ಬ್ರೆಝಿಲ್‌ನಲ್ಲಿ ಬೆಳೆದ ಭಾರತದ ಗೋಸಂತತಿ!

Update: 2022-06-21 06:06 GMT

ಈವರೆಗೆ, ನೆಲ್ಲೂರು ಗೋವುಗಳು ಬ್ರೆಝಿಲ್‌ನ ಉಷ್ಣವಲಯದ ಗೋಶಾಲೆಗಳಲ್ಲಿ ಅತ್ಯಂತ ಬೇಡಿಕೆಯ ಗೋವುಗಳಾಗಿವೆ. ಆ ದೇಶದಲ್ಲಿ ಉತ್ಪಾದನೆಯಾಗುವ ಶೇ.90ರಷ್ಟು ಬೀಫ್, ನೆಲ್ಲೂರು ದನಗಳಿಂದಲೇ ದೊರೆಯುತ್ತದೆ. ಈ ಮಧ್ಯೆ ಇಂಡು-ಬ್ರಾಸಿಲ್ ತಳಿಯ ದನವು ಕೊಲಂಬೊ, ವೆನೆಝುವೆಲಾ ಹಾಗೂ ಮೆಕ್ಸಿಕೊ ಸೇರಿದಂತೆ ಇತರ ಹಲವಾರು ಲ್ಯಾಟಿನ್ ಆಮೆರಿಕ ರಾಷ್ಟ್ರಗಳಲ್ಲಿ ಕಾಣಸಿಗುತ್ತಿದೆಯಾದರೂ, ಬ್ರೆಝಿಲ್‌ನಲ್ಲಿ ಅಳಿವಿನ ಅಂಚಿನಲ್ಲಿರುವ ಜಾನುವಾರು ಎಂದು ಪರಿಗಣಿಸಲಾಗಿದೆ.

ಬ್ರೆಝಿಲ್‌ನ ಬೀಫ್ ಉದ್ಯಮದ ಪೂರ್ವಪರಗಳು ಎಲ್ಲರಿಗೂ ತಿಳಿದಿರುವಂತಹದ್ದೇ. ದಕ್ಷಿಣ ಅಮೆರಿಕದ ಶಕ್ತಿಕೇಂದ್ರವೆಂದೇ ಪರಿಗಣಿಸಲ್ಪಟ್ಟಿರುವ ಬ್ರೆಝಿಲ್ ಜಗತ್ತಿನಲ್ಲೇ ಅತ್ಯಧಿಕ ಪ್ರಮಾಣದ ಬೀಫ್ ಉತ್ಪಾದಕ ದೇಶವಾಗಿದೆ ಮಾತ್ರವಲ್ಲದೆ ಅತಿ ದೊಡ್ಡ ರಪ್ತುದಾರನೂ ಹೌದು. ಮಾರ್ಚ್ ತಿಂಗಳೊಂದರಲ್ಲೇ ಅದು ಸುಮಾರು 2 ಲಕ್ಷ ಟನ್ ಬೀಫ್ ರಫ್ತು ಮಾಡಿದ್ದು, ಅದರ ಮಾರಾಟದಿಂದ 1.12 ಬಿಲಿಯ ಡಾಲರ್ ಸಂಪಾದಿಸಿದೆ. ಆದರೆ ಬ್ರೆಝಿಲ್‌ನ ಬೀಫ್ ಉದ್ಯಮದ ಬೆಳವಣಿಗೆಯಲ್ಲಿ ಭಾರತೀಯ ಪಶುಗಳು ಗಣನೀಯ ಪಾತ್ರ ವಹಿಸಿವೆಂಬುದು ಹೆಚ್ಚಿನವರಿಗೆ ತಿಳಿದಿಲ್ಲ.

 19ನೇ ಶತಮಾನದ ಅಂತ್ಯದ ವೇಳೆಗೆ ಯುರೋಪ್‌ನಿಂದ ಬಂದ ವಲಸಿಗರು, ಬ್ರೆಝಿಲ್‌ನ ಕೇಂದ್ರದಿಂದ ಪಶ್ಚಿಮ ಭಾಗದ ರಾಜ್ಯವಾದ ಮಾಟೊ ಗಾಸೊದಲ್ಲಿ ಗೋಶಾಲೆಗಳನ್ನು ಸ್ಥಾಪಿಸಲು ಮೂಲನಿವಾಸಿಗಳ ಜಮೀನುಗಳನ್ನು ಅತಿಕ್ರಮಿಸಿಕೊಂಡರು. ಆದರೆ ಆ ರಾಜ್ಯದ ತಾಪಮಾನವು ಅವರಿಗೆ ಬಹುದೊಡ್ಡ ಅಡ್ಡಿಯಾಗಿ ಪರಿಣಮಿಸಿತ್ತು. ವಿಪರೀತ ತಾಪಮಾನ ಹಾಗೂ ಒಣಹವೆಯು, ಉತ್ತರ ಯುರೋಪ್‌ನ ಜಾನುವಾರು ತಳಿಗಳು ತಂಪು ವಾತಾವರಣಕ್ಕೆ ಒಗ್ಗಿಕೊಂಡಿದ್ದವಾಗಿವೆ. ಆದರೆ ತಮ್ಮ ಪ್ರಯತ್ನದಲ್ಲಿ ಯಶಸ್ಸು ಕಾಣಲು ದೃಢನಿಶ್ಚಯ ಮಾಡಿದ್ದ ಸಂಶೋಧನಾಸಕ್ತ ಯುರೋಪಿಯನ್ ವಲಸಿಗರು ಆ ಪ್ರದೇಶದಲ್ಲಿ ವಿಶೇಷ ತಳಿಯ ಹುಲ್ಲನ್ನು ಬೆಳೆಸಲಾರಂಭಿಸಿದರು ಹಾಗೂ ಅಲ್ಲಿನದ್ದೇ ಮಾದರಿಯ ಹವಾಮಾನವಿರುವ ಅನತಿ ದೂರದ ರಾಷ್ಟ್ರವಾದ ಭಾರತದಿಂದ ದನಗಳನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿದರು.

 ಭಾರತೀಯ ಉಪಖಂಡದ ಸ್ವದೇಶಿ ಉಪತಳಿಯಾದ ಝೆಬು (ಬೊಸ್ ಇಂಡಿಕಸ್) ಗೋವಿನ ಭುಜದಲ್ಲಿ ದಷ್ಟಪುಷ್ಟವಾದ ಉಬ್ಬು ಇರುತ್ತದೆ. ಝೆಬು ತಳಿಯ ದನವನ್ನು ದಕ್ಷಿಣ ಅಮೆರಿಕಕ್ಕೆ 19ನೇ ಶತಮಾನದ ಆರಂಭದಿಂದಲೇ ಸಾಗಾಟ ಮಾಡಲಾಗಿತ್ತು. ಆದರೆ 1890ರ ದಶಕದಿಂದಲೇ ಬ್ರೆಝಿಲ್ ಭಾರತದಿಂದ ಝೆಬು ತಳಿಯ ಗೋವನ್ನು ಆಮದು ಮಾಡಿಕೊಳ್ಳಲು ಆರಂಭಿಸಿತ್ತು. ನೆಲ್ಲೂರಿನಿಂದ ಝೆಬು ತಳಿಯ ಗೋವಿನ ಮೊದಲ ಗುಂಪು ಮ್ಯಾಟೊ ಗೊರೊಸ್‌ನ ಗಡಿಯಲ್ಲಿರುವ ಮಿನಾಸ್ ಗೆರಾಯಿಸ್ ಪ್ರಾಂತಕ್ಕೆ ಸಾಗಿಸಲ್ಪಟ್ಟಿತ್ತು.

  ‘‘ಝೆಬುವಿನ ಪ್ರಪ್ರಥಮ ನಿಯಮಿತ ಆಮದುಗಳು ನೆಲ್ಲೂರು ತಳಿಯದ್ದಾಗಿದ್ದು, ಅದನ್ನು ಒಂಗೊಲೆ ಎಂದು ಕರೆಯಲಾಗುತ್ತದೆ’’ ಎಂದು ಉತ್ತರ ಕೆಂಟಕಿ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸದ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ರಾಬರ್ಟ್ ವಿಲ್‌ಕಾಕ್ಸ್ ಅವರು 2017ರಲ್ಲಿ ಪ್ರಕಟವಾದ ‘ಕ್ಯಾಟಲ್ ಇನ್ ಬ್ಯಾಕ್‌ಲ್ಯಾಂಡ್ಸ್: ಮಾಟೊ ಗ್ರೊಸ್ಸೊ ಆ್ಯಂಡ್ ದಿ ಎವೊಲ್ಯೂಶನ್ ಆಫ್ ರ್ಯಾಂಚಿಂಗ್ ಇನ್ ದಿ ಬ್ರೆಝಿಲಿಯನ್ ಟ್ರೊಪಿಕ್ಸ್’ ಪುಸ್ತಕದಲ್ಲಿ ಬರೆದಿದ್ದಾರೆ. ‘‘ಮದ್ರಾಸ್‌ನ ಸುತ್ತಮುತ್ತಲ ಪ್ರಾಂತದಲ್ಲಿರುವ ಈ ಜಾನುವಾರು, ಅಧಿಕ ಪ್ರಮಾಣದಲ್ಲಿ ವಿಶಿಷ್ಟವಾದ ಬಿಳಿಕೂದಲನ್ನು ಹೊಂದಿದೆ. ಅದರಲ್ಲಿ ಅತ್ಯಂತ ಪ್ರಮುಖವಾದ ಉಪತಳಿ ಝೆಬು ಇಂದು ವಿಶೇಷವಾಗಿ ಮಧ್ಯಬ್ರೆಝಿಲ್‌ನಲ್ಲಿ ಅಧಿಕ ಸಂಖ್ಯೆಯಲ್ಲಿ ಸಾಕಣೆ ಮಾಡಲಾಗುತ್ತಿದೆ’’ ಎಂದವರು ಬರೆದಿದ್ದಾರೆ.

  ಬ್ರೆಝಿಲ್‌ನಲ್ಲಿ ನೆಲೆಸಿದ ಯುರೋಪಿಯನ್ ವಲಸಿಗರು ಯಾಕೆ ಈ ತಳಿಯನ್ನೇ ಸಾಕಣೆಗಾಗಿ ಆಯ್ಕೆ ಮಾಡಿಕೊಂಡಿದ್ದಾರೆಂಬುದಕ್ಕೆ ಸಂಪೂರ್ಣವಾಗಿ ಸ್ಪಷ್ಟವಾದ ಉತ್ತರ ಲಭ್ಯವಿಲ್ಲ. ಆದರೆ ಭಾರತದಲ್ಲಿ ಈ ತಳಿಗೆ ಇರುವ ಪ್ರಾಧಾನ್ಯತೆ ಹಾಗೂ ಬ್ರೆಝಿಲಿಯನ್ ಖರೀದಿದಾರರಿಗೆ ಅಗತ್ಯವಿರುವ ಮೂಲಭೂತ ಮಾನದಂಡಗಳನ್ನು ಈಡೇರಿಸುವಲ್ಲಿ ಅವುಗಳಿಗಿರುವ ಸಾಮರ್ಥ್ಯ, ಬಾಳಿಕೆ, ವಿಧೇಯತೆ ಹಾಗೂ ವಿವಿಧ ಉದ್ದೇಶಗಳಿಗೆ ಹೊಂದಿಕೊಳ್ಳುವಿಕೆ ಈ ಕಾರಣಗಳಿಗಾಗಿ ಯುರೋಪಿಯನ್ ವಲಸಿಗರು ಅದನ್ನು ಆಯ್ಕೆ ಮಾಡಿಕೊಂಡಿರಬಹುದು ಎಂದು ವಿಲ್‌ಕಾಕ್ಸ್ ಬರೆದಿದ್ದಾರೆ.

ಬ್ರೆಝಿಲಿಯನ್ ಉದ್ಯಮಿಗಳು ಭಾರತೀಯ ಪಶುಪಾಲಕರಿಂದ ಗೋವುಗಳನ್ನು ಖರೀದಿಸಲು ಭಾರತಕ್ಕೆ ಬಂದಾಗ ಅವರ ಮನಸ್ಸಿನಲ್ಲಿ ಅವೈಜ್ಞಾನಿಕವಾದ ಮನಸ್ಥಿತಿಯಿತ್ತು. ಗೋವುಗಳ ಬಣ್ಣ ಹಾಗೂ ಅವುಗಳ ಕಿವಿಗಳ ವಿಸ್ತೀರ್ಣ ಇತ್ಯಾದಿಗಳ ಬಗೆಗಷ್ಟೇ ಅವರು ಗಮನಹರಿಸುತ್ತಿದ್ದರು. ಇದು ಭಾರತೀಯ ಗೋ ವ್ಯಾಪಾರಿಗಳಿಗೆ ತಮಾಷೆಯೆನಿಸಿತ್ತು. ಹೀಗಾಗಿ ಅವರು ಬ್ರೆಝಿಲಿಯನ್ನರನ್ನು ಗೋವಿನ ಕಿವಿಗಳ ಗ್ರಾಹಕರೆಂದು ಹಾಸ್ಯ ಮಾಡುತ್ತಿದ್ದರು.

ತಮ್ಮ ದೃಢತೆ ಹಾಗೂ ಕಠಿಣವಾದ ಹವಾಮಾನ, ಪ್ರವಾಹ ಹಾಗೂ ಬರಗಾಲವನ್ನು ಎದುರಿಸುವ ತಮ್ಮ ಸಾಮರ್ಥ್ಯದಿಂದಾಗಿ ಭಾರತೀಯ ತಳಿಯ ಗೋವುಗಳು ಬ್ರೆಝಿಲ್‌ನಲ್ಲಿ ಪ್ರಸಿದ್ಧವಾಗಿದ್ದವು. ಝೆಬು ತಳಿಯ ಗೋವುಗಳು ಬ್ರೆಝಿಲ್‌ನಲ್ಲಿ ಉತ್ತಮ ಹುಲ್ಲುಗಾವಲುಗಳತ್ತ ಸಾಗಲು ದೀರ್ಘ ದೂರದವರೆಗೆ ನಡೆದುಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿರುವುದು ಅವುಗಳ ಜನಪ್ರಿಯತೆಗೆ ಇನ್ನೊಂದು ಕಾರಣವಾಗಿದೆ.

   ಬ್ರೆಝಿಲ್‌ನ ಶ್ರೀಮಂತ ಭೂಮಾಲಕ ಹಾಗೂ ಬೊರ್ಗೆಸ್ ಆ್ಯಂಡ್ ಇರ್ಮಾವೊಸ್ ಆಮದು ಕಂಪೆನಿಯ ಸಂಸ್ಥಾಪಕ ಕರ್ನಲ್ ಜೋಸ್ ಕ್ಯಾಟೆನೊ ಬೊರ್ಗೆಸ್ ಅವರು ಬ್ರೆಝಿಲ್‌ನಲ್ಲಿ ಭಾರತೀಯ ತಳಿಯ ಗೋವುಗಳ ಅತಿ ದೊಡ್ಡ ಆಮದುದಾರರಲ್ಲೊಬ್ಬರಾಗಿದ್ದು, 1905ರಲ್ಲಿ ಬೊರ್ಗೆಸ್ ಅವರು ನೆಲ್ಲೂರು, ಗಿರ್ ಹಾಗೂ ಕಾಂಕ್ರೇಜ್ ತಳಿಯ ಗೋವುಗಳನ್ನು ಖರೀದಿಸಲು ತನ್ನ ನೌಕರ ಆ್ಯಂಜೆಲೊ ಕೋಸ್ಟಾ ಅವರನ್ನು ಭಾರತಕ್ಕೆ ಕಳುಹಿಸಿದ್ದರು. ಭಾರತದಿಂದ ಬ್ರೆಝಿಲ್‌ವರೆಗಿನ ದೀರ್ಘ ಪ್ರಯಾಣದಲ್ಲಿ ಬದುಕುಳಿಯಬಲ್ಲಂತಹ ಬಲಿಷ್ಠ ಗೋವಿನ ಹುಡುಕಾಟಕ್ಕಾಗಿ ಈ ಬ್ರೆಝಿಲ್‌ನ ಖರೀದಿದಾರನು ಬಾಂಬೆ (ಈಗಿನ ಮುಂಬೈ)ಯಿಂದ ದೇಶದ ವಿವಿಧ ಭಾಗಗಳಲ್ಲಿ ಸುತ್ತಾಡಿದ್ದನು. ಅಂತಿಮವಾಗಿ, ಕೋಸ್ಟಾ ಅವರು 49 ದನಗಳನ್ನು ಮಿನಾಸ್ ಗೆರಾಯಿಸ್ ರಾಜ್ಯದಲ್ಲಿರುವ ಉಬೆರ್ದಾಕ್ಕೆ ಕೊಂಡೊಯ್ದನು. ಅಲ್ಲಿ ಅವುಗಳನ್ನು ಸ್ಥಳೀಯ ಪಶುಪಾಲಕರು ಬಹಳವಾಗಿ ಮೆಚ್ಚಿಕೊಂಡರು. ಇದು ಕೋಸ್ಟಾನಿಗೆ 1907ರಲ್ಲಿ ಭಾರತಕ್ಕೆ ಮತ್ತೆ ತೆರಳಲು ಹಾಗೂ ದೊಡ್ಡ ಪ್ರಮಾಣದಲ್ಲಿ ಗೋವುಗಳನ್ನು ಆಮದು ಮಾಡಿಕೊಳ್ಳಲು ಪ್ರೇರೇಪಿಸಿತು. 1920ರ ಆರಂಭದ ಹೊತ್ತಿಗೆ ಭಾರತದಿಂದ 3 ಸಾವಿರಕ್ಕೂ ಅಧಿಕ ಗೋವುಗಳು ಬ್ರೆಝಿಲ್‌ನ ದಾರಿ ಹಿಡಿದವು.

ಇಂಡೋ-ಬ್ರೆಝಿಲ್ ತಳಿ

  ಭಾರತದಿಂದ ಆಮದು ಮಾಡಿಕೊಳ್ಳಲಾದ ಬೃಹತ್ ಸಂಖ್ಯೆಯ ಗೋವುಗಳು ಗೂಳಿಗಳಾಗಿದ್ದವು. ಕೆಲವು ದನಗಳನ್ನು ಕೂಡಾ ತರಲಾಗಿತ್ತು. ಆದರೆ ಅಧಿಕ ಸಂಖ್ಯೆಯಲ್ಲಿ ಗಂಡುಗೂಳಿಗಳನ್ನೇ ತರಲಾಗಿತ್ತು. ಅವುಗಳನ್ನು ಬ್ರೆಝಿಲ್‌ನ ಇಬೆರಿಯನ್ ಪರ್ಯಾಯ ದ್ವೀಪ ಮೂಲದ ಸ್ಥಾನಿಕ ಬೊಸ್ ಟೌರಸ್ ದನಗಳ ಜೊತೆ ಮಿಲನಗೊಳ್ಳುವಂತೆ ಮಾಡಲಾಯಿತು’’ ಎಂದು ಫ್ಲಾವಿಯೊ ವಿ. ಮೆರೆಲೆಸ್ ಹಾಗೂ ಅರ್ಟರ್ ಜೆ.ಎಂ. ರೋಸಾ ಅವರು 1992ರಲ್ಲಿ ಬರೆದ ‘‘ ಇಸ್ ದಿ ಅಮೆರಿಕನ್ ಝೆಬು ರಿಯಾಲಿ ದಿ ಬಾಸ್ ಇಂಡಿಕಸ್?’’ ಎಂಬ ಶೀರ್ಷಿಕೆಯ ಪ್ರಬಂಧದಲ್ಲಿ ಪ್ರಶ್ನಿಸಿದ್ದರು.

 ಐಬೆರಿಯನ್ ಮೂಲದ ದನಗಳ ಜೊತೆ ಭಾರತೀಯ ಗೂಳಿಗಳ ಸಂಕರದ ಫಲಿತಾಂಶದ ಬಗ್ಗೆ ಅಸಂತುಷ್ಟರಾದ ಟ್ರಿಯಾಗುಲೊ ಮಿನೈರೊ ಪ್ರಾಂತದ ಪಶುಪಾಲಕರು, ಬೊರ್ಗೆಸ್ ಅವರ ನಾಯಕತ್ವದಡಿಯಲ್ಲಿ 1920ರ ದಶಕದ ಆರಂಭದಲ್ಲಿ ಭಾರತ ಮೂಲದ ಗಿರ್ ಹಾಗೂ ಗುಝೆರಾ ನಡುವಿನ ಸಂಕರದಿಂದ ಬ್ರೆಝಿಲಿಯನ್ ಝೆಬು ತಳಿಯನ್ನು ಸೃಷ್ಟಿಸಲು ನಿರ್ಧರಿಸಿದರು. ಇದರಿಂದ ಜನಿಸಿದ ಹೊಸ ತಳಿಗೆ ಬೊರ್ಗೆಸ್ ಅವರು ತನ್ನ ಹುಟ್ಟೂರಾದ ಉಬೆರಾಬಾವನ್ನು ಸೇರಿಸಿ ಇಂಡು-ಉಬೆರಾಬಾ ಎಂದು ನಾಮಕರಣ ಮಾಡಿದ್ದನು. ಆದರೆ ಆತ ದೇಶದ ಇತರ ಭಾಗಗಳಿಂದ ತೀವ್ರ ವಿರೋಧವನ್ನು ಎದುರಿಸಬೇಕಾಯಿತು. ಅಂತಿಮವಾಗಿ ಆತ ಅದಕ್ಕೆ ಇಂಡು-ಬ್ರಾಸಿಲ್ ಎಂದು ಹೆಸರಿಸಿದ. ಈ ತಳಿಯು ತ್ವರಿತವಾಗಿ ಭಾರೀ ಜನಪ್ರಿಯತೆಯನ್ನು ಪಡೆಯಿತು. ಇಂಡು- ಬ್ರಾಸಿಲ್ ತಳಿಯ ವಯಸ್ಕ ಗೂಳಿಯು 1200 ಕೆ.ಜಿ. ಭಾರವಿದ್ದರೆ, ವಯಸ್ಕ ಹೆಣ್ಣು ದನವು 750 ಕೆ.ಜಿ. ಭಾರವಿದ್ದುದು, ಸ್ಥಳೀಯ ಪಶುಪಾಲಕರನ್ನು ಆಕರ್ಷಿಸಿತು.

 ‘‘ಇಂಡು-ಬ್ರಾಸಿಲ್ ತಳಿಯನ್ನು ಸೃಷ್ಟಿಸಿದವರು ಯುರೋಪಿಯನ್ ತಳಿ ಗೋವುಗಳೊಂದಿಗೆ ಸಂಕರಗೊಳಿಸ ಲಾಗಿದ್ದ ಝೆಬು ತಳಿಯ ಪ್ರತಿ ದನದಿಂದ ದೊರೆಯುತ್ತಿದ್ದ ಮಾಂಸಕ್ಕಿಂತಲೂ ಅಧಿಕ ಪ್ರಮಾಣದ ಮಾಂಸವನ್ನು ಪಡೆಯುವಲ್ಲಿ ಯಶಸ್ವಿಯಾದರು. 1930ರ ವೇಳೆಗೆ ಇಂಡು-ಬ್ರಾಸಿಲ್ ತಳಿಯನ್ನು ಬ್ರೆಝಿಲಿಯನ್ ಗೋವು ಉದ್ಯಮದ ಸಂರಕ್ಷಕನೆಂದೇ ಬಣ್ಣಿಸಲಾಗಿತ್ತು.

 ಉದ್ದವಾದ ಕಿವಿಗಳನ್ನು ಹೊಂದಿರುವ ಇಂಡು-ಬ್ರಾಸಿಲ್ ಗೋವು ಮಾರುಕಟ್ಟೆಯಲ್ಲಿ ಅತ್ಯಧಿಕ ಬೆಲೆಗೆ ಮಾರಾಟವಾಗುತ್ತಿತ್ತು. ಅವುಗಳಿಗಿದ್ದ ಭಾರೀ ಬೇಡಿಕೆಯಿಂದಾಗಿ ಅವುಗಳ ದರ ಗಗನಕ್ಕೇರಿತ್ತು. ‘‘1930ರ ದಶಕದ ಅಂತ್ಯದ ವೇಳೆಗೆ ಬ್ರೆಝಿಲ್‌ನಲ್ಲಿ ಭಾರತೀಯ ಗೋವುಗಳ ಶುದ್ಧ ತಳಿಗಳಿಗಾಗಿನ ಬೇಡಿಕೆ ತೀರಾ ಕೆಳಮಟ್ಟಕ್ಕೆ ಕುಸಿದಿತ್ತು’’ ಎಂದು ವಿಲ್‌ಕಾಕ್ಸ್ ಬರೆದಿದ್ದಾರೆ. ಇದರಿಂದಾಗಿ ಎಚ್ಚೆತ್ತುಕೊಂಡ ಬ್ರೆಝಿಲ್‌ನ ಒಕ್ಕೂಟ ಸರಕಾರವು ಅಪ್ಪಟ ದೇಶಿಯ ತಳಿಗಳ ಗೋವುಗಳ ಸೃಷ್ಟಿಗೆ ಉತ್ತೇಜನ ನೀಡಿತು. ಶುದ್ಧ ದೇಶೀಯ ರಕ್ತದ ತಳಿಗಳೆಂಬುದನ್ನು ಖಾತರಿಪಡಿಸಲು ಅವುಗಳ ವಂಶವೃಕ್ಷದ ದಾಖಲೆಗಳನ್ನು ಇರಿಸುವ ಪರಿಪಾಠವನ್ನು ಆರಂಭಿಸಲಾಯಿತು.

    ‘‘ಇಂಡು-ಬ್ರಾಸಿಲ್ ತಳಿಯು ಹಲವಾರು ದಶಕಗಳ ಕಾಲ ಜನಪ್ರಿಯವಾಗಿಯೇ ಉಳಿದುಕೊಂಡಿತ್ತು. ಈ ನವಜಾತ ಕರುಗಳು ತಮ್ಮದೇ ತಾಯಿಯ ಹಾಲನ್ನು ಕುಡಿಯುವಂತೆ ಮಾಡಲು ಒಂದು ಮಟ್ಟದವರೆಗೆ ಮಾನವ ಮಧ್ಯಪ್ರವೇಶದ ಅಗತ್ಯದ ಬಗ್ಗೆ ಕಳವಳ ವ್ಯಕ್ತವಾಗಿದ್ದವು. ಭಾರತದಿಂದ ಹೊಸ ತಳಿಯ ದನಗಳನ್ನು ತರಿಸಿಕೊಳ್ಳುವ ಬಗ್ಗೆ ಬೇಡಿಕೆಗಳು ಕೇಳಿಬರತೊಡಗಿದವು. ಆದರೆ ಸರಕಾರವು ವಿದೇಶಿ ತಳಿಯ ದನಗಳ ಆಮದಿಗೆ ನಿಷೇಧ ವಿಧಿಸಿದ್ದರಿಂದ ಪಶುಪಾಲಕರು ನೆರೆಯ ರಾಷ್ಟ್ರ ಬೊಲಿವಿಯಾದಿಂದ ಝೆಬು ತಳಿಯ ದನವನ್ನು ಕಳ್ಳಸಾಗಣೆ ಮಾಡಿ ತರುತ್ತಿದ್ದರು. ಕೊನೆಗೆ ಬೇರೆ ದಾರಿ ಕಾಣದ ಸರಕಾರವು 1962ರಲ್ಲಿ ವಿದೇಶಿ ದನಗಳ ಮೇಲಿನ ನಿಷೇಧವನ್ನು ಹಿಂದೆಗೆದುಕೊಂಡಿತು. ಬ್ರೆಝಿಲ್ ಮತ್ತೊಮ್ಮೆ ಭಾರತದಿಂದ ಗೋವುಗಳನ್ನು ಆಮದು ಮಾಡಿಕೊಳ್ಳಲು ಆರಂಭಿಸಿತು. ಬ್ರೆಝಿಲ್ ಮೂಲದ ಗೋವುಗಳ ಜೊತೆ ಸಂಕರಕ್ಕಾಗಿ 318 ನೆಲ್ಲೂರು ಗೋವುಗಳನ್ನು ಬ್ರೆಝಿಲ್‌ಗೆ ತರಲಾಯಿತು’’ ಎಂದು ವಿಲಾಕ್ಸ್ ಹೇಳುತ್ತಾರೆ.

    ಈವರೆಗೆ, ನೆಲ್ಲೂರು ಗೋವುಗಳು ಬ್ರೆಝಿಲ್‌ನ ಉಷ್ಣವಲಯದ ಗೋಶಾಲೆಗಳಲ್ಲಿ ಅತ್ಯಂತ ಬೇಡಿಕೆಯ ಗೋವುಗಳಾಗಿವೆ. ಆ ದೇಶದಲ್ಲಿ ಉತ್ಪಾದನೆಯಾಗುವ ಶೇ.90ರಷ್ಟು ಬೀಫ್, ನೆಲ್ಲೂರು ದನಗಳಿಂದಲೇ ದೊರೆಯುತ್ತದೆ. ಈ ಮಧ್ಯೆ ಇಂಡು-ಬ್ರಾಸಿಲ್ ತಳಿಯ ದನವು ಕೊಲಂಬೊ, ವೆನೆಝುವೆಲಾ ಹಾಗೂ ಮೆಕ್ಸಿಕೊ ಸೇರಿದಂತೆ ಇತರ ಹಲವಾರು ಲ್ಯಾಟಿನ್ ಆಮೆರಿಕ ರಾಷ್ಟ್ರಗಳಲ್ಲಿ ಕಾಣಸಿಗುತ್ತಿದೆಯಾದರೂ, ಬ್ರೆಝಿಲ್‌ನಲ್ಲಿ ಅಳಿವಿನ ಅಂಚಿನಲ್ಲಿರುವ ಜಾನುವಾರು ಎಂದು ಪರಿಗಣಿಸಲಾಗಿದೆ.

   ಭಾರತದಿಂದ ಗೋವುಗಳ ರಫ್ತು, ಬ್ರೆಝಿಲ್‌ನ ಪಶು ಉದ್ಯಮದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಭಾರತ-ಬ್ರೆಝಿಲ್ ಬಾಂಧವ್ಯದಲ್ಲಿ ಇದೊಂದು ಮಹತ್ವದ ಐತಿಹಾಸಿಕ ಬೆಳವಣಿಗೆಯಾಗಿದೆ. ಭಾರತದ ಕೆಲವು ವರ್ಗಗಳಲ್ಲಿ ಬೀಫ್ ಸೇವನೆ ಬಗ್ಗೆ ತೀವ್ರವಾದ ಸಂವೇದನೆಯಿರುವುದರಿಂದ, ಈ ವಿಷಯಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿಲ್ಲ. 2020ರ ಜನವರಿಯಲ್ಲಿ ಭಾರತ-ಬ್ರೆಝಿಲ್ ಬಾಂಧವ್ಯಕ್ಕೆ ಸಂಬಂಧಿಸಿದ ಸಂಕ್ಷಿಪ್ತ ವಿವರಣೆಯೊಂದರಲ್ಲಿ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಗೋವುಗಳ ಬಗ್ಗೆ ಸಣ್ಣ ಉಲ್ಲೇಖವನ್ನಷ್ಟೇ ಮಾಡಿತ್ತು. ‘‘ಬ್ರೆಝಿಲ್‌ನ ಪಶುಸಂಪತ್ತಿನ ಅತಿ ದೊಡ್ಡ ಭಾಗವು ಭಾರತೀಯ ಮೂಲದ್ದೆಂಬುದು ನಮ್ಮ ದ್ವಿಪಕ್ಷೀಯ ಬಾಂಧವ್ಯಗಳ ಅತ್ಯಂತ ಮಹತ್ವದ ಆದರೆ ಅಜ್ಞಾತವಾದ ಮುಖವಾಗಿದೆ’’ ಎಂದು ಸಚಿವಾಲಯ ತಿಳಿಸಿತ್ತು. ಜಗತ್ತಿನಲ್ಲಿ ಬ್ರೆಝಿಲ್ ಬೀಫ್‌ನ ಮುಂಚೂಣಿಯ ಉತ್ಪಾದಕ ಹಾಗೂ ರಫ್ತುದಾರನಾಗುವಲ್ಲಿ ಭಾರತದ ಪಾತ್ರದ ಬಗ್ಗೆ ಹೇಳಿಕೆಯಲ್ಲಿ ವೌನ ವಹಿಸಲಾಗಿತ್ತು.

 ವಂಶಾವಳಿಯ ನಿಯಂತ್ರಣದ ಕೊರತೆ ಹಾಗೂ ಯುರೋಪಿಯನ್ ಮೂಲದ ಹಾಲುಕರೆಯುವ ದನಗಳ ಸಾಕಣೆಯೊಂದಿಗೆ ಭಾರತೀಯ ತಳಿಯ ಗೋವುಗಳ ಪರಿಶುದ್ಧತೆ ಕ್ಷೀಣಿಸುತ್ತಾ ಬಂದಿದೆ. ಆದಾಗ್ಯೂ ಬ್ರೆಝಿಲಿಯನ್ ಗಿರ್ ತಳಿಯ ದನಗಳ ವೀರ್ಯವನ್ನು ಆಮದು ಮಾಡಿಕೊಳ್ಳುವ ಭಾರತ ಸರಕಾರದ ಯೋಜನೆಗೆ ಗುಜರಾತ್‌ನ ಹೈನುಗಾರರಿಂದ ಪ್ರಬಲ ವಿರೋಧ ವ್ಯಕ್ತವಾಗಿತ್ತು. ಭಾರತೀಯ ಗಿರ್ ತಳಿಯ ಗೋವುಗಳ ಮೂಲ ಅನುವಂಶಿಕತೆಯನ್ನು ತಾವು ಸಂರಕ್ಷಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಬ್ರೆಝಿಲಿಯನ್ ಗಿರ್ ಗೂಳಿಯ ವೀರ್ಯವನ್ನು ಆಮದುಮಾಡಿಕೊಳ್ಳುವ ಯೋಜನೆಯನ್ನು 2019ರಲ್ಲಿ ರದ್ದುಪಡಿಸಲಾಗಿತ್ತು. ಆದರೆ ಎರಡು ವರ್ಷಗಳ ಬಳಿಕ ಆ ಯೋಜನೆಗೆ ಮರುಜೀವ ನೀಡುವ ಬಗ್ಗೆ ಮಾತುಕತೆಗಳು ಆರಂಭಗೊಂಡಿವೆ.

 19 ಹಾಗೂ 20ನೇ ಶತಮಾನದಲ್ಲಿ ಭಾರತದಿಂದ ನೆಲ್ಲೂರು, ಗಿರ್ ಹಾಗೂ ಕಾಕ್ರೆಜ್ ತಳಿ ಗೋವುಗಳ ಬ್ರೆಝಿಲ್ ‘ಪ್ರಯಾಣ ಕಥನ’ವು ಜಾಗತೀಕರಣದ ಇತಿಹಾಸದಲ್ಲಿ ಒಂದು ಅಸಾಮಾನ್ಯ ಅಧ್ಯಾಯವಾಗಿ ಉಳಿದುಕೊಳ್ಳಲಿದೆ.

ಕೃಪೆ: scroll.in

Writer - ಅಜಯ್ ಕಮಲಾಕರನ್

contributor

Editor - ಅಜಯ್ ಕಮಲಾಕರನ್

contributor

Similar News