ಪಠ್ಯ ಪರಿಷ್ಕರಣೆ ವಿವಾದ | ಸರಕಾರಕ್ಕೆ ಹೆದರಿ ಸ್ವಾಮೀಜಿಗಳು ಕೈಕಟ್ಟಿ ಕೂರಬಾರದು: ಡಿ.ಕೆ.ಶಿವಕುಮಾರ್

Update: 2022-06-19 12:05 GMT

ಬೆಂಗಳೂರು, ಜೂ. 19: ‘ಪಠ್ಯ ಪುಸ್ತಕ ಪರಿಷ್ಕರಣೆ ನೆಪದಲ್ಲಿ ರಾಜ್ಯ ಸರಕಾರ ಬಾಲಗಂಗಾಧರನಾಥ ಸ್ವಾಮಿ, ಶಿವಕುಮಾರ ಸ್ವಾಮಿ, ಕುವೆಂಪು, ನಾರಾಯಣ ಗುರು ಸೇರಿ ಅನೇಕ ಗಣ್ಯರ ಇತಿಹಾಸ ತಿರುಚಿ, ಅಪಮಾನ ಮಾಡಲಾಗಿದೆ. ಕೆಲ ಸ್ವಾಮೀಜಿಗಳು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಆದರೆ, ಇಂತಹ ವಿಚಾರಗಳು ಬಂದಾಗ ಸರಕಾರಕ್ಕೆ ಹೆದರಿ ಕೂರಬಾರದು. ಸರಕಾರ ಏನು ಮಾಡಲು ಸಾಧ್ಯ? ಹೀಗಾಗಿ ಸ್ವಾಮೀಜಿಗಳು ಈ ವಿಚಾರದಲ್ಲಿ ಧ್ವನಿ ಎತ್ತಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಮನವಿ ಮಾಡಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರಿನ ಸಿದ್ದಗಂಗಾ ಶ್ರೀಗಳು, ಮುರುಘಾ ಮಠದ ಶರಣರು, ಆದಿಚುಂಚನಗಿರಿ ಶ್ರೀಗಳು ಸೇರಿದಂತೆ ಹಲವು ಸ್ವಾಮೀಜಿಗಳು ಅಸಮಾಧಾನ ಹೊರಹಾಕಿದ್ದಾರೆ. ಪರಿಷ್ಕರಣೆ ಮಾಡಿದ ಪಠ್ಯಕ್ಕೆ ವಿರೋಧ ಎಂದರೆ ಅದು ನಮ್ಮ ರಾಜಕಾರಣಕ್ಕೆ ಬೆಂಬಲ ನೀಡುವ ವಿಚಾರವಲ್ಲ ಅಥವಾ ಕೇವಲ ಹೇಳಿಕೆಯ ವಿಚಾರವಲ್ಲ. ಸ್ವಾಮೀಜಿಗಳು ಇರುವುದೇ ಈ ದೇಶದ ಧರ್ಮ, ಸಂಸ್ಕೃತಿ, ನ್ಯಾಯ, ನೀತಿ ಉಳಿಸಲು' ಎಂದು ಹೇಳಿದರು.

‘ಸ್ವಾಮೀಜಿಗಳು ಈ ಸಮಾಜಕ್ಕೆ ಆಗಿರುವ ಅನ್ಯಾಯವನ್ನು ಪ್ರಶ್ನಿಸಬೇಕು. ಇದು ಒಂದು ಜಾತಿ, ಸಮುದಾಯದ ವಿಚಾರವಲ್ಲ. ಒಟ್ಟು ಸಮಾಜದ ವಿಚಾರ. ಎಲ್ಲರೂ ಸಂವಿಧಾನ ಒಪ್ಪಿ ಶಾಂತಿಯಿಂದ ಇರಬೇಕು. ಆದರೆ ಸರ್ಕಾರ ಈಗ ಶಾಂತಿಗೆ ಭಂಗ ತರುವ ಕೆಲಸ ಮಾಡುತ್ತಿದೆ. ಇದರ ವಿರುದ್ಧ ಹೋರಾಟ ಮಾಡಬೇಕು. ಹಿಂದೆ ನಮ್ಮ ಸರಕಾರದ ನಿರ್ಧಾರಗಳ ವಿರುದ್ಧ ಇದೇ ಬಿಜೆಪಿಯವರು ಎಷ್ಟು ದೊಡ್ಡ  ಹೋರಾಟ ಮಾಡಿದ್ದರು? ಸರಕಾರ ಸ್ವಾಮೀಜಿಗಳನ್ನು ಹೆದರಿಸುತ್ತಿದೆಯೆ? ಎಂಬ ಬಗ್ಗೆ ಸ್ವಾಮೀಜಿಗಳನ್ನೆ ಕೇಳಬೇಕು' ಎಂದು ಶಿವಕುಮಾರ್ ತಿಳಿಸಿದರು.

‘ಬುದ್ಧ, ಬಸವಣ್ಣ, ಕುವೆಂಪು, ಅಂಬೇಡ್ಕರ್, ನಾರಾಯಣ ಗುರುಗಳಿಗೆ ಅಪಮಾನ ಆಗಿರುವ ಬಗ್ಗೆ ಅವರನ್ನು ಕೇಳಬೇಕು. ಬಾಲಗಂಗಾಧರನಾಥ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿಗಳನ್ನು ನಡೆದಾಡುವ ದೇವರು ಎಂದು ಆರಾಧಿಸುತ್ತೇವೆ. ಅಂತವರಿಗೆ ಈ ರೀತಿ ಅಪಮಾನ ಮಾಡಿರುವಾಗ ಸಂಬಂಧಪಟ್ಟ ಸಮುದಾಯದ ಸಂಘಟನೆಗಳಿಗೆ ಏನಾಗಿದೆ? ಒಕ್ಕಲಿಗರ ಸಂಘ ಇರಲಿ, ವೀರಶೈವ ಸಂಘ ಇರಲಿ, ಇತರ ಸಂಘಗಳಿಗೆ ಏನಾಗಿದೆ? ಅವರೇಕೆ ಧ್ವನಿ ಎತ್ತುತ್ತಿಲ್ಲ. ರಾಜಕೀಯ ನಾಯಕರ ವಿಚಾರ ಬಿಡಿ. ಕೆಲವರು ಒಪ್ಪಂದ ಮಾಡಿಕೊಂಡು ಅವರವರ ರಾಜಕಾರಣ ಮಾಡುತ್ತಾರೆ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಮಠಗಳು ಆ ರೀತಿ ಆಗಬಾರದು' ಎಂದು ಶಿವಕುಮಾರ್ ಅಸಮಾಧಾನ ಹೊರಹಾಕಿದರು.

‘ಕನ್ನಡ ಸಂಘಟನೆಗಳು ನಿನ್ನೆ ಪ್ರತಿಭಟನೆ ಹಮ್ಮಿಕೊಂಡಿದ್ದವು. ಅವರಿಗೆ ಯಾವುದೇ ರಾಜಕೀಯದ ಅಗತ್ಯವಿಲ್ಲ. ಅದೇ ರೀತಿ ಸ್ವಾಮೀಜಿಗಳು ಈ ವಿಚಾರವಾಗಿ ಧ್ವನಿ ಎತ್ತಬೇಕು ಎಂದು ಅವರ ಪಾದಕ್ಕೆ ನಮಸ್ಕರಿಸುತ್ತಾ ನಮ್ರತೆಯಿಂದ ಮನವಿ ಮಾಡಿಕೊಳ್ಳುತ್ತೇನೆ'

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News