ಮೂಡುಬಿದಿರೆಯಲ್ಲಿ ಬ್ಲಾಕ್ ಕಾಂಗ್ರೆಸ್‌ನಿಂದ ಪ್ರತಿಭಟನೆ: ಕಾರ್ಯಕರ್ತರ ಬಂಧನ, ಬಿಡುಗಡೆ

Update: 2022-06-21 11:14 GMT

ಮೂಡುಬಿದಿರೆ, ಜೂ.21: ಕೇಂದ್ರದ ಬಿಜೆಪಿ ಸರಕಾರವು ಈ.ಡಿ ಮತ್ತು ಐಟಿ ಸಂಸ್ಥೆಯನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ನಾಯಕರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಾಲೂಕು ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.

  ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಈ.ಡಿ. ಕೇಂದ್ರ ಸರಕಾರದ ಕೈಗೊಂಬೆಯಾಗಿದೆ. ಕಾಂಗ್ರೆಸ್‌ನ ಮುಖಂಡರುಗಳಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್ ಯವರನ್ನು ಸದೆ ಬಡಿಯುವಂತಹ ಕೆಲಸ ಆಗುತ್ತಿದೆ. ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಮಾತನಾಡಿದರೆ ಈ.ಡಿ.ಮೂಲಕ ದಾಳಿ ಮಾಡುವಂತಹ ಕೆಲಸವನ್ನು ಬಿಜೆಪಿ ಆಡಳಿತದ ಕೇಂದ್ರ ಹಾಗೂ ರಾಜ್ಯ ಸರಕಾರ ಮಾಡುತ್ತಿದೆ ಎಂದರು.

  ಬಿಜೆಪಿ ಸರಕಾರಗಳು ವಿರೋಧ ಪಕ್ಷದವರನ್ನು ಸದೆ ಬಡಿಯುವಂತಹ ಕೆಲಸ ಮಾಡುತ್ತಿವೆ ಇದನ್ನು ನಾವು ಖಂಡಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಜೈನ್, ತಾಲೂಕು ಕಚೇರಿಯು ತಹಶೀಲ್ದಾರ್‌ಗಾಗಿ ಇರುವುದು. ಆದರೆ ಇಲ್ಲಿ ಎಂಎಲ್‌ಎ ಅವರ ಕಚೇರಿ ತಾಲೂಕು ಕಚೇರಿಯಾಗಿದೆ ಎಂದು ಆರೋಪಿಸಿದರು.

  ಕಾಂಗ್ರೆಸ್‌ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಾತನಾಡಿ, ಈ.ಡಿ. ಅಧಿಕಾರಿಗಳು ಮುಂದಿಟ್ಟುಕೊಂಡು ನಮ್ಮ ನಾಯಕರಾದ ರಾಹುಲ್ ಮತ್ತು ಸೋನಿಯಾ ಗಾಂಧಿಯವರ ಮೇಲೆ ಯಾವುದೇ ಆರೋಪವಿಲ್ಲದ ಕೇಸ್‌ನಲ್ಲಿ ಸಿಲುಕಿಸಿ ನೋಟಿಸ್ ಕೊಟ್ಟು ಆತ್ಮಸ್ಥೈರ್ಯವನ್ನು ಕುಗ್ಗಿಸುವಂತಹ ಕೆಲಸ ನಡೆಯುತ್ತಿದೆ. ಸರ್ವಾಧಿಕಾರದ ಧೋರಣೆಯನ್ನು ಬಿಜೆಪಿ ಸರಕಾರ ಮತ್ತು ನಾಯಕರುಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

 ಅಮಿತ್ ಶಾ ಅವರ ಪುತ್ರ ಜೈನ್ ಶಾ 50,000 ರೂ.ನಿಂದ ಆರಂಭಿಸಿರುವ ಸಂಸ್ಥೆ ಇದೀಗ 80,000 ಕೋಟಿ ರೂ. ಲಾಭ ಪಡೆದಿದೆ. ಇವರ ಬಗ್ಗೆ ಯಾಕೆ ಈ.ಡಿ. ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ..? ಮಾಜಿ ಮುಖ್ಯಮಂತ್ರಿ ಯಡ್ಡಿಯೂರಪ್ಪ ದುಬೈಗೆ ಮತ್ತು ಅವರ ಪುತ್ರ ವಿದೇಶಕ್ಕೆ ಹೋಗುತ್ತಿರುವ ಉದ್ದೇಶವೇನು? ಇವರ ಮೇಲೆ ಯಾಕೆ ಈ.ಡಿ. ದಾಳಿಯಾಗುತ್ತಿಲ್ಲವೆಂದು ಪ್ರಶ್ನಿಸಿದ ಮಿಥುನ್ ರೈ, ಬಿಜೆಪಿಯ ಈ ಧೋರಣೆಯನ್ನು ಖಂಡಿಸುತ್ತೇವೆ. ಬಿಜೆಪಿ ಹಾಗೂ ಮೋದಿಗೆ ನೈತಿಕ ಇದ್ದರೆ ಅವರ ಪಕ್ಷದಲ್ಲಿರುವ ಭ್ರಷ್ಟ, ಕಳಂಕ ಹೊಂದಿರುವ ರಾಜಕರಣಿಗಳನ್ನು ಈ.ಡಿ ಮೂಲಕ ಬಂಧಿಸುವಂತಹ ಕ್ರಮವನ್ನು ಕೈಗೊಳ್ಳಲಿ ಎಂದು ಸವಾಲು ಹಾಕಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ ಮಾತನಾಡಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮೇಲೆ ಆರೋಪ ಮಾಡುವ ಬಿಜೆಪಿಯ ನಾಯಕರ 5 ವರ್ಷದ ಹಿಂದಿನ ಬ್ಯಾಂಕ್ ಅಕೌಂಟ್ ಮತ್ತು ಈಗ ಇರುವ ಅಕೌಂಟನ್ನು ಪರಿಶೀಲಿಸಿದರೆ ಎಲ್ಲದಕ್ಕೂ ಉತ್ತರ ಲಭಿಸಲಿದೆ. ಅದಾನಿ, ಅಂಬಾನಿಯವರನ್ನು ಯಾಕೆ ಈ.ಡಿ. ತನಿಖೆಗೆ ಒಳಪಡಿಸುವುದಿಲ್ಲವೆಂದು ಪ್ರಶ್ನಿಸಿದರು. 

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರ, ಯುವ ಕಾಂಗ್ರೆಸ್ ಅಧ್ಯಕ್ಷ ಜಯಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ, ಪುರಸಭಾ ಸದಸ್ಯರಾದ ಪುರಂದರ ದೇವಾಡಿಗ, ಸುರೇಶ್ ಕೋಟ್ಯಾನ್, ಕೊರಗಪ್ಪ, ಇಕ್ಬಾಲ್ ಕರೀಂ, ಜೊಸ್ಸಿ ಮಿನೇಜಸ್, ಪುತ್ತಿಗೆ ಗ್ರಾಪಂ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಸದಸ್ಯರಾದ ಪುರುಷೋತ್ತಮ ನಾಯಕ್, ಪಡುಮಾರ್ನಾಡು ಗ್ರಾಪಂ ಉಪಾಧ್ಯಕ್ಷ ಅಭಿನಂದನ್ ಬಲ್ಲಾಳ್, ವಾಲ್ಪಾಡಿ ಗ್ರಾಪಂ ಉಪಾಧ್ಯಕ್ಷ ಅರುಣ್ ಶೆಟ್ಟಿ, ತಾಪಂ ಮಾಜಿ ಸದಸ್ಯ ಎಂ.ಜಿ.ಮುಹಮ್ಮದ್ ಸಹಿತ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ಪ್ರತಿಭಟನೆ ನಿರತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News