ಡಬಲ್ ಎಂಜಿನ್ ಸರಕಾರದಿಂದ ರಾಜ್ಯದಲ್ಲಿ ಆಗಿರುವ ಐದು ಸಾಧನೆಗಳ ಪಟ್ಟಿ ಕೊಡಿ: ರಾಮಲಿಂಗಾರೆಡ್ಡಿ

Update: 2022-06-18 13:55 GMT

ಬೆಂಗಳೂರು, ಜೂ. 18: ‘ಕೇಂದ್ರ ಹಾಗೂ ರಾಜ್ಯದಲ್ಲಿಯೂ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದರೆ ಡಬಲ್ ಇಂಜಿನ್ ಸರಕಾರ, ಕರ್ನಾಟಕವನ್ನು ಅಭಿವೃದ್ಧಿಯಲ್ಲಿ ತೇಲಿಸಲಿದೆ ಎಂದು ಭಾಷಣ ಬೀಗಿದ್ದಿರಿ? ರಾಜ್ಯದಲ್ಲಿ ಬಿಜೆಪಿ ಸರಕಾರದ ಐದು ಸಾಧನೆಗಳ ಪಟ್ಟಿಯನ್ನು ಕೊಡಿ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಪ್ರಧಾನಿ ಮೋದಿಯವರನ್ನು ಹನ್ನೆರಡು ಪ್ರಶ್ನೆಗಳನ್ನು ಕೇಳಿದ್ದಾರೆ.

ಶನಿವಾರ ಇಲ್ಲಿನ ಕ್ವೀನ್ಸ್‍ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಮೇಯರ್‍ಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2018ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಭಾಷಣ ಮಾಡುತ್ತಾ ಕಾಂಗ್ರೆಸ್ ಸರಕಾರ ಶೇ.10ರಷ್ಟು ಕಮಿಷನ್ ಸರಕಾರ, ಸೀದಾರೂಪಾಯ್ಯ ಸರಕಾರ ಎಂದು ಆಧಾರರಹಿತ ಆರೋಪ ಮಾಡಿದ್ದರು. ಆಗ ಸಿದ್ದರಾಮಯ್ಯರ ವಿರುದ್ಧ ಯಾವುದೇ ಆರೋಪ ಹಾಗೂ ದೂರು ದಾಖಲಾಗಿರಲಿಲ್ಲ. ಆದರೆ ಇದೀಗ, ಬಿಜೆಪಿ ಸರಕಾರ ಶೇ.40 ಪರ್ಸೆಂಟ್ ಕಮಿಷನ್ ಸರಕಾರ ಎಂದು ವಿಶ್ವವಿಖ್ಯಾತಿ ಪಡೆದಿದ್ದು, ಈ ಅಮೋಘ ಸಾಧನೆ ಬಗ್ಗೆ ನಿಮ್ಮ ಅಭಿಪ್ರಾಯವೇನು?' ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವರ್ಷದ ಹಿಂದೆ ತಮಗೆ ಪತ್ರ ಬರೆಯುತ್ತಾರೆ. ಇನ್ನು ಆತ್ಮಹತ್ಯೆಗೂ ಮುನ್ನ ಗುತ್ತಿಗೆದಾರ ಸಂತೋμï ಪಾಟೀಲ್ ಶೇ.40 ಕಮಿಷನ್ ಕಿರುಕುಳ ಕುರಿತು ನಿಮ್ಮನ್ನು ಭೇಟಿ ಮಾಡಲು ಪ್ರಯತ್ನಿಸಿ ಸಾಧ್ಯವಾಗದೇ ಪತ್ರ ಬರೆದರೂ ಈ ಭ್ರμÁ್ಟಚಾರಗಳ ನೀವು ಮೌನಿಬಾಬಾ ಆಗಿದ್ದು ಏಕೆ? ಪಿಎಸ್ಸೈ, ಸಹಾಯಕ ಪ್ರಾಧ್ಯಾಪಕರು, ಅರೋಗ್ಯ ಇಲಾಖೆ ಸೇರಿಎಲ್ಲ ಇಲಾಖೆಗಳ ನೇಮಕಾತಿಯಲ್ಲಿ ಅಕ್ರಮ ತಾಂಡವವಾಡುತ್ತಿದೆ. ಆದರೂ ಸಿಬಿಐ, ಇಡಿ, ಆದಾಯ ತೆರಿಗೆ ಇಲಾಖೆಗಳಿಂದ ತನಿಖೆ ಏಕಿಲ್ಲ? ನಿಮಗೆ ನಿಮ್ಮ ಸಚಿವರ ಭ್ರμÁ್ಟಚಾರ ಕಾಣಿಸುತ್ತಿಲ್ಲವೇ? ಭ್ರಷ್ಟಾಚಾರ ವಿರುದ್ಧದ ಹೋರಾಟ ಎಂದರೆ, ಕಾಂಗ್ರೆಸ್ ನಾಯಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವುದು ಮಾತ್ರವೇ?' ಎಂದು ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು.

‘2022ರ ವೇಳೆಗೆ ರೈತರ ಆದಾಯ ದ್ವಿಗುಣ ಮಾಡುತ್ತೇವೆಂದು ನೀವು ಹೇಳಿದ್ದ ಮಾತು ನೆನಪಿದೆಯೇ? ರೈತರ ಆದಾಯದ ಬದಲು 700 ರೂ.ಇದ್ದ ರಸಗೊಬ್ಬರ 2 ಸಾವಿರ ರೂ.ಮುಟ್ಟಿದೆ, ಯಂತ್ರೋಪಕರಣಗಳ ಬಳಕೆ ವೆಚ್ಚ ದ್ವಿಗುಣವಾಗಿರುವುದರ ಬಗ್ಗೆ ಏನು ಹೇಳುತ್ತೀರಿ ಮೋದಿಯವರೇ? ಇವರು ಕೊಡುವ ಸಬ್ಸಿಡಿ ರಸಗೊಬ್ಬರಕ್ಕೆ ಸಾಲುವುದಿಲ್ಲ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ನೀವು ಹೇಳಿದ್ದಿರಿ, ಆದರೆ ರಾಜ್ಯದಲ್ಲಿ ಹಿಜಾಬ್, ಅಝಾನ್, ಹಲಾಲ್, ಆರ್ಥಿಕ ಜಿಹಾದ್ ಹೆಸರಿನಲ್ಲಿ ಅಲ್ಪಸಂಖ್ಯಾತರ ಮೇಲೆ ನಿಮ್ಮ ಪರಿವಾರದವರೇ ಕೋಮು ದೌರ್ಜನ್ಯ ನಡೆಯುತ್ತಿದ್ದು, ಈ ವಿಚಾರದಲ್ಲಿ ನಿಮ್ಮ ನಿಲುವೇನು?' ಎಂದು ಅವರು ಕೇಳಿದರು.

‘ಬೆಂಗಳೂರಿನಲ್ಲಿ 8 ಮಂದಿ ಸಚಿವರಿದ್ದು, ಪ್ರಧಾನಿ ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ನೋಡಿಕೊಳ್ಳಲಿ. ಆದರೆ ನಗರದಲ್ಲಿ ರಸ್ತೆಗುಂಡಿಗಳು ಬಿದ್ದಾಗ, ನೆರೆ ಬಂದಾಗ ಈ ಸಚಿವರುಗಳು ತಮ್ಮ ಕ್ಷೇತ್ರ ಬಿಟ್ಟು ಹೊರಗೆ ಬರಲಿಲ್ಲ. ಇನ್ನು ಮೇಕೆದಾಟು ಹಾಗೂ ಮಹದಾಯಿ ರಾಜ್ಯಕ್ಕೆ ಅಗತ್ಯವಿರುವ ಎರಡು ಪ್ರಮುಖ ನೀರಾವರಿ ಯೋಜನೆ. ಈ ಯೋಜನೆಗೆ ಯಾವಾಗ ಅನುಮತಿ ಕೊಡಿಸುವಿರಿ? ಈ ಬಗ್ಗೆ ನಿಮ್ಮ ಸ್ಪಷ್ಟ ನಿಲುವು ತಿಳಿಸಿ' ಎಂದು ಅವರು ಆಗ್ರಹಿಸಿದರು.

‘ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಲ್ಲಿ ಕುವೆಂಪು, ಅಂಬೇಡ್ಕರ್, ಬಸವಣ್ಣ ಸೇರಿದಂತೆ ಇನ್ನಿತರ ಮಹನೀಯರಿಗೆ ಅಪಮಾನ ಮಾಡಿದ್ದು, ಈ ಬಗ್ಗೆ ನಿಮ್ಮ ಜವಾಬು ಏನು? ನಿಮ್ಮ ಸರಕಾರ ಪೂರ್ವಯೋಜನೆ ಮಾಡಿ ಚಕ್ರತೀರ್ಥರನ್ನು ನೇಮಿಸಿ ಪಠ್ಯದಲ್ಲಿ ಅಪಮಾನ ಮಾಡಿ ಈಗ ಸಮಿತಿ ವಜಾ ಮಾಡಿದೆ. ಆದರೆ, ಚಕ್ರತೀರ್ಥ ಹಾಗೂ ಪರಿಷ್ಕೃತ ಪಠ್ಯವನ್ನು ಸರಕಾರ ಸಮರ್ಥಿಸಿಕೊಳ್ಳುತ್ತಿದೆ. ಹೀಗಾಗಿ ಈ ವಿಚಾರದಲ್ಲಿ ನಿಮ್ಮ ಸಮರ್ಥನೆ ಏನು?' ಎಂದು ಅವರು ಕೇಳಿದರು.

‘ಮುಖ್ಯಮಂತ್ರಿ ಅಧಿಕಾರಕ್ಕೆ ಬಂದು 10 ತಿಂಗಳಾದರೂ ಸರಿಯಾಗಿ ನಗರ ಪ್ರದಕ್ಷಿಣೆ ಹಾಕಿರಲಿಲ್ಲ. ಆದರೆ ಪ್ರಧಾನಿ ಬರುತ್ತಿದ್ದಾರೆಂದು ಇಡೀ ನಗರದ ವ್ಯವಸ್ಥೆಯನ್ನು ಪರಿಶೀಲನೆ ಖುದ್ದಾಗಿ ತಾವೇ ಮಾಡುತ್ತಿದ್ದಾರೆ. ಬೆಂಗಳೂರು ಅಭಿವೃದ್ಧಿ ಎಂದರೆ ಕೇವಲ ಬಿಜೆಪಿ ಶಾಸಕರಿರುವ ಕ್ಷೇತ್ರಗಳ ಅಭಿವೃದ್ಧಿಯೇ? ಅಥವಾ 28 ಕ್ಷೇತ್ರಗಳ ಅಭಿವೃದ್ದಿಯೇ? ಬೆಂಗಳೂರಿನ 15 ಮಂದಿ ಬಿಜೆಪಿ ಶಾಸಕರಿಗೆ 9,890 ಕೋಟಿ ರೂ., ಕಾಂಗ್ರೆಸ್‍ನ 12 ಮಂದಿ ಶಾಸಕರ ಕ್ಷೇತ್ರಗಳಿಗೆ 2,165 ಕೋಟಿ ರೂ. ಅನುದಾನ ನೀಡಲಾಗಿದೆ. ನಗರದ ಅಭಿವೃದ್ಧಿಯಲ್ಲಿ ರಾಜಕೀಯ ತಾರತಮ್ಯ ಎಷ್ಟು ಸರಿ?' ಎಂದು ಅವರು ಪ್ರಶ್ನಿಸಿದರು.

‘ಕಾಂಗ್ರೆಸ್ ಪ್ರತಿಭಟನೆಯಿಂದ ಕೋವಿಡ್ ಹರಡುತ್ತದೆ ಎಂದು ಸಚಿವ ಸುಧಾಕರ್ ಹೇಳುತ್ತಿದ್ದಾರೆ. ನೀವು ಬೆಂಗಳೂರಿನ ಕೊಮ್ಮಘಟ್ಟದಲ್ಲಿ 50ಸಾವಿರ ಜನರನ್ನು ಸೇರಿಸಿ ಸಭೆ ಮಾಡುತ್ತಿದ್ದೀರಿ, 12 ಸಾವಿರಕ್ಕೂ ಹೆಚ್ಚು ಜನರ ಜತೆ ಮೈಸೂರಿನಲ್ಲಿ ಯೋಗ ಮಾಡಲಿದ್ದೀರಿ, ನಿಮ್ಮ ಈ ಕಾರ್ಯಕ್ರಮಗಳಿಂದ ಸೋಂಕು ಹರಡುವುದಿಲ್ಲವೇ? ಸುಧಾಕರ್ ಅವರೇ ಮಾಸ್ಕ್ ಇಲ್ಲದೆ ಮಕ್ಕಳ ಜತೆ ಇದ್ದಾರೆ. ಇನ್ನು 25ಕಿ.ಮೀಗೂ ಹೆಚ್ಚು ರೋಡ್ ಶೋ ಮಾಡಲು ನಿರ್ಧರಿಸಿದ್ದರು,ನಿನ್ನೆ ಬಿದ್ದ ಮಳೆಗೆ ಗುಂಡಿಗಳು ಹೆಚ್ಚಾಗಿರುವ ಕಾರಣ ಆ ಕಾರ್ಯಕ್ರಮ ರದ್ದು ಮಾಡಿದ್ದಾರೆ. ಇವರು ಹಾಕಿದ ತೇಪೆ ಕಿತ್ತುಹೋಗಿದೆ'

-ರಾಮಲಿಂಗಾರೆಡ್ಡಿ ಕೆಪಿಸಿಸಿ ಕಾರ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News