‘ಅಗ್ನಿಪಥ್’ ವಿರುದ್ಧ ಪ್ರತಿಭಟನೆ : 60 ರೈಲು ಬೋಗಿಗಳು ಬೆಂಕಿಗಾಹುತಿ; 700 ಕೋ.ರೂ. ನಷ್ಟ

Update: 2022-06-19 18:35 GMT

ಲಕ್ನೋ, ಜೂ. 19: ಕೇಂದ್ರ ಸರಕಾರದ ‘ಅಗ್ನಿಪಥ್’ ಯೋಜನೆ ವಿರುದ್ಧ  ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯ ಸಂದರ್ಭ ಬಿಹಾರದಲ್ಲಿ ಸುಮಾರು 700 ಕೋ.ರೂ. ಮೌಲ್ಯದ 60 ರೈಲು ಬೋಗಿ ಹಾಗೂ ಸೊತ್ತುಗಳು ಬೆಂಕಿಗಾಹುತಿಯಾಗಿವೆ. 

ಪ್ರತಿಭಟನಕಾರರು 11 ರೈಲು ಎಂಜಿನ್‌ಗಳಿಗೆ ಹಾಗೂ ರೈಲು ನಿಲ್ದಾಣದ ಸ್ಟಾಲ್‌ಗಳಿಗೆ ಬೆಂಕಿ ಹಂಚಿದ್ದಾರೆ. ರೈಲ್ವೆಯ ಇತರ ಸೊತ್ತುಗಳನ್ನು ನಾಶಪಡಿಸಿದ್ದಾರೆ ಎಂದು ಪೂರ್ವ ಕೇಂದ್ರ ರೈಲ್ವೆಯ ವಕ್ತಾರರನ್ನು ಉಲ್ಲೇಖಿಸಿ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. 
ಶಸಸ್ತ್ರ ಪಡೆಗಳಿಗೆ ಅಲ್ಪಾವಧಿಗೆ ನೇಮಕಾತಿ ಮಾಡುವ ‘ಅಗ್ನಿಪಥ್’ ಯೋಜನೆಯ ವಿರುದ್ಧ ಹಲವು ರಾಜ್ಯಗಳಲ್ಲಿ ಬುಧವಾರದಿಂದ ಪ್ರತಿಭಟನೆ ನಡೆಯುತ್ತಿವೆ. ಈ ಯೋಜನೆಯನ್ನು ಕೇಂದ್ರ ಸರಕಾರ ಮಂಗಳವಾರ ಘೋಷಿಸಿತ್ತು. 

ರೈಲ್ವೆ ಸೊತ್ತಿಗೆ ಉಂಟಾದ ಹಾನಿಯ ಲೆಕ್ಕಾಚಾರವನ್ನು ಇನ್ನೂ ಮಾಡಲಾಗುತ್ತಿದೆ. ಅಲ್ಲದೆ, ರೈಲ್ವೆ ಸಂಪೂರ್ಣ ವರದಿಯನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿದೆ ಎಂದು ಮುಖ್ಯ ಸಾರ್ವಜನಿಕ ಸಂರ್ಪರ್ಕ ಅಧಿಕಾರಿ ವಿರೇಂದ್ರ ಕುಮಾರ್ ಅವರು ತಿಳಿಸಿದ್ದಾರೆ.  

362 ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ ಹಾಗೂ  ರವಿವಾರ ಎರಡು ರೈಲುಗಳ ಸಂಚಾರವನ್ನು ನಿಲ್ಲಿಸಲಾಗಿದೆ ಎಂದು ಪೂರ್ವ ಕೇಂದ್ರ ರೈಲ್ವೆ ತಿಳಿಸಿದೆ. 
ಪ್ರತಿಭಟನೆ ಹಿನ್ನೆಲೆಯಲ್ಲಿ ರೈಲ್ವೆ ಶನಿವಾರ ದೇಶದಾದ್ಯಂತ 369 ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. ಇನ್ನೂ ಎರಡು ರೈಲುಗಳನ್ನು ಭಾಗಶಃ ರದ್ದುಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News