ಬೆಂಗಳೂರಿನಲ್ಲಿ ಬಾರೀ ಮಳೆ; ಮಹಿಳೆ ಸೇರಿ ಮೂವರು ಬಲಿ

Update: 2022-06-18 13:35 GMT

ಬೆಂಗಳೂರು, ಜೂ.18: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಮುಂದುವರಿದಿದ್ದು, ಮನೆ ಕುಸಿತ, ಆಸ್ತಿ-ಪಾಸ್ತಿ ನಷ್ಟದ ಜೊತೆಗೆ ಮಳೆ ಸಂಬಂಧಿ ಅನಾಹುತಗಳಲ್ಲಿ ಮಹಿಳೆ ಸೇರಿ ಮೂವರು ಬಲಿಯಾಗಿದ್ದಾರೆ.

ಶಿವಮೊಗ್ಗ ಮೂಲದ ಇಲ್ಲಿನ ಎಸ್‍ಆರ್ ಬಡಾವಣೆಯ ಗಾಯಿತ್ರಿ ಲೇಔಟಿನ ನಿವಾಸಿ ಮಿಥುನ್(24), ಕಾವೇರಿ ನಗರದ ನಿವಾಸಿ ಮುನಿಯಮ್ಮ(62) ಹಾಗೂ ದೀಪಕ್(27) ಎಂಬುವರು ಮೃತಪಟ್ಟಿದ್ದಾರೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಶುಕ್ರವಾರ ತಡರಾತ್ರಿ ಕೆಆರ್ ಪುರಂ ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾಗಿತ್ತು. ಇದರ ಪರಿಣಾಮ ಇಲ್ಲಿನ ಗರುಡಾಚಾರ್ ಪಾಳ್ಯ ವಾರ್ಡಿನ ಕಾವೇರಿನಗರ ವ್ಯಾಪ್ತಿಯಲ್ಲಿರುವ ಗೋದ್‍ರೇಜ್ ಕಂಪೆನಿಯ ಗೋಡೆಯೂ ಪಕ್ಕದಲ್ಲಿರುವ ಶೀಟಿನ ಮನೆ ಕುಸಿದ ಪರಿಣಾಮ ಮುನಿಯಪ್ಪ ತೀವ್ರವಾಗಿ ಗಾಯಗೊಂಡಿದ್ದರು. ಆ ನಂತರ, ಸ್ಥಳೀಯ ವೈದೇಹಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಮನೆಯ ಸದಸ್ಯರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಪ್ರತಿಕ್ರಿಯಿಸಿದ ಬಿಬಿಎಂಪಿ ಅಧಿಕಾರಿಗಳು, ಚಿಕಿತ್ಸೆ ವೆಚ್ಚ ಭರಿಸಿ, ನಿಯಮಾನುಸಾರ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಮತ್ತೊಂದೆಡೆ ಗಾಯತ್ರಿ ಬಡಾವಣೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್ ಹಿಡಿದುಕೊಳ್ಳಲು ಮಿಥುನ್ ನಾಪತ್ತೆ ಆಗಿದ್ದು, ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಕಳೆದ ರಾತ್ರಿ 11ರಿಂದ 12ರ ನಡುವೆ ಸುರಿದ ಮಳೆಗೆ ಚರಂಡಿಗೆ ಹೊಂದಿಕೊಂಡಿರುವ ತಡೆಗೋಡೆ ಕುಸಿದು ಮನೆ ಬಳಿ ನಿಲ್ಲಿಸಿದ್ದ ಬೈಕ್‍ಗಳ ಮೇಲೆ ಬಿದ್ದಿದೆ. ಈ ವೇಳೆ ಚರಂಡಿ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಬೈಕ್‍ಅನ್ನು ಮೂವರು ಎಳೆಯಲು ಯತ್ನಿಸಿದ್ದಾರೆ.

ಈ ವೇಳೆ ದುರಾದೃಷ್ಟವಶಾತ್ ಮಿಥುನ್ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ. ಇದನ್ನು ನೋಡಿದ ಇಬ್ಬರು ಕೂಗಾಡಿದ್ದಾರೆ. ಬಳಿಕ ಸ್ಥಳೀಯ ನಿವಾಸಿಗಳು ಬಿಬಿಎಂಪಿ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ಮತ್ತು ತುರ್ತು ಸೇವೆಯ ಅಧಿಕಾರಿಗಳು ಮತ್ತು ಎನ್‍ಡಿಆರ್‍ಎಫ್ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ಯುವಕನಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ. 

ಅಲ್ಲದೆ, ಸೀಗೇಹಳ್ಳಿ ಕೆರೆಗೆ ಚರಂಡಿ ಅಂಟಿಕೊಂಡಿದ್ದು, ಮಳೆಯಿಂದಾಗಿ ಕೆರೆತುಂಬಿ ಕೋಡಿ ಹರಿದಿದ್ದು, ನೀರಿನ ರಭಸಕ್ಕೆ ಚರಂಡಿ ಪಕ್ಕದ ಮನೆಯ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ ಎನ್ನಲಾಗಿದೆ.

ತಡರಾತ್ರಿ ಕೆಆರ್ ಪುರಂ ಹಾಗೂ ಮಹದೇವಪುರ ವಲಯದಲ್ಲಿ 90 ರಿಂದ 180 ಮಿಲಿಮೀಟರ್‍ವರೆಗೆ ಮಳೆಯಾಗಿದೆ. 250ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ ಅಪಾರ ಆಸ್ತಿ ಪಾಸ್ತಿ ನಷ್ಟವಾಗಿದೆ.

ಮತ್ತೊಂದೆಡೆ, ಕಲ್ಕೆರೆ ಗ್ರಾಮ ಜಲಾವೃತವಾಗಿದ್ದು, ಮನೆಗಳಿಗೆ ನೀರು ನುಗ್ಗಿ ಸುಮಾರು 1 ಕಿ.ಮೀ.ವರೆಗೆ ನಿಂತಿದೆ. ಕೆ.ವಿ ಲೇಔಟ್ ಸಂಪೂರ್ಣ ಮುಳುಗಿದೆ. 20ಕ್ಕೂ ಹೆಚ್ಚು ಮನೆಗಳ ವಸ್ತುಗಳೆಲ್ಲಾ ನೀರು ಪಾಲಾಗಿದ್ದು, ರಾತ್ರಿಯಿಡೀ ನೀರು ಹೊರಹಾಕುವುದರಲ್ಲಿ ಜನ ಜಾಗರಣೆ ಮಾಡಿದರು.

ಕೃಷ್ಣ ಚಿತ್ರಮಂದಿರದ ಗೋಡೆ ಕುಸಿದು 24 ಬೈಕ್‍ಗಳು ಜಖಂ ಆಗಿದೆ. ಚಾರ್ಲಿ ಸಿನೆಮಾ  ನೋಡಲು ಬಂದಿದ್ದ ಜನ, ಕಾಂಪೌಂಡ್ ಬಳಿ ಬೈಕ್ ನಿಲ್ಲಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News