಾವವನ್ನೂ ಮುಂದಿಟ್ಟಿದ್ದಾಳೆ. ರೆಡ್ಡಿ ಪ್ರೇಮ ಸಂಬಂಧದಲ್ಲಿ ಸಿಲುಕಿಕೊಂಡು, ಡಿಆರ್‍ಡಿಎಲ್ ಕ್ಷಿಪಣಿ ಅಭಿವೃದ್ಧಿ ಬಗೆಗಿನ ಫೋಟೊಗಳನ್ನು ಹಂಚಿಕೊಂಡಿದ್ದ ಎಂದು ಎಸ್‍ಓಟಿ ಅಧಿಕಾರಿ ಅಂಜಿ ರೆಡ್ಡಿ ವಿವರ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News