ಈ ಸಾವು, ನೋವಿಗೆ ಹೊಣೆ ಯಾರು?

Update: 2022-06-21 03:46 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸ್ವಾತಂತ್ರ್ಯ ಬಂದು ಏಳು ದಶಕಗಳು ಗತಿಸಿದರೂ ಶುದ್ಧ ಕುಡಿಯುವ ನೀರನ್ನು ಜನಸಾಮಾನ್ಯರಿಗೆ ಒದಗಿಸಲು ನಮ್ಮ ಸರಕಾರಗಳಿಂದ ಸಾಧ್ಯವಾಗಿಲ್ಲ. ಕಲುಷಿತ ನೀರು ಕುಡಿದು ಸಾವಿಗೀಡಾಗುವ ಮತ್ತು ಆಸ್ಪತ್ರೆಗಳನ್ನು ಸೇರಿ ಚಿಕಿತ್ಸೆ ಪಡೆಯುವ ಘಟನೆಗಳು ಸಂಭವಿಸುತ್ತಲೇ ಇವೆ. ಅದರಲ್ಲೂ ಹಿಂದುಳಿದ ಪ್ರದೇಶಗಳ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಇತ್ತೀಚೆಗೆ ರಾಯಚೂರು ನಗರದಲ್ಲಿ ಕಲುಷಿತ ನೀರು ಕುಡಿದು ಏಳು ಮಂದಿ ಸಾವನ್ನಪ್ಪಿದರು. ಸುಮಾರು 260 ಮಂದಿ ವಾಂತಿ, ಭೇದಿಯಿಂದ ಆಸ್ಪತ್ರೆ ಸೇರಿದರು. ಅಷ್ಟೇ ಅಲ್ಲ, ಒಂದು ಸಾವಿರಕ್ಕೂ ಹೆಚ್ಚು ಜನ ಹೊರರೋಗಿಗಳ ವಿಭಾಗದಲ್ಲಿ ಔಷಧೋಪಚಾರ ಪಡೆಯುತ್ತಿದ್ದಾರೆ. ಇದಕ್ಕೆಲ್ಲ ರಾಯಚೂರು ನಗರಪಾಲಿಕೆ ಪೂರೈಸುವ ಮಲಿನ ನೀರು ಕಾರಣ ಎಂಬ ಸಂಗತಿ ಬೆಳಕಿಗೆ ಬಂದಿದೆ.

 ರಾಯಚೂರಿನಲ್ಲಿ ಕೆರೆಗಳಿಂದ ನೀರನ್ನು ಓವರ್ ಹೆಡ್ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿ ನಾಗರಿಕರಿಗೆ ಕುಡಿಯಲು ಪೂರೈಸಲಾಗುತ್ತಿದೆ. ಈ ನೀರನ್ನು ಕುಡಿದು ಜನ ಸಾವಿಗೀಡಾಗುತ್ತಿದ್ದಾರೆ. ಇದು ನಾಗರಿಕರ ಸ್ವಾಸ್ಥ್ಯದ ಬಗ್ಗೆ ಸ್ಥಳೀಯ ನಗರ ಪಾಲಿಕೆಯ ನಿರ್ಲಕ್ಷ್ಯಕ್ಕೆ ಉದಾಹರಣೆಯಾಗಿದೆ. ಜನರಿಗೆ ನೀರನ್ನು ಪೂರೈಸುವ ಓವರ್ ಹೆಡ್ ಟ್ಯಾಂಕ್‌ಗಳನ್ನು ಕಳೆದ ಇಪ್ಪತ್ತು ವರ್ಷಗಳಿಂದ ಸ್ವಚ್ಛಗೊಳಿಸಿಲ್ಲ. ಇದರಿಂದಾಗಿ ಈ ದುರಂತ ಸಂಭವಿಸಿದೆ. ಇದು ಕ್ರಿಮಿನಲ್ ಅಪರಾಧವೆಂದರೆ ಅತಿಶಯೋಕ್ತಿಯಲ್ಲ.

ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ರಾಯಚೂರು ನಗರದ ದಕ್ಷಿಣಕ್ಕೆ ತುಂಗಭದ್ರಾ ನದಿ ಮತ್ತು ಉತ್ತರಕ್ಕೆ ಕೃಷ್ಣಾ ನದಿಗಳು ಹರಿಯುತ್ತವೆ. ಕೃಷ್ಣಾ ನದಿಯಿಂದ 21 ವಾರ್ಡುಗಳಿಗೆ ಮತ್ತು ತುಂಗಭದ್ರಾ ನದಿಯಿಂದ 14 ವಾರ್ಡುಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತದೆ. ತುಂಗಭದ್ರಾ ನದಿಯ ನೀರನ್ನು ಕಾಲುವೆ ಮೂಲಕ ರಾಮಪುರ ಕೆರೆಗೆ ತುಂಬಿಸಿ ಅಲ್ಲಿರುವ ಎರಡು ಶುದ್ಧೀಕರಣ ಘಟಕಗಳ ಮೂಲಕ ಮನೆ ಮನೆಗೆ ಪೂರೈಸಲಾಗುತ್ತದೆ. ಆದರೆ ಈ ಶುದ್ಧೀಕರಣ ಘಟಕಗಳ ಹಳೆಯ ಘಟಕವನ್ನು ಕಳೆದ ಹತ್ತು ವರ್ಷಗಳಿಂದ ಸ್ವಚ್ಛಗೊಳಿಸಿರಲಿಲ್ಲ. ಹೀಗಾಗಿ ಅಲ್ಲಿ ಸುಮಾರು ಹತ್ತು ಅಡಿಗಳಷ್ಟು ಹೂಳು ತುಂಬಿಕೊಂಡಿತ್ತು. ಇದರಿಂದಾಗಿ ಶುದ್ಧೀಕರಣ ಘಟಕದ ಯಂತ್ರಗಳಿಗೆ ತುಕ್ಕು ಹಿಡಿದಿದೆ. ಈ ಯಂತ್ರಗಳು ಸ್ಥಗಿತಗೊಂಡು ಹಲವಾರು ವರ್ಷಗಳಾದರೂ ನಗರಪಾಲಿಕೆ ಅವುಗಳ ದುರಸ್ತಿಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಇದಕ್ಕೆ ಯಾರು ಕಾರಣ? ಜನಸಾಮಾನ್ಯರ ಆರೋಗ್ಯದ ಬಗ್ಗೆ, ಅವರು ಕುಡಿಯುವ ನೀರಿನ ಬಗ್ಗೆ ಇಷ್ಟೊಂದು ನಿರ್ಲಕ್ಷವೇ?

ಇದಿಷ್ಟೇ ಅಲ್ಲ ನೀರು ಪೂರೈಕೆಯ ಮೂಲವಾದ ತುಂಗಭದ್ರಾ ನದಿ ಕೂಡ ಮಲಿನಗೊಂಡಿದೆ. ಹೂಳು ತುಂಬಿಕೊಂಡಿದೆ. ನದಿ ಹರಿಯುವ ಮಾರ್ಗದುದ್ದಕ್ಕೂ ಕೈಗಾರಿಕೆಗಳು ಹೊರ ಬಿಡುವ ಅಪಾಯಕಾರಿ ತ್ಯಾಜ್ಯ, ರಾಸಾಯನಿಕಗಳು ನದಿ ನೀರು ಮಲಿನಗೊಳ್ಳಲು ಕಾರಣ. ಇಂತಹ ನೀರನ್ನು ಅಗತ್ಯದ ರಾಸಾಯನಿಕ ಗಳಿಂದ ಶುದ್ಧೀಕರಣ ಮಾಡದೆ ನಾಗರಿಕರಿಗೆ ಕುಡಿಯಲು ಪೂರೈಸುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ಹಾಗಾಗಿ ಅಮಾಯಕ ನಾಗರಿಕರ ಸಾವಿನ ಹೊಣೆಯನ್ನು ನಗರಪಾಲಿಕೆ ಹೊತ್ತುಕೊಳ್ಳಬೇಕಾಗುತ್ತದೆ.
ರಾಯಚೂರು ನೀರು ಶುದ್ಧೀಕರಣ ಘಟಕದಲ್ಲಿ ಕೆಲಸ ಮಾಡುವ ಡಿ ದರ್ಜೆಯ ಸಿಬ್ಬಂದಿಗೆ ನೀರು ಶುದ್ಧೀಕರಣ ಕಾರ್ಯದ ಬಗ್ಗೆ ಸರಿಯಾದ ತರಬೇತಿ ಇಲ್ಲದಿರುವುದು ಕೂಡ ಇದಕ್ಕೆ ಕಾರಣ ಎಂದು ವರದಿಯಾಗಿದೆ. ಕಣ್ಣಳತೆ ಆಧರಿಸಿ ನೀರಿಗೆ ಬ್ಲೀಚಿಂಗ್ ಪೌಡರ್ ಮಿಶ್ರಣ ಮಾಡಿ ನೀರು ಬಿಡಲಾಗುತ್ತಿತ್ತು ಎಂದು ಈ ಸಿಬ್ಬಂದಿ ಒಪ್ಪಿಕೊಂಡಿದ್ದಾರೆ.

ಈ ದುರಂತಕ್ಕೆ ಇನ್ನೂ ಹಲವಾರು ಕಾರಣಗಳಿವೆ. ಹಲವೆಡೆ ನೀರು ಪೂರೈಸುವ ಪೈಪುಗಳು ಸೀಳಿ ಸೋರಿಕೆಯಾಗಿರುವುದು ಕಂಡು ಬಂದಿದೆ. ಕುಡಿಯುವ ನೀರಿಗೆ ಒಳಚರಂಡಿ ನೀರು ಹಾಗೂ ಚರಂಡಿಯ ನೀರು ಮಿಶ್ರಣವಾಗಿರುವುದೂ ಬೆಳಕಿಗೆ ಬಂದಿದೆ. ಹೀಗಾಗಲು ನಗರಪಾಲಿಕೆ ನಿರ್ಲಕ್ಷವೇ ಕಾರಣ. ಕುಡಿಯುವ ನೀರನ್ನು ಶುದ್ಧಗೊಳಿಸಿ ಸಾರ್ವಜನಿಕರಿಗೆ ಪೂರೈಸುವ ಸಲುವಾಗಿ ಆರು ಮಂದಿ ಕಾರ್ಮಿಕರನ್ನು ಮೂರು ಪಾಳಿಯಲ್ಲಿ ಹಗಲೂ ರಾತ್ರಿ ಕೆಲಸಕ್ಕೆ ನೇಮಕ ಮಾಡಲಾಗಿದೆ. ಹಾಗಿದ್ದರೆ ಅವರೇನು ಮಾಡುತ್ತಿದ್ದರು? ಈ ದುರಂತ ಸಂಭವಿಸಿದ ನಂತರ ಜಿಲ್ಲಾಡಳಿತವು ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಇನ್ನೂ ಅನೇಕ ಅಂಶಗಳು ಬಹಿರಂಗವಾಗಿವೆ.ರಾಯಚೂರು ನಗರಕ್ಕೆ ಪೂರೈಕೆಯಾಗುವ ಕುಡಿಯುವ ನೀರಿನ ಮಾದರಿಗಳನ್ನು ಬಳ್ಳಾರಿಯ ಆರೋಗ್ಯ ಇಲಾಖೆಯ ಘಟಕ ಪರಿಶೀಲನೆ ನಡೆಸಿದಾಗ 110 ಮಾದರಿಗಳ ಪೈಕಿ 24 ಮಾದರಿಗಳಲ್ಲಿನ ನೀರು ಕುಡಿಯಲು ಯೋಗ್ಯವಲ್ಲ ಎಂಬುದು ಗೊತ್ತಾಗಿದೆ. ಇದರರ್ಥ ಇದು ಮಾನವ ನಿರ್ಮಿತ ದುರಂತವಲ್ಲದೇ ಬೇರೇನೂ ಅಲ್ಲ.

ನಗರಪಾಲಿಕೆ ಚುನಾವಣೆಯಲ್ಲಿ ಗೆದ್ದು ಬರಲು ಆಸಕ್ತಿ ತೋರುವ ರಾಜಕಾರಣಿಗಳು ಅಧಿಕಾರಕ್ಕೆ ಬಂದ ನಂತರ ಯಾವ ರೀತಿ ಆಡಳಿತ ನಡೆಸುತ್ತಾರೆ ಎಂಬುದಕ್ಕೆ ರಾಯಚೂರು ಒಂದು ಉದಾಹರಣೆಯಾಗಿದೆ. ಕಲುಷಿತ ನೀರು ಕುಡಿದು ಏಳು ಮಂದಿ ಸಾವಿಗೀಡಾದ ನಂತರ ರಾಯಚೂರು ನಗರಾಡಳಿತದ ಅಮಾನವೀಯ ನಿರ್ಲಕ್ಷ್ಯ ಬಯಲಿಗೆ ಬಂದಿದೆ. ಈ ದುರಂತ ಸಂಭವಿಸಿದ ನಂತರ ನಿದ್ದೆಯಿಂದ ಎಚ್ಚೆತ್ತ ರಾಯಚೂರು ನಗರಾಡಳಿತ ರಾಮಪುರ ನೀರು ಶುದ್ಧೀಕರಣ ಘಟಕದ ಹೂಳನ್ನು ತೆಗೆಯಲು ಮುಂದಾಗಿದೆ. ಈ ನಿರ್ಲಕ್ಷ್ಯಕ್ಕೆ ಕಾರಣವಾದ ಸಿಬ್ಬಂದಿಯ ಮೇಲೆ ಕ್ರಮ ಕೈಗೊಂಡಿದೆ. ಮನೆಮನೆಗೆ ಹೋಗಿ ಸಮೀಕ್ಷೆ ನಡೆಸಿ ನೀರು ಶುದ್ಧೀಕರಣ ರಾಸಾಯನಿಕವನ್ನು ಉಚಿತವಾಗಿ ವಿತರಣೆ ಮಾಡಿದೆ. ಇದು ಪ್ರಾಮಾಣಿಕ ಕಾಳಜಿಗಿಂತ ಪ್ರಕರಣದ ಬಗ್ಗೆ ಜನಾಕ್ರೋಶವನ್ನು ಕಡಿಮೆ ಮಾಡುವ ಕಣ್ಣೊರೆಸುವ ತಂತ್ರ ಎಂಬುದು ಚಿಕ್ಕ ಮಕ್ಕಳಿಗೂ ಗೊತ್ತಾಗುತ್ತದೆ. ಸರಕಾರ ಈ ಬಗ್ಗೆ ಸೌಮ್ಯ ಧೋರಣೆ ತಾಳದೆ ಸಾರ್ವಜನಿಕರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಿ ಹಲವು ಮಂದಿಯ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಿ. ಮುಂದೆ ಎಲ್ಲಿಯೂ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News