ತೊಕ್ಕೊಟ್ಟು; ಫಾರ್ಮಸಿಸ್ಟ್ ವಿಜಯನ್ ಶಂಕಾಸ್ಪದ ಮೃತ್ಯು

Update: 2022-06-20 13:10 GMT

ಉಳ್ಳಾಲ: ರೈಲ್ವೇ ನೌಕರರಿಗೆ ನಕಲಿ ವೈದ್ಯಕೀಯ ಫಿಟ್ನೆಸ್ ಸರ್ಟಿಫಿಕೇಟ್ ನೀಡಿದ ಪ್ರಕರಣದಲ್ಲಿ ಸಿಬಿಐಯಿಂದ ಬಂಧಿತನಾಗಿದ್ದ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣ ಬಳಿಯ ಹಾಸ್ಪಿಟಲ್ ಫಾರ್ಮಸಿಸ್ಟ್ ವಿಜಯನ್ ವಿ.ಎ. ಎಂಬವರು ತೊಕ್ಕೊಟ್ಟಿನ ರೈಲ್ವೇ ಹಳಿಯಲ್ಲಿ ಶಂಕಾಸ್ಪದವಾಗಿ ಮೃತಪಟ್ಟಿದ್ದಾರೆ.

ಮಂಗಳೂರು ಕೇಂದ್ರವಾಗಿಟ್ಟು ರೈಲ್ವೇ ನೌಕರರಿಗೆ ನಕಲಿ ವೈದ್ಯಕೀಯ ಪ್ರಮಾಣಪತ್ರ ಒದಗಿಸುತ್ತಿದ್ದ ಜಾಲವೊಂದನ್ನು ಸಿಬಿಐ ಅಧಿಕಾರಿಗಳು ಇತ್ತೀಚೆಗೆ ಪತ್ತೆಹಚ್ಚಿದ್ದರು. ಕಳೆದ ವಾರ  ದಾಳಿ ನಡೆಸಿ ಓರ್ವ ವೈದ್ಯ ಸೇರಿದಂತೆ ಮಂಗಳೂರಿನ ಮೂವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. 

ಆರೋಗ್ಯ ಕೇಂದ್ರದ ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಶಿವಶಂಕರ ಮೂರ್ತಿ, ಔಷಧಾಲಯದ ಅಧಿಕಾರಿ ವಿಜಯನ್ ವಿ.ಎ. ಮತ್ತು ಇವರಿಗೆ ದಲ್ಲಾಳಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಂಗಳೂರಿನ ಇಬ್ರಾಹಿಂ ಎಂಬವರನ್ನು ಸಿಬಿಐ ಬಂಧಿಸಿದ್ದರು.

ಪ್ರಕರಣದಲ್ಲಿ ಸಿಬಿಐ ವಶವಾಗಿದ್ದ ಪ್ರಮುಖ ಆರೋಪಿ ವಿಜಯನ್ ವಿ.ಎ ಸೋಮವಾರ ಮಧ್ಯಾಹ್ನ ತೊಕ್ಕೊಟ್ಟು ಸಮೀಪದ ಕಾಪಿಕಾಡಿನ ರೈಲ್ವೇ ಹಳಿಯಲ್ಲಿ ರೈಲು ಬಡಿದು ಸಾವನ್ನಪ್ಪಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೇಲ್ನೋಟಕ್ಕೆ ವಿಜಯನ್ ಆತ್ಮಹತ್ಯೆಗೈದಿರುವುದಾಗಿ ಹೇಳಲಾಗುತ್ತಿದ್ದರೂ ಪೊಲೀಸರ ತನಿಖೆಯಿಂದಷ್ಟೇ ಸತ್ಯಾಂಶ ಹೊರ ಬರಬೇಕಿದೆ.

ಘಟನಾ ಸ್ಥಳಕ್ಕೆ ರೈಲ್ವೇ ಮತ್ತು ಉಳ್ಳಾಲ ಪೊಲೀಸರು ಭೇಟಿ ನೀಡಿ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಬಗ್ಗೆ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News