ಪ್ರತಿಭಟನೆ ವೇಳೆ ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕನಿಂದ ಹಲ್ಲೆ; ದೂರು ದಾಖಲು

Update: 2022-06-18 14:59 GMT

ಬೆಂಗಳೂರು: ಪಠ್ಯಪರಿಷ್ಕರಣೆ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರನ್ನು ಬಂಧಿಸುವಂತೆ ಹಾಗೂ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ರಾಜೀನಾಮೆಗೆ ಆಗ್ರಹಿಸಿ ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ಹಮ್ಮಿಕೊಂಡಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ಯುವಕನೊಬ್ಬ ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿದ್ದಲ್ಲದೆ ಅದನ್ನು ಪ್ರಶ್ನಿಸಿದವರ ಮೇಲೆಯೇ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ದೂರು ಸಲ್ಲಿಕೆಯಾಗಿದೆ. 

ಈ ಸಂಬಂಧ ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ಆಯೋಜಕರು ಹಾಗೂ ಕನ್ನಡ ಪರ ಸಂಘಟನೆಯ ಭೈರಪ್ಪ ಹರೀಶ್ ಕುಮಾರ್ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಗರದ ಉಪ್ಪಾರ ಪೇಟೆ ಪೋಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಿಗೆ ದೂರು ನೀಡಿದ್ದಾರೆ. 

ಶನಿವಾರ ನಗರದ ಪ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸಮಾವೇಶದಲ್ಲಿ ಅಪರಿಚಿತ ಯುವಕನೊಬ್ಬ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳೆಯರ ಹಾಗೂ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಿಸಿ ಅನುಚಿತವಾಗಿ ವರ್ತಿಸುತ್ತಿದ್ದ. ಅಲ್ಲದೇ ಕಾನೂನು ಸುವ್ಯವಸ್ಥೆಗೆ ಭಂಗ ಉಂಟು ಮಾಡುವಂತ ಪ್ರಚೋದನಕಾರಿ ಘೋಷಣೆಗಳನ್ನು ಕೂಗುತ್ತಿದ್ದ. ಇದನ್ನು ಗಮನಿಸಿದ ಕೆಲವು ಪ್ರತಿಭಟನಾಕಾರರು ಈ ಬಗ್ಗೆ ಅಪರಿಚಿತ ಯುವಕನನ್ನು ಪ್ರಶ್ನಿಸಿದ್ದಾರೆ. 

ಈ ವೇಳೆ ಕಾರ್ಯಕ್ರಮದ ಆಯೋಜಕನಾಗಿದ್ದ ಭೈರಪ್ಪ ಹರೀಶ್ ಕುಮಾರ್ ಮಧ್ಯ ಪ್ರವೇಶಿಸಿ ವಿಚಾರಿಸಿದಾಗ, ಅಪರಿಚಿತ ಯುವಕ ಭೈರಪ್ಪ ಹರೀಶ್ ಕುಮಾರ್ ಮತ್ತು ದೀಪು ಗೌಡ ಎಂಬವರ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಬೈರಪ್ಪ ಹರೀಶ್ ಕುಮಾರ್ ಅವರ ಕುತ್ತಿಗೆ ಹಾಗೂ ಕೆನ್ನೆಗೆ ಗಾಯಗಳಾಗಿದ್ದು,  ದೀಪು ಗೌಡ ಅವರ ಕೈ ಬೆರಳಿಗೆ ಗಾಯಗಳಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 

ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿ 'ಸಂವಾದ' ಎಂಬ ಬಲಪಂಥೀಯ ಫೇಸ್ ಬುಕ್ ಪೇಜ್ ಒಂದು ನಮ್ಮ ವರದಿಗಾನ ಮೇಲೆ ಭೈರಪ್ಪ ಹರೀಶ್ ಕುಮಾರ್ ನೇತೃತ್ವದ ಜನರ ಗುಂಪೊಂದು ಹಲ್ಲೆ ನಡೆಸಿದೆ ಎಂದು ಆರೋಪಿಸಿ ವಿಡಿಯೊ ಹಾಕಿತ್ತು.  ಇದೀಗ ಈ ಕುರಿತು ಪ್ರತಿಕ್ರಿಯಸಿರುವ ಭೈರಪ್ಪ ಹರೀಶ್ ಕುಮಾರ್  ಕಿಡಿಗೇಡಿ ವಿರುದ್ದ ಹಲ್ಲೆ, ಕಾನೂನು ಸುವ್ಯವಸ್ಥೆಗೆ ಅಡ್ಡಿ, ಮಹಿಳೆಯರ ಘನತೆಗೆ ಧಕ್ಕೆ ಪ್ರಕರಣಗಳನ್ನು ದಾಖಲಿಸುವಂತೆ ದೂರು ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News