ಬೌರಿಂಗ್ ಆಸ್ಪತ್ರೆಗೆ ಉಪಕರಣ ಖರೀದಿಸಲು ವಕ್ಫ್ ಫೌಂಡೇಶನ್ ವತಿಯಿಂದ 5 ಲಕ್ಷ ರೂ.ಸಹಾಯಧನ: ಸಚಿವೆ ಶಶಿಕಲಾ ಜೊಲ್ಲೆ

Update: 2022-06-18 13:12 GMT

ಬೆಂಗಳೂರು, ಜೂ.18: ಅಲ್ಪಸಂಖ್ಯಾತ ಮಹಿಳೆಯರು ಹಾಗೂ ಬಡರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಾಜಿನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ರಿಜಿಡ್ ನೆಫ್ರೋಸ್ಕೋಪ್ ಖರೀದಿಸಲು ಕರ್ನಾಟಕ ರಾಜ್ಯ ವಕ್ಫ್ ಫೌಂಡೇಶನ್ ಫಾರ್ ವುಮೆನ್ ಡೆವಲಪ್‍ಮೆಂಟ್ ವತಿಯಿಂದ 5 ಲಕ್ಷ ರೂಪಾಯಿಗಳ ಸಹಾಯಧನದ ಚೆಕ್ ಅನ್ನು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹಸ್ತಾಂತರಿಸಿದರು. 

ಶನಿವಾರ ವಿಕಾಸಸೌಧದಲ್ಲಿ ಆಸ್ಪತ್ರೆಯ ವೈದ್ಯರಿಗೆ ಚೆಕ್ ಅನ್ನು ಹಸ್ತಾಂತರಿಸಿ ಮಾತನಾಡಿದ ಅವರು, ಕರ್ನಾಟಕ ಸ್ಟೇಟ್ ವಕ್ಫ್ ಫೌಂಡೇಷನ್ ಫಾರ್ ವುಮೆನ್ ಡೆವಲಪ್‍ಮೆಂಟ್ ವತಿಯಿಂದ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರ ಚಿಕಿತ್ಸೆಗಾಗುವ ಖರ್ಚನ್ನು ಭರಿಸಲಾಗುತ್ತಿದೆ ಎಂದರು.

ಶಿವಾಜಿನಗರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಇನ್ಸ್‍ಟಿಟ್ಯೂಟ್ ಸಂಸ್ಥೆಯ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಮತ್ತು ಬಡರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಈ ಸಂಸ್ಥೆಯ ಮನವಿಯಂತೆ ರಿಜಿಡ್ ನೆಫ್ರೋಸ್ಕೋಪ್ (Rigid Neproscope)  ಉಪಕರಣ ಖರೀದಿಸಲು 5 ಲಕ್ಷ ರೂಪಾಯಿಗಳ ಸಹಾಯಧನವನ್ನು ನೀಡಲಾಗಿದೆ. ಎಲ್ಲರಿಗೂ ಉತ್ತಮ ಚಿಕಿತ್ಸೆ ದೊರೆಯಲಿ ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದು ಶಶಿಕಲಾ ಜೊಲ್ಲೆ ಹೇಳಿದರು.
ಈ ಸಂದರ್ಭದಲ್ಲಿ ಬೌರಿಂಗ್ ಆಸ್ಪತ್ರೆಯ ವೈದ್ಯರಾದ ಡಾ.ಶ್ರೀಕಾಂತ್, ಡಾ.ಅಭಿಜಿತ್, ಡಾ. ಝಹೀರ್ ಮತ್ತು ಆಹಾರ ತಜ್ಞೆ ಮೇಘಾ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News