ಬಳ್ಕುಂಜೆ ಕೈಗಾರಿಕಾ ವಲಯ ಸ್ಥಾಪನೆ; ಭೂಮಿ ನೀಡಲು ಬೆದರಿಸುವ ತಂತ್ರ ಬಳಸುತ್ತಿರುವ ಕೆಐಎಡಿಬಿ ಅಧಿಕಾರಿಗಳು

Update: 2022-06-18 06:03 GMT

ಮಂಗಳೂರು : ಬಳ್ಕುಂಜೆ ಕೈಗಾರಿಕಾ ವಲಯ ಸ್ಥಾಪನೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಆಕ್ಷೇಪಣೆ ಸಲ್ಲಿಸಲು ಕಚೇರಿಗೆ ಕರೆಸಿದ್ದ ಕೆಐಎಡಿಬಿ ಅಧಿಕಾರಿಗಳು ಬೆದರಿಕೆ ತಂತ್ರ ಬಳಸಿ ಸಂತ್ರಸ್ತ ಗ್ರಾಮ ವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಬಳ್ಕುಂಜೆ, ಕೊಲ್ಲೂರು  ಮತ್ತು ಉಳೆಪಾಡಿ ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಸ್ಥಳೀಯ ಸಂತ್ರಸ್ತರಾದ ಪ್ಯಾಟ್ರಿಕ್‌ ಪಿಂಟೊ ಅವರು,  "ನಾನು ಕೆಐಎಡಿಬಿಗೆ ಆಕ್ಷೇಪಣೆ ನೀಡಲು ಹೋಗಿದ್ದೆ. ಅಲ್ಲಿ ನನ್ನನ್ನು ಕರೆದು ಅಭಿಪ್ರಾಯ ಕೇಳಿದರು. ಬಳಿಕ ನನ್ನ ಆಕ್ಷೇಪಣೆ ಬರೆದು‌ ಕೊಡುವಂತೆ ಹೇಳಿದರು. ನಾನು ಈಗಾಗಲೇ ಆಕ್ಷೇಪಣೆ ಪತ್ರ ನೀಡಿದ್ದೇನೆ ಎಂದು ಉತ್ತರಿಸಿದೆ.‌

ಬಳಿಕ ಒಂದು ಖಾಲಿ ಹಾಳೆಯನ್ನು ನೀಡಿದರು.  ಅದರ‌ ಎದುರಿನ ಪುಟದಲ್ಲಿ ನನ್ನ ಸರ್ವೇ ನಂಬರ್ ಮತ್ತು‌ ಹೆಸರು ಮಾತ್ರ ಬರೆಯಲಾಗಿತ್ತು. ಹಾಳೆಯ ಹಿಂಭಾಗದಲ್ಲಿ "ಸದ್ರಿ ಜಮೀನನ್ನು ಅಭಿವೃದ್ಧಿ ಪಡಿಸಿಕೊಂಡು ಅದರಲ್ಲಿ ಬರುವ ಆದಾಯವನ್ನು ಅವಲಂಬಿಸಿ ಜೀವನ‌ಸಾಗಿಸುತ್ತಿದ್ದೇನೆ ಎಂದು ಹೇಳಿಕೆ ನೀಡಿರುತ್ತೇನೆ" ಎಂದು ಅಧಿಕಾರಿಯೇ ಬರೆದು ಸಹಿ ಹಾಕಲು ಹೇಳಿದರು. ಇದು ನನಗೆ ಸರಿ ಕಾಣದಿದ್ದ ಕಾರಣ ಅವರ ಬರವಣಿಗೆಯ ಕೆಳಗೆ ಮತ್ತೆ ನನ್ನ ಆಕ್ಷೇಪಣೆಯನ್ನು ಬರೆದು ಸಹಿ ಮಾಡಿ ನೀಡಿದ್ದೇನೆ. ಖಾಲಿ ಹಾಳೆಯಲ್ಲಿ ಖಾಲಿ ಬಿಟ್ಟಿರುವ ಸ್ಥಳದಲ್ಲಿ ಅವರು ಅವರಿಗೆ ಬೇಕಾದ ಹಾಗೆ ಬರೆದು ಕೊಳ್ಳುವ ಸಾಧ್ಯತೆಗಳಿದೆ. ನಾವು ಕೊಡುವ ಆಕ್ಷೇಪಣೆಗಳನನ್ನು ಪಡೆದುಕೊಳ್ಳ ಬೇಕು‌. ಆದರೆ ಇಲ್ಲಿ ಅವರೇ ಬರೆದು ಸಹಿ ಹಾಕಿಸಲು ಯತ್ನಿಸುತ್ತಿದ್ದಾರೆ. ಆಕ್ಷೇಪಣೆ ಸಲ್ಲಿಕೆ ಎಂಬುವುದು ಹೆಸರಿಗೆ ಮಾತ್ರ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನಾನು ಬುಧವಾರ ಆಕ್ಷೇಪಣೆ ಸಲ್ಲಿಸಲು ಕೆಐಎಡಿಬಿ ಕಚೇರಿಗೆ ಹೋಗಿದ್ದೆ. ಅಲ್ಲಿನ ಅಧಿಕಾರಿಯೊಬ್ಬರು ಆಕ್ಷೇಪಣೆ ಇದೆಯಾ ಎಂದು ಕೇಳಿದರು. ಹೌದು ನನ್ನ ಜೀವ ಹೋದರೂ ಜಾಗ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಎಂದು ಹೇಳಿದೆ. ಆಗ ಅಧಿಕಾರಿ ಬೆದರಿಸುವ ರೀತಿಯಲ್ಲಿ "ಒಂದು ನೆನಪಿಟ್ಟುಕೊಳ್ಳಿ, ಈಗಲೇ ಡೈರಿಯಲ್ಲಿ ಬೇರೆದಿಟ್ಟು ಕೊಳ್ಳಿ. ಇಲ್ಲದಿದ್ದರೆ ಇಲ್ಲಿಂದ ಮನೆಗೆ ಹೋಗುವಾಗ ಸರಿಯಾಗಿ ಕೇಳಿಸಿಕೊಳ್ಳಿ ಆಕ್ಷೇಪಣೆ ಸಲ್ಲಿಸುವ ಎಲ್ಲರೂ ಇಲ್ಲಿಗೇ ಬಂದು ಸರದಿಸಾಲು ನಿಂತು ನಮ್ಮ ಜಾಗವನ್ನು ನಿಮಗೆ ಕೊಡುತ್ತೇವೆ ತೆಗೆದುಕೊಳ್ಳಿ ಎಂದು ಅಂಗಲಾಚುವ ಸ್ಥಿತಿ ಬರಲಿದೆ. ಆಗ ಏನೂ ಮಾಡಲು ಸಾಧ್ಯವಿಲ್ಲ" ಎಂದು ಹೆದರಿಸುವ ರೀತಿಯಲ್ಲಿ ಹೇಳಿದರು ಎಂದು ನಿರ್ಮಲಾ ರೋಡ್ರಿಗಸ್ ಅವರ ಅನುಭವ ಹಂಚಿಕೊಂಡರು. 

ಈ ಸಂಬಂಧ ಪತ್ರಿಕೆಯೊಂದಿಗೆ ತನ್ನ ಅನುಭವ ಹಂಚಿಕೊಂಡ ಕೊಲ್ಲೂರು‌ ಗ್ರಾಮದ ಸಂತ್ರಸ್ತ ಐತಪ್ಪ‌ ಸಾಲ್ಯಾನ್ ಅವರು, ನನ್ನ ಆಕ್ಷೇಪಣೆಯನ್ನು ಬರೆದುಕೊಂಡು ಹೋಗಿದ್ದ ಅರ್ಜಿಯನ್ನು ಸಲ್ಲಿಸಿದೆ. ಬಳಿಕ ಅವರು ಒಂದು ಪತ್ರದಲ್ಲಿ ನನ್ನ ನಿವೇಶನದ ಮಾಹಿತಿ‌ ಇತ್ತು. ಕೆಳಗೆ ಆಕ್ಷೇಪಣೆ ಇದೆ, ಇಲ್ಲ ಎಂದು ಗುರುತು ಮಾಡಲು ನೀಡಿದರು. ಅದರಲ್ಲಿ ಅವರೇ ಆಕ್ಷೇಪಣೆ ಇದೆ ಎಂಬುದರ ಮೇಲೆ ಗುರುತು ಮಾಡಿದರು ಬಳಿಕ ನಾನು ನನ್ನ ಆಕ್ಷೇಪಣೆಯನ್ನು ನಮೂದಿಸಿ ಸಹಿ ಮಾಡಿ ಕೊಟ್ಟಿದ್ದೇನೆ ಎಂದರು.

ಆಕ್ಷೇಪಣೆ ಸಲ್ಲಿಸಲು ಕೆಐಎಡಿಬಿ ಕಚೇರಿಗೆ ಹೋಗುವ ಸಂತ್ರಸ್ತರಿಗೆ ಅಲ್ಲಿನ ಅಧಿಕಾರಿಗಳು ಸಂತ್ರಸ್ತರ ಹೆಸರು,  ವಿಳಾಸ, ಸರ್ವೆ ಸಂಖ್ಯೆ ಹಾಗೂ ಸರಕಾರ ಸ್ವಾಧೀನಕ್ಕೆ ಪಡೆದುಕೊಳ್ಳುವ ಭೂಮಿಯ ಮಾಹಿತಿಯನ್ನೊಳಗೊಂಡ ಅರ್ಜಿಗೆ ಅಧಿಕಾರಿಗಳೇ ಆಕ್ಷೇಪಣೆ ಇದೆ ಎಂದು ಗುರುತು ಮಾಡಲಾಗಿದೆ ಎಂದು ಸಹಿ ಪಡೆದುಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. 

ಆ ಬಳಿಕ‌ ಅವರ ಕಚೇರಿಯಿಂದ ಹೊರಗೆ ಬಂದ ಬಳಿಕ ನನಗೆ ಓದು ಬರಹ ಬರುವುದಿಲ್ಲ. ಅಧಿಕಾರಿಗಳು ಆಕ್ಷೇಪಣೆ ಇದೆ ಎಂಬುವುದನ್ನೇ ಗುರುತು ಮಾಡಿದ್ದಾರೆ ಎಂದು ಸಹಿ ಹಾಕಿ ಬಂದಿದ್ದೇವೆ. ಆದರೆ ಅವರು ಯಾವುದನ್ನು ಗುರುತು‌‌ ಮಾಡಿದ್ದಾರೆ ಎಂದು ತಿಳಿದಿಲ್ಲ. ನಮ್ಮನ್ನು ಮೋಸ ಮಾಡುತ್ತಿದ್ದಾರೆಯೇ ಎಂದು ಆತಂಕ ವ್ಯಕ್ತ ಪಡಿಸುತ್ತಿದ್ದಾರೆ ಎಂದು ಬಳ್ಕುಂಜೆ ಹೋರಾಟ ಸಮಿತಿಯ ಕಾರ್ಯದರ್ಶಿ ಫ್ರೀಡಾ ಅವರು ಶಂಕೆ ವ್ಯಕ್ತ ಪಡಿಸಿದ್ದಾರೆ.

ಸರಕಾರ ಸ್ಥಾಪಿಸಲು ಉದ್ದೇಶಿಸಿರುವ ಬಳ್ಕುಂಜೆ ಕೈಗಾರಿಕಾ ವಲಯಲ ಸ್ಥಾಪನೆಗೆ ನಮ್ಮ ಭೂಮಿಗಳನ್ನು ನೀಡುವುದಿಲ್ಲ.‌ ನಾವು ಸತ್ತರೂ‌ ಇಲ್ಲೇ  ಬದುಕಿದರೂ ಇಲ್ಲೇ ಎಂದು ಸಂತ್ರಸ್ತರು ತಮ್ಮ‌ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News