ತಳಮಳಗಳ ಒಡೆಯ

Update: 2022-06-18 19:30 GMT

ಜಪಾನಿನ ಅಗ್ರಮಾನ್ಯ ಕತೆಗಾರ ಯೂನೊಸ್‌ಕೆ ಅಕ್‌ತಗವನ ಕತೆಗಳನ್ನು ಆಧರಿಸಿದ ಪ್ರಖ್ಯಾತ ನಿರ್ದೇಶಕ ಅಕಿರಾ ಕುರೊಸಾವನ 'ರಾಶೊಮಾನ್' ಚಿತ್ರವು ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿತು. ಆ ಮೂಲಕ ಜಪಾನಿನ ವಿಲಕ್ಷಣ ಕತೆಗಾರ ಅಕ್‌ತಗವ ಜಗತ್ತಿನ ಗಮನ ಸೆಳೆದ. ಆತನ ಬಹುಮುಖ್ಯ ಕತೆಗಳನ್ನು ಕೆ.ಪುಟ್ಟಸ್ವಾಮಿ ಅವರು ಅನುವಾದಿಸಿದ್ದಾರೆ. ಅಭಿನವ ಪ್ರಕಾಶನ ಸಂಸ್ಥೆ ಪ್ರಕಟಿಸಲಿದೆ.


ಜಪಾನಿನ ಆಧುನಿಕ ಸಾಹಿತ್ಯದ ಪ್ರವರ್ತಕರಲ್ಲಿ ಅಗ್ರನೆನಿಸಿರುವ ಯೂನೊಸ್‌ಕೆ ಅಕ್‌ತಗವ (1892-1927) ತನ್ನ ಬರಹಗಳಿಂದ ಸಾಹಿತ್ಯಲೋಕದಲ್ಲಿ ಸಂಚಲನ ತಂದವನು. ವಿಶೇಷವಾಗಿ ಸಣ್ಣಕತೆಗಳ ಮೂಲಕ ಆಧುನಿಕ ಸಂವೇದನೆಯನ್ನು ಜಪಾನ್ ಸಾಹಿತ್ಯದಲ್ಲಿ ಕಟ್ಟಿಕೊಟ್ಟವನು.ತನ್ನ ಸಾಹಿತ್ಯದ ಮೂಲಕ ಸಮಕಾಲೀನ ಜಪಾನೀ ಸಮಾಜದಲ್ಲಿ ಕಲಾವಿದರ ಪಾತ್ರ ಮತ್ತು ಗುರಿಗಳನ್ನು ಸ್ಪಷ್ಟವಾಗಿ ನಿರ್ದೇಶಿಸಿದವನು. ಜಪಾನಿನ ಚಕ್ರವರ್ತಿ ಮೇಜಿಯ ಆಳ್ವಿಕೆಯ ಪೂರ್ವದಲ್ಲಿ ಕೇವಲ ರಂಜನೆ ಮತ್ತು ನೀತಿಬೋಧನೆಯೇ ಪ್ರಮುಖವಾಗಿದ್ದ ಜಪಾನ್ ಸಾಹಿತ್ಯಕ್ಕೆ ಕಲಾತ್ಮಕತೆಯನ್ನು ತಂದುಕೊಟ್ಟವರಲ್ಲಿ ಅಕ್‌ತಗವ ಅಗ್ರಗಣ್ಯ. (ಹಾಗೆ ನೋಡಿದರೆ ಜಪಾನ್‌ನ ಆಧುನಿಕ ಸಾಹಿತ್ಯ ಆರಂಭವಾದದ್ದೇ ಚಕ್ರವರ್ತಿ ಮೇಜಿ ಆಳ್ವಿಕೆಯಲ್ಲಿ, 1868ರ ನಂತರ.)

ಯೂನೊಸ್‌ಕೆ ಜನಿಸಿದ್ದು ಈಗಿನ ಟೋಕಿಯೊ ವ್ಯಾಪ್ತಿಗೆ ಸೇರಿದ ಇರಿಫ್ಟಿನಿಕೋ ಪಟ್ಟಣದಲ್ಲಿ. ಆತ ಜನಿಸಿದಾಗ ಅವನ ತಂದೆ ನೀಹಾರ ಟೋಶಿಜೋ ಹೈನುಗಾರಿಕೆ ಉದ್ದಿಮೆಯಲ್ಲಿ ಯಶಸ್ಸು ಸಾಧಿಸಿದ್ದ. ಪೂರ್ವ ಏಶ್ಯದಲ್ಲಿ ಪ್ರಚಲಿತವಿರುವ ಜ್ಯೋತಿಷ್ಯದಂತೆ ಆತ ಡ್ರ್ಯಾಗನ್ ವರ್ಷದ, ಡ್ರ್ಯಾಗನ್ ತಿಂಗಳಿನ ಮತ್ತು ಡ್ರ್ಯಾಗನ್ ದಿನದ ಡ್ರ್ಯಾಗನ್ ಗಳಿಗೆಯಲ್ಲಿಯೇ (ಬೆಳಗ್ಗೆ 7 ರಿಂದ 9 ಗಂಟೆ) ಜನಿಸಿದ ಕಾರಣ ಅವನಿಗೆ ಯೂನೊಸ್‌ಕೆೆ (ಡ್ರ್ಯಾಗನ್ ಮಗ) ಎಂದು ಹೆಸರಿಡಲಾಯಿತು. ಅಕ್‌ತಗವ ಹುಟ್ಟಿದ ಕೆಲವೇ ತಿಂಗಳಲ್ಲಿ ಅವನ ತಾಯಿ ಅಕ್‌ತಗವ ಫುಕುಗೆ ಮಾನಸಿಕ ಅಸ್ವಸ್ಥತೆಯುಂಟಾಯಿತು. ಆನಂತರ ಆಕೆ ಎಂದೂ ಗುಣಮುಖವಾಗಲೇ ಇಲ್ಲ. ಅಕ್‌ತಗವನ ಬೆನ್ನ ಹಿಂದೆ ಇಬ್ಬರು ತಂಗಿಯರು- ಮೊದಲ ತಂಗಿ ಹತ್ಸು (1885) ಹುಟ್ಟಿದ ಆರು ತಿಂಗಳಲ್ಲೇ ಅಸು ನೀಗಿದಳು; ಎರಡನೆಯ ತಂಗಿ ಹಿಸಾ (1888-1956). ಫುಕುಗೆ ಮಾನಸಿಕ ಅಸ್ವಸ್ಥತೆ ಉಂಟಾದ ನಂತರ ಆಕೆಯನ್ನು ನೀಹಾರ ಕುಟುಂಬದ ಮನೆಯ ಮಹಡಿಯಲ್ಲಿ ಪ್ರತ್ಯೇಕವಾಗಿ ಇರಿಸಿದರು. ಸಾಯುವವರೆಗೆ ಆಕೆ ಮಹಡಿಯ ಕೊಠಡಿಯಲ್ಲಿಯೇ ಉಳಿದಿದ್ದಳು. ತಾಯಿಯ ಮಾನಸಿಕ ವಿಕಲ್ಪವು ತನಗೆ ಆನುವಂಶೀಯವಾಗಿ ಬರಬಹುದೇನೋ ಎಂಬ ಭಯ ಅಕ್‌ತಗವನನ್ನು ಜೀವನಪರ್ಯಂತ ಬಾಧಿಸಿತು. ಈ ಸಂಗತಿಗಳು ಸಹ ಅವನ ಸಾಹಿತ್ಯ ಕೃಷಿಯ ಮೇಲೆ ಅಗಾಧ ಪರಿಣಾಮ ಬೀರಿದವು.

ತಾಯಿ ಅಸ್ವಸ್ಥಳಾದ ಕಾರಣ ಟೋಕಿಯೊ ಸರಕಾರದ ಒಳಾಡಳಿತ ಇಲಾಖೆಯಲ್ಲಿ ಸಣ್ಣ ಅಧಿಕಾರಿಯಾಗಿದ್ದ ಸೋದರ ಮಾವ ಅಕ್‌ತಗವ ದೋಶೋ ಮತ್ತು ಅವನ ಹೆಂಡತಿ ಟೋಮೊ ಅಕ್‌ತಗವನನ್ನು ದತ್ತುವಾಗಿ ಸ್ವೀಕರಿಸಿದರು. ಹಾಗಾಗಿ ತನ್ನ ತಂದೆಯ ಕುಟುಂಬದ ಹೆಸರು ನೀಹಾರ ಬದಲು ಸೋದರ ಮಾವನ ಕುಟುಂಬದ ಹೆಸರು ಅಕುತಗವ ರ್ಯೂನೋಸುಕೆಯ ಜೊತೆಯಲ್ಲಿ ಸೇರಿಕೊಂಡಿತು. ಸೋದರಮಾವನ ಮನೆಯಲ್ಲಿಯೇ ಇದ್ದ ಚಿಕ್ಕಮ್ಮ (ತಾಯಿಯ ತಂಗಿ) ಅಕ್‌ತಗವ ಫುಕಿ ಆ ತಬ್ಬಲಿಯ ಆರೈಕೆಯ ಹೊಣೆ ಹೊತ್ತಳು ಸೋದರ ಮಾವನ ಕುಟುಂಬ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ದೂರವೇ ಇತ್ತು. ಜಪಾನಿನ ಸಮುರಾಯ್ ಮೂಲದವರಾದ ಅವರು ಶ್ರೀಮಂತರಲ್ಲದಿದ್ದರೂ ಕಲೆ, ಸಾಹಿತ್ಯಾಭಿರುಚಿಯುಳ್ಳವರು. ಅವರು ವಾಸಿಸುತ್ತಿದ್ದ ಟೋಕಿಯೊದ ಕೈಗಾರಿಕಾ ಪಟ್ಟಣವಾದ ಹೊಂಜೋ ಬಡಾವಣೆಯ ಹತ್ತಿರವೇ ಸುಮಿದಾ ನದಿ ಹರಿಯುತ್ತಿತ್ತು. ಅವರದು ಜಪಾನ್‌ನ ಪರಂಪರೆ, ಆಚಾರ ವಿಚಾರಗಳಲ್ಲಿ ಗಾಢ ನಂಬಿಕೆ ಮತ್ತು ಶ್ರದ್ಧೆಯಿದ್ದ ಕುಟುಂಬ. ಜಪಾನ್‌ನ ಸಾಂಪ್ರದಾಯಿಕ ಕಲೆ ಮತ್ತು ಜನಪದದಿಂದ ಹಿಡಿದು ಅಭಿಜಾತ ಸಾಹಿತ್ಯದವರೆಗೆ ಪುಸ್ತಕಗಳು ತುಂಬಿದ ಮನೆ. ಮೂರು ವರ್ಷದ ರ್ಯೂನೋಸುಕೆಯನ್ನು ಸೋದರಮಾವ ಜಪಾನ್‌ನ ಅಭಿಜಾತ ನೃತ್ಯ ನಾಟಕ ಕಬುಕಿಗಳ ಪ್ರದರ್ಶನಗಳಿಗೆ ಕರೆದುಕೊಂಡು ಹೊಗುತ್ತಿದ್ದ. ಜಪಾನ್‌ನ ಪುರಾತನ ಕತೆಗಳ ಬಗ್ಗೆ ಬಾಲ್ಯದಲ್ಲೇ ಒಲವು ಬೆಳೆಸಿಕೊಂಡ ರ್ಯೂನೋಸುಕೆ ಅವುಗಳ ವಿಲಕ್ಷಣತೆ ಮತ್ತು ಸೌಂದರ್ಯಕ್ಕೆ ಮಾರುಹೋಗಿದ್ದ. ಜಪಾನ್‌ನ ಜಾನಪದ ಕತೆಗಳಲ್ಲಿನ ಬೀಭತ್ಸ ರಸ ಅವನನ್ನು ಸೆಳೆದಿತ್ತು. ಇದು ಮುಂದೆ ಆತನ ಸಾಹಿತ್ಯದಲ್ಲೂ ತನ್ನ ಛಾಪು ಮೂಡಿಸಿದ್ದನ್ನು ಕಾಣಬಹುದು.

ಅಕ್‌ತಗವನಿಗೆ ಓದುವ ಹುಚ್ಚು ಬಾಲ್ಯದಲ್ಲೇ ಹಿಡಿಯಿತು. 1898ರಲ್ಲಿ ಶಾಲೆಗೆ ಸೇರುವ ಮುನ್ನವೇ ಓದು ಬರಹ ಕಲಿತಿದ್ದ ಆತ ತರಗತಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿ ಗುರುತಿಸಿಕೊಂಡ. ಆದರೆ ದೈಹಿಕವಾಗಿ ತೆಳ್ಳಗಿದ್ದ. ದುರ್ಬಲನಾಗಿಯೂ ಇದ್ದ ಆತನನ್ನು ಜೊತೆಯ ಹುಡುಗರು ತಂಟೆ ಮಾಡುತ್ತಿದ್ದುದರಿಂದ ಕುಗ್ಗಿಹೋದ. 1899ರಲ್ಲಿ ಇಂಗ್ಲಿಷ್, ಚೀನಿ ಭಾಷೆಗಳನ್ನು ಕಲಿಯಲು ಮತ್ತು ಕ್ಯಾಲಿಗ್ರಫಿ (ಕೈಬರವಣಿಗೆ)ಯನ್ನು ಕರಗತಮಾಡಿಕೊಳ್ಳಲು ಖಾಸಗಿಯಾಗಿ ತರಬೇತಿ ಪಡೆದ.

1901ರಲ್ಲಿ ಒಂಭತ್ತು ವರ್ಷದ ಯೂನೊಸ್‌ಕೆ ತನ್ನ ಮೊದಲ ಹೈಕುವನ್ನು ರಚಿಸಿದ. ಸಮಕಾಲೀನ ಜಪಾನಿ ಸಾಹಿತ್ಯವನ್ನು ಓದಲು ಆರಂಭಿಸಿದ. ವಿದ್ಯಾರ್ಥಿಗಳೇ ಪ್ರಕಟಿಸುತ್ತಿದ್ದ ಸಾಹಿತ್ಯ ಪತ್ರಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ. ಸಾಹಿತ್ಯ ಚರ್ಚೆಗಳಲ್ಲಿ ಎಡಬಿಡದೆ ಭಾಗವಹಿಸತೊಡಗಿದ. ಅನೇಕ ಪಾಶ್ಚಿಮಾತ್ಯ ಲೇಖಕರ ಕೃತಿಗಳನ್ನು ಅನುವಾದಿಸುವ ಮೂಲಕ ಬರವಣಿಗೆ ಕ್ಷೇತ್ರವನ್ನು ಪ್ರವೇಶಿಸಿದ. ಈ ನಡುವೆ ಮಾನಸಿಕ ಕಾಯಿಲೆಯಿಂದ ಗುಣಮುಖವಾಗದ ತಾಯಿ 1902ರಲ್ಲಿ ತೀರಿಕೊಂಡಾಗ ಆತನನ್ನು ಖಿನ್ನತೆ ಆವರಿಸಿತು. ಆದರೂ ತರಗತಿಗಳಲ್ಲಿ ಅವನ ಯಶಸ್ಸು ಮುಂದುವರಿಯಿತು. ಪಠ್ಯದಿಂದಾಚೆಗೆ ಆತನ ಸಾಹಿತ್ಯಾಸಕ್ತಿ ವಿಸ್ತರಿಸಿತು. ಜಪಾನ್ ಸಾಹಿತ್ಯದ ಜೊತೆಗೆ ಪಾಶ್ಚಿಮಾತ್ಯ ಬರಹದ ನಂಟೂ ಬೆಳೆಸಿಕೊಂಡ. ಮಾಧ್ಯಮಿಕ ಶಾಲೆಯನ್ನು ಮುಗಿಸುವ ವೇಳೆಗೆ ಆತ ಇಬ್ಸೆನ್, ಕಿಪ್ಲಿಂಗ್, ಅನಾಟೋಲೆ ಫ್ರಾನ್ಸ್ ಮೊದಲಾದವರ ಸಾಹಿತ್ಯವನ್ನು ಓದಿಕೊಂಡಿದ್ದ. ಉನ್ನತ ಅಂಕಗಳನ್ನು ಗಳಿಸಿದ ಕಾರಣಕ್ಕೆ ಆತ ಪ್ರವೇಶ ಪರೀಕ್ಷೆಯನ್ನು ಬರೆಯದೆ ಪ್ರೌಢಶಾಲೆಯನ್ನು ಪ್ರವೇಶಿಸಿದ. ಜಪಾನಿನ ಅತ್ಯಂತ ಶ್ರೇಷ್ಠ ಶಿಕ್ಷಣ ಸಂಸ್ಥೆಯೆನಿಸಿದ್ದ ಟೋಕಿಯೊದ ಇಂಪೀರಿಯಲ್ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಪಡೆದ ಅಕ್‌ತಗವ ಇಂಗ್ಲಿಷ್ ಸಾಹಿತ್ಯದ ಬಗ್ಗೆ ಅಪಾರ ಒಲವು ಬೆಳೆಸಿಕೊಂಡು, ಇಂಗ್ಲಿಷ್ ಭಾಷೆಯನ್ನು ಮೇಜರ್ ವಿಷಯವಾಗಿ ಅಧ್ಯಯನ ಮಾಡಿ ಪದವಿ ಪಡೆದ. ಮುಂದೆ ಪಾಶ್ಚಿಮಾತ್ಯ ಲೇಖಕರಾದ ಟಾಲ್‌ಸ್ಟಾಯ್, ದಾಸ್ತೊವ್‌ಸ್ಕಿ, ಸ್ಟ್ರಿಂಡ್‌ಬರ್ಗ್, ನೀಷೆ, ಬೋದಿಲೇರ್ ಮುಂತಾದವರ ಕೃತಿಗಳನ್ನು ಇಂಗ್ಲಿಷ್ ಭಾಷಾಂತರಗಳ ಮೂಲಕ ಮನನ ಮಾಡಿಕೊಂಡ.

1914ರಲ್ಲಿ ರ್ಯೂನೋಸುಕೆಯ ಕುಟುಂಬ ಟೋಕಿಯೋದ ಉಪನಗರ ಟಬಟದಲ್ಲಿ ಮನೆಯೊಂದನ್ನು ನಿರ್ಮಿಸಿ ಸ್ಥಳಾಂತರವಾಯಿತು. ನೆರೆಯಲ್ಲಿದ್ದ ವೈದ್ಯ ಶಿಮೋಜಿಮ ಇಸಾವೋಶಿ ಪರಿಚಯವಾಯಿತು.ಆತ ಯೂನೊಸ್‌ಕೆಗೆ ಆಪ್ತವೈದ್ಯನಾಗಿ ಚಿಕಿತ್ಸೆ ನೀಡಲಾರಂಭಿಸಿದ. ವಿಶ್ವವಿದ್ಯಾನಿಲಯದ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟವಾದ ಆತನ ಐದನೆಯ ಕತೆ ರಾಶೊಮಾನ್(1915) ಸಾಹಿತ್ಯಾಸಕ್ತರ ಗಮನ ಸೆಳೆಯಲು ವಿಫಲವಾಯಿತು. ಅದೇ ವೇಳೆಗೆ ಜಪಾನಿನ ಅನೇಕ ಸೃಜನಶೀಲ ಸಾಹಿತಿಗಳ ಸಂಪರ್ಕವೂ ಬೆಳೆಯಿತು. 1915ರಲ್ಲಿ ಜಪಾನಿನ ಪ್ರಸಿದ್ಧ ಕಾದಂಬರಿಕಾರ ನತ್ಸುಮೆ ಸೋಸೆಕಿ ಅವರನ್ನು ಭೇಟಿಮಾಡಿ ಅವರ ಪ್ರೀತಿ ಗಳಿಸಿದ. ಅಕ್‌ತಗವನ ನೋಸ್(ಮೂಗು) ಕತೆಯನ್ನು ಬಹುವಾಗಿ ಮೆಚ್ಚಿಕೊಂಡ ಸೋಸೆಕಿ ತನ್ನ ಆಪ್ತ ಶಿಷ್ಯರ ವಲಯಕ್ಕೆ ಬಿಟ್ಟುಕೊಂಡ. ಅಮೆರಿಕದ ಕವಿ, ಕಾದಂಬರಿಕಾರ, ವಸ್ತ್ರವಿನ್ಯಾಸಕ ವಿಲಿಯಮ್ ಮೊರಿಸ್ ಬಗ್ಗೆ ಪ್ರೌಢ ಪ್ರಬಂಧ ಸಲ್ಲಿಸಿ 1916ರಲ್ಲಿ ಪದವಿ ಪಡೆಯುವ ವೇಳೆಗೆ 24 ವರ್ಷದ ರ್ಯೂನೋಸುಕೆ ಅಕ್‌ತಗವ ಅನೇಕ ಸಣ್ಣ ಕತೆಗಳನ್ನು ರಚಿಸಿದ್ದ. ಉದಯೋನ್ಮುಖ ಸಾಹಿತಿಯೆಂಬ ಖ್ಯಾತಿಯೂ ದೊರೆತಿತ್ತು.ಇಮೊಗಯು(ಯಾಂ ಅಂಬಲಿ) ಎಂಬ ಆತನ ಮೂರನೆಯ ಕತೆ ಜನಪ್ರಿಯ ಪತ್ರಿಕೆಯೊಂದರಲ್ಲಿ ಪ್ರಕಟವಾದ ನಂತರ ಬೇಡಿಕೆಯ ಕತೆಗಾರನಾದ.

ಅಕ್‌ತಗವ 1917ರಲ್ಲಿ ಯೋಕೋಸುಕದಲ್ಲಿದ್ದ ನೇವಲ್ ಅಕಾಡಮಿಗೆ ತಾತ್ಕಾಲಿಕ ಬೋಧಕನಾಗಿ ಸೇರಿಕೊಂಡ. ಅದೇ ವೇಳೆಯಲ್ಲಿ ಅನೇಕ ಪತ್ರಿಕೆಯಲ್ಲಿ ಅವನ ಕತೆಗಳು ಪ್ರಕಟವಾದವು. 1917ರಲ್ಲಿಯೇ ಎರಡು ಕಥಾ ಸಂಕಲನಗಳು ಸಹ ಪ್ರಕಟವಾದವು. ಮೊದಲನೆಯ ಕಥಾಸಂಕಲನ ರಾಶೊಮಾನ್ ಕೃತಿಯನ್ನು ಸಣ್ಣದೊಂದು ಪ್ರಕಾಶನ ಸಂಸ್ಥೆ ಪ್ರಕಟಿಸಿತು. ಜನಪ್ರಿಯತೆಯ ಹಿನ್ನೆಲೆಯಲ್ಲಿ ದೊಡ್ಡ ಪ್ರಕಾಶನ ಸಂಸ್ಥೆಯೊಂದು ಆತನ ಎರಡನೆಯ ಕಥಾಸಂಕಲನ- ತಬಕೊ ತೊ ಅಕುಮ(ಹೊಗೆಸೊಪ್ಪುಮತ್ತು ಸೈತಾನ)ವನ್ನು ಪ್ರಕಟಿಸಿದ ನಂತರ ಪ್ರಸಿದ್ಧಿ ಆತನನ್ನು ಹಿಂಬಾಲಿಸಿತು.

ಅಕ್‌ತಗವ 1918ರಲ್ಲಿ ಸ್ನೇಹಿತನೊಬ್ಬನ ಅಣ್ಣನ ಮಗಳಾದ ಸುಕುಮೋಟೊ ಫ್ಯೂಮಿ ಎಂಬಾಕೆಯನ್ನು ಮದುವೆಯಾದ. ಆಕೆ ಆತನಿಗೆ ಬಾಲ್ಯದಿಂದಲೂ ಪರಿಚಿತಳಾಗಿದ್ದವಳು. ಟೋಕಿಯೋ ಹತ್ತಿರದ ನಗರ ಕಮಕುರದಲ್ಲಿ ಹೊಸದಾಗಿ ಸಂಸಾರ ಹೂಡಿದ. ಚಿಕ್ಕಮ್ಮ ಫುಕಿ ಸಹ ಜೊತೆಗೆ ಸೇರಿಕೊಂಡಳು. ಬರವಣಿಗೆ, ಬೋಧನೆ ಜೊತೆಯಾಗಿ ಸಾಗಿತು.ಕುಟುಂಬ ದಲ್ಲಿ ಶಾಂತಿ ನೆಲೆಸಿತು. ಆದರೆ ಬಹುಕಾಲ ಉಳಿಯಲಿಲ್ಲ. ಸ್ಪ್ಯಾನಿಶ್ ಫ್ಲೂ ಸಾಂಕ್ರಾಮಿಕ ರೋಗಕ್ಕೆ ತಂದೆ ನೀಹಾರ 1918ರಲ್ಲಿ ಬಲಿಯಾದರು. ಅದೇ ವರ್ಷ ಯೂನೊಸ್‌ಕೆ ತನ್ನ ಸಾಹಿತ್ಯವನ್ನು ಪ್ರಕಟಿಸಲು ಜಪಾನ್‌ನ ಪತ್ರಿಕೆ 'ಒಸಾಕ ಮೈನಿಚಿ ಶಿಂಬುನ್' ಜೊತೆ ಒಡಂಬಡಿಕೆ ಮಾಡಿಕೊಂಡ. ಹಾಗಾಗಿ ಬೋಧಕ ವೃತ್ತಿಯನ್ನು ತೊರೆದು ಬರವಣಿಗೆಗೇ ಪೂರ್ತಿಯಾಗಿ ಸಮರ್ಪಿಸಿಕೊಂಡ. ಹೆಂಡತಿ ಮತ್ತು ಚಿಕ್ಕಮ್ಮ ಜೊತೆಯಲ್ಲಿ ಮತ್ತೆ ತನ್ನ ಸಾಕುತಂದೆ ಸೋದರಮಾವನ ಮನೆಗೆ ಮರಳಿ ಸಂಸಾರದ ಹೊಣೆ ಹೊತ್ತ. ದೊಡ್ಡ ಕುಟುಂಬ ಈತನ ವರಮಾನವನ್ನು ನೆಚ್ಚಿತ್ತು.

ಈ ನಡುವೆ ಭೀತಿಯ ಜೊತೆಯಲ್ಲಿಯೇ ಬದುಕುತ್ತಿದ್ದ ಅಕ್‌ತಗವ ನಾಗಾಸಾಕಿಗೆ ಪ್ರವಾಸ ಹೋದವನು- ಅಲ್ಲಿ ಮನೋವಿಜ್ಞಾನಿಯನ್ನು ಭೇಟಿಯಾಗಿ ಚಿಕಿತ್ಸೆ ಪಡೆದ. ಅಲ್ಲಿಯೇ ಅಂದಿನ ಜನಪ್ರಿಯ ಕವಯಿತ್ರಿ ಹೈಡ್ ಶಿಗೆಕೊಳನ್ನು ಭೇಟಿಯಾದ. ಅದಾಗಲೇ ಒಂದು ಮಗುವಿನ ತಾಯಿಯಾಗಿದ್ದ ಆಕೆಯ ಜತೆ ಪ್ರಣಯಾಂಕುರವಾಗಿ ಇಬ್ಬರೂ ಹುಚ್ಚರಂತೆ ಪ್ರೀತಿಸಿದರು. ಸಂಪಾದಕರು ಆತನ ಬರಹಗಳಿಗೆ ಮುಗಿಬಿದ್ದ ಕಾರಣ ಬರಹ ಮುಂದುವರಿಯಿತು. 1920ರಲ್ಲಿ ಮೊದಲ ಮಗ ಹಿರೋಶಿ ಜನಿಸಿದ. ಆದರೆ ಮಾರನೆಯ ವರ್ಷ ಹೈಡ್ ಶಿಗೆಕೋಗೂ ಗಂಡು ಮಗು ಜನಿಸಿತು. 'ಅದು ನಿನ್ನದೇ ಮಗು ಎಂದು ಆಕೆ ಅಕ್‌ತಗವನಿಗೆ ಹೇಳಿದಾಗ ಹೊಸ ಸಂದರ್ಭವನ್ನು ಎದುರಿಸಲಾಗದೆ ವ್ಯಾಕುಲಗೊಂಡ. ಅದರಿಂದ ತಪ್ಪಿಸಿಕೊಳ್ಳಲು, ಅಕ್‌ತಗವ 1921ರಲ್ಲಿ ತಾನು ಕೆಲಸ ಮಾಡುತ್ತಿದ್ದ ಪತ್ರಿಕೆಗೆ ಚೀನಾ ದೇಶದ ವಿಶೇಷ ಬಾತ್ಮೀದಾರನಾಗಿ ತೆರಳಿದ. ಆದರೆ ಎಂದೂ ಒಳ್ಳೆಯ ಆರೋಗ್ಯವನ್ನು ಕಾಣದ ಅಕ್‌ತಗವನ ದೇಹ ಮತ್ತು ಮನಸ್ಸಿನ ಮೇಲೆ ಈ ಕಠಿಣ ಪ್ರವಾಸಗಳು ಮಾರಕ ಪರಿಣಾಮ ಬೀರಿದವು. ನಿದ್ರಾಹೀನತೆಯನ್ನು ಕಳೆದುಕೊಳ್ಳಲು ನಿದ್ರಾಜನಕ ಔಷಧಿಗಳಿಗೆ ಶರಣಾದ. ಅಲ್ಲಿ ಆತನಿಗೆ ತಗಲಿಕೊಂಡ ಶ್ವಾಸಕೋಶದ ಉರಿಯೂತದಿಂದ ಕೊನೆಯವರೆಗೂ ಮುಕ್ತಿ ಸಿಗಲಿಲ್ಲ. ತನ್ನ ತಾಯಿಯ ಮಾನಸಿಕ ಅಸ್ವಸ್ಥತೆ ತನ್ನನ್ನೂ ಕಾಡೀತೆಂಬ ಭಯದಿಂದಲೇ ಬದುಕುತ್ತಿದ್ದ ಅಕ್‌ತಗವ ದೈಹಿಕವಾಗಿ ದುರ್ಬಲಗೊಂಡ. ನಿದ್ರಾಹೀನ ಪರಿಸ್ಥಿತಿಯಿಂದ ಜರ್ಜರಿತನಾದ. ಆವರೆಗೆ ಜಪಾನ್‌ನ ಇತಿಹಾಸ ಮತ್ತು ಪುರಾಣದಲ್ಲಿ ಬೇರುಬಿಟ್ಟಿದ್ದ ಅವನ ಬರವಣಿಗೆ ಆತ್ಮಾವಲೋಕನದ ಸ್ವರೂಪ ಪಡೆಯಿತು. ಹೆಚ್ಚು ವಿಲಕ್ಷಣತೆ ಬರವಣಿಗೆಯಲ್ಲಿ ಕಾಣಿಸಿಕೊಂಡಿತು. ಭಯ, ಬೀಭತ್ಸತೆ, ಭೀತಿ ಆತನ ಕೃತಿಗಳಲ್ಲಿ ಸ್ಥಾಯಿಯಾಗಿ ವ್ಯಕ್ತವಾಗತೊಡಗಿತು. ತನಗೆ ಹುಚ್ಚು ಹಿಡಿಯುತ್ತದೆಂಬ ಭೀತಿ ಕ್ರಮೇಣ ಗೀಳಾಗಿ ಪರಿಣಮಿಸಿತು. ಅದರಿಂದ ಪಾರಾಗಲು ಆತ ಮಾನಸಿಕ ಚಿಕಿತ್ಸೆಗೆ ಒಳಗಾದ. ಆದರೂ ಆತ ಭ್ರಮೆಗಳಲ್ಲಿ ತೇಲಿಹೋದ. ತನ್ನನ್ನು ತಾನೇ ಹಿಂಸಿಸಿಕೊಳ್ಳುವ ಹಂತವನ್ನು ಮುಟ್ಟಿದ. ಇದಕ್ಕೆ ಪೂರಕವಾಗಿ ಅವನ ಬದುಕಿನಲ್ಲಿ ಅನೇಕ ಘಟನೆಗಳು ಸಂಭವಿಸಿ ಆತನ ಖಿನ್ನತೆ ಹೆಚ್ಚಲು ಕಾರಣವಾದವು.

1923ರಲ್ಲಿ ಜನಿಸಿದ ಎರಡನೆಯ ಮಗು ತೀವ್ರ ರೋಗಕ್ಕೆ ಗುರಿಯಾಗಿ ದೀರ್ಘ ಕಾಲ ಆಸ್ಪತ್ರೆಯಲ್ಲಿರಬೇಕಾಯಿತು. ಅದೇ ವೇಳೆ ಕ್ಯಾಂಟೋ ಪ್ರದೇಶದಲ್ಲಿ ಸಂಭವಿಸಿದ ಮಹಾನ್ ಭೂಕಂಪ ಅವನ ಬದುಕಿನಲ್ಲೂ ತಲ್ಲಣಗಳ ಸರಮಾಲೆಯನ್ನು ಹೊತ್ತು ತಂದಿತು. ಜಪಾನಿನ ಪ್ರಮುಖ ದ್ವೀಪವಾದ ಹೊನ್ಶುವಿನ ಕ್ಯಾಂಟೋ ಬಯಲಿನಲ್ಲಿ 1923ರ ಸೆಪ್ಟಂಬರ್ ಒಂದರಂದು ಮಧ್ಯಾಹ್ನದ ಭೋಜನದ ಸಮಯದಲ್ಲಿ ಸಂಭವಿಸಿದ ಮಹಾನ್ ಭೂಕಂಪದಲ್ಲಿ 1,42,800 ಜನ ನಿಧನರಾದರು. ಸುಮಾರು 40,000 ಜನರು ಕಣ್ಮರೆಯಾದರು. ಅವರೂ ಸತ್ತಿರಬೇಕೆಂದು ಭಾವಿಸಲಾಗಿದೆ. ಆಸ್ತಿಪಾಸ್ತಿಗಳಿಗೆ ಆದ ಹಾನಿ ಅಳತೆಗೆ ಮೀರಿದ್ದು. ಭೂಕಂಪದಿಂದಾಗಿ ಆತನ ಟಬಟದ ಮನೆ ಮುರಿದು ಬಿತ್ತು. ಆತನ ತಂಗಿ ಮತ್ತು ಮಲ ಸೋದರನ ಮನೆಗಳು ಸಂಪೂರ್ಣ ನಾಶವಾದವು. ನಿರ್ಗತಿಕರಾದ ಅವರೆಲ್ಲರೂ ಮನೆಯ ಹಿರಿಯಣ್ಣ ಯೂನೊಸ್‌ಕೆಯ ನೆರವು ಬಯಸಿ ಬಂದರು. ಆತ ನಾಶವಾದ ನಗರವನ್ನು ದೆವ್ವ ಹಿಡಿದಂತೆ ಸುತ್ತಿದ; ಸಾವು ಮತ್ತು ವಿನಾಶವನ್ನು ಕುರಿತು ಬರೆದ. ಭೂಕಂಪವನ್ನೇ ನೆಪಮಾಡಿಕೊಂಡು ಸ್ಥಳೀಯ ಮೂಲಭೂತವಾದಿಗಳು ಕೊರಿಯಾ ಸಮುದಾಯದವರ ಮೇಲೆ ಹರಿಬಿಟ್ಟ ಹಿಂಸಾಕಾಂಡವನ್ನು ಕಂಡು ಜರ್ಝರಿತಗೊಂಡ. ಆಗ ಆತ ಬರೆದ ಬರಹಗಳು ತೀವ್ರವಾದ ಸೆನ್ಸಾರ್‌ಗೆ ಒಳಗಾದವು. ಭೂಕಂಪದ ನಂತರದ ಮೂರು ವರ್ಷಗಳಲ್ಲಿ ಆತ ಬರೆದದ್ದು ಕಡಿಮೆ. ಮನಸ್ಸು ಅಷ್ಟೊಂದು ಘಾಸಿಗೊಂಡಿತ್ತು.

ಧರ್ಮದಲ್ಲಿ ನೆಮ್ಮದಿ ಹುಡುಕಲು ಹೊರಟ ಅಕ್‌ತಗವ ಬೈಬಲ್‌ನನ್ನು ತೀವ್ರಾಸಕ್ತಿಯಿಂದ ಓದಿದರೂ ನಂಬಿಕೆ ಬಾರದಾಯಿತು. ನಿದ್ರಾಹೀನತೆಗೆ ತೆಗೆದುಕೊಳ್ಳುತ್ತಿದ್ದ ಔಷಧಿಗಳ ದುಷ್ಪರಿಣಾಮಗಳು ಕಾಣಿಸಿಕೊಂಡವು. ದೈಹಿಕವಾಗಿ ಆತ ಮತ್ತಷ್ಟು ಕುಸಿದ. ತನ್ನ ಕಾದಂಬರಿ 'ಡೆತ್ ರಿಜಿಸ್ಟರ್' ಕೃತಿ ಬಗ್ಗೆ ಬಂದ ಕಟುಟೀಕೆಗಳಿಂದ ಆತ ಮತ್ತಷ್ಟು ದಣಿದ. ಎಲ್ಲವೂ ತನ್ನ ವಿರುದ್ಧ ನಿಂತಿವೆ ಎಂದು ಭ್ರಮಿಸಿದ. ಆತನ ಕೊನೆಯ ದಿನಗಳಲ್ಲಿ ಆತನ ಭ್ರಮೆಗಳು ವಾಸ್ತವದ ಮೇಲೆ ಹಿಡಿತ ಸಾಧಿಸಿದಂತೆ ಕಾಣುತ್ತದೆ. ತನ್ನ ಊಟದಲ್ಲಿ ಹುಳಗಳು ಪಿತಗುಟ್ಟುತ್ತಿವೆ ಎಂಬ ಭ್ರಮೆಯೂ ಅಂತಹವುಗಳಲ್ಲೊಂದು. 1927ರ ಜನವರಿಯಲ್ಲಿ ಆತನ ಒಬ್ಬಳೇ ತಂಗಿಯ ಮನೆ ಬೆಂಕಿಗೆ ಆಹುತಿಯಾಯಿತು. ತಂಗಿಯ ಗಂಡ, ಭಾವಮೈದುನ ಸಾಲದ ಬಾಧೆ ತಡೆಯಲಾರದೆ ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡ. ಆ ಕುಟುಂಬವನ್ನು ನೋಡಿಕೊಳ್ಳುವ ಹೊಣೆಗಾರಿಕೆ ಅಕ್‌ತಗವನ ಮೇಲೆ ಬಿತ್ತು. ಆದರೆ ಅದನ್ನು ನಿಭಾಯಿಸುವ ಶಕ್ತಿ ಅವನಿಗಿರಲಿಲ್ಲ. ಆದರೂ ನಿಭಾಯಿಸುವ ಛಲ ತೊಟ್ಟ. ಸಾಧ್ಯವಾಗದೆಂದು ಬಹುಬೇಗನೆ ಮನವರಿಕೆಯಾಯಿತು. ಕೊನೆಯ ಆಸೆ ಪೂರೈಸಿಕೊಳ್ಳುವವನಂತೆ, ಗೆಳೆಯರು ಬಂಧುಗಳನ್ನು ಭೇಟಿಯಾಗತೊಡಗಿದ.

ಅಂತರಂಗದಲ್ಲಿ ಜ್ವಾಲಾಮುಖಿಯನ್ನು ಅಡಗಿಸಿ ಮೇಲೆ ಶಾಂತವಾಗಿ ವರ್ತಿಸುತ್ತಿದ್ದ ಅಕ್‌ತಗವ 1927ರ ಜುಲೈ 23ರಂದು ಹೆಂಡತಿ ಮಕ್ಕಳೊಡನೆ ನಗುನಗುತ್ತಾ ಊಟ ಮಾಡಿದ.ರಾತ್ರಿ ಒಂದಷ್ಟು ಬರೆದ. ಜುಲೈ 24ರ ಬೆಳಗಿನ ಜಾವ ಎರಡು ಗಂಟೆಯಲ್ಲಿ ಬರೆಯುವುದನ್ನು ನಿಲ್ಲಿಸಿ ಮಲಗಿದ್ದ ಹೆಂಡತಿ ಮಕ್ಕಳನ್ನು ಕಣ್ತುಂಬಿಕೊಂಡು ನಿದ್ರೆಗೆ ಜಾರಿದ. ಆದರೆ ಅದಾಗಲೇ ಮೊದಲೇ ನಿರ್ಧರಿಸಿದಂತೆ, ನಿದ್ರೆಗೆ ತೆಗೆದುಕೊಳ್ಳುತ್ತಿದ್ದ ವೆರನಾಲ್ ಔಷಧವನ್ನು ಅತಿಯಾಗಿ ಸೇವಿಸಿದ್ದ. 'ಒಬ್ಬ ಹಳೆಯ ಗೆಳೆಯನಿಗೊಂದು ಟಿಪ್ಪಣಿ' ಎಂಬ ಶೀರ್ಷಿಕೆಯಡಿ ತನ್ನ ಆತ್ಮಹತ್ಯೆಯ ಪತ್ರ ಬರೆದಿಟ್ಟಿದ್ದ. 'ನಾನು ಬದುಕುತ್ತಿರುವ ಪ್ರಪಂಚ ನರರೋಗದಿಂದ ಬಳಲುತ್ತಿದೆ. ಹಿಮದಂತೆ ತಣ್ಣಗಿದೆ. ಅಂತಹ ಸಾವು(ಭಾವಮೈದುನನ ಆತ್ಮಹತ್ಯೆ) ನಮಗೆ ಸುಖವನ್ನು ಕೊಡದಿದ್ದರೂ ಶಾಂತಿಯನ್ನಾದರೂ ನೀಡಬೇಕು. ವಿಪರ್ಯಾಸದಂತೆ ಕಂಡರೂ ನಾನೀಗ ಸಿದ್ಧವಾಗಿದ್ದೇನೆ. ನಿಸರ್ಗ ಹಿಂದೆಂದಿಗಿಂತಲೂ ಚೆಲುವಾಗಿದೆ. ಬೇರೆಯವರಿಗಿಂತ ಹೆಚ್ಚಾಗಿ ಲೋಕವನ್ನು ನಾನು ಕಂಡಿದ್ದೇನೆ. ಪ್ರೀತಿಸಿದ್ದೇನೆ. ಅರ್ಥ ಮಾಡಿಕೊಂಡಿದ್ದೇನೆ'- ಹೀಗೆಂದು ಬರೆದ 35 ವರ್ಷದ ಅಕ್‌ತಗವ ಆತ್ಮಹತ್ಯೆ ಮಾಡಿಕೊಂಡು ತನ್ನೆಲ್ಲ ತಳಮಳಗಳಿಗೆ ಕೊನೆ ಹೇಳಿದ.

1927 ಜುಲೈ, ಬೆಳಗ್ಗೆ ಏಳು ಗಂಟೆಗೆ ಆಧುನಿಕ ಜಪಾನಿನ ಕಥನ ಸಾಹಿತ್ಯ ಕಟ್ಟಿದ ಅಕ್‌ತಗವ ನಿಧನವಾದದ್ದು ಲೋಕಕ್ಕೆ ಬಿತ್ತರವಾಯಿತು.ಅಕ್‌ತಗವನ ಹಳೆಯ ಮತ್ತು ಪ್ರೀತಿಯ ಗೆಳೆಯ ಹಾಗೂ ಕವಿ ಕುಮೆ ಮಸವೊ ಅದೇ ದಿನ ಅಕ್‌ತಗವ ಬರೆದ ಪ್ರಸಿದ್ಧ ಮರಣಪತ್ರ ಎಂದು ಈಗ ಹೆಸರಾಗಿರುವ 'ಒಬ್ಬ ಹಳೆಯ ಗೆಳೆಯನಿಗೊಂದು ಟಿಪ್ಪಣಿ'ಯನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಿದ. ಕತೆಗಾರನ ಆತ್ಮಹತ್ಯೆ ಪತ್ರಿಕೆಗಳಲ್ಲಿ ಭಾರೀ ಸಂಚಲನ ಹುಟ್ಟುಹಾಕಿತು. ಆತನ ಆತ್ಮಹತ್ಯೆಯು ಸಮಾಜವಾದ ಮತ್ತು ಪ್ರಭುತ್ವದ ಅಧಿಕಾರದ ಮದದೆದುರು ಬೂರ್ಷ್ವಾ ಆಧುನಿಕತೆ ಸೋತ ಸಂಕೇತ ಎಂದು ಬಣ್ಣಿಸಿದವು. ಮರಣಾನಂತರ ಅಕ್‌ತಗವನ ಎರಡು ಕತೆಗಳು ಪ್ರಕಟವಾದವು.

ಅಕ್‌ತಗವನ ಅಂತಿಮ ವಿಧಿಗಳ ನಂತರ ಆತನ ಚಿತಾಭಸ್ಮವನ್ನು ಟೋಕಿಯೊ ನಗರದ ಜಿಗಂಜಿ ದೇವಾಲಯದ ಆವರಣದಲ್ಲಿ ಹೂಳಿದರು. ಅಕ್‌ತಗವನ ನೆನಪನ್ನು ಉಳಿಸಲು ಆತನ ಸಾಹಿತ್ಯ ಗೆಳೆಯ ಮತ್ತು ಪ್ರಕಾಶಕ ಚಿಕುಚಿ ಕಾನ್ 1935ರಲ್ಲಿ ಅಕ್‌ತಗವ ಸಾಹಿತ್ಯ ಪ್ರಶಸ್ತಿ ಸ್ಥಾಪಿಸಿದ. ಜಪಾನಿನ ಯುವ ಕತೆಗಾರರ ಪ್ರತಿಭೆಯ ಮಾನ್ಯತೆಗೆ ಮೊಹರೆಂದು ಅದು ಈಗ ಮನ್ನಣೆ ಪಡೆದಿದೆ. ಜಪಾನಿನ ಈ ಪ್ರತಿಷ್ಠಿತ ವಾರ್ಷಿಕ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗುವ ಯುವ ಸಾಹಿತಿಗೆ ಒಂದು ದಶಲಕ್ಷ ಯೆನ್ ಮತ್ತು ಒಂದು ಪಾಕೆಟ್ ಗಡಿಯಾರವನ್ನು ನೀಡಿ ಗೌರವಿಸಲಾಗುತ್ತದೆ.

ತನ್ನ ವೃತ್ತಿ ಬದುಕಿನಲ್ಲಿ ಅಕ್‌ತಗವ ಸಾಹಿತ್ಯದ ಒಂದು ಪ್ರಕಾರಕ್ಕೆ ಅಂಟಿಕೂರಲಿಲ್ಲ. ಆದರೂ ಆತನ ಪ್ರತಿಭೆ ವ್ಯಕ್ತವಾಗಿದ್ದು ಸಣ್ಣ ಕತೆಗಳಲ್ಲಿ. ಆತ ನಿರಂತರವಾಗಿ ಮನುಷ್ಯನ ಸಾರ್ವತ್ರಿಕ ಸಹಜ ವರ್ತನೆಗಳನ್ನು ಮತ್ತು ಕಾಲ ದೇಶಗಳನ್ನು ಮೀರಿದ ಮಾನವನ ಉದಾರತೆ, ವಿಕೃತಿಗಳನ್ನು ತನ್ನ ಕತೆಗಳಲ್ಲಿ ತನ್ನದೇ ಆದ ವಿಶಿಷ್ಟ ಶೈಲಿಯ ಮೂಲಕ ನಿರೂಪಿಸಿದ.ಅದು ಆವರೆವಿಗೂ ರಮ್ಯ ಶೈಲಿಯಲ್ಲಿ ನಿರೂಪಿತವಾಗುತ್ತಿದ್ದ ಸಾಂಪ್ರದಾಯಿಕ ಜಪಾನ್ ಸಾಹಿತ್ಯ ಕೃತಿಗಳಿಗಿಂತ ಭಿನ್ನವಾದ ಜಾಡು ಹಿಡಿದಿದ್ದ ಕಥನಕ್ರಮ. ಚರಿತ್ರೆ ಮತ್ತು ಪುರಾತನ ವಸ್ತುಗಳನ್ನು ಆಯ್ದುಕೊಂಡರೂ ಅದು ಸಮಕಾಲೀನ ಸಂದರ್ಭಗಳೊಡನೆ ಅನುಸಂಧಾನ ನಡೆಸಿ ಸರ್ವಕಾಲಕ್ಕೂ ಸಂಗತವೆನಿಸುವ ಚಹರೆಗಳನ್ನು ಪಡೆದಿತ್ತು. ಆ ಕಾರಣದಿಂದಲೇ ಈಗ ಅಕ್‌ತಗವನಿಗೆ ಜಗತ್ತಿನಾದ್ಯಂತ ಅಪಾರ ಸಂಖ್ಯೆಯ ಓದುಗರಿದ್ದಾರೆ. ಜಪಾನಿನ ಸಾಹಿತ್ಯ ವಿದ್ಯಾರ್ಥಿಗಳು ಯೂನೊಸ್‌ಕೆ ಅಕ್‌ತಗವನನ್ನು ಆಧುನಿಕ ಜಪಾನ್ ಸಾಹಿತ್ಯದ ಹರಿಕಾರನೆಂದು ಒಪ್ಪಿಕೊಂಡಿದ್ದಾರೆ.

Writer - ಡಾ. ಕೆ. ಪುಟ್ಟಸ್ವಾಮಿ

contributor

Editor - ಡಾ. ಕೆ. ಪುಟ್ಟಸ್ವಾಮಿ

contributor

Similar News