VIDEO- ಬೆಂಗಳೂರು: ಪ್ರಧಾನಿ ಮೋದಿಗೆ ಹಿಂದಿಯಲ್ಲಿ ಸ್ವಾಗತ ಕೋರಿದ್ದ ಬ್ಯಾನರ್ ಗಳಿಗೆ ಮಸಿ ಬಳಿದ ಕರವೇ ಕಾರ್ಯಕರ್ತರು
Update: 2022-06-19 18:36 IST
ಬೆಂಗಳೂರು: ಟಿ.ಎ.ನಾರಾಯಣಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಇಂದು ಸಂಜೆ 5 ಗಂಟೆಗೆ ಮೈಸೂರು ರಸ್ತೆಯಲ್ಲಿ ಅಳವಡಿಸಲಾಗಿದ್ದ ನೂರಾರು ಹಿಂದಿ ಫ್ಲೆಕ್ಸ್ ಗಳಿಗೆ ಮಸಿ ಬಳಿದು ಪ್ರತಿಭಟಿಸಿದರು.
ಪ್ರಧಾನಿ ನರೇಂದ್ರ ಮೋದಿ ಮೈಸೂರು ಭೇಟಿ ಹಿನ್ನೆಲೆಯಲ್ಲಿ ಮೈಸೂರು ರಸ್ತೆಯಲ್ಲಿ ಸಚಿವ ಮುನಿರತ್ನ ನಾಯ್ಡು ಮತ್ತು ಬೆಂಬಲಿಗರು ಹಿಂದಿ ಭಾಷೆಯ ಫ್ಲೆಕ್ಸ್ ಗಳನ್ನು ಅಳವಡಿಸಿದ್ದರು.
ವಿಷಯ ತಿಳಿಯುತ್ತಿದ್ದಂತೆ, ಕರವೇ ಯುವ ಘಟಕದ ಅಧ್ಯಕ್ಷ ಟಿ.ಎ.ಧರ್ಮರಾಜ್ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಫ್ಲೆಕ್ಸ್ ಗಳಿಗೆ ಮಸಿ ಬಳಿದರು. ಪೊಲೀಸರು ಅಡ್ಡಿ ಪಡಿಸಿದರೂ ಸಹ ಫ್ಲೆಕ್ಸ್ ಗಳಿಗೆ ಮಸಿ ಬಳಿಯಲಾಯಿತು.
ಕರವೇ ಯುವ ಘಟಕದ ಜಿಲ್ಲಾಧ್ಯಕ್ಷ ಕಾರ್ತಿಕ್, ಪದ್ಮನಾಭನಗರ ಕ್ಷೇತ್ರದ ಅಧ್ಯಕ್ಷ ನಿತೀಶ್ ಮನು ಗೌಡ ಸೇರಿದಂತೆ ಪ್ರಮುಖರು ಈ ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡು, ಕರ್ನಾಟಕದಲ್ಲಿ ಹಿಂದಿಹೇರಿಕೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂಬ ಎಚ್ಚರಿಕೆ ನೀಡಿದರು.