ಈ ಕಾರ್ಯಾಚರಣೆಗಳನ್ನು ನಿಲ್ಲಿಸಲು ನ್ಯಾಯಾಂಗ ಯಾಕೆ ಮುಂದಾಗುತ್ತಿಲ್ಲ?

Update: 2022-06-20 05:33 GMT

ಈ ಧ್ವಂಸ ಕಾರ್ಯಾಚರಣೆಗಳು ಕಾನೂನುಬಾಹಿರ ಎಂಬುದಾಗಿ ಹಲವಾರು ಮಾಜಿ ನ್ಯಾಯಾಧೀಶರು ಮತ್ತು ವಕೀಲರು ಹೇಳುತ್ತಾರೆ. ವಿಚಾರಣೆಗೆ ಮೊದಲೇ ಮನೆಗಳನ್ನು ಧ್ವಂಸಗೊಳಿಸುವ ಮೂಲಕ ಆರೋಪಿಗಳಿಗೆ ಶಿಕ್ಷೆ ನೀಡುವುದಕ್ಕೆ ಭಾರತೀಯ ಕಾನೂನಿನಲ್ಲಿ ಯಾವುದೇ ನೆಲೆಗಟ್ಟಿಲ್ಲ ಎಂದು ಅವರು ಬೆಟ್ಟು ಮಾಡುತ್ತಾರೆ. ಅದೂ ಅಲ್ಲದೆ, ಇಂಥ ಧ್ವಂಸ ಕಾರ್ಯಾಚರಣೆಗಳು ಅಂತರ್‌ರಾಷ್ಟ್ರೀಯ ಕಾನೂನುಗಳನ್ನೂ ಉಲ್ಲಂಘಿಸುತ್ತದೆ. ಇಂಥ ಅಂತರ್‌ರಾಷ್ಟ್ರೀಯ ಕಾನೂನುಗಳನ್ನು ಪಾಲಿಸಬೇಕಾದ ಬದ್ಧತೆಯನ್ನು ಭಾರತ ಹೊಂದಿದೆ.

ರವಿವಾರ ಪ್ರಯಾಗ್‌ರಾಜ್ ಅಭಿವೃದ್ಧಿ ಪ್ರಾಧಿಕಾರವು ಹೋರಾಟಗಾರ ಜಾವೇದ್ ಮುಹಮ್ಮದ್‌ರ ಮನೆಯನ್ನು ನೆಲಸಮಗೊಳಿಸಿದಾಗ ಹೆಚ್ಚಿನ ವಕೀಲರು ಮತ್ತು ವೀಕ್ಷಕರು ಆಘಾತ ವ್ಯಕ್ತಪಡಿಸಿದರು. ಪ್ರವಾದಿ ಮುಹಮ್ಮದ್ ವಿರುದ್ಧ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರು ನೀಡಿರುವ ವಿವಾದಾಸ್ಪದ ಹೇಳಿಕೆ ಗಳ ವಿರುದ್ಧ ನಗರದಲ್ಲಿ ನಡೆದ ಪ್ರತಿಭಟನೆಯನ್ನು ಸಂಘಟಿಸಿದ ಪ್ರಮುಖ ಆರೋಪಿ ಮುಹಮ್ಮದ್ ಆಗಿದ್ದಾರೆ. (ಆ ನಾಯಕರನ್ನು ಬಳಿಕ ಅಮಾನತುಗೊಳಿಸಲಾಗಿದೆ ಅಥವಾ ವಜಾಗೊಳಿಸಲಾಗಿದೆ).

ಯಾವುದೇ ಅಪರಾಧದಲ್ಲಿ ಮುಹಮ್ಮದ್ ದೋಷಿ ಎಂಬುದಾಗಿ ನ್ಯಾಯಾಲಯ ತೀರ್ಪು ನೀಡಿಲ್ಲ ಹಾಗೂ ಯಾವುದೇ ಪ್ರಕರಣದ ಆರೋಪಿಗಳ ಮನೆಗಳನ್ನು ಶಿಕ್ಷೆಯ ರೂಪದಲ್ಲಿ ಧ್ವಂಸಗೊಳಿಸಲು ಭಾರತೀಯ ಕ್ರಿಮಿನಲ್ ಕಾನೂನು ಅವಕಾಶ ನೀಡುವುದಿಲ್ಲ. ಆದರೆ,ಇತ್ತೀಚಿನ ತಿಂಗಳುಗಳಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ನಡೆದುಕೊಂಡು ಬಂದಿರುವ ಸಿದ್ಧ ಮಾದರಿಯಂತೆ, ಮುಹಮ್ಮದ್‌ರ ಮನೆಯನ್ನು ಮುನಿಸಿಪಾಲಿಟಿ ಅಧಿಕಾರಿಗಳು ಧ್ವಂಸಗೊಳಿಸಿದರು. ಈ ಸಿದ್ಧ ಮಾದರಿ ಹೀಗಿದೆ: ಪ್ರತಿಭಟನೆ ಅಥವಾ ಗಲಭೆಗಳಲ್ಲಿ ಭಾಗಿಯಾಗಿದ್ದಾನೆಂದು ಆರೋಪಿಸಲಾದ ಮುಸ್ಲಿಮ್ ವ್ಯಕ್ತಿಯ ಮನೆಯನ್ನು ಮುನಿಸಿಪಾಲಿಟಿ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಲಾಗಿದೆ ಎಂದು ಘೋಷಿಸುವುದು ಮತ್ತು ಮರುಕ್ಷಣ ಮನೆಯನ್ನು ನೆಲಸಮಗೊಳಿಸುವುದು. ನೆಲಸಮ ಕಾರ್ಯಾಚರಣೆ ಯು ಕಾಕತಾಳೀಯವಷ್ಟೆ; ಮನೆಯನ್ನು ಕೆಡಹುವಾಗ ಸರಿಯಾದ ವಿಧಾನವನ್ನು ಅನುಸರಿಸಲಾಗಿದೆ ಎಂಬುದಾಗಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊತ್ತಿರುವ ಸರಕಾರದ ಶಾಖೆಯಾಗಿರುವ ನ್ಯಾಯಾಂಗದ ವೌನವನ್ನು ಹಲವರು ಪ್ರಶ್ನಿಸಿದ್ದಾರೆ.
ಮನೆ ಧ್ವಂಸಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳು ತಮ್ಮ ಮುಂದೆ ಇದ್ದರೂ, ಅದನ್ನು ನಿಲ್ಲಿಸಲು ನ್ಯಾಯಾಲಯಗಳು ಯಾವುದೇ ಕ್ರಮವನ್ನು ಯಾಕೆ ತೆಗೆದುಕೊಂಡಿಲ್ಲ? ಮನೆ ಧ್ವಂಸ ಕಾರ್ಯಾಚರಣೆ ಯನ್ನು ವಿಶೇಷವಾಗಿ ಮುಸ್ಲಿಮರ ವಿರುದ್ಧ ಶಿಕ್ಷೆಯ ರೂಪದಲ್ಲಿ ಬಳಸಲಾಗುತ್ತಿದೆ ಎನ್ನುವುದನ್ನು ರಾಜಕೀಯ ಉದ್ದೇಶದ ಹೇಳಿಕೆಗಳು ಸ್ಪಷ್ಟಪಡಿಸಿದ್ದರೂ ವೌನ ಯಾಕೆ ಎಂದು ಅವರು ಕೇಳಿದ್ದಾರೆ.
ಮನೆ ಧ್ವಂಸ ಕಾರ್ಯಾಚರಣೆಯು ಕಾನೂನುಬಾಹಿರ ಮಾತ್ರವಲ್ಲ, ಆಶ್ರಯ ಪಡೆಯುವ ಹಕ್ಕು ಮುಂತಾದ ಮೂಲಭೂತ ಹಕ್ಕುಗಳು ಮತ್ತು ಸಹಜ ನ್ಯಾಯವೂ ಅಪಾಯದಲ್ಲಿದೆ ಎಂದು ಕಾನೂನು ಪರಿಣತರು ಹೇಳುತ್ತಾರೆ.
ನ್ಯಾಯಾಂಗದಿಂದ ನಿರಾಶೆ

ಮಂಗಳವಾರ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ಮಾಜಿ ನ್ಯಾಯಾಧೀಶರು ಮತ್ತು ಹಿರಿಯ ವಕೀಲರು ಸೇರಿದಂತೆ ನ್ಯಾಯಾಂಗಕ್ಕೆ ಸಂಬಂಧಪಟ್ಟ 12 ವ್ಯಕ್ತಿಗಳು, ಉತ್ತರಪ್ರದೇಶದಲ್ಲಿ ಇತ್ತೀಚೆಗೆ ನಡೆಯು ತ್ತಿರುವ ಘಟನೆಗಳನ್ನು ಸುಪ್ರೀಂ ಕೋರ್ಟ್ ಗಣನೆಗೆ ತೆಗೆದುಕೊಳ್ಳ ಬೇಕೆಂದು ಒತ್ತಾಯಿಸಿ ಮುಖ್ಯ ನ್ಯಾಯಾಧೀಶ ಎನ್.ವಿ. ರಮಣಗೆ ಪತ್ರವೊಂದನ್ನು ಬರೆದರು.
‘‘ನ್ಯಾಯಾಲಯದ ಸತ್ವವು ಇಂತಹ ಮಹತ್ವದ ಕಾಲದಲ್ಲಿ ಪರೀಕ್ಷೆ ಗೊಳಪಡುತ್ತದೆ’’ ಎಂದು ಪತ್ರ ಹೇಳಿದೆ. ಸುಪ್ರೀಂ ಕೋರ್ಟ್ ನ ‘ಸಂವಿಧಾನದ ಪಾಲಕ’ನ ಕರ್ತವ್ಯವನ್ನು ಪತ್ರವು ನೆನಪಿಸಿದೆ. ಕೋವಿಡ್-19ರ ಲಾಕ್‌ಡೌನ್ ಅವಧಿಯ ವಲಸಿಗರ ಬಿಕ್ಕಟ್ಟು ಮತ್ತು ಪೆಗಾಸಸ್ ವಿವಾದ ಮುಂತಾದ ಮಹತ್ವದ ವಿಷಯಗಳನ್ನು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿರುವುದರತ್ತ ಪತ್ರವು ನ್ಯಾಯಾಲಯದ ಗಮನವನ್ನು ಸೆಳೆದಿದೆ.

‘‘ಸುಪ್ರೀಂ ಕೋರ್ಟ್ ಸಂದರ್ಭಕ್ಕೆ ತಕ್ಕಂತೆ ನಡೆದುಕೊಳ್ಳುತ್ತದೆ ಹಾಗೂ ಈ ಮಹತ್ವದ ಕಾಲಘಟ್ಟದಲ್ಲಿ ನಾಗರಿಕರು ಮತ್ತು ಸಂವಿಧಾನದ ಕೈಬಿಡುವುದಿಲ್ಲ ಎಂಬುದಾಗಿ ನಾವು ಆಶಿಸುತ್ತೇವೆ’’ ಎಂದು ಹೇಳುತ್ತಾ ಪತ್ರ ಮುಕ್ತಾಯಗೊಂಡಿದೆ.
ಮುಹಮ್ಮದ್‌ರ ಮನೆಯ ಕಾನೂನುಬಾಹಿರ ಧ್ವಂಸವನ್ನು ಗಣನೆಗೆ ತೆಗೆದುಕೊಂಡು ಮನೆಯನ್ನು ಮರುನಿರ್ಮಿಸಿಕೊಡಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಹಲವು ವಕೀಲರು ಅಲಹಾಬಾದ್ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಈ ವಿಷಯದಲ್ಲಿ ನ್ಯಾಯಾಂಗ ಮಧ್ಯಪ್ರವೇಶಿಸಲು ವಿಫಲವಾಗಿ ರುವುದಕ್ಕೆ ಹಲವು ಕಾನೂನು ಪರಿಣತರು ವಿಷಾದ ವ್ಯಕ್ತಪಡಿಸಿದ್ದಾರೆ. ‘‘ಈ ವಿಷಯವನ್ನು ನ್ಯಾಯಾಲಯವು ಅತ್ಯಂತ ತುರ್ತಾಗಿ ವಿಚಾರಣೆಗೆಕೈಗೆತ್ತಿಕೊಳ್ಳಬೇಕು ಮತ್ತು ಸೂಕ್ತ ಆದೇಶಗಳನ್ನು ನೀಡಬೇಕು ಎಂದು ನನಗೆ ಅನಿಸುತ್ತದೆ’’ ಎಂದು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಮದನ್ ಲೋಕುರ್ ಹೇಳಿದ್ದಾರೆ. ‘‘ಯಾವುದೇ ಒಳ್ಳೆಯ ಕಾರಣವಿಲ್ಲದೆ, ಮನೆಗಳನ್ನು ಧ್ವಂಸಗೊಳಿಸಲು ಯಾವುದೇ ನ್ಯಾಯಾಲ ಯವು ಅನುಮತಿ ನೀಡಬಾರದು’’ ಎಂದರು.
ಈ ಮನೆ ಧ್ವಂಸ ಕಾರ್ಯಾಚರಣೆಗಳು ನ್ಯಾಯಾಂಗೇತರ ಹತ್ಯೆ ಗಳಂತೆ ಎಂದು ಕಾನೂನು ಪಂಡಿತ ಅನೂಜ್ ಭುವಾನಿಯ ಹೇಳು ತ್ತಾರೆ. ‘‘ಯಾವುದೇ ಸರಿಯಾದ ವಿಧಾನವನ್ನು ಅನುಸರಿಸದೆ ಮತ್ತು ಆರೋಪಿಗಳ ಹಕ್ಕುಗಳನ್ನು ಗಣನೆಗೆ ತೆಗೆದುಕೊಳ್ಳದೆ ಅವರನ್ನು ತಕ್ಷಣಕ್ಕೆ ಶಿಕ್ಷಿಸುವ ವಿಧಾನ ಇದಾಗಿದೆ’’ ಎಂದು ಅವರು ಅಭಿಪ್ರಾಯಪಡುತ್ತಾರೆ.

‘‘ಧ್ವಂಸ ಕಾರ್ಯಾಚರಣೆಗೆ ಜವಾಬ್ದಾರರಾದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂಥ ಪರಿಣಾಮಕಾರಿ ಕ್ರಮ ಗಳನ್ನು ನ್ಯಾಯಾಲಯಗಳು ತೆಗೆದುಕೊಂಡರೆ ಇಂತಹ ಕಾರ್ಯಾಚರಣೆ ಗಳು ಮುಂದೆ ನಿಲ್ಲಲಿವೆ’’ ಎಂದರು.

ಈ ವಿಷಯದಲ್ಲಿ ನ್ಯಾಯಾಂಗದ ನಿಷ್ಕ್ರಿಯತೆಯನ್ನು ವಕೀಲರು ಮತ್ತು ಕಾನೂನು ಪರಿಣತರು ಸಾಮಾಜಿಕ ಮಾಧ್ಯಮಗಳಲ್ಲೂ ಟೀಕಿಸಿದ್ದಾರೆ.
ನ್ಯಾಯಾಲಯಗಳ ಮುಂದಿರುವ ಪ್ರಕರಣಗಳು

ಕಳೆದ ಕೆಲವು ತಿಂಗಳುಗಳಲ್ಲಿ, ಈ ಮಾದರಿಯ ಮನೆ ಧ್ವಂಸ ಕಾರ್ಯಾ ಚರಣೆಗಳನ್ನು ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯಗಳಲ್ಲಿ ನಡೆಸಲಾಗಿದೆ. ಗಲಭೆಗಳು ಮತ್ತು ಹಿಂಸಾತ್ಮಕ ಪ್ರತಿಭಟನೆಗಳ ಬಳಿಕ, ಅದರಲ್ಲಿ ಭಾಗವಹಿಸಿದ್ದಾರೆ ಎಂಬುದಾಗಿ ಶಂಕಿಸಲಾದ ವ್ಯಕ್ತಿಗಳ ಮನೆಗಳು ಅಥವಾ ಅಂಗಡಿಗಳನ್ನು ಧ್ವಂಸ ಗೊಳಿಸಲಾಗಿದೆ. ಪ್ರತಿಭಟನೆಗಳನ್ನು ನಡೆಸಿರುವುದಕ್ಕಾಗಿ ಈ ಶಿಕ್ಷೆಯನ್ನು ನೀಡಲಾಗಿದೆ ಎಂಬುದಾಗಿ ರಾಜಕೀಯ ಹೇಳಿಕೆಗಳನ್ನು ನೀಡಲಾಗುತ್ತಿದೆ. ಆದರೆ, ಈ ಕಟ್ಟಡಗಳು ಅಕ್ರಮವಾಗಿದ್ದವು ಹಾಗೂ ನೋಟಿಸ್‌ಗಳನ್ನು ನೀಡಲಾಗಿತ್ತು ಎಂಬ ತಾಂತ್ರಿಕ ಸಮರ್ಥನೆಗಳನ್ನು ಅಧಿಕಾರಿಗಳು ನೀಡುತ್ತಾರೆ.

ಆದರೆ, ತಮಗೆ ಯಾವುದೇ ನೋಟಿಸ್‌ಗಳನ್ನು ನೀಡಲಾಗಿಲ್ಲ ಎಂದು ಧ್ವಂಸ ಕಾರ್ಯಾಚರಣೆಯಲ್ಲಿ ಮನೆಗಳನ್ನು ಕಳೆದುಕೊಂಡವರು ಹೇಳುತ್ತಾರೆ. ಈ ರೀತಿಯ ಕಾರ್ಯಾಚರಣೆಗಳ ಮೂಲಕ ಧ್ವಂಸಗೊಳಿಸ ಲಾಗಿರುವ ಬಹುತೇಕ ಎಲ್ಲ ಕಟ್ಟಡಗಳು ಮುಸ್ಲಿಮರಿಗೆ ಸೇರಿದ್ದಾಗಿವೆ.
ಈ ಧ್ವಂಸ ಕಾರ್ಯಾಚರಣೆಗಳು ಕಾನೂನುಬಾಹಿರ ಎಂಬುದಾಗಿ ಹಲವಾರು ಮಾಜಿ ನ್ಯಾಯಾಧೀಶರು ಮತ್ತು ವಕೀಲರು ಹೇಳುತ್ತಾರೆ. ವಿಚಾರಣೆಗೆ ಮೊದಲೇ ಮನೆಗಳನ್ನು ಧ್ವಂಸಗೊಳಿಸುವ ಮೂಲಕ ಆರೋಪಿಗಳಿಗೆ ಶಿಕ್ಷೆ ನೀಡುವುದಕ್ಕೆ ಭಾರತೀಯ ಕಾನೂನಿನಲ್ಲಿ ಯಾವುದೇ ನೆಲೆಗಟ್ಟಿಲ್ಲ ಎಂದು ಅವರು ಬೆಟ್ಟು ಮಾಡುತ್ತಾರೆ. ಅದೂ ಅಲ್ಲದೆ, ಇಂಥ ಧ್ವಂಸ ಕಾರ್ಯಾಚರಣೆಗಳು ಅಂತರ್‌ರಾಷ್ಟ್ರೀಯ ಕಾನೂನುಗಳನ್ನೂ ಉಲ್ಲಂಘಿಸುತ್ತದೆ. ಇಂಥ ಅಂತರ್‌ರಾಷ್ಟ್ರೀಯ ಕಾನೂನುಗಳನ್ನು ಪಾಲಿಸಬೇಕಾದ ಬದ್ಧತೆಯನ್ನು ಭಾರತ ಹೊಂದಿದೆ.
ನ್ಯಾಯಾಲಯಗಳಿಂದ ನೆಮ್ಮದಿ ಸಿಗುವ ಸಾಧ್ಯತೆ ದೂರವಾಗಿದ್ದರೂ, ಜನರು ದಾಖಲೆಗಾಗಿ ನ್ಯಾಯಾಲಯಕ್ಕೆ ಹೋಗಲು ಬಯಸುತ್ತಾರೆ. ‘‘ಮನೆಯಲ್ಲಿ ಕಳ್ಳತನವಾದರೆ, ಪೊಲೀಸರು ಕಳ್ಳನನ್ನು ಹಿಡಿಯುತ್ತಾರೆ ಅಥವಾ ಕಳವು ಆಗಿರುವ ವಸ್ತುಗಳು ಸಿಗುತ್ತವೆ ಎಂಬ ನಂಬಿಕೆ ಇರದಿ ದ್ದರೂ ಜನರು ದಾಖಲೆಗಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸು ತ್ತಾರೆ’’ ಎಂದು ಅನೂಜ್ ಭುವಾನಿಯ ಹೇಳುತ್ತಾರೆ.

Writer - ಉಮಂಗ್ ಪೊದ್ದರ್

contributor

Editor - ಉಮಂಗ್ ಪೊದ್ದರ್

contributor

Similar News