ಏಕನಾಥ್ ಶಿಂಧೆ ಬಳಸಿಕೊಂಡು ರಾಜ್ಯ ಸರಕಾರ ಬೀಳಿಸುವ ಪ್ರಯತ್ನ ಯಶಸ್ವಿಯಾಗದು: ಸಂಜಯ್ ರಾವತ್

Update: 2022-06-21 08:01 GMT
Photo:PTI

ಮುಂಬೈ: ಇಂದು ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದ್ದು, ಈ ಬೆಳವಣಿಗೆಗಳು ಬೇಗನೆ  ಪರಿಹರಿಸಲ್ಪಡುತ್ತವೆ ಎಂದು ಶಿವಸೇನೆ ಹೇಳಿಕೊಂಡಿದೆ.

 ಶಿವಸೇನೆಯ ಹಿರಿಯ ಸಚಿವ ಏಕನಾಥ್ ಶಿಂಧೆ ಸೂರತ್‌ಗೆ  21 ಶಾಸಕರನ್ನು ಕರೆದುಕೊಂಡು ಹೋಗಿದ್ದು,  ಅವರು ಬಿಜೆಪಿ ಆಡಳಿತದ ರಾಜ್ಯದಲ್ಲಿ ಆಶ್ರಯ ಪಡೆದಿದ್ದಾರೆ. ಇದು ಶಿವಸೇನೆಯಲ್ಲಿ ಆತಂಕ ಮೂಡಿಸಿದೆ.

"ಏಕನಾಥ್ ಶಿಂಧೆ ಅವರನ್ನು ಬಳಸಿಕೊಂಡು ರಾಜ್ಯ ಸರಕಾರವನ್ನು ಬೀಳಿಸುವ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ಶಿಂಧೆ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ.  ಅವರು ಬಾಳಾ  ಸಾಹೇಬ್  ಅವರ ಸೈನಿಕ" ಎಂದು ಶಿವಸೇನೆಯ ಸಂಜಯ್ ರಾವತ್ ಹೇಳಿದ್ದಾರೆ. ಶಿಂಧೆ ಅವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಬಿಜೆಪಿಯನ್ನು ಗುರಿಯಾಗಿಸಿಕೊಂಡು ಮಾತನಾಡಿದ ಶಿವಸೇನೆ ಸಂಸದ ಸಂಜಯ್ ರಾವತ್, "ಮಧ್ಯಪ್ರದೇಶ ಹಾಗೂ  ರಾಜಸ್ಥಾನದ ಮಾದರಿಯಲ್ಲೇ  ಉದ್ಧವ್ ಠಾಕ್ರೆ ಸರಕಾರವನ್ನು ಉರುಳಿಸುವ ಸಂಚು ನಡೆಯುತ್ತಿದೆ. ಶಿವಸೇನೆ ನಿಷ್ಠಾವಂತರ ಪಕ್ಷವಾಗಿದೆ, ನಾವು ಹಾಗೆ ಮಾಡಲು ಬಿಡುವುದಿಲ್ಲ'' ಎಂದು ಅವರು ಹೇಳಿದರು.

ಶಿವಸೇನೆ, ಎನ್ ಸಿಪಿ ಹಾಗೂ ಕಾಂಗ್ರೆಸ್ ಬೆಂಬಲದೊಂದಿಗೆ ಉದ್ದವ್ ಠಾಕ್ರೆ ಸರಕಾರ ರಚನೆಯಾಗಿದೆ.  ಸೋಮವಾರ  ವಿಧಾನ ಪರಿಷತ್ತಿಗೆ (ಮೇಲ್ಮನೆ) ನಡೆದ ನಿರ್ಣಾಯಕ ಚುನಾವಣೆಗಳಲ್ಲಿ ಶಿವಸೇನೆ ಹಾಗೂ  ಕಾಂಗ್ರೆಸ್ ಸದಸ್ಯರು ಅಡ್ಡ ಮತದಾನ ಮಾಡಿದ್ದರಿಂದ ಬಿಜೆಪಿ 10 ಸ್ಥಾನಗಳಲ್ಲಿ ಐದು ಸ್ಥಾನಗಳನ್ನು ಗೆದ್ದುಕೊಂಡಿತು.  ಕೆಲವೇ ದಿನಗಳ ಹಿಂದೆ ನಡೆದ ರಾಜ್ಯಸಭಾ ಚುನಾವಣೆಯಲ್ಲೂ ಇದೇ ರೀತಿ ಅಡ್ಡ ಮತದಾನ ನಡೆದಿದ್ದು ಇದರಿಂದ ಬಿಜೆಪಿಗೆ ಲಾಭವಾಗಿತ್ತು.

ಶಿಂಧೆ ಸೋಮವಾರ  ತಡರಾತ್ರಿ ಗುಜರಾತ್‌ಗೆ ತೆರಳಿದ್ದಾರೆ. ಮಾಜಿ  ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ದಿಲ್ಲಿಯಲ್ಲಿದ್ದಾರೆ. ಕ್ರಾಸ್ ವೋಟಿಂಗ್ ಸೋಲಿನ ನಂತರ ಕಾಂಗ್ರೆಸ್ ತನ್ನ ಶಾಸಕರನ್ನು ದಿಲ್ಲಿಗೆ ಕರೆಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News