‘ಜಾತ್ಯತೀತತೆ'ಗಿಂತ ಕೋಮುವಾದ ಹರಡುವುದು ಸುಲಭ: ದಿನೇಶ್ ಅಮೀನ್ ಮಟ್ಟು
ಬೆಂಗಳೂರು, ಜೂ. 19: ‘ಪ್ರಸ್ತುತ ದಿನಗಳಲ್ಲಿ ಕೋಮುವಾದವನ್ನು ಹರಡುವುದು ಸುಲಭವಾಗಿದೆ. ಆದರೆ, ಜಾತ್ಯತೀತತೆಯನ್ನು ಸ್ಥಾಪಿಸುವುದು ಕಷ್ಟವಾಗಿದೆ' ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಬೇಸರ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಪತ್ರಕರ್ತ ನವೀನ್ ಸೂರಿಂಜೆ ಅವರ ‘ನೇತ್ರಾವತಿಯಲ್ಲಿ ನೆತ್ತರು’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಕರಾವಳಿಯಲ್ಲಿ 1974ರಲ್ಲಿ ಭೂ ಸುಧಾರಣಾ ಕಾಯ್ದೆಯಿಂದಾಗಿ ಉಳ್ಳವರು, ಇಲ್ಲದವರಿಗೆ ಭೂಮಿಯನ್ನು ನೀಡಿದಾಗ ಗಲಾಟೆ ಮಾಡಬಹುದಿತ್ತು. ಆದರೆ, ಆಗ ರಕ್ತಪಾತಗಳು ನಡೆದಿಲ್ಲ. ಆರೆಸ್ಸೆಸ್ ತನ್ನ ಶಾಖೆಗಳನ್ನು 1977ರಿಂದ ಇಚೆಗೆ ಸ್ಥಾಸಿಸಿಕೊಂಡು ತನ್ನ ಎಡೆಯನ್ನು ಬಿಚ್ಚಿದೆ. ಭಜನಾ ಮಂಡಳಿ, ಯುವ ಸಂಘಗಳಿಗೆ ಅನುದಾನಗಳನ್ನು ನೀಡಿ ಪ್ರೋತ್ಸಾಹಿಸಲಾಗಿದೆ. ಇತ್ತೀಚೆಗೆ ಇದು ಹೆಚ್ಚಾಗಿದ್ದು, ಕರಾವಳಿ ಹಿಂದುತ್ವದ ಪ್ರಯೋಗ ಶಾಲೆಗಳನ್ನು ಮಾಡಲಾಗಿದೆ' ಎಂದು ಟೀಕಿಸಿದರು.
‘ಉಡುಪಿ ಲೋಕಸಭಾ ಕ್ಷೇತ್ರದಿಂದ ಕ್ಯಾಥೋಲಿಕ್ ಪಂಥದ ಆಸ್ಕರ್ ಫರ್ನಾಂಡೀಸ್ 5 ಬಾರಿ ಗೆದ್ದು ಬಂದಿದ್ದರು. ಆದರೆ, ಇಂದು ಒಂದು ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನವನ್ನು ಕ್ಯಾಥೋಲಿಕ್ ಪಂಥದವರು ಗೆಲ್ಲಲು ಸಾಧ್ಯವಾಗದಂತ ವಾತಾವರಣವನ್ನು ಸೃಷ್ಟಿಸಲಾಗಿದೆ' ಎಂದು ದಿನೇಶ್ ಅಮೀನ್ ಮಟ್ಟು ಇದೇ ವೇಳೆ ತಿಳಿಸಿದರು.
‘ಕೋಮುವಾದ ಮಾಡುವವರಿಗೆ ಜಾತ್ಯತೀತತೆ, ಮೀಸಲಾತಿ ಮತ್ತು ಅಸ್ಪøಶ್ಯತೆಯ ಬಗ್ಗೆ ಮಾತನಾಡಿದರೆ ಉತ್ತರಿಸುವುದಿಲ್ಲ. ಅವರು ನಮ್ಮ ವಿರುದ್ದ ನಮ್ಮನ್ನು ಎತ್ತಿಗಟ್ಟಿದ್ದಾರೆ. ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರಿಗೆ ಚಡ್ಡಿಯನ್ನು ನೀಡಿ ವಿರೋಧ ಪಕ್ಷದ ವಿರುದ್ಧ ಎತ್ತಿಕಟ್ಟಿದ್ದಾರೆ. ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಪಠ್ಯ ಪುಸ್ತಕ ಪರಿಷ್ಕರಣೆಯನ್ನು ಸಮರ್ಥಿಸಿಕೊಳ್ಳುವ ಕೆಲಸವನ್ನು ಒಪ್ಪಿಸಿದ್ದಾರೆ' ಎಂದು ಅಮೀನ್ ಮಟ್ಟು ಆರೋಪಿಸಿದರು.
‘ವಿವಾದಗಳನ್ನು ಸೃಷ್ಟಿಸಿದವರು ಚುನಾವಣಾ ಸಮಯದಲ್ಲಿ ಕೈ ಬಿಡುತ್ತಾರೆ. ಮುಸ್ಲಿಮರನ್ನು ಮುನ್ನೆಲೆ ತಂದು ಜನರ ಭಾವನೆಗಳನ್ನು ಕೆರಳಿ ಚುನಾವಣೆಯನ್ನು ಗೆಲ್ಲುತ್ತಾರೆ. ಪುನಃ ವಿವಾದಗಳನ್ನು ಮುಂದುವರೆಸುತ್ತಾರೆ' ಎಂದು ದಿನೇಶ್ ಅಮೀನ್ ಮಟ್ಟು ಹೇಳಿದರು.
ಲೇಖಕಿ ಕೆ.ಶರೀಫಾ ಮಾತನಾಡಿ, ‘ನವೀನ್ ಸೂರಿಂಜೆ ಅವರ ‘ನೇತ್ರಾವತಿಯಲ್ಲಿ ನೆತ್ತರು’ ಪುಸ್ತಕದ ನಲವತ್ತು ಕಥನಗಳು ನಲವತ್ತು ಘಟನೆಯನ್ನು ಹೇಳುತ್ತವೆ. ಸ್ವಯಂ ಘೋಷಿತ ಪೊಲೀಸರಾಗಿ ಸಂಘಪರಿವಾರದವರು ನಡೆದುಕೊಳ್ಳುತ್ತಿರುವುದು ತಿಳಿಯುತ್ತದೆ. ಪ್ರಸ್ತುತ ಮಂಗಳೂರು ವಿವಿಯಲ್ಲಿ ನಾಗವೇಣಿ ಅವರು ಪಠ್ಯವನ್ನು ಬೋಧಿಸಲು ಭಯಪಡುವ ವಾತಾವರಣವನ್ನು ಸೃಷ್ಟಿಸಲಾಗಿದೆ' ಎಂದು ವಿವರಿಸಿದರು.
‘ರಾಜ್ಯದಲ್ಲಿ ಭೂಸುಧಾರಣಾ ಕಾಯ್ದೆಯು ಜಾರಿಗೆ ಬಂದಾಗ ದಲಿತ ಸಮುದಾಯಗಳಿಗೂ ಸೇರಿ ಕೆಳವರ್ಗದವರಿಗೆ ಜಮೀನು ಸಿಕ್ಕಿದಂತಾಯಿತು. ಆಗ ದಲಿತರಿಗೆ ಕೇಸರಿ ಶಾಲನ್ನು ಹಾಕಿ, ಮೇಲವರ್ಗದವರು ಬಿಳಿ ವಸ್ತ್ರಗಳನ್ನು ಹಾಕಿಕೊಂಡು ಮುಖಂಡರಂತೆ ವರ್ತಿಸಿದರು' ಎಂದು ಅವರು ಸ್ಮರಿಸಿದರು.
ಇವಿಎಂನ ವೈಫಲ್ಯವೋ ಅಥವಾ ಜನರ ಬುದ್ಧಿವಂತಿಕೆಯ ಕೊರತೆಯೋ ಶೇ.3ರಷ್ಟಿರುವ ಒಂದೇ ಸಮುದಾಯಕ್ಕೆ ಸೇರಿದ ಜನರು ಚುನಾವಣೆಯಲ್ಲಿ ಆಯ್ಕೆಯಾಗಿಬರುತ್ತಿದ್ದಾರೆ. ಶೇ.17ರಷ್ಟು ಮುಸ್ಲಿಂ ಸಮುದಾಯದವರು ಈ ರಾಜ್ಯದಲ್ಲಿದ್ದರೂ, ವಿಧಾನಸೌಧದಲ್ಲಿ ಅವರ ಪ್ರಾತಿನಿದ್ಯವೇ ಇಲ್ಲ. ಬಿಜೆಪಿಯಲ್ಲಿ ಮುಸ್ಲಿಂ ಜನಪ್ರತಿನಿಧಿಗಳು ಇಲ್ಲ. ವಿಧಾನಸೌಧದಲ್ಲಿ ಪ್ರಾತಿನಿಧ್ಯ ಸಿಕ್ಕಿದ್ದರೆ ಪ್ರಶ್ನಿಸಬಹುದಾಗಿತ್ತು' ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‍ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಮ್, ಕೃತಿಯ ಲೇಖಕರೂ ಆಗಿರುವ ಪತ್ರಕರ್ತ ನವೀನ್ ಸೂರಿಂಜೆ, ಮಹಮ್ಮದ್ ಶಹೀದ್ ಉಪಸ್ಥಿತರಿದ್ದರು.
‘ಕರಾವಳಿ ಕರ್ನಾಟಕವು ಬುದ್ಧಿವಂತರ ಪ್ರದೇಶವಾಗಿದೆ. ಆದರೆ ಈ ಬಾರಿ ಎಸೆಸೆಲ್ಸಿ ಫಲಿತಾಂಶ ಕುಸಿದಿದೆ. ಇದಕ್ಕೆ ಕಾರಣಕರ್ತರು ಯಾರು ಎಂದು ತಿಳಿದಿದೆ. ಹಾಗೆಯೇ ನವೀನ್ ಸೂರಿಂಜೆ ಅವರ ಪುಸ್ತಕವು ಸಣ್ಣಸಣ್ಣ ಲೇಖನಗಳನ್ನು ಹೊಂದಿದ್ದರೂ, ಇಡೀ ಕರ್ನಾಟಕದ ಜ್ವಲಂತ ಸಮಸ್ಯೆಗಳನ್ನು ಹೇಳುತ್ತದೆ'
-ಡಾ.ಕೆ.ಮರುಳಸಿದ್ಧಪ್ಪ, ಹಿರಿಯ ಸಾಹಿತಿ