2 ದಿನಗಳಲ್ಲಿ ದುಷ್ಕರ್ಮಿಗಳನ್ನು ಬಂಧಿಸದಿದ್ದಲ್ಲಿ ʼಅರೆಸ್ಟ್ ಮೀ' ಪ್ರತಿಭಟನೆ: ಶೈಲಜಾ ಅಮರನಾಥ್‌

Update: 2022-06-20 11:22 GMT

ಪುತ್ತೂರು: ಕ್ಲಬ್ ಹೌಸ್‍ನಲ್ಲಿ ದೇವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದೇನೆ ಎಂದು ಕೆಲವೊಂದು ವ್ಯಕ್ತಿಗಳು ಮಾಡಿರುವ ಆರೋಪವು ಸತ್ಯಕ್ಕೆ ದೂರವಾಗಿದ್ದು, ಕ್ಲಬ್ ಹೌಸ್ ಆಡಿಯೋವನ್ನು ತಿರುಚಿ ತನ್ನ ತೇಜೋವಧೆ ಮಾಡುವ ಪ್ರಯತ್ನ ನಡೆಸಲಾಗಿದೆ. ಮುಂದಿನ 2 ದಿನಗಳಲ್ಲಿ ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಆಡಿಯೋ ತಿರುಚಿದವರನ್ನು ಬಂಧಿಸದಿದ್ದಲ್ಲಿ ನಾನೇ ಪುತ್ತೂರು ನಗರ ಠಾಣೆಯಲ್ಲಿ `ಎರೆಸ್ಟ್ ಮೀ' ಎಂಬ ಬೋರ್ಡ್ ಹಿಡಿದುಕೊಂಡು ಪ್ರತಿಭಟನೆ ನಡೆಸುತ್ತೇನೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶೈಲಜಾ ಅಮರನಾಥ್ ತಿಳಿಸಿದ್ದಾರೆ.

ಅವರು ಸೋಮವಾರ ಪುತ್ತೂರು ನಗರದ ಬಪ್ಪಳಿಗೆಯಲ್ಲಿರುವ ತನ್ನ ಮನೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ `ಕ್ಲಬ್ ಹೌಸ್' ಚರ್ಚೆಯನ್ನು ತಿರುಚಿ ಪ್ರಸಾರ ಮಾಡಿದ ವಿಕ್ರಮ ಯುಟ್ಯೂಬ್ ಚಾನೆಲ್ ನ ಮುಮ್ತಾಸ್ ವಿರುದ್ಧ ಹಾಗೂ ತನ್ನ ಮನೆಯ ಮೇಲೆ ದಾಳಿ ಮಾಡಿದ ತಂಡದ ವಿರುದ್ಧವೂ ಪೊಲೀಸರಿಗೆ ದೂರು ನೀಡಿದ್ದೇನೆ. ಆದರೆ ಈ ತನಕ ಅವರ ಬಂಧನ ಕಾರ್ಯ ನಡೆದಿಲ್ಲ.  ವೀಡಿಯೊ ತಿರುಚಿ ಪ್ರಸಾರ ಮಾಡಿದ ಮುಮ್ತಾಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ `ಕ್ಲಬ್ ಹೌಸ್' ಅಸಲಿ ಆಡಿಯೋ ಯನ್ನು ಪರಿಶೀಲನೆ ನಡೆಸಿ ನನಗೆ ನ್ಯಾಯ ಕೊಡಿಸಬೇಕು ಎಂದು ಅವರು ಆಗ್ರಹಿಸಿದರು.

ಬಿಜೆಪಿ ಅಫಿಷಿಯಲ್ ಪೇಜ್ ನಲ್ಲಿಯೂ ತಿರುಚಿದ ನನ್ನ ವಿಡಿಯೊ ಹಾಕಿದ್ದಾರೆ. ಹೆಣ್ಣು ಮಕ್ಕಳಿಗೆ ಗೌರವ ನೀಡುವುದಾಗಿ ಹೇಳುವ ಬಿಜೆಪಿ ಪಕ್ಷದ ಆಡಳಿತದಲ್ಲಿ ಯಾವ ಮಹಿಳೆಗೂ ರಕ್ಷಣೆ ಇಲ್ಲ ಎಂಬುವುದನ್ನು ಈ ಮೂಲಕ ಸಾಬೀತು ಮಾಡಿದೆ. ಹಿಂದೂ ಮಹಿಳೆಯ ಮೇಲೆ ಎತ್ತಿಕಟ್ಟುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ನಾನು ದೇವರ ಭಕ್ತೆಯಾಗಿದ್ದು, ಯಾವುದೇ ಕಾರಣಕ್ಕೂ ದೇವರಿಗೆ ಅವಹೇಳನ ಮಾಡುವ ಕೆಲಸ ಮಾಡಿಲ್ಲ. ಹನುಮನ ಪರಮ ಭಕ್ತೆಯಾಗಿರುವ ನಾನು  ಶ್ರೀರಾಮ, ಸೀತಾಮಾತೆ, ಪುತ್ತೂರು ಮಹಾಲಿಂಗೇಶ್ವರ ದೇವರ ಸಹಿತ ಎಲ್ಲಾ ದೇವರುಗಳನ್ನು ನಂಬುವ ಹಾಗೂ ಹಿಂದೂ ಸಂಪ್ರದಾಯ-ಧಾರ್ಮಿಕ ಆಚರಣೆಗಳನ್ನು ಪಾಲಿಸುವ ಮಹಿಳೆಯಾಗಿದ್ದೇನೆ.  ನಾನು ಹಿಂದು ಅನ್ನುವುದಕ್ಕೆ ನನಗೆ ಬಿಜೆಪಿ ಸೇರಿದಂತೆ ಬಜರಂಗದಳದ ಸರ್ಟಿಫಿಕೇಟ್ ಬೇಕಾಗಿಲ್ಲ. ಬಿಜೆಪಿ ಧರ್ಮದ ಹೆಸರಲ್ಲಿ ಅಧರ್ಮ ಮಾಡುತ್ತಿದೆ. ಆದರೆ ನಾನು ಅಧರ್ಮಿ ಅಲ್ಲ. ಬಿಜೆಪಿ ಓಟು ಗಿಟ್ಟಿಸುವ ನಿಟ್ಟಿನಲ್ಲಿ ಹಿಂದುತ್ವ ಸಂಘಟನೆಗಳನ್ನು ತನ್ನ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ ಎಂದು ಹೇಳಿದರು. 

ನೀವು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಶಾಸಕರು ಹೇಳಿಕೆ ನೀಡಿದ್ದಾರೆ ಅನ್ನುವ ಪ್ರಶ್ನೆಗೆ ಪ್ರತಿಕ್ರಯಿಸಿದ ಅವರು ಶಾಸಕರ ಕ್ಷೇತ್ರದ ವ್ಯಾಪ್ತಿಯ ಮಹಿಳೆಯೊಬ್ಬಳ ತೇಜೋವಧೆ ಮಾಡುತ್ತಿರುವಾಗ ಸೂಕ್ತ ಭದ್ರತೆ ಒದಗಿಸದ, ಮಹಿಳೆಯೊಬ್ಬರ ಮನೆಯ ಮೇಲೆ ತಂಡವೊಂದು ದಾಳಿ ನಡೆಸಿದಾಗ ರಕ್ಷಣೆ ಒದಗಿಸುವ ಜವಾಬ್ದಾರಿ ಈ ಕ್ಷೇತ್ರದ ಶಾಸಕರಿಗಿದೆ. ಅದು ಮಾಡದ ಶಾಸಕರು ಇದೀಗ ನಾನು ಕ್ಷಮೆ ಕೇಳಬೇಕು ಎನ್ನುವ ಬದಲು ಅವರ ಕ್ಷೇತ್ರದಲ್ಲಿ ಓರ್ವ ಮಹಿಳೆಗೆ ಆಗಿರುವ ಅನ್ಯಾಯಕ್ಕೆ ಅವರೇ ಕ್ಷಮಾಯಾಚನೆ ಮಾಡಬೇಕು ಎಂದು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News