ಮಹಾರಾಷ್ಟ್ರ: ಒಂದು ವರ್ಷದಲ್ಲಿ 600 ನಕಲಿ ಸುದ್ದಿ, ವದಂತಿ, ದ್ವೇಷಭಾಷಣ ಪ್ರಕರಣಗಳು ದಾಖಲು

Update: 2022-06-19 11:23 GMT

ಮುಂಬೈ, ಜೂನ್ 19: ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ 600 ಸುಳ್ಳು ಸುದ್ದಿಗಳು, ವದಂತಿಗಳು ಹಾಗೂ ದ್ವೇಷದ ಭಾಷಣಗಳ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮಹಾರಾಷ್ಟ್ರ ಸೈಬರ್ ಸೆಲ್ ಇಲಾಖೆ ಶನಿವಾರ ತಿಳಿಸಿದ್ದಾಗಿ theprint.in ವರದಿ ಮಾಡಿದೆ.

ಕೋಮು ಉದ್ವಿಗ್ನತೆ ಅಥವಾ ಕೋವಿಡ್-ಸಂಬಂಧಿತ ತಪ್ಪು ಮಾಹಿತಿಗಳನ್ನು ಪ್ರಚೋದಿಸುವ ಸೂಕ್ಷ್ಮ ಪೋಸ್ಟ್‌ಗಳ ಮೇಲೆ ಕಣ್ಣಿಡಲು ರಾಜ್ಯವು ‘ದೃಢವಾದ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ವ್ಯವಸ್ಥೆಯನ್ನು’ ಹೊಂದಿದೆ ಎಂದು ಮಹಾರಾಷ್ಟ್ರ ಸೈಬರ್ ಸೆಲ್ ಎಡಿಜಿ ಮಧುಕರ್ ಪಾಂಡೆ ಶನಿವಾರ ಎಎನ್‌ಐಗೆ ತಿಳಿಸಿದ್ದಾರೆ.

“ನಾವು ದೃಢವಾದ ಸಾಮಾಜಿಕ ಮಾಧ್ಯಮ ನಿಗಾ ವ್ಯವಸ್ಥೆಯನ್ನು ಹೊಂದಿದ್ದೇವೆ, ಅಲ್ಲಿ ನಾವು ದ್ವೇಷದ ಭಾಷಣ, ಕೋಮು ಸೌಹಾರ್ದವನ್ನು ಕದಡುವ ಪೋಸ್ಟ್‌ಗಳು, ವದಂತಿಗಳನ್ನು ಹರಡುವುದು, ಕೋವಿಡ್ ಸಂಬಂಧಿತ ತಪ್ಪು ಮಾಹಿತಿ ಇತ್ಯಾದಿಗಳ ಮೇಲೆ ನಿಗಾ ಇಡುತ್ತೇವೆ. ಕಳೆದ ಒಂದು ವರ್ಷದಲ್ಲಿ, ನಕಲಿ ಸುದ್ದಿ, ವದಂತಿಗಳು ಮತ್ತು ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ 600 ಪ್ರಕರಣಗಳು ದಾಖಲಾಗಿವೆ ಎಂದು ಅವರು ಹೇಳಿದರು.

ಮಹಾರಾಷ್ಟ್ರ ಸೈಬರ್ ಇಲಾಖೆ ನೀಡಿದ ಅಧಿಕೃತ ಮಾಹಿತಿಯ ಪ್ರಕಾರ, ದಾಖಲಾದ ಅಪರಾಧಗಳಲ್ಲಿ ಇದುವರೆಗೆ 384 ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟು ಬಂಧಿತ ಆರೋಪಿಗಳ ಪೈಕಿ 145 ಆರೋಪಿಗಳ ಮೇಲೆ ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ) ಪ್ರಕಾರ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಅಲ್ಲದೆ, ಇಲ್ಲಿಯವರೆಗೆ 138 ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಸೂಚನೆಗಳನ್ನು ನೀಡುವ ಮೂಲಕ ತೆಗೆದುಹಾಕಲಾಗಿದೆ. ಈ ರೀತಿಯ ಸಂದೇಶಗಳು ಕಂಡುಬರುವ ಅಥವಾ ಆಕ್ಷೇಪಾರ್ಹವೆಂದು ವರದಿಯಾಗುವ ಸಾಮಾನ್ಯ ವೇದಿಕೆಗಳೆಂದರೆ ವಾಟ್ಸಾಪ್, ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ ಇತ್ಯಾದಿ ಅಪ್ಲಿಕೇಶನ್‌ ಗಳಾಗಿವೆ.

ಸೈಬರ್ ಇಲಾಖೆಯು ಇಂತಹಾ ಆಕ್ಷೇಪಾರ್ಹ ಪೋಸ್ಟ್‌ ಗಳನ್ನು ಹಾಕುವವರಿಗೆ ಎಚ್ಚರಿಕೆ ನೀಡಿದ್ದು, ಸಂಬಂಧಿತ ಪೋಸ್ಟ್ ತೆಗೆದುಹಾಕುವಂತೆ ಸೂಚನೆ ನೀಡಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News